+ -

عَنْ أَبِي سَعِيدٍ الخُدْرِيَّ رَضِيَ اللَّهُ عَنْهُ -وَكَانَ غَزَا مَعَ النَّبِيِّ صَلَّى اللهُ عَلَيْهِ وَسَلَّمَ ثِنْتَيْ عَشْرَةَ غَزْوَةً- قَالَ: سَمِعْتُ أَرْبَعًا مِنَ النَّبِيِّ صَلَّى اللهُ عَلَيْهِ وَسَلَّمَ، فَأَعْجَبْنَنِي، قَالَ:
«لاَ تُسَافِرِ المَرْأَةُ مَسِيرَةَ يَوْمَيْنِ إِلَّا وَمَعَهَا زَوْجُهَا أَوْ ذُو مَحْرَمٍ، وَلاَ صَوْمَ فِي يَوْمَيْنِ: الفِطْرِ وَالأَضْحَى، وَلاَ صَلاَةَ بَعْدَ الصُّبْحِ حَتَّى تَطْلُعَ الشَّمْسُ، وَلاَ بَعْدَ العَصْرِ حَتَّى تَغْرُبَ، وَلاَ تُشَدُّ الرِّحَالُ إِلَّا إِلَى ثَلاَثَةِ مَسَاجِدَ: مَسْجِدِ الحَرَامِ، وَمَسْجِدِ الأَقْصَى، وَمَسْجِدِي هَذَا».

[صحيح] - [متفق عليه] - [صحيح البخاري: 1995]
المزيــد ...

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹನ್ನೆರಡು ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. ಅವರು ಹೇಳಿದರು: ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಅತಿಯಾಗಿ ಆಕರ್ಷಿಸಿದ ನಾಲ್ಕು ವಿಷಯಗಳನ್ನು ಕೇಳಿದ್ದೇನೆ. ಅವರು ಹೇಳಿದರು:
"ಒಬ್ಬ ಮಹಿಳೆ ತನ್ನ ಜೊತೆಗೆ ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು ಇಲ್ಲದೆ ಎರಡು ದಿನಗಳಷ್ಟು ದೂರದ ಪ್ರಯಾಣ ಮಾಡಬಾರದು. ಎರಡು ದಿನಗಳಲ್ಲಿ—ಈದುಲ್-ಫಿತ್ರ್ ಮತ್ತು ಈದುಲ್-ಅದ್‌ಹಾ—ಉಪವಾಸ ಆಚರಿಸಬಾರದು. ಫಜ್ರ್ ನಮಾಝಿನ ನಂತರ ಸೂರ್ಯೋದಯದವರೆಗೆ ಮತ್ತು ಅಸರ್ ನಮಾಝಿನ ನಂತರ ಸೂರ್ಯಾಸ್ತದವರೆಗೆ ಬೇರೆ ನಮಾಝ್ ಮಾಡಬಾರದು. ಮೂರು ಮಸೀದಿಗಳನ್ನು ಹೊರತುಪಡಿಸಿ ಬೇರೆಲ್ಲಿಗೂ ಯಾತ್ರೆ ಹೋಗಬಾರದು — ಮಸ್ಜಿದುಲ್-ಹರಾಂ, ಮಸ್ಜಿದುಲ್-ಅಕ್ಸಾ ಮತ್ತು ನನ್ನ ಈ ಮಸೀದಿ (‌ಮಸ್ಜಿದು-ನ್ನಬವಿ)."

[صحيح] - [متفق عليه] - [صحيح البخاري - 1995]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಲ್ಕು ವಿಷಯಗಳನ್ನು ನಿಷೇಧಿಸಿದ್ದಾರೆ:
ಮೊದಲನೆಯದು: ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು ಇಲ್ಲದೆ ಮಹಿಳೆ ಎರಡು ದಿನಗಳಷ್ಟು ದೂರದ ಪ್ರಯಾಣ ಮಾಡುವುದನ್ನು ನಿಷೇಧಿಸಲಾಗಿದೆ. ವಿವಾಹ ನಿಷಿದ್ಧ ಪುರುಷರು ಎಂದರೆ ಮಗ, ತಂದೆ, ಸೋದರ ಪುತ್ರ, ಸೋದರಿ ಪುತ್ರ ಚಿಕ್ಕಪ್ಪ-ದೊಡ್ಡಪ್ಪ, ಸೋದರ ಮಾವ ಮುಂತಾದ ಶಾಶ್ವತವಾಗಿ ವಿವಾಹ ನಿಷಿದ್ಧರಾದ ರಕ್ತ ಸಂಬಂಧಿಗಳು.
ಎರಡನೆಯದು: ಈದುಲ್-ಫಿತ್ರ್ (ರಂಝಾನ್) ಹಬ್ಬದ ದಿನ ಮತ್ತು ಈದುಲ್-ಅದ್‌ಹಾ (ಬಕ್ರೀದ್) ಹಬ್ಬದ ದಿನ ಉಪವಾಸ ಆಚರಿಸುವುದನ್ನು ನಿಷೇಧಿಸಲಾಗಿದೆ. ಅದು ಹರಕೆಯ ಉಪವಾಸ, ಐಚ್ಛಿಕ ಉಪವಾಸ ಅಥವಾ ಪ್ರಾಯಶ್ಚಿತ್ತದ ಉಪವಾಸ ಯಾವುದೇ ಆಗಿದ್ದರೂ ಅದರಲ್ಲಿ ವ್ಯತ್ಯಾಸವಿಲ್ಲ.
ಮೂರನೆಯದು: ಅಸರ್ ನಮಾಝಿನ ಬಳಿಕ ಸೂರ್ಯಾಸ್ತದ ತನಕ ಮತ್ತು ಮುಂಜಾನೆಯ ಉದಯದ ಬಳಿಕ ಸೂರ್ಯೋದಯದ ತನಕ ಐಚ್ಛಿಕ ನಮಾಝ್ ನಿರ್ವಹಿಸುವುದನ್ನು ನಿಷೇಧಿಸಲಾಗಿದೆ.
ನಾಲ್ಕನೆಯದು: ಮೂರು ಮಸೀದಿಗಳ ಹೊರತು ಬೇರೆ ಯಾವುದಾದರೂ ಸ್ಥಳಕ್ಕೆ, ಅದಕ್ಕೆ ಶ್ರೇಷ್ಠತೆಯಿದೆ ಮತ್ತು ಅಲ್ಲಿ ನಿರ್ವಹಿಸುವ ಆರಾಧನೆಗಳಿಗೆ ಹಲವಾರು ಪಟ್ಟು ಪ್ರತಿಫಲವಿದೆ ಎಂಬ ನಂಬಿಕೆಯಿಂದ ಪ್ರಯಾಣ ಮಾಡುವುದು. ಈ ಮೂರು ಮಸೀದಿಗಳ ಹೊರತು ಇತರ ಮಸೀದಿಗಳಿಗೆ ನಮಾಝ್ ಮಾಡುವ ಉದ್ದೇಶದಿಂದ ಯಾತ್ರೆ ಹೊರಡಬಾರದು. ಮಸ್ಜಿದುಲ್ ಹರಾಂ, ಮಸ್ಜಿದು-ನ್ನಬವಿ ಮತ್ತು ಮಸ್ಜಿದುಲ್-ಅಕ್ಸಾ ಈ ಮೂರು ಮಸೀದಿಗಳ ಹೊರತು ಬೇರೆ ಮಸೀದಿಗಳಲ್ಲಿ ಪ್ರತಿಫಲವು ಇಮ್ಮಡಿಯಾಗುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ವಿವಾಹ ನಿಷಿದ್ಧ ಪುರುಷರಿಲ್ಲದೆ ಮಹಿಳೆ ಪ್ರಯಾಣ ಮಾಡುವುದನ್ನು ನಿಷೇಧಿಸಲಾಗಿದೆ.
  2. ಯಾತ್ರೆಯಲ್ಲಿ ಒಬ್ಬ ಮಹಿಳೆಗೆ ಇನ್ನೊಬ್ಬ ಮಹಿಳೆ ವಿವಾಹ ನಿಷಿದ್ಧ ಪುರುಷನಂತೆ (ಮಹ್ರಮ್) ಆಗುವುದಿಲ್ಲ. ಏಕೆಂದರೆ, "ಅವಳ ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು" ಎಂದು ಹದೀಸಿನಲ್ಲಿ ಹೇಳಲಾಗಿದೆ.
  3. ಮಹಿಳೆಯ ಜೊತೆಗೆ ಅವಳ ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು ಇಲ್ಲದಿದ್ದರೆ ಯಾತ್ರೆ ಎಂದು ಕರೆಯಲಾಗುವುದನ್ನೆಲ್ಲಾ ಅವಳಿಗೆ ನಿಷೇಧಿಸಲಾಗಿದೆ. ಈ ಹದೀಸ್ ಕೇಳುಗನ ಪರಿಸ್ಥಿತಿ ಮತ್ತು ಸ್ಥಳಕ್ಕೆ ಅನುಗುಣವಾಗಿ ಹೇಳಲಾಗಿದೆ.
  4. ಮಹಿಳೆಯ ಗಂಡ, ಅಥವಾ ಅವಳ ತಂದೆ, ಚಿಕ್ಕಪ್ಪ-ದೊಡ್ಡಪ್ಪ, ಸೋದರ ಮಾವ ಮುಂತಾದ ರಕ್ತಸಂಬಂಧದ ಮೂಲಕ ಶಾಶ್ವತವಾಗಿ ವಿವಾಹ ನಿಷಿದ್ಧರಾಗಿರುವವರು, ಅಥವಾ ಸ್ತನಪಾನದ ಮೂಲಕ ಸಂಬಂಧಿಗಳಾದ ತಂದೆ, ಸೋದರ ಮಾವ ಮುಂತಾದ ಸ್ತನಪಾನದಿಂದ ವಿವಾಹ ನಿಷಿದ್ಧರಾಗಿರುವವರು, ಅಥವಾ ಗಂಡನ ತಂದೆ ಮುಂತಾದ ವೈವಾಹಿಕ ಸಂಬಂಧದ ಮೂಲಕ ವಿವಾಹ ನಿಷಿದ್ಧರಾಗಿರುವವರು ಮಹಿಳೆಯ ಮಹ್ರಮ್ (ವಿವಾಹ ನಿಷಿದ್ಧ ಪುರುಷರು) ಆಗಿದ್ದಾರೆ. ಇವರೆಲ್ಲರೂ ಮುಸ್ಲಿಮರು, ಪ್ರೌಢರು, ಬುದ್ಧಿಸ್ಥಿಮಿತದಲ್ಲಿರುವವರು, ವಿಶ್ವಾಸಾರ್ಹರು ಮತ್ತು ಅಭಯ ನೀಡುವವರು ಆಗಿರತಕ್ಕದ್ದು. ಏಕೆಂದರೆ, ಮಹ್ರಮ್ (ವಿವಾಹ ನಿಷಿದ್ಧ ಪುರುಷರು) ನ ನಿಜವಾದ ಉದ್ದೇಶವು, ಮಹಿಳೆಯನ್ನು ಕಾಪಾಡುವುದು, ರಕ್ಷಿಸುವುದು ಮತ್ತು ಅವಳ ಯೋಗಕ್ಷೇಮವನ್ನು ನೋಡಿಕೊಳ್ಳುವುದಾಗಿದೆ.
  5. ಇಸ್ಲಾಮೀ ಧರ್ಮಶಾಸ್ತ್ರವು ಮಹಿಳೆಯ ಸಂರಕ್ಷಣೆಗೆ ಅತಿಯಾದ ಕಾಳಜಿ ವಹಿಸಿದೆ.
  6. ಅಸರ್ ನಮಾಝ್ ಮತ್ತು ಫಜ್ರ್ ನಮಾಝಿನ ಬಳಿಕ ನಿರ್ವಹಿಸುವ ನಿರುಪಾಧಿಕ ಐಚ್ಛಿಕ ನಮಾಝ್‌ಗಳು ಸಿಂಧುವಲ್ಲ. ಆದರೆ, ತಪ್ಪಿಹೋದ ಕಡ್ಡಾಯ ನಮಾಝ್‌ಗಳು, ತಹಿಯ್ಯತ್ ನಮಾಝ್ ಮುಂತಾದ ಕಾರಣವಿರುವ ನಮಾಝ್‌ಗಳು ಇದರಿಂದ ಹೊರತಾಗಿವೆ.
  7. ಸೂರ್ಯೋದಯವಾದ ತಕ್ಷಣ ನಮಾಝ್ ನಿರ್ವಹಿಸುವುದು ನಿಷಿದ್ಧವಾಗಿದೆ. ಬದಲಿಗೆ, ಸೂರ್ಯ ಈಟಿಯ ಗಾತ್ರದಷ್ಟು ಏರುವ ತನಕ, ಅಂದರೆ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ತನಕ ಕಾಯಬೇಕಾಗಿದೆ.
  8. ಅಸರ್ ನಮಾಝಿನ ಸಮಯವು ಸೂರ್ಯಾಸ್ತದ ತನಕ ಇದೆ.
  9. ಮೂರು ಮಸೀದಿಗಳಿಗೆ ಯಾತ್ರೆ ಹೊರಡಲು ಇದರಲ್ಲಿ ಅನುಮತಿಯಿದೆ.
  10. ಮೂರು ಮಸೀದಿಗಳಿಗೆ ಶ್ರೇಷ್ಠತೆಯಿದೆ ಮತ್ತು ಅವು ಇತರ ಮಸೀದಿಗಳಿಂದ ವಿಶಿಷ್ಟವಾಗಿದೆ.
  11. ಸಮಾಧಿ ಸಂದರ್ಶನಕ್ಕಾಗಿ ಯಾತ್ರೆ ಹೊರಡಲು ಅನುಮತಿಯಿಲ್ಲ. ಅದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿಯಾದರೂ ಸಹ. ಮದೀನದಲ್ಲಿರುವವರಿಗೆ ಅಥವಾ ಇತರ ಶಾಸ್ತ್ರೋಕ್ತ ಅಥವಾ ಧರ್ಮಸಮ್ಮತ ಉದ್ದೇಶಕ್ಕಾಗಿ ಅಲ್ಲಿಗೆ ಹೋದವರಿಗೆ ಮಾತ್ರ ಅದಕ್ಕೆ ಅನುಮತಿಯಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الدرية الصربية الصومالية الكينياروندا الرومانية المجرية التشيكية الموري المالاجاشية الأورومو الولوف الأوكرانية الجورجية
ಅನುವಾದಗಳನ್ನು ತೋರಿಸಿ