عن عبد الله بن عمرو بن العاص رضي الله عنهما عن النبي صلى الله عليه وسلم قال:
«الْكَبَائِرُ: الْإِشْرَاكُ بِاللهِ، وَعُقُوقُ الْوَالِدَيْنِ، وَقَتْلُ النَّفْسِ، وَالْيَمِينُ الْغَمُوسُ».
[صحيح] - [رواه البخاري] - [صحيح البخاري: 6675]
المزيــد ...
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮಹಾಪಾಪಗಳು ಎಂದರೆ: ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು, ಮಾತಾಪಿತರಿಗೆ ಅವಿಧೇಯತೆ ತೋರುವುದು, ನರಹತ್ಯೆ ಮಾಡುವುದು ಮತ್ತು ಸುಳ್ಳು ಪ್ರಮಾಣ ಮಾಡುವುದು."
[صحيح] - [رواه البخاري] - [صحيح البخاري - 6675]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮಹಾಪಾಪಗಳನ್ನು ವಿವರಿಸುತ್ತಿದ್ದಾರೆ. ಇಹಲೋಕದಲ್ಲಿ ಅಥವಾ ಪರಲೋಕದಲ್ಲಿ ಕಠೋರ ಶಿಕ್ಷೆಯ ಎಚ್ಚರಿಕೆಯನ್ನು ನೀಡಲಾದ ಪಾಪಗಳೆಲ್ಲವೂ ಮಹಾಪಾಪಗಳಾಗಿವೆ.
ಅವುಗಳಲ್ಲಿ ಮೊದಲನೆಯದು ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು: ಅಂದರೆ ಆರಾಧನೆಗಳಲ್ಲಿ ಸೇರಿದ ಯಾವುದಾದರೂ ಒಂದನ್ನು ಅಲ್ಲಾಹನ ಹೊರತಾದವರಿಗೆ ಅರ್ಪಿಸುವುದು, ಅಲ್ಲಾಹನಿಗೆ ಮಾತ್ರ ಸೀಮಿತವಾಗಿರುವ ಅವನ ಪ್ರಭುತ್ವದಲ್ಲಿ, ದೈವಿಕತೆಯಲ್ಲಿ ಮತ್ತು ಅವನ ಹೆಸರು ಹಾಗೂ ಗುಣಲಕ್ಷಣಗಳಲ್ಲಿ ಅವನ ಹೊರತಾದವರನ್ನು ಅವನಿಗೆ ಸರಿಸಾಟಿಯಾಗಿ ಮಾಡುವುದು.
ಎರಡನೆಯದು ಮಾತಾಪಿತರಿಗೆ ಅವಿಧೇಯತೆ ತೋರುವುದು: ಮಾತಾಪಿತರನ್ನು ನೋಯಿಸುವುದು, ಅದು ಮಾತಿನ ಮೂಲಕ ಅಥವಾ ವರ್ತನೆಯ ಮೂಲಕವಾದರೂ ಸಹ, ಮತ್ತು ಅವರೊಡನೆ ಉತ್ತಮ ರೀತಿಯಲ್ಲಿ ವರ್ತಿಸದಿರುವುದು ಅವಿಧೇಯತೆಗಳಾಗಿವೆ.
ಮೂರನೇಯದು ನರಹತ್ಯೆ ಮಾಡುವುದು: ಅಂದರೆ ಅನ್ಯಾಯವಾಗಿ ಅಥವಾ ದ್ವೇಷದಿಂದ ಯಾರನ್ನಾದರೂ ಕೊಲ್ಲುವುದು.
ನಾಲ್ಕನೆಯದು ಸುಳ್ಳು ಪ್ರಮಾಣ ಮಾಡುವುದು: ಅಂದರೆ ಸುಳ್ಳೆಂದು ತಿಳಿದೂ ಸಹ ಸುಳ್ಳು ಪ್ರಮಾಣ ಮಾಡುವುದು. ಇದನ್ನು ಅರಬ್ಬಿ ಭಾಷೆಯಲ್ಲಿ ಗಮೂಸ್ ಎಂದು ಕರೆಯಲು ಕಾರಣವೇನೆಂದರೆ ಇದು ಅದನ್ನು ಮಾಡುವವರನ್ನು ಪಾಪದಲ್ಲಿ ಅಥವಾ ನರಕದಲ್ಲಿ ಮುಳುಗಿಸುತ್ತದೆ.