+ -

عَنْ عَلِيٍّ رضي الله عنه:
أَنَّ فَاطِمَةَ رَضيَ اللهُ عنْها أَتَتِ النَّبِيَّ صَلَّى اللهُ عَلَيْهِ وَسَلَّمَ تَشْكُو إِلَيْهِ مَا تَلْقَى فِي يَدِهَا مِنَ الرَّحَى، وَبَلَغَهَا أَنَّهُ جَاءَهُ رَقِيقٌ، فَلَمْ تُصَادِفْهُ، فَذَكَرَتْ ذَلِكَ لِعَائِشَةَ، فَلَمَّا جَاءَ أَخْبَرَتْهُ عَائِشَةُ، قَالَ: فَجَاءَنَا وَقَدْ أَخَذْنَا مَضَاجِعَنَا، فَذَهَبْنَا نَقُومُ، فَقَالَ: «عَلَى مَكَانِكُمَا» فَجَاءَ فَقَعَدَ بَيْنِي وَبَيْنَهَا، حَتَّى وَجَدْتُ بَرْدَ قَدَمَيْهِ عَلَى بَطْنِي، فَقَالَ: «أَلاَ أَدُلُّكُمَا عَلَى خَيْرٍ مِمَّا سَأَلْتُمَا؟ إِذَا أَخَذْتُمَا مَضَاجِعَكُمَا -أَوْ أَوَيْتُمَا إِلَى فِرَاشِكُمَا- فَسَبِّحَا ثَلاَثًا وَثَلاَثِينَ، وَاحْمَدَا ثَلاَثًا وَثَلاَثِينَ، وَكَبِّرَا أَرْبَعًا وَثَلاَثِينَ، فَهُوَ خَيْرٌ لَكُمَا مِنْ خَادِمٍ».

[صحيح] - [متفق عليه] - [صحيح البخاري: 5361]
المزيــد ...

ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಒಮ್ಮೆ ಫಾತಿಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರುಬ್ಬುವ ಕಲ್ಲಿನಿಂದ ತನ್ನ ಕೈಗೆ ಉಂಟಾದ ಗಾಯಗಳ ಬಗ್ಗೆ ದೂರು ನೀಡಲು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋದರು. ಅವರ ಬಳಿ ಕೆಲವು ಗುಲಾಮರಿದ್ದಾರೆಂಬ ಸುದ್ದಿ ಅವರಿಗೆ ತಲುಪಿತ್ತು. ಆದರೆ ಅವರು ಅಲ್ಲಿ ಪ್ರವಾದಿಯವರನ್ನು ಕಾಣಲಿಲ್ಲ. ಅವರು ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ವಿಷಯವನ್ನು ತಿಳಿಸಿದರು. ಪ್ರವಾದಿಯವರು ಬಂದಾಗ ಆಯಿಶ ನಡೆದ ಸಂಗತಿಯನ್ನು ಅವರಿಗೆ ತಿಳಿಸಿದರು. ನಂತರ, ನಾವು ಮಲಗಿದ್ದಾಗ ಪ್ರವಾದಿಯವರು ನಮ್ಮ ಬಳಿಗೆ ಬಂದರು. ನಾವು ಎದ್ದೇಳಲು ಮುಂದಾದಾಗ ಅವರು ಹೇಳಿದರು: "ಅಲ್ಲೇ ಇರಿ." ಅವರು ಬಂದು ನನ್ನ ಮತ್ತು ಫಾತಿಮರ ನಡುವೆ ಕುಳಿತರು. ಅವರು ಎಷ್ಟು ಹತ್ತಿರವಾಗಿದ್ದರೆಂದರೆ ನನ್ನ ಹೊಟ್ಟೆಗೆ ಅವರ ಪಾದಗಳ ತಂಪು ಅನುಭವವಾಗುತ್ತಿತ್ತು. ಅವರು ಹೇಳಿದರು: "ನೀವಿಬ್ಬರು ಕೇಳಿದ್ದಕ್ಕಿಂತಲೂ ಉತ್ತಮವಾದ ಒಂದನ್ನು ನಾನು ನಿಮಗೆ ತಿಳಿಸಿಕೊಡಲೇ? ನೀವು ನಿದ್ದೆ ಮಾಡಲು ಹೋಗುವಾಗ ಮೂವತ್ತಮೂರು ಬಾರಿ ಸುಬ್‌ಹಾನಲ್ಲಾಹ್, ಮೂವತ್ತಮೂರು ಬಾರಿ ಅಲ್-ಹಮ್ದುಲಿಲ್ಲಾಹ್, ಮೂವತ್ತನಾಲ್ಕು ಬಾರಿ ಅಲ್ಲಾಹು ಅಕ್ಬರ್ ಹೇಳಿರಿ. ಇದು ನಿಮಗೆ ಒಬ್ಬ ಸೇವಕ ದೊರೆಯುವುದಕ್ಕಿಂತಲೂ ಉತ್ತಮವಾಗಿದೆ."

[صحيح] - [متفق عليه] - [صحيح البخاري - 5361]

ವಿವರಣೆ

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಗಳು ಫಾತಿಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರುಬ್ಬುವ ಕಲ್ಲನ್ನು ರುಬ್ಬಿದ ಕಾರಣ ತನ್ನ ಕೈಗೆ ಉಂಟಾದ ಗಾಯಗಳ ಬಗ್ಗೆ ಅವರಲ್ಲಿ ದೂರಿಕೊಂಡರು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕೆಲವು ಯುದ್ಧ ಕೈದಿಗಳು ಬಂದಾಗ, ಇವರಲ್ಲಿ ಒಬ್ಬರನ್ನು ಮನೆ ಕೆಲಸ ಮಾಡಲು ತನಗೆ ಸೇವಕನಾಗಿ ಕೊಡಬೇಕೆಂದು ಕೇಳಿಕೊಳ್ಳಲು ಅವರು ಹೋಗಿದ್ದರು. ಆದರೆ, ಅವರು ಮನೆಯಲ್ಲಿ ಅವರನ್ನು ಕಾಣಲಿಲ್ಲ. ಅಲ್ಲಿ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇದ್ದರು. ಅವರು ಅವರಿಗೆ ವಿಷಯ ತಿಳಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದಾಗ ಫಾತಿಮ ಬಂದು ಸೇವಕನನ್ನು ಕೇಳಿದ ಬಗ್ಗೆ ಆಯಿಶ ಅವರಿಗೆ ತಿಳಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲಿ ಮತ್ತು ಫಾತಿಮ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರ ಮನೆಗೆ ಹೋದಾಗ, ಅವರಿಬ್ಬರು ನಿದ್ರೆ ಮಾಡಲು ಸಿದ್ಧತೆ ಮಾಡುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಬ್ಬರಿಗೆ ಎಷ್ಟು ಹತ್ತಿರವಾಗಿ ಕುಳಿತರೆಂದರೆ ಅವರ ಪಾದಗಳ ತಂಪು ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಹೊಟ್ಟೆಗೆ ಅನುಭವವಾಗುತ್ತಿತ್ತು. ಅವರು ಹೇಳಿದರು: "ಒಬ್ಬ ಸೇವಕನನ್ನು ಕೊಡಬೇಕೆಂದು ನೀವು ಕೇಳಿದ್ದಕ್ಕಿಂತಲೂ ಉತ್ತಮವಾದ ಒಂದನ್ನು ನಾನು ನಿಮಗೆ ತಿಳಿಸಿಕೊಡಲೇ?" ಅವರಿಬ್ಬರು ತಿಳಿಸಿಕೊಡಿ ಎಂದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ರಾತ್ರಿ ನಿದ್ರೆ ಮಾಡಲು ಹೋಗವಾಗ, ಮೂವತ್ತ ನಾಲ್ಕು ಬಾರಿ "ಅಲ್ಲಾಹು ಅಕ್ಬರ್" ಎಂದು ಹೇಳಿರಿ, ಮೂವತ್ತ ಮೂರು ಬಾರಿ "ಸುಬ್‌ಹಾನಲ್ಲಾಹ್" ಎಂದು ಹೇಳಿರಿ ಮತ್ತು ಮೂವತ್ತ ಮೂರು ಬಾರಿ "ಅಲ್-ಹಮ್ದುಲಿಲ್ಲಾಹ್" ಎಂದು ಹೇಳಿರಿ. ಈ ಸ್ಮರಣೆಗಳು ನಿಮಗೆ ಒಬ್ಬ ಸೇವಕ ದೊರೆಯುವುದಕ್ಕಿಂತಲೂ ಉತ್ತಮವಾಗಿದೆ."

ಹದೀಸಿನ ಪ್ರಯೋಜನಗಳು

  1. ಈ ಅನುಗ್ರಹೀತ ಸ್ಮರಣೆಯನ್ನು ರೂಢಿ ಮಾಡಿಕೊಳ್ಳುವುದು ಅಪೇಕ್ಷಣೀಯವಾಗಿದೆ. ಏಕೆಂದರೆ, ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ ಈ ಉಪದೇಶವನ್ನು ಯಾವತ್ತೂ ಬಿಟ್ಟಿರಲಿಲ್ಲ. ಸಿಫ್ಫೀನ್ ಯುದ್ಧದ ರಾತ್ರಿಯಲ್ಲೂ ಕೂಡ.
  2. ಈ ಸ್ಮರಣೆಯನ್ನು ರಾತ್ರಿ ನಿದ್ರೆ ಮಾಡುವಾಗ ಮಾತ್ರ ಹೇಳಬೇಕಾಗಿದೆ. ಮುಆದ್ ಬಿನ್ ಶುಅಬರಿಂದ ಮುಸ್ಲಿಂ ವರದಿ ಮಾಡಿದ ಇದರ ಇನ್ನೊಂದು ವರದಿಯಲ್ಲಿ ಹೀಗೆ ಹೇಳಲಾಗಿದೆ: "ನೀವು ರಾತ್ರಿ ನಿದ್ರೆ ಮಾಡಲು ಹೋಗವಾಗ."
  3. ಒಬ್ಬ ಮುಸಲ್ಮಾನ ಈ ಸ್ಮರಣೆಯನ್ನು ರಾತ್ರಿಯ ಮೊದಲ ಭಾಗದಲ್ಲಿ ಪಠಿಸಲು ಮರೆತು ಕೊನೆಯ ಭಾಗದಲ್ಲಿ ಪಠಿಸಿದರೆ ಅದರಲ್ಲೇನೂ ತೊಂದರೆಯಿಲ್ಲ. ಏಕೆಂದರೆ, ಈ ಹದೀಸಿನ ವರದಿಗಾರರಾದ ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರಿಗೆ ಸಿಫ್ಫೀನ್ ಯುದ್ಧದ ರಾತ್ರಿಯಲ್ಲಿ ಇದನ್ನು ಪಠಿಸಲು ಮರೆತು ಹೋಗಿತ್ತು. ನಂತರ ಅವರು ಮುಂಜಾನೆಗೆ ಮುಂಚೆ ಎದ್ದಾಗ ಇದನ್ನು ಪಠಿಸಿದರು.
  4. ಮುಹಲ್ಲಬ್ ಹೇಳಿದರು: "ಒಬ್ಬ ಮನುಷ್ಯ ಇಹಲೋಕಕ್ಕಿಂತ ಹೆಚ್ಚು ಪರಲೋಕಕ್ಕೆ ಪ್ರಾಮುಖ್ಯತೆ ನೀಡುವ ವಿಷಯದಲ್ಲಿ ತೊಡಗಿಕೊಳ್ಳಲು ತನ್ನನ್ನು ತಾನೇ ಪ್ರೇರೇಪಿಸುವಂತೆ ತನ್ನ ಕುಟುಂಬದವರನ್ನೂ, ಅವರಿಗೆ ಸಾಮರ್ಥ್ಯವಿರುವ ವಿಷಯಗಳಲ್ಲಿ ಪ್ರೇರೇಪಿಸಬಹುದು ಎನ್ನುವುದಕ್ಕೆ ಈ ಹದೀಸಿನಲ್ಲಿ ಪುರಾವೆಯಿದೆ."
  5. ಇಬ್ನ್ ಹಜರ್ ಅಸ್ಕಲಾನಿ ಹೇಳಿದರು: "ಈ ಸ್ಮರಣೆಯನ್ನು ರೂಢಿ ಮಾಡಿಕೊಂಡವರಿಗೆ ಕೆಲಸಗಳ ಒತ್ತಡದಿಂದ ತೊಂದರೆಯಾಗಲಿ ಕಷ್ಟವಾಗಲಿ ಉಂಟಾಗುವುದಿಲ್ಲ; ಅವರಿಗೆ ಅದರಿಂದ ಆಯಾಸವಾದರೂ ಸಹ."
  6. ಐನಿ ಹೇಳಿದರು: "ಇಲ್ಲಿ ಉತ್ತಮವಾಗಿರುವುದು ಹೇಗೆಂದರೆ, ಸ್ಮರಣೆಯು ಪರಲೋಕಕ್ಕೆ ಸಂಬಂಧಿಸಿದ ವಿಷಯವಾಗಿದ್ದರೆ ಸೇವಕನು ಇಹಲೋಕಕ್ಕೆ ಸಂಬಂಧಿಸಿದ ವಿಷಯವಾಗಿದೆ. ಪರಲೋಕವು ಅತ್ಯುತ್ತಮ ಮತ್ತು ಶಾಶ್ವತವಾಗಿದೆ. ಅಥವಾ ಇಲ್ಲಿನ ಉದ್ದೇಶವು ಮಗಳು ಸೇವಕನನ್ನು ಕೇಳಿದ್ದಕ್ಕೆ ಸಂಬಂಧಿಸಿದ್ದಾಗಿರಬಹುದು. ಅಂದರೆ, ಸೇವಕನಿಗೆ ಮಾಡಲು ಸಾಧ್ಯವಿರುವುದಕ್ಕಿಂತಲೂ ಹೆಚ್ಚಿನ ಕೆಲಸಗಳನ್ನು ಈ ಸ್ಮರಣೆಗಳ ಕಾರಣದಿಂದಾಗಿ ಮಾಡಲು ಮಗಳಿಗೆ ಸಾಧ್ಯವಾಗುತ್ತದೆ ಎಂದು ಹೇಳಿರಬಹುದು."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الهولندية الغوجاراتية القيرقيزية النيبالية الصربية الرومانية المجرية التشيكية الموري المالاجاشية الأوكرانية الجورجية المقدونية
ಅನುವಾದಗಳನ್ನು ತೋರಿಸಿ
ಇನ್ನಷ್ಟು