عَنْ أَنَسٍ رضي الله عنه:
أَنَّ نَفَرًا مِنْ أَصْحَابِ النَّبِيِّ صَلَّى اللهُ عَلَيْهِ وَسَلَّمَ سَأَلُوا أَزْوَاجَ النَّبِيِّ صَلَّى اللهُ عَلَيْهِ وَسَلَّمَ عَنْ عَمَلِهِ فِي السِّرِّ؟ فَقَالَ بَعْضُهُمْ: لَا أَتَزَوَّجُ النِّسَاءَ، وَقَالَ بَعْضُهُمْ: لَا آكُلُ اللَّحْمَ، وَقَالَ بَعْضُهُمْ: لَا أَنَامُ عَلَى فِرَاشٍ، فَحَمِدَ اللهَ وَأَثْنَى عَلَيْهِ، فَقَالَ: «مَا بَالُ أَقْوَامٍ قَالُوا كَذَا وَكَذَا؟ لَكِنِّي أُصَلِّي وَأَنَامُ، وَأَصُومُ وَأُفْطِرُ، وَأَتَزَوَّجُ النِّسَاءَ، فَمَنْ رَغِبَ عَنْ سُنَّتِي فَلَيْسَ مِنِّي».
[صحيح] - [متفق عليه] - [صحيح مسلم: 1401]
المزيــد ...
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಲ್ಲಿ ಕೆಲವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಖಾಸಗಿ ಜೀವನದ ಬಗ್ಗೆ ಅವರ ಪತ್ನಿಯರಲ್ಲಿ ಕೇಳಿದರು. ನಂತರ ಅವರಲ್ಲಿ ಒಬ್ಬರು ಹೇಳಿದರು: "ನಾನು (ಇನ್ನು ಮುಂದೆ) ಸ್ತ್ರೀಯರನ್ನು ಮದುವೆಯಾಗುವುದಿಲ್ಲ." ಅವರಲ್ಲಿ ಇನ್ನೊಬ್ಬರು ಹೇಳಿದರು: "ನಾನು (ಇನ್ನು ಮುಂದೆ) ಮಾಂಸವನ್ನು ತಿನ್ನುವುದಿಲ್ಲ." ಅವರಲ್ಲಿ ಮತ್ತೊಬ್ಬರು ಹೇಳಿದರು: "ನಾನು (ಇನ್ನು ಮುಂದೆ) ಹಾಸಿಗೆಯ ಮೇಲೆ ಮಲಗುವುದಿಲ್ಲ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನನ್ನು ಸ್ತುತಿಸಿ ಹೇಳಿದರು: "ಕೆಲವು ಜನರಿಗೆ ಏನಾಗಿದೆ? ಅವರೇಕೆ ಹೀಗೆ ಹೀಗೆ ಹೇಳುತ್ತಿದ್ದಾರೆ? ಆದರೆ, ನಾನು ನಮಾಝ್ ಮಾಡುತ್ತೇನೆ ಮತ್ತು ಮಲಗುತ್ತೇನೆ, ಉಪವಾಸ ಆಚರಿಸುತ್ತೇನೆ ಮತ್ತು ಆಚರಿಸದೆ ಇರುತ್ತೇನೆ, ಹಾಗೂ ಸ್ತ್ರೀಯರನ್ನು ಮದುವೆಯಾಗುತ್ತೇನೆ. ಯಾರು ನನ್ನ ಸುನ್ನತ್‌ನಿಂದ ವಿಮುಖರಾಗುತ್ತಾರೋ ಅವರು ನನ್ನವರಲ್ಲ."
[صحيح] - [متفق عليه] - [صحيح مسلم - 1401]
ಕೆಲವು ಸಹಚರರು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ ಪತ್ನಿಯರ ಮನೆಗಳಿಗೆ ಬಂದು, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಯೊಳಗೆ ಖಾಸಗಿಯಾಗಿ ನಿರ್ವಹಿಸುವ ಆರಾಧನೆಗಳ ಬಗ್ಗೆ ಕೇಳಿದರು. ಅವರು ಅದರ ಬಗ್ಗೆ ತಿಳಿಸಿದಾಗ, ಇವರು ಅದನ್ನು ಬಹಳ ಕಡಿಮೆಯೆಂದು ಪರಿಗಣಿಸಿ ಹೇಳಿದರು: "ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೋಲಿಸಿದರೆ ನಮ್ಮ ಸ್ಥಾನವೆಲ್ಲಿ? ಅವರ ಹಿಂದಿನ ಮತ್ತು ಮುಂದಿನ ಎಲ್ಲಾ ಪಾಪಗಳನ್ನು ಕ್ಷಮಿಸಲಾಗಿದೆ. ಆದರೆ ಯಾರಿಗೆ ತಮ್ಮ ಕ್ಷಮೆಯ ಬಗ್ಗೆ ತಿಳಿದಿಲ್ಲವೋ ಅವರು ಅದನ್ನು ಪಡೆಯುವುದಕ್ಕಾಗಿ ಆರಾಧನೆಗಳನ್ನು ಅತಿಯಾಗಿ ನಿರ್ವಹಿಸಬೇಕಾಗುತ್ತದೆ." ನಂತರ ಅವರಲ್ಲಿ ಒಬ್ಬರು ಹೇಳಿದರು: "ನಾನು (ಇನ್ನು ಮುಂದೆ) ಸ್ತ್ರೀಯರನ್ನು ಮದುವೆಯಾಗುವುದಿಲ್ಲ." ಇನ್ನೊಬ್ಬರು ಹೇಳಿದರು: "ನಾನು (ಇನ್ನು ಮುಂದೆ) ಮಾಂಸವನ್ನು ತಿನ್ನುವುದಿಲ್ಲ." ಮತ್ತೊಬ್ಬರು ಹೇಳಿದರು: "ನಾನು (ಇನ್ನು ಮುಂದೆ) ಹಾಸಿಗೆಯ ಮೇಲೆ ಮಲಗುವುದಿಲ್ಲ." ಇದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಿವಿಗೆ ಬಿದ್ದಾಗ, ಅವರು ಕೋಪಗೊಂಡರು ಮತ್ತು ಜನರಿಗೆ ಉಪದೇಶ ನೀಡಿದರು. ಅವರು ಅಲ್ಲಾಹನನ್ನು ಸ್ತುತಿಸಿ ಹೊಗಳಿದ ನಂತರ ಹೇಳಿದರು: "ಜನರಿಗೇನಾಗಿದೆ, ಅವರೇಕೆ ಹೀಗೆ ಹೀಗೆ ಹೇಳುತ್ತಿದ್ದಾರೆ?! ಅಲ್ಲಾಹನ ಮೇಲೆ ಆಣೆಯಿಟ್ಟು ಹೇಳುತ್ತೇನೆ, ನಾನು ನಿಮ್ಮೆಲ್ಲರಿಗಿಂತಲೂ ಅಲ್ಲಾಹನನ್ನು ಹೆಚ್ಚು ಭಯಪಡುತ್ತೇನೆ ಮತ್ತು ಹೆಚ್ಚು ದೇವಭಕ್ತಿಯನ್ನು ಹೊಂದಿದ್ದೇನೆ. ಆದರೂ ನಾನು ರಾತ್ರಿಯಲ್ಲಿ ನಮಾಝ್ ನಿರ್ವಹಿಸಲು ಶಕ್ತಿ ಪಡೆಯುವುದಕ್ಕಾಗಿ ಮಲಗುತ್ತೇನೆ. ಉಪವಾಸ ಆಚರಿಸಲು ಶಕ್ತಿ ಪಡೆಯುವುದಕ್ಕಾಗಿ ಉಪವಾಸ ಬಿಡುತ್ತೇನೆ ಮತ್ತು ಸ್ತ್ರೀಯರನ್ನು ಮದುವೆಯಾಗುತ್ತೇನೆ. ಯಾರು ನನ್ನ ಮಾರ್ಗವನ್ನು ತಿರಸ್ಕರಿಸಿ, ಬೇರೆ ಮಾರ್ಗದಲ್ಲಿ ಅದಕ್ಕಿಂತ ಹೆಚ್ಚು ಪರಿಪೂರ್ಣತೆಯನ್ನು ಕಾಣುತ್ತಾರೋ ಮತ್ತು ನನ್ನ ಮಾರ್ಗವಲ್ಲದ ಬೇರೆ ಮಾರ್ಗವನ್ನು ಅನುಸರಿಸುತ್ತಾರೋ ಅವರು ನನ್ನವರಲ್ಲ."