+ -

عَنْ عَائِشَةَ أُمِّ المُؤمنينَ رضي الله عنها قَالَتْ:
كَانَ النَّبِيُّ صَلَّى اللهُ عَلَيْهِ وَسَلَّمَ يُعْجِبُهُ التَّيَمُّنُ، فِي تَنَعُّلِهِ، وَتَرَجُّلِهِ، وَطُهُورِهِ، وَفِي شَأْنِهِ كُلِّهِ.

[صحيح] - [متفق عليه] - [صحيح البخاري: 168]
المزيــد ...

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆ ಧರಿಸುವಾಗ, ತಲೆ ಬಾಚುವಾಗ, ಶುದ್ಧೀಕರಿಸುವಾಗ, ಮತ್ತು ತಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲೂ ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು."

[صحيح] - [متفق عليه] - [صحيح البخاري - 168]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗೌರವಾರ್ಹವಾದ ಯಾವುದೇ ಕೆಲಸವನ್ನು ಮಾಡುವಾಗ ತಮ್ಮ ಬಲಭಾಗದಿಂದ ಪ್ರಾರಂಭಿಸುವುದನ್ನು ಮತ್ತು ಬಲಭಾಗಕ್ಕೆ ಪ್ರಾಶಸ್ತ್ಯ ನೀಡುವುದನ್ನು ಇಷ್ಟಪಡುತ್ತಿದ್ದರು. ಉದಾಹರಣೆಗೆ: ಪಾದರಕ್ಷೆಯನ್ನು ಧರಿಸುವಾಗ ಮೊದಲು ಬಲಗಾಲಿನಿಂದ ಪ್ರಾರಂಭಿಸುತ್ತಿದ್ದರು. ತಲೆಗೂದಲು ಮತ್ತು ಗಡ್ಡವನ್ನು ಬಾಚುವಾಗ, ಅವುಗಳಿಗೆ ಮಾಲೀಸು ಮಾಡುವಾಗ ಮತ್ತು ಅವುಗಳಿಗೆ ಎಣ್ಣೆ ಹಚ್ಚುವಾಗ ಬಲಭಾಗದಿಂದ ಪ್ರಾರಂಭಿಸುತ್ತಿದ್ದರು. ವುದೂ ನಿರ್ವಹಿಸುವಾಗ ಕೈ-ಕಾಲು ಸೇರಿದಂತೆ ಎಡಭಾಗಕ್ಕೆ ಮೊದಲು ಬಲಭಾಗವನ್ನು ತೊಳೆಯುತ್ತಿದ್ದರು.

ಹದೀಸಿನ ಪ್ರಯೋಜನಗಳು

  1. ನವವಿ ಹೇಳಿದರು: "ಇದು ಧರ್ಮಶಾಸ್ತ್ರದಲ್ಲಿರುವ ಒಂದು ಸುವಿಧಿತ ನಿಯಮವಾಗಿದೆ. ಗೌರವಾರ್ಹ ಮತ್ತು ಗಣ್ಯ ಕೆಲಸಗಳನ್ನು ಮಾಡುವಾಗ, ಉದಾಹರಣೆಗೆ, ಅಂಗಿ, ಧೋತಿ, ಚಪ್ಪಲಿ ಮುಂತಾದವುಗಳನ್ನು ಧರಿಸುವುದು, ಮಸೀದಿಯನ್ನು ಪ್ರವೇಶಿಸುವುದು, ದಂತ ಶುಚಿಗೊಳಿಸುವುದು, ಕಾಡಿಗೆ ಹಚ್ಚುವುದು, ಉಗುರು ಕತ್ತರಿಸುವುದು, ಮೀಸೆ ಕತ್ತರಿಸುವುದು, ತಲೆ ಬಾಚುವುದು, ಕಂಕುಳದ ರೋಮ ಕೀಳುವುದು, ತಲೆ ಬೋಳಿಸುವುದು, ನಮಾಝ್ ಮುಗಿಸಿ ಸಲಾಂ ಹೇಳುವುದು, ವುದೂವಿನ ಅಂಗಗಳನ್ನು ತೊಳೆಯುವುದು, ಶೌಚಾಲಯದಿಂದ ಹೊರಬರುವುದು, ಆಹಾರ ಪಾನೀಯ ಸೇವಿಸುವುದು, ಹಸ್ತಲಾಘವ ಮಾಡುವುದು, ಹಜರುಲ್-ಅಸ್ವದ್ ಸ್ಪರ್ಶಿಸುವುದು ಮುಂತಾದ ಯಾವುದೇ ಕೆಲಸಗಳನ್ನು ಮಾಡುವಾಗಲೂ ಬಲಭಾಗಕ್ಕೆ ಪ್ರಾಶಸ್ತ್ಯ ನೀಡುವುದು ಅಪೇಕ್ಷಣೀಯವಾಗಿದೆ. ಆದರೆ, ಇದಕ್ಕೆ ವಿರುದ್ಧವಾದ ಕೆಲಸಗಳನ್ನು ಮಾಡುವಾಗ, ಅಂದರೆ ಶೌಚಾಲಯವನ್ನು ಪ್ರವೇಶಿಸುವುದು, ಮೂಗಿನಿಂದ ಸಿಂಬಳವನ್ನು ತೆಗೆಯುವುದು, ಮಲಮೂತ್ರ ವಿಸರ್ಜನೆಯ ನಂತರ ಶುಚಿಗೊಳಿಸುವುದು, ಅಂಗಿ, ಧೋತಿ, ಚಪ್ಪಲಿಗಳನ್ನು ಕಳಚುವುದು ಮುಂತಾದ ಕೆಲಸಗಳನ್ನು ಮಾಡುವಾಗ ಎಡಭಾಗಕ್ಕೆ ಪ್ರಾಶಸ್ತ್ಯ ನೀಡುವುದು ಅಪೇಕ್ಷಣೀಯವಾಗಿದೆ. ಇವೆಲ್ಲವೂ ಬಲಭಾಗಕ್ಕಿರುವ ಗೌರವ ಮತ್ತು ಘನತೆಯ ಕಾರಣದಿಂದಾಗಿದೆ."
  2. "ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು" ಎಂಬುದರಲ್ಲಿ ಬಲಗೈಯಿಂದ, ಬಲಗಾಲಿನಿಂದ ಮತ್ತು ಬಲಭಾಗದಿಂದ ಕೆಲಸಗಳನ್ನು ಪ್ರಾರಂಭಿಸುವುದು ಮತ್ತು ಬಲಭಾಗದಿಂದ ವಸ್ತುಗಳನ್ನು ಸ್ವೀಕರಿಸುವುದು ಒಳಪಡುತ್ತವೆ.
  3. ನವವಿ ಹೇಳಿದರು: "ತಿಳಿಯಿರಿ! ವುದೂವಿನ ಕೆಲವು ಅಂಗಗಳನ್ನು, ಅಂದರೆ, ಎರಡು ಕಿವಿಗಳು, ಎರಡು ಅಂಗೈಗಳು ಮತ್ತು ಎರಡು ಕೆನ್ನೆಗಳನ್ನು ಬಲಭಾಗದಿಂದ ಪ್ರಾರಂಭಿಸುವುದು ಅಪೇಕ್ಷಣೀಯವಲ್ಲ. ಬದಲಿಗೆ, ಇವುಗಳನ್ನು ಒಟ್ಟೊಟ್ಟಿಗೆ ಶುದ್ಧೀಕರಿಸಬೇಕಾಗಿದೆ. ಆದರೆ, ಒಂದೇ ಕೈ ಇರುವವರು ಮುಂತಾದ ಇವುಗಳನ್ನು ಒಟ್ಟೊಟ್ಟಿಗೆ ಶುದ್ಧೀಕರಿಸಲು ಸಾಧ್ಯವಾಗದವರು ಮಾತ್ರ ಬಲಭಾಗಕ್ಕೆ ಪ್ರಾಶಸ್ತ್ಯ ನೀಡಬಹುದು."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الليتوانية الدرية الصربية الكينياروندا الرومانية الموري المالاجاشية الأورومو الجورجية
ಅನುವಾದಗಳನ್ನು ತೋರಿಸಿ