عَنْ حُمْرَانَ مَوْلَى عُثْمَانَ بْنِ عَفَّانَ رضي الله عنه:
أَنَّهُ رَأَى عُثْمَانَ بْنَ عَفَّانَ دَعَا بِوَضُوءٍ، فَأَفْرَغَ عَلَى يَدَيْهِ مِنْ إِنَائِهِ، فَغَسَلَهُمَا ثَلَاثَ مَرَّاتٍ، ثُمَّ أَدْخَلَ يَمِينَهُ فِي الْوَضُوءِ، ثُمَّ تَمَضْمَضَ وَاسْتَنْشَقَ وَاسْتَنْثَرَ، ثُمَّ غَسَلَ وَجْهَهُ ثَلَاثًا، وَيَدَيْهِ إِلَى الْمِرْفَقَيْنِ ثَلَاثًا، ثُمَّ مَسَحَ بِرَأْسِهِ، ثُمَّ غَسَلَ كُلَّ رِجْلٍ ثَلَاثًا، ثُمَّ قَالَ: رَأَيْتُ النَّبِيَّ صَلَّى اللهُ عَلَيْهِ وَسَلَّمَ يَتَوَضَّأُ نَحْوَ وُضُوئِي هَذَا، وَقَالَ: «مَنْ تَوَضَّأَ نَحْوَ وُضُوئِي هَذَا ثُمَّ صَلَّى رَكْعَتَيْنِ لَا يُحَدِّثُ فِيهِمَا نَفْسَهُ غَفَرَ اللهُ لَهُ مَا تَقَدَّمَ مِنْ ذَنْبِهِ».
[صحيح] - [متفق عليه] - [صحيح البخاري: 164]
المزيــد ...
ಉಸ್ಮಾನ್ ಬಿನ್ ಅಫ್ಫಾನ್ ರವರ ವಿಮೋಚಿತ ಗುಲಾಮರಾದ ಹುಮ್ರಾನ್ ರಿಂದ ವರದಿ: ಒಮ್ಮೆ ಉಸ್ಮಾನ್ ಬಿನ್ ಅಫ್ಫಾನ್ ವುದೂ ನಿರ್ವಹಿಸಲು ನೀರು ತರಿಸುವುದನ್ನು ಅವರು ಕಂಡರು. ಅವರು (ಉಸ್ಮಾನ್) ಪಾತ್ರೆಯಿಂದ ತಮ್ಮ ಎರಡು ಕೈಗಳಿಗೆ ನೀರು ಸುರಿದು, ಅವುಗಳನ್ನು ಮೂರು ಬಾರಿ ತೊಳೆದರು. ನಂತರ ಬಲಗೈಯನ್ನು ನೀರಿಗೆ ತೂರಿಸಿದರು. ನಂತರ ಬಾಯಿ ಮುಕ್ಕಳಿಸಿ ಮೂಗಿಗೆ ನೀರೆಳೆದು ಹೊರಬಿಟ್ಟರು. ನಂತರ ಮೂರು ಬಾರಿ ಮುಖವನ್ನು ತೊಳೆದರು. ಮೊಣಕೈಗಳ ವರೆಗೆ ಎರಡು ಕೈಗಳನ್ನು ಮೂರು ಬಾರಿ ತೊಳೆದರು. ನಂತರ ತಲೆಯನ್ನು ಸವರಿದರು. ನಂತರ ಎರಡು ಕಾಲುಗಳನ್ನು ಮೂರು ಬಾರಿ ತೊಳೆದರು. ನಂತರ ಹೇಳಿದರು: "ನಾನಿಲ್ಲಿ ವುದೂ ನಿರ್ವಹಿಸಿದಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸುವುದನ್ನು ನಾನು ಕಂಡಿದ್ದೇನೆ." ಅವರು (ಪ್ರವಾದಿಯವರು) ಹೇಳಿದರು: "ಯಾರು ನಾನಿಲ್ಲಿ ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ, ಇಹಲೋಕದ ಯಾವುದೇ ವಿಷಯದ ಬಗ್ಗೆ ಏನೂ ಯೋಚಿಸದೆ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ ಅವರ ಗತ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆ."
[صحيح] - [متفق عليه] - [صحيح البخاري - 164]
ಜನರಿಗೆ ಸ್ಪಷ್ಟವಾಗಿ ಅರ್ಥವಾಗುವುದಕ್ಕಾಗಿ ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸಿದ ರೂಪವನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟು ಕಲಿಸುತ್ತಿದ್ದಾರೆ. ಅವರು ಒಂದು ಪಾತ್ರೆಯಲ್ಲಿ ನೀರು ತರಿಸಿ, ಅದನ್ನು ತಮ್ಮ ಎರಡು ಕೈಗಳಿಗೆ ಮೂರು ಬಾರಿ ಸುರಿದರು. ನಂತರ ತಮ್ಮ ಬಲಗೈಯನ್ನು ಅದರಲ್ಲಿ ತೂರಿಸಿ, ಸ್ವಲ್ಪ ನೀರನ್ನು ತೆಗೆದು ಬಾಯಿಗೆ ಹಾಕಿ ಮುಕ್ಕಳಿಸಿ ಉಗಿದರು. ನಂತರ ಶ್ವಾಸದೊಂದಿಗೆ ನೀರನ್ನು ಮೂಗಿನೊಳಗೆ ಎಳೆದು ರಭಸವಾಗಿ ಹೊರಬಿಟ್ಟರು. ನಂತರ ಮುಖವನ್ನು ಮೂರು ಬಾರಿ ತೊಳೆದರು. ನಂತರ ಮೊಣಕೈಗಳನ್ನು ಸೇರಿಸಿ ಎರಡು ಕೈಗಳನ್ನು ಮೂರು ಬಾರಿ ತೊಳೆದರು. ನಂತರ ಕೈಯನ್ನು ಒದ್ದೆ ಮಾಡಿ ತಲೆಯನ್ನು ಒಂದು ಬಾರಿ ಸವರಿದರು. ನಂತರ ಕಾಲಿನ ಹರಡುಗಂಟುಗಳನ್ನು ಸೇರಿಸಿ ಎರಡು ಕಾಲುಗಳನ್ನು ಮೂರು ಬಾರಿ ತೊಳೆದರು.
ವುದೂ ಮುಗಿಸಿದ ನಂತರ, ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು, "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದೇ ರೀತಿ ವುದೂ ನಿರ್ವಹಿಸುವುದನ್ನು ನಾನು ನೋಡಿದ್ದೇನೆ" ಎಂದು ತಿಳಿಸಿದರು. ಯಾರು ಈ ರೀತಿ ವುದೂ ನಿರ್ವಹಿಸಿ, ವಿನಮ್ರತೆ ಮತ್ತು ಏಕಾಗ್ರತೆಯಿಂದ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ, ಅವರಿಗೆ ಈ ಪೂರ್ಣ ರೂಪದ ವುದೂ ಮತ್ತು ಈ ನಿಷ್ಕಳಂಕವಾದ ನಮಾಝ್ ನಿರ್ವಹಿಸಿದ್ದಕ್ಕೆ ಪ್ರತಿಫಲವಾಗಿ ಅಲ್ಲಾಹು ಅವರ ಗತಪಾಪಗಳನ್ನು ಕ್ಷಮಿಸುತ್ತಾನೆಂಬ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶುಭವಾರ್ತೆಯನ್ನು ಕೂಡ ಅವರು ಜನರಿಗೆ ತಿಳಿಸಿದರು.