ಅಬೂ ಹುರೈರಾ ಅಬ್ದುರ್ರಹ್ಮಾನ್ ಇಬ್ನ್ ಸಖ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ್ದೇನೆ: "ನಾನು ನಿಮಗೆ ಯಾವುದನ್ನು ನಿಷೇಧಿಸಿದ್ದೇನೆಯೋ, ಅದರಿಂದ ಸಂಪೂರ್ಣವಾಗಿ ದೂರವಿರಿ. ನಾನು ನಿಮಗೆ ಯಾವುದನ್ನು ಆದೇಶಿಸಿದ್ದೇನೆಯೋ, ಅದನ್ನು ನಿಮಗೆ ಸಾಧ್ಯವಾದಷ್ಟು ಮಾಡಿರಿ. ಏಕೆಂದರೆ, ನಿಮಗಿಂತ ಹಿಂದಿನವರನ್ನು ನಾಶಮಾಡಿದ್ದು ಅವರ ಅತಿಯಾದ ಪ್ರಶ್ನೆಗಳು, ಮತ್ತು ಅವರು ತಮ್ಮ ಪ್ರವಾದಿಗಳೊಂದಿಗೆ ವ್ಯಕ್ತಿಪಡಿಸಿದ ಭಿನ್ನಾಭಿಪ್ರಾಯಗಳಾಗಿದ್ದವು." [صحيح] - [رواه البخاري ومسلم] - [الأربعون النووية - 9]
ವಿವರಣೆ
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ತಿಳಿಸಿಕೊಡುವುದೇನೆಂದರೆ, ಅವರು (ಪ್ರವಾದಿ) ನಮಗೆ ಒಂದು ವಿಷಯವನ್ನು ನಿಷೇಧಿಸಿದರೆ, ನಾವು ಯಾವುದೇ ವಿನಾಯಿತಿಯಿಲ್ಲದೆ ಅದರಿಂದ ದೂರವಿರುವುದು ಕಡ್ಡಾಯವಾಗಿದೆ. ಹಾಗೆಯೇ, ಅವರು ನಮಗೆ ಒಂದು ವಿಷಯವನ್ನು ಆದೇಶಿಸಿದರೆ, ನಾವು ಅದನ್ನು ನಮಗೆ ಸಾಧ್ಯವಾದಷ್ಟನ್ನು ಮಾಡಬೇಕು. ನಂತರ ಅವರು, ನಾವು ಹಿಂದಿನ ಕೆಲವು ಜನಾಂಗಗಳಂತೆ ಆಗಬಾರದೆಂದು ಎಚ್ಚರಿಸಿದರು. ಅವರು ತಮ್ಮ ಪ್ರವಾದಿಗಳಿಗೆ ಅವಿಧೇಯರಾಗುವುದರೊಂದಿಗೆ, ಅವರೊಡನೆ ಅತಿಯಾಗಿ ಪ್ರಶ್ನೆಗಳನ್ನು ಕೇಳಿದರು. ಆಗ ಅಲ್ಲಾಹು ಅವರನ್ನು ವಿವಿಧ ರೀತಿಯ ವಿನಾಶ ಮತ್ತು ಶಿಕ್ಷೆಯಿಂದ ಶಿಕ್ಷಿಸಿದನು. ಆದ್ದರಿಂದ, ನಾವು ಕೂಡ ಅವರು ನಾಶವಾದಂತೆ ನಾಶವಾಗದಿರಲು, ನಾವು ಅವರು ಮಾಡಿದಂತೆ ಮಾಡಬಾರದು.
ಹದೀಸಿನ ಪ್ರಯೋಜನಗಳು
ಈ ಹದೀಸ್ ಆದೇಶಿಸಲಾಗಿರುವುದನ್ನು ಪಾಲಿಸುವುದರ ಮತ್ತು ನಿಷೇಧಿಸಿದ ವಿಷಯಗಳಿಂದ ದೂರವಿರುವುದರ ಕಡ್ಡಾಯತೆಯನ್ನು ವಿವರಿಸುವ ಒಂದು ಮೂಲಭೂತ ನಿಯಮವಾಗಿದೆ.
ನಿಷೇಧದಲ್ಲಿ, ಅದರ ಯಾವುದೇ ಭಾಗವನ್ನು ಮಾಡಲು ರಿಯಾಯಿತಿ ನೀಡಲಾಗಿಲ್ಲ. ಆದರೆ ಆದೇಶವನ್ನು ಪಾಲಿಸುವ ವಿಷಯದಲ್ಲಿ ಸಾಮರ್ಥ್ಯದೊಂದಿಗೆ ಸೀಮಿತಗೊಳಿಸಲಾಗಿದೆ. ಏಕೆಂದರೆ (ಒಂದು ಕಾರ್ಯವನ್ನು) ತ್ಯಜಿಸುವುದು ಎಲ್ಲರಿಗೂ ಸಾಧ್ಯ. ಆದರೆ (ಒಂದು ಕಾರ್ಯವನ್ನು) ಮಾಡಬೇಕಾದರೆ, ಆದೇಶಿಸಲಾದ ಕಾರ್ಯವನ್ನು ಅಸ್ತಿತ್ವಕ್ಕೆ ತರುವ ಸಾಮರ್ಥ್ಯವಿರಬೇಕಾಗಿದೆ.
ವಿಪರೀತ ಪ್ರಶ್ನೆ ಕೇಳುವುದನ್ನು ನಿಷೇಧಿಸಲಾಗಿದೆ. ವಿದ್ವಾಂಸರು ಪ್ರಶ್ನೆ ಕೇಳುವುದನ್ನು ಎರಡು ವಿಧಗಳಾಗಿ ವಿಂಗಡಿಸಿದ್ದಾರೆ: ಮೊದಲನೆಯದು, ಧಾರ್ಮಿಕ ವಿಷಯಗಳಲ್ಲಿ ಅಗತ್ಯವಾದ ಜ್ಞಾನವನ್ನು ಪಡೆಯುವ ಉದ್ದೇಶದಿಂದ ಪ್ರಶ್ನೆ ಕೇಳುವುದು. ಇದು ಅತ್ಯಾವಶ್ಯಕವಾಗಿದ್ದು ಸಹಾಬಿಗಳು ಕೇಳುವ ಪ್ರಶ್ನೆಗಳು ಈ ವಿಧದಲ್ಲಿ ಸೇರುತ್ತವೆ. ಎರಡನೆಯದು, ಮೊಂಡುತನ ಮತ್ತು ಸೋಗಲಾಡಿತನದಿಂದ ಪ್ರಶ್ನೆ ಕೇಳುವುದು. ಇದು ನಿಷೇಧಿಸಲಾದ ವಿಧವಾಗಿದೆ.
ಹಿಂದಿನ ಸಮುದಾಯಗಳಲ್ಲಿ ಸಂಭವಿಸಿದಂತೆ, ಪ್ರವಾದಿಗೆ ವಿರುದ್ಧವಾಗಿ ಸಾಗುವುದರ ಬಗ್ಗೆ ಈ ಸಮುದಾಯಕ್ಕೆ ಎಚ್ಚರಿಕೆ ನೀಡಲಾಗಿದೆ.
ನಿಷೇಧಿಸಲಾದ ವಿಷಯಗಳು ಅದರ ಸ್ವಲ್ಪ ಮತ್ತು ಹೆಚ್ಚು ಎರಡನ್ನೂ ಒಳಗೊಳ್ಳುತ್ತವೆ. ಏಕೆಂದರೆ ಅದರ ಸ್ವಲ್ಪ ಮತ್ತು ಹೆಚ್ಚು ಎರಡನ್ನೂ ತ್ಯಜಿಸುವುದರಿಂದ ಮಾತ್ರ ಅದರಿಂದ ಸಂಪೂರ್ಣವಾಗಿ ದೂರವಿರಲು ಸಾಧ್ಯ. ಉದಾಹರಣೆಗೆ: ಪ್ರವಾದಿಯವರು ನಮಗೆ 'ಬಡ್ಡಿ'ಯನ್ನು ನಿಷೇಧಿಸಿದರು. ಇದು ಅದರ ಸ್ವಲ್ಪ ಮತ್ತು ಹೆಚ್ಚು ಎರಡನ್ನೂ ಒಳಗೊಳ್ಳುತ್ತದೆ.
ಹರಾಮ್ (ನಿಷಿದ್ಧ)ಗೆ ದಾರಿ ಮಾಡಿಕೊಡುವ ಕಾರಣಗಳನ್ನು ತ್ಯಜಿಸಬೇಕಾಗಿದೆ. ಏಕೆಂದರೆ ಅದು 'ಸಂಪೂರ್ಣವಾಗಿ ದೂರವಿರುವುದು' ಎಂಬುದರ ಅರ್ಥದಲ್ಲಿ ಬರುತ್ತದೆ.
ಒಬ್ಬ ವ್ಯಕ್ತಿಯು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶವನ್ನು ಕೇಳಿದಾಗ, "ಇದು ಕಡ್ಡಾಯವೇ ಅಥವಾ ಅಪೇಕ್ಷಣೀಯವೇ?" ಎಂದು ಕೇಳಬಾರದು. ಬದಲಿಗೆ, ಅವನು ಆ ಕಾರ್ಯವನ್ನು ಮಾಡಲು ತ್ವರೆಪಡಬೇಕು. ಏಕೆಂದರೆ ಅವರು ಹೇಳುತ್ತಾರೆ: "ನಿಮಗೆ ಸಾಧ್ಯವಾದಷ್ಟು ಅದನ್ನು ಮಾಡಿರಿ."
ಅತಿಯಾದ ಪ್ರಶ್ನೆಗಳು ವಿನಾಶಕ್ಕೆ ಕಾರಣವಾಗುತ್ತವೆ - ವಿಶೇಷವಾಗಿ ನಿಲುಕಲು ಸಾಧ್ಯವಾಗದ ವಿಷಯಗಳಲ್ಲಿ. ಉದಾಹರಣೆಗೆ 'ಗೈಬ್' (ಅದೃಶ್ಯ) ವಿಷಯಗಳು, ಮತ್ತು ಪುನರುತ್ಥಾನ ದಿನದ ಸ್ಥಿತಿಗತಿಗಳ ವಿವರಗಳು. ಅವುಗಳ ಬಗ್ಗೆ ಅತಿಯಾಗಿ ಪ್ರಶ್ನಿಸಬೇಡಿ, ಹಾಗೆ ಮಾಡಿದರೆ ನೀವು ನಾಶವಾಗುತ್ತೀರಿ, ಮತ್ತು ನೀವು ಅತಿಯಾದ ಆಳಕ್ಕೆ ಇಳಿಯುವವರಾಗುತ್ತೀರಿ.