عَنْ أَبِي هُرَيْرَةَ رَضِيَ اللَّهُ عَنْهُ قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إنَّ اللَّهَ طَيِّبٌ لَا يَقْبَلُ إلَّا طَيِّبًا، وَإِنَّ اللَّهَ أَمَرَ المُؤْمِنِينَ بِمَا أَمَرَ بِهِ المُرْسَلِينَ، فَقَالَ تَعَالَى: {يَا أَيُّهَا الرُّسُلُ كُلُوا مِنْ الطَّيِّبَاتِ وَاعْمَلُوا صَالِحًا}، وَقَالَ تَعَالَى: {يَا أَيُّهَا الَّذِينَ آمَنُوا كُلُوا مِنْ طَيِّبَاتِ مَا رَزَقْنَاكُمْ} ثُمَّ ذَكَرَ الرَّجُلَ، يُطِيلُ السَّفَرَ، أَشْعَثَ، أَغْبَرَ، يَمُدُّ يَدَيْهِ إلَى السَّمَاءِ: يَا رَبِّ! يَا رَبِّ! وَمَطْعَمُهُ حَرَامٌ، وَمَشْرَبُهُ حَرَامٌ، وَمَلْبَسُهُ حَرَامٌ، وَغُذِيَ بِالحَرَامِ، فَأَنَّى يُسْتَجَابُ لَذلك».
[صحيح] - [رواه مسلم] - [الأربعون النووية: 10]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಓ ಜನರೇ! ಖಂಡಿತವಾಗಿಯೂ ಅಲ್ಲಾಹು ಪರಿಶುದ್ಧನು. ಅವನು ಪರಿಶುದ್ಧವಾಗಿರುವುದನ್ನು ಮಾತ್ರ ಸ್ವೀಕರಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಸಂದೇಶವಾಹಕರುಗಳಿಗೆ ಆಜ್ಞಾಪಿಸಿದ್ದನ್ನೇ ಸತ್ಯವಿಶ್ವಾಸಿಗಳಿಗೂ ಆಜ್ಞಾಪಿಸಿದ್ದಾನೆ. ಅವನು (ಅಲ್ಲಾಹು) ಹೇಳಿದನು: ಓ ಸಂದೇಶವಾಹಕರುಗಳೇ! ಪರಿಶುದ್ಧವಾದುದನ್ನೇ ತಿನ್ನಿರಿ ಮತ್ತು ಸತ್ಕರ್ಮಗಳನ್ನು ನಿರ್ವಹಿಸಿರಿ." [ಮುಅ್‌ಮಿನೂನ್ 51] ಅವನು ಹೇಳಿದನು: "ಓ ಸತ್ಯವಿಶ್ವಾಸಿಗಳೇ! ನಾವು ನಿಮಗೆ ಒದಗಿಸಿದ ವಸ್ತುಗಳಲ್ಲಿ ಪರಿಶುದ್ಧವಾದುದನ್ನೇ ತಿನ್ನಿರಿ." [ಬಕರ: 172] ನಂತರ ಅವರು ದೀರ್ಘ ಯಾತ್ರೆಯಲ್ಲಿರುವ, ಕೆದರಿದ ಕೂದಲಿನ ಮತ್ತು ಧೂಳು ಮೆತ್ತಿಕೊಂಡಿರುವ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಸಿದರು. ಅವನು ಆಕಾಶಕ್ಕೆ ತನ್ನ ಕೈಗಳನ್ನು ಚಾಚುತ್ತಾ, "ಓ ನನ್ನ ಸಂರಕ್ಷಕನೇ, ಓ ನನ್ನ ಸಂರಕ್ಷಕನೇ” ಎಂದು ಗೋಗರೆಯುತ್ತಿದ್ದಾನೆ. ಆದರೆ ಅವನ ಆಹಾರವು ನಿಷಿದ್ಧವಾಗಿದೆ, ಅವನ ಪಾನೀಯವು ನಿಷಿದ್ಧವಾಗಿದೆ, ಅವನ ಬಟ್ಟೆಬರೆಗಳು ನಿಷಿದ್ಧವಾಗಿವೆ ಮತ್ತು ಅವನು ನಿಷಿದ್ಧದಲ್ಲೇ ಬೆಳೆದಿದ್ದಾನೆ. ಹೀಗಿರುವಾಗ ಅವನ ಪ್ರಾರ್ಥನೆಗೆ ಉತ್ತರ ಸಿಗುವುದಾದರೂ ಹೇಗೆ?"
[صحيح] - [رواه مسلم] - [الأربعون النووية - 10]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಪರಿಶುದ್ಧ ಮತ್ತು ಪವಿತ್ರನಾಗಿದ್ದಾನೆ, ಅವನು ಎಲ್ಲಾ ರೀತಿಯ ಕುಂದು-ಕೊರತೆಗಳು ಮತ್ತು ನ್ಯೂನತೆಗಳಿಂದ ಮುಕ್ತನಾಗಿದ್ದಾನೆ ಹಾಗೂ ಸಮಗ್ರ ಗುಣಲಕ್ಷಣಗಳನ್ನು ಹೊಂದಿದವನಾಗಿದ್ದಾನೆ. ಅವನು ಕರ್ಮಗಳು, ಮಾತುಗಳು ಮತ್ತು ನಂಬಿಕೆಗಳಲ್ಲಿ ಅತ್ಯಂತ ಪರಿಶುದ್ಧವಾದುದನ್ನು ಮಾತ್ರ ಸ್ವೀಕರಿಸುತ್ತಾನೆ. ಅಂದರೆ, ಅವು ನಿಷ್ಕಳಂಕವಾಗಿ ಅವನ ಸಂಪ್ರೀತಿಯನ್ನು ಮಾತ್ರ ಉದ್ದೇಶಿಸಿಕೊಂಡಿರಬೇಕು ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚರ್ಯೆಗೆ ಅನುಗುಣವಾಗಿರಬೇಕು. ಇವುಗಳ ಮೂಲಕವಲ್ಲದೆ ಅಲ್ಲಾಹನಿಗೆ ಸಮೀಪವಾಗಲು ಯಾರಿಗೂ ಸಾಧ್ಯವಿಲ್ಲ. ಒಬ್ಬ ಸತ್ಯವಿಶ್ವಾಸಿಯ ಕರ್ಮಗಳು ಪರಿಶುದ್ಧವಾಗುವ ಅತಿದೊಡ್ಡ ಮಾರ್ಗವೆಂದರೆ ಅವನ ಆಹಾರಗಳು ಪರಿಶುದ್ಧವಾಗಿರಬೇಕು ಅಂದರೆ ಅವು ಧರ್ಮಸಮ್ಮತ ಮೂಲದಿಂದಾಗಿರಬೇಕು. ಇದರಿಂದ ಅವನ ಕರ್ಮಗಳು ಪರಿಶುದ್ಧವಾಗುತ್ತವೆ. ಈ ಕಾರಣದಿಂದಲೇ ಧರ್ಮಸಮ್ಮತವಾದುದ್ದನ್ನು ಸೇವಿಸಬೇಕು ಮತ್ತು ಸತ್ಕರ್ಮಗಳನ್ನು ನಿರ್ವಹಿಸಬೇಕೆಂದು ಅಲ್ಲಾಹು ಸಂದೇಶವಾಹಕರುಗಳಿಗೆ ಆಜ್ಞಾಪಿಸಿದ್ದನ್ನೇ ಸತ್ಯವಿಶ್ವಾಸಿಗಳಿಗೂ ಆಜ್ಞಾಪಿಸಿದ್ದಾನೆ. ಅವನು (ಅಲ್ಲಾಹು) ಹೇಳಿದನು: "ಓ ಸಂದೇಶವಾಹಕರುಗಳೇ! ಪರಿಶುದ್ಧವಾದುದನ್ನೇ ತಿನ್ನಿರಿ ಮತ್ತು ಸತ್ಕರ್ಮಗಳನ್ನು ನಿರ್ವಹಿಸಿರಿ. ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನಾನು ಬಹಳ ಚೆನ್ನಾಗಿ ತಿಳಿದವನಾಗಿದ್ದೇನೆ." [ಮುಅ್‌ಮಿನೂನ್ 51] ಅವನು ಹೇಳಿದನು: "ಓ ಸತ್ಯವಿಶ್ವಾಸಿಗಳೇ! ನಾವು ನಿಮಗೆ ಒದಗಿಸಿದ ವಸ್ತುಗಳಲ್ಲಿ ಪರಿಶುದ್ಧವಾದುದನ್ನೇ ತಿನ್ನಿರಿ." [ಬಕರ: 172]
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷಿದ್ಧ ವಸ್ತುಗಳನ್ನು ಸೇವಿಸುವುದರ ವಿರುದ್ಧ ಎಚ್ಚರಿಕೆ ನೀಡಿದರು. ಏಕೆಂದರೆ, ಅದು ಕರ್ಮಗಳನ್ನು ನಿಷ್ಫಲಗೊಳಿಸುತ್ತದೆ ಮತ್ತು ಅವು ಸ್ವೀಕಾರವಾಗದಂತೆ ತಡೆಯುತ್ತದೆ. ಕರ್ಮಗಳು ಸ್ವೀಕಾರವಾಗಲು ಬಾಹ್ಯವಾದ ಎಷ್ಟೇ ಕಾರಣಗಳಿದ್ದರೂ ಸಹ. ಆ ಕಾರಣಗಳಲ್ಲಿ ಕೆಲವು ಹೀಗಿವೆ:
ಒಂದು: ಹಜ್ಜ್, ಜಿಹಾದ್, ಕುಟುಂಬ ಸಂಬಂಧ ಜೋಡಣೆ ಮುಂತಾದವುಗಳಿಗಾಗಿ ದೀರ್ಘ ಪ್ರಯಾಣ ಮಾಡುವುದು.
ಎರಡು: ತಲೆ ಬಾಚದ ಕಾರಣ ಕೂದಲು ಕೆದರುವುದು ಮತ್ತು ಧೂಳು ಮೆತ್ತಿದ ಕಾರಣ ದೇಹ ಮತ್ತು ಬಟ್ಟೆಗಳ ಬಣ್ಣ ಬದಲಾಗುವುದು. ಇದು ಒಬ್ಬ ವ್ಯಕ್ತಿ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದಾನೆಂದು ಸೂಚಿಸುತ್ತದೆ.
ಮೂರು: ಪ್ರಾರ್ಥಿಸುವಾಗ ಕೈಗಳನ್ನು ಆಕಾಶಕ್ಕೆ ಎತ್ತುವುದು.
ನಾಲ್ಕು: ಅಲ್ಲಾಹನ ನಾಮಗಳ ಮೂಲಕ ಪ್ರಾರ್ಥಿಸುವುದು ಮತ್ತು ಓ ನನ್ನ ಪರಿಪಾಲಕನೇ!, ಓ ನನ್ನ ಪರಿಪಾಲಕನೇ! ಎಂದು ಹೇಳುತ್ತಾ ಪಟ್ಟು ಹಿಡಿದು ಪ್ರಾರ್ಥಿಸುವುದು.
ಪ್ರಾರ್ಥನೆಯು ಸ್ವೀಕಾರವಾಗುವ ಇಂತಹ ಕಾರಣಗಳಿದ್ದೂ ಸಹ ಅವನ ಪ್ರಾರ್ಥನೆಗೆ ಉತ್ತರ ದೊರೆಯುವುದಿಲ್ಲ. ಏಕೆಂದರೆ, ಅವನ ಆಹಾರ, ಪಾನೀಯ ಮತ್ತು ಬಟ್ಟೆಬರೆಗಳೆಲ್ಲವೂ ನಿಷಿದ್ಧ ಮೂಲದಿಂದಾಗಿವೆ. ಅವನು ನಿಷಿದ್ಧ ಮೂಲದಿಂದಲೇ ಬೆಳೆದು ಬಂದಿದ್ದಾನೆ. ಯಾರ ಸ್ಥಿತಿಯು ಹೀಗಿರುತ್ತದೋ ಅವನ ಪ್ರಾರ್ಥನೆಗೆ ಉತ್ತರ ದೊರೆಯುವುದು ಬಹಳ ದೂರದ ವಿಷಯವಾಗಿದೆ. ಅವನ ಪ್ರಾರ್ಥನೆಗೆ ಉತ್ತರ ಸಿಗುವುದಾದರೂ ಹೇಗೆ?