+ -

عَنِ الحُسَينِ بنِ عَلِيٍّ بنِ أَبِي طَالِبٍ رضي الله عنهما قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«الْبَخِيلُ مَنْ ذُكِرْتُ عِنْدَهُ فَلَمْ يُصَلِّ عَلَيَّ».

[صحيح] - [رواه الترمذي والنسائي في الكبرى وأحمد] - [السنن الكبرى للنسائي: 8046]
المزيــد ...

ಹುಸೈನ್ ಬಿನ್ ಅಲಿ ಬಿನ್ ಅಬೂತಾಲಿಬ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರ ಬಳಿ ನನ್ನ ಹೆಸರು ಹೇಳಲಾಗಿಯೂ ನನ್ನ ಮೇಲೆ ಸಲಾತ್ ಹೇಳುವುದಿಲ್ಲವೋ ಅವನೇ ನಿಜವಾದ ಜಿಪುಣ."

[صحيح] - - [السنن الكبرى للنسائي - 8046]

ವಿವರಣೆ

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಸರು, ಉಪನಾಮ ಅಥವಾ ವಿವರಣೆಯನ್ನು ಕೇಳುವಾಗ ಅವರ ಮೇಲೆ ಸಲಾತ್ ಹೇಳದವರಿಗೆ ಅವರು ಇಲ್ಲಿ ಎಚ್ಚರಿಕೆ ನೀಡಿದ್ದಾರೆ. ಅವರು ಹೇಳಿದರು: "ಪೂರ್ಣರೂಪದ ಜಿಪುಣ ಯಾರೆಂದರೆ ನನ್ನ ಹೆಸರು ಕೇಳಿಯೂ ನನ್ನ ಮೇಲೆ ಸಲಾತ್ ಹೇಳದವರು." ಇದಕ್ಕೆ ಕೆಲವು ಕಾರಣಗಳಿವೆ:
ಒಂದು: ತನಗೆ ಯಾವುದೇ ರೀತಿಯಲ್ಲೂ ಕನಿಷ್ಠ ಅಥವಾ ಗರಿಷ್ಠ ನಷ್ಟ ಉಂಟು ಮಾಡದ ಮತ್ತು ತಾನು ಸಂಪತ್ತನ್ನೋ ಶಕ್ತಿಯನ್ನೋ ವ್ಯಯಿಸಬೇಕಾಗಿಲ್ಲದ ಒಂದು ವಿಷಯದ ಬಗ್ಗೆ ಅವನು ಜಿಪುಣತನ ತೋರಿದ್ದಾನೆ.
ಎರಡು: ಅವನು ತನ್ನ ಆತ್ಮದೊಂದಿಗೆ ಜಿಪುಣತನ ತೋರಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳಿದ್ದಕ್ಕೆ ದೊರೆಯುವ ಪ್ರತಿಫಲದಿಂದ ತನ್ನನ್ನು ವಂಚಿತಗೊಳಿಸಿದ್ದಾನೆ. ಏಕೆಂದರೆ, ಅವನು ಸಲಾತ್ ಹೇಳುವುದನ್ನು ನಿರಾಕರಿಸುವ ಮೂಲಕ ಜಿಪುಣತನ ತೋರಿದ್ದಾನೆ ಮತ್ತು ಸಲಾತ್ ಹೇಳಬೇಕೆಂದು ತನಗೆ ಆಜ್ಞಾಪಿಸಲಾದ ಆಜ್ಞೆಯನ್ನು ಪಾಲಿಸಲು ಮತ್ತು ಅದರ ಮೂಲಕ ಪ್ರತಿಫಲವನ್ನು ಪಡೆಯಲು ನಿರಾಕರಿಸಿದ್ದಾನೆ.
ಮೂರು: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳುವುದು ಎಂದರೆ ಅವರ ಹಕ್ಕನ್ನು ನೆರವೇರಿಸುವುದಾಗಿದೆ. ಏಕೆಂದರೆ, ಅವರೇ ನಮಗೆ ಕಲಿಸಿಕೊಟ್ಟವರು, ನಮಗೆ ಮಾರ್ಗದರ್ಶನ ಮಾಡಿದವರು, ನಮ್ಮನ್ನು ಅಲ್ಲಾಹನ ಕಡೆಗೆ ಆಮಂತ್ರಿಸಿದವರು ಮತ್ತು ನಮ್ಮ ಬಳಿಗೆ ದೇವವಾಣಿ ಮತ್ತು ಧರ್ಮಶಾಸ್ತ್ರವನ್ನು ತಂದುಕೊಟ್ಟವರು. ನಾವು ಸನ್ಮಾರ್ಗದಲ್ಲಿರಲು ಅಲ್ಲಾಹನ ನಂತರ ಅವರೇ ಕಾರಣಕರ್ತರು. ಅವರ ಮೇಲೆ ಸಲಾತ್ ಹೇಳದವನು ಸ್ವತಃ ತನ್ನ ಆತ್ಮದೊಂದಿಗೆ ಜಿಪುಣತನ ತೋರಿದ್ದಾನೆ ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತ್ಯಂತ ಸರಳ ಹಕ್ಕುಗಳಲ್ಲಿ ಒಂದನ್ನು ನೆರವೇರಿಸಲು ಜಿಪುಣತನ ತೋರಿದ್ದಾನೆ.

ಹದೀಸಿನ ಪ್ರಯೋಜನಗಳು

  1. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳದಿರುವುದು ಜಿಪುಣತನದ ಶೀರ್ಷಿಕೆಯಾಗಿದೆ.
  2. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳುವುದು ಎಲ್ಲಾ ಸಮಯಗಳಲ್ಲೂ ನಿರ್ವಹಿಸಬಹುದಾದ ಮತ್ತು ಅವರ ಹೆಸರನ್ನು ಕೇಳುವಾಗ ಪ್ರಾಮುಖ್ಯತೆ ನೀಡಬೇಕಾದ ಅತಿಶ್ರೇಷ್ಠ ಪುಣ್ಯಕರ್ಮ ಮತ್ತು ಸತ್ಕರ್ಮವಾಗಿದೆ.
  3. ನವವಿ ಹೇಳಿದರು: "ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳುವಾಗ ಸಲಾತ್ ಮತ್ತು ಸಲಾಂಗಳನ್ನು ಒಟ್ಟಿಗೆ ಹೇಳಬೇಕು. ಸಲಾತ್ ಅಥವಾ ಸಲಾಂ ಒಂದನ್ನು ಮಾತ್ರ ಹೇಳಬಾರದು. ಅಂದರೆ, "ಸಲ್ಲಲ್ಲಾಹು ಅಲೈಹಿ" ಎಂದು ಮಾತ್ರ ಹೇಳಬಾರದು. ಹಾಗೆಯೇ "ಅಲೈಹಿಸ್ಸಲಾಂ" ಎಂದು ಮಾತ್ರ ಹೇಳಬಾರದು."
  4. "ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ದೇವದೂತರುಗಳು ಪ್ರವಾದಿಯವರ ಮೇಲೆ ಸಲಾತ್ ಹೇಳುತ್ತಾರೆ" ಎಂಬ ಕುರ್‌ಆನ್ ವಚನವನ್ನು ವಿವರಿಸುತ್ತಾ ಅಬುಲ್ ಆಲಿಯ ಹೇಳಿದರು: "ಅಲ್ಲಾಹು ಅವನ ಪ್ರವಾದಿಯ ಮೇಲೆ ಸಲಾತ್ ಹೇಳುವುದೆಂದರೆ ಅವರನ್ನು ಪ್ರಶಂಸಿಸುವುದು. ದೇವದೂತರುಗಳು ಮತ್ತು ಮನುಷ್ಯರು ಸಲಾತ್ ಹೇಳುವುದೆಂದರೆ ಪ್ರಾರ್ಥಿಸುವುದು."
  5. ಹಲೀಮಿ ಹೇಳಿದರು: "ಅಲ್ಲಾಹುಮ್ಮ ಸಲ್ಲಿ ಅಲಾ ಮುಹಮ್ಮದ್" ಎಂದರೆ, ಓ ಅಲ್ಲಾಹ್! ಇಹಲೋಕದಲ್ಲಿ ಅವರ ಕೀರ್ತಿಯನ್ನು ಉನ್ನತಗೊಳಿಸುವ ಮೂಲಕ, ಅವರ ಧರ್ಮವನ್ನು ಪ್ರಕಟಗೊಳಿಸುವ ಮೂಲಕ, ಅವರ ಧರ್ಮಶಾಸ್ತ್ರವನ್ನು ಶಾಶ್ವತವಾಗಿ ಉಳಿಸುವ ಮೂಲಕ, ಹಾಗೂ ಪರಲೋಕದಲ್ಲಿ ಅವರ ಸಮುದಾಯಕ್ಕಾಗಿ ಅವರು ಮಾಡುವ ಶಿಫಾರಸ್ಸನ್ನು ಸ್ವೀಕರಿಸುವ ಮೂಲಕ, ಅವರ ಪ್ರತಿಫಲವನ್ನು ಹೇರಳಗೊಳಿಸುವ ಮೂಲಕ, ಸ್ತುತ್ಯರ್ಹ ಸ್ಥಾನದಲ್ಲಿ (ಮಕಾಮೆ ಮಹ್ಮೂದ್) ಮೊದಲಿನವರಿಗೂ ನಂತರದವರಿಗೂ ಅವರ ಶ್ರೇಷ್ಠತೆಯನ್ನು ದಯಪಾಲಿಸುವ ಮೂಲಕ ಮತ್ತು ಸಾಮೀಪ್ಯ ಪಡೆದ ಎಲ್ಲಾ ಸಾಕ್ಷಿಗಳ ಮುಂಚೂಣಿಯಲ್ಲಿ ಅವರನ್ನು ನಿಲ್ಲಿಸುವ ಮೂಲಕ ಅವರನ್ನು ಮಹತ್ವಪಡಿಸು."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الرومانية المجرية الموري الأورومو الجورجية
ಅನುವಾದಗಳನ್ನು ತೋರಿಸಿ
ಇನ್ನಷ್ಟು