عن عمر بن الخطاب رضي الله عنه قال: قال رسول الله صلى الله عليه وسلم:
«إِنَّمَا الْأَعْمَالُ بِالنِّيَّةِ، وَإِنَّمَا لِامْرِئٍ مَا نَوَى، فَمَنْ كَانَتْ هِجْرَتُهُ إِلَى اللهِ وَرَسُولِهِ، فَهِجْرَتُهُ إِلَى اللهِ وَرَسُولِهِ، وَمَنْ كَانَتْ هِجْرَتُهُ لِدُنْيَا يُصِيبُهَا أَوِ امْرَأَةٍ يَتَزَوَّجُهَا، فَهِجْرَتُهُ إِلَى مَا هَاجَرَ إِلَيْهِ».
وفي لفظ للبخاري: «إِنَّمَا الْأَعْمَالُ بِالنِّيَّاتِ، وَإِنَّمَا لِكُلِّ امْرِئٍ مَا نَوَى».
[صحيح] - [متفق عليه] - [صحيح مسلم: 1907]
المزيــد ...
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕರ್ಮಗಳು ಉದ್ದೇಶದ (ನಿಯ್ಯತ್) ಮೇಲೆ ಅವಲಂಬಿತವಾಗಿವೆ. ಪ್ರತಿಯೊಬ್ಬರಿಗೂ ಅವರ ಉದ್ದೇಶಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ. ಆದ್ದರಿಂದ ಯಾರ ಹಿಜ್ರ (ವಲಸೆ) ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗಾಗಿದೆಯೋ, ಅವನ ಹಿಜ್ರವನ್ನು ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆಂದೇ ಪರಿಗಣಿಸಲಾಗುವುದು. ಆದರೆ ಯಾರು ಐಹಿಕ ಲಾಭವನ್ನು ಪಡೆಯಲು ಅಥವಾ ಒಬ್ಬ ಮಹಿಳೆಯನ್ನು ವಿವಾಹವಾಗಲು ಹಿಜ್ರ ಮಾಡುತ್ತಾನೋ ಅವನ ಹಿಜ್ರವನ್ನು ಅದೇ ಉದ್ದೇಶಕ್ಕೆಂದು ಪರಿಗಣಿಸಲಾಗುವುದು." ಬುಖಾರಿಯ ವರದಿಯಲ್ಲಿ ಹೀಗಿದೆ: "ಕರ್ಮಗಳು ಉದ್ದೇಶಗಳ (ನಿಯ್ಯತ್‌ಗಳ) ಮೇಲೆ ಅವಲಂಬಿತವಾಗಿವೆ. ಪ್ರತಿಯೊಬ್ಬರಿಗೂ ಅವರ ಉದ್ದೇಶಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ."
[صحيح] - [متفق عليه] - [صحيح مسلم - 1907]
ಪ್ರತಿಯೊಂದು ಕರ್ಮವನ್ನೂ ಉದ್ದೇಶಗಳ ಆಧಾರದ ಮೇಲೆ ಪರಿಗಣಿಸಲಾಗುತ್ತದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಾರೆ. ಈ ನಿಯಮವು ಆರಾಧನೆಗಳು, ವ್ಯವಹಾರಗಳು ಮುಂತಾದ ಎಲ್ಲಾ ಕರ್ಮಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಯಾರಾದರೂ ಒಂದು ಕರ್ಮದ ಮೂಲಕ ಲಾಭವನ್ನು ಉದ್ದೇಶಿಸಿದರೆ ಅವನಿಗೆ ಆ ಲಾಭವು ಸಿಗುತ್ತದೆಯೇ ವಿನಾ ಯಾವುದೇ ಪ್ರತಿಫಲ ಸಿಗುವುದಿಲ್ಲ. ಆದರೆ ಯಾರಾದರೂ ಒಂದು ಕರ್ಮದ ಮೂಲಕ ಅಲ್ಲಾಹನ ಸಾಮೀಪ್ಯವನ್ನು ಉದ್ದೇಶಿಸಿದರೆ ಅವನು ಆ ಕರ್ಮಕ್ಕೆ ಪುಣ್ಯ ಮತ್ತು ಪ್ರತಿಫಲಗಳನ್ನು ಪಡೆಯುತ್ತಾನೆ. ಅದು ತಿನ್ನುವುದು ಕುಡಿಯುವುದು ಮುಂತಾದ ರೂಢಿಯಾಗಿ ಮಾಡುವ ಕರ್ಮಗಳಾಗಿದ್ದರೂ ಸಹ.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉದ್ದೇಶವು ಬಾಹ್ಯವಾಗಿ ನೋಡುವಾಗ ಒಂದೇ ರೂಪದಲ್ಲಿದ್ದರೂ ಸಹ ಅದು ಒಳಗೊಂಡಿರುವ ಪರಿಣಾಮವನ್ನು ಒಂದು ಉದಾಹರಣೆಯ ಮೂಲಕ ವಿವರಿಸುತ್ತಾರೆ. ಅವರು ವಿವರಿಸುವಂತೆ, ಒಬ್ಬ ವ್ಯಕ್ತಿ ಅಲ್ಲಾಹನ ಸಂಪ್ರೀತಿಯನ್ನು ಉದ್ದೇಶಿಸಿ ತನ್ನ ಊರನ್ನು ತೊರೆದು ವಲಸೆ (ಹಿಜ್ರ) ಹೋದರೆ ಅದು ಧಾರ್ಮಿಕ ರೂಪದಲ್ಲಿರುವ ಸ್ವೀಕಾರಯೋಗ್ಯ ವಲಸೆಯಾಗಿದ್ದು ಅವನ ಉದ್ದೇಶದ ಪ್ರಾಮಾಣಿಕತೆಯಿಂದಾಗಿ ಪ್ರತಿಫಲಾರ್ಹವಾಗುತ್ತದೆ. ಆದರೆ ಒಬ್ಬ ವ್ಯಕ್ತಿ ತನ್ನ ವಲಸೆಯ (ಹಿಜ್ರ) ಮೂಲಕ ಹಣ ಸಂಪಾದಿಸುವುದು, ಸ್ಥಾನಮಾನವನ್ನು ಪಡೆಯುವುದು, ವ್ಯಾಪಾರ ಮಾಡುವುದು, ವಿವಾಹವಾಗುವುದು ಮುಂತಾದ ಭೌತಿಕ ಲಾಭವನ್ನು ಉದ್ದೇಶಿಸಿದರೆ, ಅವನು ತನ್ನ ವಲಸೆಯ ಮೂಲಕ ಅವನು ಉದ್ದೇಶಿಸಿದ ಲಾಭವನ್ನಲ್ಲದೆ ಬೇರೇನನ್ನೂ ಪಡೆಯುವುದಿಲ್ಲ. ಹಿಜ್ರ ಮಾಡಿದ್ದಕ್ಕಾಗಿ ಅವನಿಗೆ ಯಾವುದೇ ಪ್ರತಿಫಲ ಸಿಗುವುದಿಲ್ಲ.