عن عمر بن الخطاب رضي الله عنه قال:
بَيْنَمَا نَحْنُ عِنْدَ رَسُولِ اللهِ صَلَّى اللهُ عَلَيْهِ وَسَلَّمَ ذَاتَ يَوْمٍ إِذْ طَلَعَ عَلَيْنَا رَجُلٌ شَدِيدُ بَيَاضِ الثِّيَابِ، شَدِيدُ سَوَادِ الشَّعَرِ، لَا يُرَى عَلَيْهِ أَثَرُ السَّفَرِ، وَلَا يَعْرِفُهُ مِنَّا أَحَدٌ، حَتَّى جَلَسَ إِلَى النَّبِيِّ صَلَّى اللهُ عَلَيْهِ وَسَلَّمَ، فَأَسْنَدَ رُكْبَتَيْهِ إِلَى رُكْبَتَيْهِ، وَوَضَعَ كَفَّيْهِ عَلَى فَخِذَيْهِ، وَقَالَ: يَا مُحَمَّدُ، أَخْبِرْنِي عَنِ الْإِسْلَامِ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «الْإِسْلَامُ أَنْ تَشْهَدَ أَنْ لَا إِلَهَ إِلَّا اللهُ، وَأَنَّ مُحَمَّدًا رَسُولُ اللهِ، وَتُقِيمَ الصَّلَاةَ، وَتُؤْتِيَ الزَّكَاةَ، وَتَصُومَ رَمَضَانَ، وَتَحُجَّ الْبَيْتَ إِنِ اسْتَطَعْتَ إِلَيْهِ سَبِيلًا» قَالَ: صَدَقْتَ، قَالَ: فَعَجِبْنَا لَهُ، يَسْأَلُهُ وَيُصَدِّقُهُ، قَالَ: فَأَخْبِرْنِي عَنِ الْإِيمَانِ، قَالَ: «أَنْ تُؤْمِنَ بِاللهِ، وَمَلَائِكَتِهِ، وَكُتُبِهِ، وَرُسُلِهِ، وَالْيَوْمِ الْآخِرِ، وَتُؤْمِنَ بِالْقَدَرِ خَيْرِهِ وَشَرِّهِ» قَالَ: صَدَقْتَ، قَالَ: فَأَخْبِرْنِي عَنِ الْإِحْسَانِ، قَالَ: «أَنْ تَعْبُدَ اللهَ كَأَنَّكَ تَرَاهُ، فَإِنْ لَمْ تَكُنْ تَرَاهُ فَإِنَّهُ يَرَاكَ» قَالَ: فَأَخْبِرْنِي عَنِ السَّاعَةِ، قَالَ: «مَا الْمَسْؤُولُ عَنْهَا بِأَعْلَمَ مِنَ السَّائِلِ» قَالَ: فَأَخْبِرْنِي عَنْ أَمَارَتِهَا، قَالَ: «أَنْ تَلِدَ الْأَمَةُ رَبَّتَهَا، وَأَنْ تَرَى الْحُفَاةَ الْعُرَاةَ الْعَالَةَ رِعَاءَ الشَّاءِ يَتَطَاوَلُونَ فِي الْبُنْيَانِ» قَالَ: ثُمَّ انْطَلَقَ، فَلَبِثْتُ مَلِيًّا ثُمَّ قَالَ لِي: «يَا عُمَرُ، أَتَدْرِي مَنِ السَّائِلُ؟» قُلْتُ: اللهُ وَرَسُولُهُ أَعْلَمُ، قَالَ: «فَإِنَّهُ جِبْرِيلُ، أَتَاكُمْ يُعَلِّمُكُمْ دِينَكُمْ».
[صحيح] - [رواه مسلم] - [صحيح مسلم: 8]
المزيــد ...
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಂದು ದಿನ ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಕುಳಿತಿದ್ದೆವು. ಆಗ ಶುಭ್ರ ಬಿಳಿ ಬಣ್ಣದ ಬಟ್ಟೆ ಧರಿಸಿದ ಮತ್ತು ಕಡುಗಪ್ಪು ಕೂದಲನ್ನು ಹೊಂದಿದ್ದ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ಅವರಲ್ಲಿ ಪ್ರಯಾಣದ ಯಾವುದೇ ಕುರುಹು ಗೋಚರಿಸುತ್ತಿರಲಿಲ್ಲ. ನಮ್ಮಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಎಲ್ಲಿಯವರೆಗೆಂದರೆ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಬಂದು (ಎರಡು ಕಾಲುಗಳನ್ನು ಮಡಚಿಟ್ಟು), ತಮ್ಮ ಮೊಣಕಾಲನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಣಕಾಲಿಗೆ ತಾಗಿಸಿ ಕುಳಿತರು. ನಂತರ ತಮ್ಮ ಕೈಯನ್ನು ತೊಡೆಯ ಮೇಲಿಟ್ಟು ಹೇಳಿದರು: "ಓ ಮುಹಮ್ಮದ್! ನನಗೆ ಇಸ್ಲಾಮಿನ ಬಗ್ಗೆ ತಿಳಿಸಿಕೊಡಿ." ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಸ್ಲಾಮ್ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಕಅಬಾಲಯಕ್ಕೆ ತಲುಪುವ ಸಾಮರ್ಥ್ಯವಿದ್ದರೆ ಕಅಬಾಲಯಕ್ಕೆ ಹಜ್ಜ್ ನಿರ್ವಹಿಸುವುದು." ಆ ವ್ಯಕ್ತಿ ಹೇಳಿದರು: "ನೀವು ಹೇಳಿದ್ದು ಸತ್ಯ." ಆ ವ್ಯಕ್ತಿ ಪ್ರಶ್ನೆ ಕೇಳಿ ನಂತರ ಅದನ್ನು ಸತ್ಯವೆಂದು ದೃಢೀಕರಿಸುವುದನ್ನು ನೋಡಿ ನಮಗೆ ಅಚ್ಚರಿಯಾಯಿತು! ಅವರು ಹೇಳಿದರು: "ನನಗೆ ಈಮಾನ್‌ನ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಈಮಾನ್ ಎಂದರೆ ಅಲ್ಲಾಹನಲ್ಲಿ, ಅವನ ದೇವದೂತರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯದಿನದಲ್ಲಿ ಮತ್ತು ವಿಧಿಯಲ್ಲಿ — ಅದರ ಒಳಿತು ಮತ್ತು ಕೆಡುಕುಗಳಲ್ಲಿ — ವಿಶ್ವಾಸವಿಡುವುದು." ಆ ವ್ಯಕ್ತಿ ಹೇಳಿದರು: "ನೀವು ಹೇಳಿದ್ದು ಸತ್ಯ." ಆ ವ್ಯಕ್ತಿ ಹೇಳಿದರು: "ನನಗೆ ಇಹ್ಸಾನ್‌ನ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಇಹ್ಸಾನ್ ಎಂದರೆ ನೀವು ಅಲ್ಲಾಹನನ್ನು ನೋಡುತ್ತಿರುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡುವುದಿಲ್ಲವಾದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆ." ಆ ವ್ಯಕ್ತಿ ಹೇಳಿದರು: "ನನಗೆ ಪ್ರಳಯದ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಪ್ರಳಯದ ಬಗ್ಗೆ ಪ್ರಶ್ನೆ ಕೇಳಲಾದವರಿಗೆ ಪ್ರಶ್ನೆ ಕೇಳಿದವರಿಗಿಂತಲೂ ಹೆಚ್ಚು ಜ್ಞಾನವಿಲ್ಲ." ಆ ವ್ಯಕ್ತಿ ಹೇಳಿದರು: "ಹಾಗಾದರೆ, ನನಗೆ ಅದರ ಚಿಹ್ನೆಗಳ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಾಸಿ ತನ್ನ ಒಡತಿಗೆ ಜನ್ಮ ನೀಡುವುದು ಮತ್ತು ನಗ್ನ ಪಾದಗಳ ಹಾಗೂ ನಗ್ನ ದೇಹಗಳ ಬಡ ಕುರಿಗಾಹಿಗಳು ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಲ್ಲಿ ಪರಸ್ಪರ ಅಹಂಭಾವಪಡುವುದು ಅದರ ಚಿಹ್ನೆಗಳಾಗಿವೆ." ನಂತರ ಆ ವ್ಯಕ್ತಿ ಹೊರಟುಹೋದರು. ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಸ್ವಲ್ಪ ಹೊತ್ತು ಕುಳಿತುಕೊಂಡೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಉಮರ್! ಪ್ರಶ್ನೆ ಕೇಳಿದ ವ್ಯಕ್ತಿ ಯಾರೆಂದು ತಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ಬಲ್ಲವರು." ಅವರು ಹೇಳಿದರು: "ಅವರು ಜಿಬ್ರೀಲ್. ನಿಮಗೆ ನಿಮ್ಮ ಧರ್ಮವನ್ನು ಕಲಿಸಲು ಅವರು ನಿಮ್ಮ ಬಳಿಗೆ ಬಂದಿದ್ದರು."
[صحيح] - [رواه مسلم] - [صحيح مسلم - 8]
ಇಲ್ಲಿ ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಒಮ್ಮೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅಪರಿಚಿತ ವ್ಯಕ್ತಿಯ ರೂಪದಲ್ಲಿ ಸಹಾಬಿಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಬಳಿಗೆ ಬಂದರು. ಅವರ ಉಡುಪು ಶುಭ್ರ ಬಿಳಿ ಬಣ್ಣದ್ದಾಗಿತ್ತು ಮತ್ತು ಅವರ ತಲೆಗೂದಲು ಕಡುಗಪ್ಪು ಬಣ್ಣವನ್ನು ಹೊಂದಿತ್ತು. ಅವರಲ್ಲಿ ಪ್ರಯಾಣದ ಕುರುಹುಗಳಾದ ಸುಸ್ತು, ಧೂಳು, ತಲೆಗೂದಲು ಕೆದರಿರುವುದು, ಬಟ್ಟೆಗಳು ಕೊಳೆಯಾಗಿರುವುದು ಮುಂತಾದ ಯಾವುದೂ ಕಾಣಿಸುತ್ತಿರಲಿಲ್ಲ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಕುಳಿತಿದ್ದವರಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಆ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದೆ ವಿದ್ಯಾರ್ಥಿ ಕುಳಿತುಕೊಳ್ಳುವಂತೆ ಕುಳಿತುಕೊಂಡರು. ನಂತರ ಅವರು ಇಸ್ಲಾಮಿನ ಬಗ್ಗೆ ಕೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಉತ್ತರ ನೀಡುತ್ತಾ ಇಸ್ಲಾಮಿನ ಐದು ಸ್ತಂಭಗಳ ಬಗ್ಗೆ ತಿಳಿಸಿದರು. ಎರಡು ಸಾಕ್ಷಿವಚನಗಳನ್ನು ಅಂಗೀಕರಿಸುವುದು, ಐದು ವೇಳೆಯ ಕಡ್ಡಾಯ ನಮಾಝ್‌ಗಳನ್ನು ಸರಿಯಾಗಿ ನಿರ್ವಹಿಸುವುದು, ಅರ್ಹರಿಗೆ ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಸಾಮರ್ಥ್ಯವಿರುವವರು ಹಜ್ಜ್ ಕರ್ಮವನ್ನು ಕಡ್ಡಾಯವಾಗಿ ನಿರ್ವಹಿಸುವುದು.
ಆಗ ಪ್ರಶ್ನೆ ಕೇಳಿದ ವ್ಯಕ್ತಿ ನೀವು ಹೇಳಿದ್ದು ಸತ್ಯ ಎಂದರು. ಆ ವ್ಯಕ್ತಿ ಜ್ಞಾನವಿಲ್ಲದವರಂತೆ ಪ್ರಶ್ನೆ ಕೇಳಿ ನಂತರ ಉತ್ತರವನ್ನು ದೃಢೀಕರಿಸುವುದನ್ನು ಕಂಡು ಸಹಾಬಿಗಳಿಗೆ ಆಶ್ಚರ್ಯವಾಯಿತು.
ನಂತರ ಆ ವ್ಯಕ್ತಿ ಈಮಾನ್‌ನ ಬಗ್ಗೆ ಕೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಉತ್ತರ ನೀಡುತ್ತಾ ಈಮಾನ್‌ನ (ವಿಶ್ವಾಸದ) ಆರು ಸ್ತಂಭಗಳ ಬಗ್ಗೆ ತಿಳಿಸಿದರು: ಅಲ್ಲಾಹನ ಅಸ್ತಿತ್ವದಲ್ಲಿ, ಅವರ ಗುಣಲಕ್ಷಣಗಳಲ್ಲಿ, ಸೃಷ್ಟಿ ಮುಂತಾದ ಅವನ ಕ್ರಿಯೆಗಳಲ್ಲಿ ಮತ್ತು ಆರಾಧನೆಗೆ ಅವನು ಮಾತ್ರ ಅರ್ಹನೆಂಬುದರಲ್ಲಿ ವಿಶ್ವಾಸವಿಡುವುದು. ಅಲ್ಲಾಹು ದೇವದೂತರನ್ನು ಪ್ರಕಾಶದಿಂದ ಸೃಷ್ಟಿಸಿದ್ದಾನೆ, ಅವರು ಅವನ ಗೌರವಾರ್ಹ ದಾಸರಾಗಿದ್ದಾರೆ, ಅವರು ಅಲ್ಲಾಹನ ಆಜ್ಞೆಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಅವನ ಆಜ್ಞೆಯಂತೆಯೇ ನಡೆಯುತ್ತಾರೆ ಎಂದು ವಿಶ್ವಾಸವಿಡುವುದು. ಕುರ್‌ಆನ್, ತೌರಾತ್, ಇಂಜೀಲ್ ಮುಂತಾದ ಅಲ್ಲಾಹು ಅವನ ಸಂದೇಶವಾಹಕರುಗಳಿಗೆ ಅವತೀರ್ಣಗೊಳಿಸಿದ ಗ್ರಂಥಗಳಲ್ಲಿ ವಿಶ್ವಾಸವಿಡುವುದು. ಅಲ್ಲಾಹನ ಧರ್ಮವನ್ನು ಮನುಷ್ಯರಿಗೆ ತಲುಪಿಸಿಕೊಟ್ಟ ನೂಹ್, ಇಬ್ರಾಹೀಮ್, ಮೂಸಾ, ಈಸಾ ಮತ್ತು ಅಂತಿಮ ಪ್ರವಾದಿ ಮುಹಮ್ಮದ್ (ಅವರೆಲ್ಲರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಾಗೂ ಇತರ ಎಲ್ಲಾ ಪ್ರವಾದಿಗಳಲ್ಲಿ ಮತ್ತು ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡುವುದು. ಅಂತ್ಯದಿನದಲ್ಲಿ ವಿಶ್ವಾಸವಿಡುವುದು. ಮರಣದ ನಂತರ ಸಂಭವಿಸುವ ಸಮಾಧಿ ಜೀವನ, ಬರ್ಝಕ್ ಜೀವನ, ಮನುಷ್ಯನನ್ನು ಪುನಃ ಜೀವಂತ ಎಬ್ಬಿಸಿ ವಿಚಾರಣೆ ಮಾಡುವುದು, ಅಂತಿಮವಾಗಿ ಅವನು ಸ್ವರ್ಗ ಅಥವಾ ನರಕಕ್ಕೆ ಸೇರುವುದು ಮುಂತಾದವುಗಳು ಈ ವಿಶ್ವಾಸದಲ್ಲಿ ಒಳಪಡುತ್ತವೆ. ಅಲ್ಲಾಹು ತನ್ನ ಶಾಶ್ವತ ಜ್ಞಾನದಿಂದ ಮತ್ತು ತನ್ನ ಯುಕ್ತಿಗೆ ಅನುಗುಣವಾಗಿ ಎಲ್ಲಾ ವಿಷಯಗಳನ್ನು ನಿರ್ಣಯಿಸಿದ್ದಾನೆ, ಅವುಗಳನ್ನು ದಾಖಲುಗೊಳಿಸಿದ್ದಾನೆ, ಅವುಗಳನ್ನು ಇಚ್ಛಿಸಿದ್ದಾನೆ, ಅವನ ನಿರ್ಣಯದಂತೆಯೇ ಅವು ಸಂಭವಿಸುತ್ತವೆ ಮತ್ತು ಅವನೇ ಅವುಗಳನ್ನು ಸೃಷ್ಟಿಸಿದ್ದಾನೆ ಎಂದು ವಿಶ್ವಾಸವಿಡುವುದು. ನಂತರ ಆ ವ್ಯಕ್ತಿ ಇಹ್ಸಾನ್‌ನ ಬಗ್ಗೆ ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಹ್ಸಾನ್ ಎಂದರೆ, ನೀನು ಅಲ್ಲಾಹನನ್ನು ನೋಡುತ್ತಿರುವಂತೆ ಅವನನ್ನು ಆರಾಧಿಸುವುದು; ಆ ಸ್ಥಾನಕ್ಕೆ ತಲುಪಲು ನಿನಗೆ ಸಾಧ್ಯವಾಗದಿದ್ದರೆ ಕನಿಷ್ಠ ಅವನು ನಿನ್ನನ್ನು ನೋಡುತ್ತಿದ್ದಾನೆ ಎಂಬ ಪ್ರಜ್ಞೆಯೊಂದಿಗೆ ಅವನನ್ನು ಆರಾಧಿಸುವುದು ಎಂದು ತಿಳಿಸುತ್ತಾರೆ. ಮೊದಲನೆಯದು ನೋಡುವ ಸ್ಥಾನ. ಇದು ಉನ್ನತ ಸ್ಥಾನವಾಗಿದೆ. ಎರಡನೆಯದು ನೋಡುತ್ತಿದ್ದಾನೆಂಬ ಪ್ರಜ್ಞೆಯ ಸ್ಥಾನ.
ನಂತರ ಆ ವ್ಯಕ್ತಿ ಪ್ರಳಯ ಯಾವಾಗ ಸಂಭವಿಸುತ್ತದೆ ಎಂದು ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಳಯದ ಕುರಿತಾದ ಜ್ಞಾನವು ಅಲ್ಲಾಹನಿಗೆ ಮಾತ್ರವಿರುವ ಜ್ಞಾನವಾಗಿದ್ದು ಸೃಷ್ಟಿಗಳಲ್ಲಿ ಯಾರಿಗೂ ಅದು ತಿಳಿದಿಲ್ಲ, ಪ್ರಶ್ನೆ ಕೇಳಿದವನಿಗಾಗಲಿ, ಉತ್ತರ ನೀಡುವವನಿಗಾಗಲಿ ಅದು ತಿಳಿದಿಲ್ಲ ಎಂದು ವಿವರಿಸಿದರು.
ನಂತರ ಆ ವ್ಯಕ್ತಿ ಪ್ರಳಯದ ಚಿಹ್ನೆಗಳ ಬಗ್ಗೆ ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಗುಲಾಮರು ಮತ್ತು ಅವರ ಸಂತಾನಗಳು ಹೆಚ್ಚಾಗುವುದು, ಮಕ್ಕಳು ತಾಯಂದಿರಿಗೆ ಅವಿಧೇಯತೆ ತೋರುವುದು ಮತ್ತು ಅವರನ್ನು ಗುಲಾಮರಂತೆ ನಡೆಸಿಕೊಳ್ಳುವುದು, ಕೊನೆಯ ಕಾಲದಲ್ಲಿ ಕುರಿಗಾಹಿಗಳಿಗೆ ಮತ್ತು ಬಡವರಿಗೆ ಅಪಾರ ಐಶ್ವರ್ಯವುಂಟಾಗಿ ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ಮತ್ತು ಅಲಂಕರಿಸುವುದರಲ್ಲಿ ಅವರು ಅಹಂಭಾವ ಪ್ರಕಟಿಸುವುದು ಪ್ರಳಯದ ಚಿಹ್ನೆಗಳಾಗಿವೆ ಎಂದು ತಿಳಿಸಿದರು.
ಪ್ರಶ್ನೆ ಕೇಳಿದ ವ್ಯಕ್ತಿ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಆಗಿದ್ದರು ಮತ್ತು ಅವರು ಸಹಾಬಿಗಳಿಗೆ ಈ ಋಜುವಾದ ಧರ್ಮವನ್ನು ಕಲಿಸಲು ಬಂದಿದ್ದರು ಎಂದು ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು.