عَنْ أَبِي هُرَيْرَةَ رَضِيَ اللَّهُ عَنْهُ قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«مَنْ حَلَفَ فَقَالَ فِي حَلِفِهِ: وَاللَّاتِ وَالعُزَّى، فَلْيَقُلْ: لاَ إِلَهَ إِلَّا اللَّهُ، وَمَنْ قَالَ لِصَاحِبِهِ: تَعَالَ أُقَامِرْكَ، فَلْيَتَصَدَّقْ».
[صحيح] - [متفق عليه] - [صحيح البخاري: 4860]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರಾದರೂ ಲಾತ್ ಮತ್ತು ಉಝ್ಝನ ಮೇಲಾಣೆ ಎಂದು ಹೇಳುತ್ತಾ ಆಣೆ ಮಾಡಿದರೆ, ಅವನು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಬೇಕು. ಯಾರಾದರೂ ತನ್ನ ಸಂಗಡಿಗನೊಡನೆ ಬಾ ಜೂಜಾಡೋಣ ಎಂದು ಹೇಳಿದರೆ, ಅವನು ದಾನ-ಧರ್ಮ ಮಾಡಬೇಕು."
[صحيح] - [متفق عليه] - [صحيح البخاري - 4860]
ಅಲ್ಲಾಹೇತರರ ಮೇಲೆ ಆಣೆ ಮಾಡುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ಏಕೆಂದರೆ, ಸತ್ಯವಿಶ್ವಾಸಿಯು ಅಲ್ಲಾಹನ ಮೇಲೆ ಮಾತ್ರ ಆಣೆ ಮಾಡಬೇಕು. ನಂತರ ಅವರು ತಿಳಿಸುವುದೇನೆಂದರೆ, ಯಾರು ಅಲ್ಲಾಹೇತರರ ಮೇಲೆ ಆಣೆ ಮಾಡುತ್ತಾರೋ, ಅಂದರೆ ಉದಾಹರಣೆಗೆ, ಲಾತ್ ಮತ್ತು ಉಝ್ಝನ ಮೇಲಾಣೆ ಎಂದು ಹೇಳುತ್ತಾರೋ, (ಇವೆರಡು ಅಜ್ಞಾನಕಾಲದ ಜನರು ಪೂಜಿಸುತ್ತಿದ್ದ ಎರಡು ವಿಗ್ರಹಗಳಾಗಿದ್ದವು), ಅವರು ಶಿರ್ಕ್‌ನಿಂದ ಮುಕ್ತರಾಗಲು ಮತ್ತು ಆ ಆಣೆಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿ ತಮ್ಮನ್ನು ತಾವೇ ಸರಿಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ನಂತರ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಯಾರಾದರೂ ತನ್ನ ಸಂಗಡಿಗನಿಗೆ, ಬಾ ನಾವು ಜೂಜಾಡೋಣ ಎಂದು ಹೇಳಿದರೆ, (ಜೂಜು ಎಂದರೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರು ಹಣವಿಟ್ಟು ಆಡಿ ಅವರಲ್ಲೊಬ್ಬನು ಅದನ್ನು ಗೆಲ್ಲುವುದು. ಈ ಆಟದಿಂದ ಒಬ್ಬರು ಗೆಲ್ಲುವುದು ಮತ್ತು ಉಳಿದವರು ಸೋಲುವುದು ನಿಶ್ಚಿತ), ತಾನು ಕರೆದುದಕ್ಕೆ ಪ್ರಾಯಶ್ಚಿತವಾಗಿ ದಾನ-ಧರ್ಮ ಮಾಡುವುದು ಅಪೇಕ್ಷಣೀಯವಾಗಿದೆ.