+ -

عَنْ أَبِي هُرَيْرَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«مَنْ نَفَّسَ عَنْ مُؤْمِنٍ كُرْبَةً مِنْ كُرَبِ الدُّنْيَا نَفَّسَ اللهُ عَنْهُ كُرْبَةً مِنْ كُرَبِ يَوْمِ الْقِيَامَةِ، وَمَنْ يَسَّرَ عَلَى مُعْسِرٍ يَسَّرَ اللهُ عَلَيْهِ فِي الدُّنْيَا وَالْآخِرَةِ، وَمَنْ سَتَرَ مُسْلِمًا سَتَرَهُ اللهُ فِي الدُّنْيَا وَالْآخِرَةِ، وَاللهُ فِي عَوْنِ الْعَبْدِ مَا كَانَ الْعَبْدُ فِي عَوْنِ أَخِيهِ، وَمَنْ سَلَكَ طَرِيقًا يَلْتَمِسُ فِيهِ عِلْمًا سَهَّلَ اللهُ لَهُ بِهِ طَرِيقًا إِلَى الْجَنَّةِ، وَمَا اجْتَمَعَ قَوْمٌ فِي بَيْتٍ مِنْ بُيُوتِ اللهِ يَتْلُونَ كِتَابَ اللهِ وَيَتَدَارَسُونَهُ بَيْنَهُمْ إِلَّا نَزَلَتْ عَلَيْهِمِ السَّكِينَةُ، وَغَشِيَتْهُمُ الرَّحْمَةُ، وَحَفَّتْهُمُ الْمَلَائِكَةُ، وَذَكَرَهُمُ اللهُ فِيمَنْ عِنْدَهُ، وَمَنْ بَطَّأَ بِهِ عَمَلُهُ لَمْ يُسْرِعْ بِهِ نَسَبُهُ».

[صحيح] - [رواه مسلم] - [صحيح مسلم: 2699]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಒಬ್ಬ ಸತ್ಯವಿಶ್ವಾಸಿಯಿಂದ ಇಹಲೋಕದ ಕಷ್ಟಗಳಲ್ಲಿ ಒಂದು ಕಷ್ಟವನ್ನು ನಿವಾರಿಸುತ್ತಾನೋ, ಅಲ್ಲಾಹು ಪುನರುತ್ಥಾನದ ದಿನದ ಕಷ್ಟಗಳಲ್ಲಿ ಒಂದು ಕಷ್ಟವನ್ನು ಅವನಿಂದ ನಿವಾರಿಸುತ್ತಾನೆ. ಯಾರು ಕಷ್ಟದಲ್ಲಿರುವವರಿಗೆ ಸುಲಭಗೊಳಿಸುತ್ತಾನೋ, ಅಲ್ಲಾಹು ಅವನಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸುಲಭಗೊಳಿಸುತ್ತಾನೆ. ಯಾರು ಒಬ್ಬ ಮುಸ್ಲಿಮನ ನ್ಯೂನತೆಗಳನ್ನು ಮುಚ್ಚಿಡುತ್ತಾನೋ, ಅಲ್ಲಾಹು ಅವನ ನ್ಯೂನತೆಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಮುಚ್ಚಿಡುತ್ತಾನೆ. ದಾಸನು ತನ್ನ ಸಹೋದರನಿಗೆ ಸಹಾಯ ಮಾಡುತ್ತಿರುವ ತನಕ ಅಲ್ಲಾಹನು ದಾಸನಿಗೆ ಸಹಾಯ ಮಾಡುತ್ತಾನೆ. ಯಾರು ಜ್ಞಾನವನ್ನು ಹುಡುಕುತ್ತಾ ಒಂದು ದಾರಿಯನ್ನು ತುಳಿಯುತ್ತಾನೋ, ಅಲ್ಲಾಹು ಅವನಿಗೆ ಸ್ವರ್ಗಕ್ಕೆ ದಾರಿಯನ್ನು ಸುಲಭಗೊಳಿಸುತ್ತಾನೆ. ಒಂದು ಗುಂಪು ಜನರು ಅಲ್ಲಾಹನ ಮನೆಗಳ (ಮಸೀದಿಗಳ) ಪೈಕಿ ಒಂದರಲ್ಲಿ ಅಲ್ಲಾಹನ ಗ್ರಂಥವನ್ನು ಪಠಿಸಲು, ಮತ್ತು ಅದನ್ನು ತಮ್ಮ ನಡುವೆ ಅಧ್ಯಯನ ಮಾಡಲು ಒಟ್ಟುಗೂಡುತ್ತಾರೆ ಎಂದಾದರೆ, ಅವರ ಮೇಲೆ ಶಾಂತಿ ಇಳಿಯುತ್ತದೆ, ಕರುಣೆಯು ಅವರನ್ನು ಆವರಿಸುತ್ತದೆ, ದೇವದೂತರುಗಳು ಅವರನ್ನು ಸುತ್ತುವರಿಯುತ್ತಾರೆ ಮತ್ತು ಅಲ್ಲಾಹು ತನ್ನ ಹತ್ತಿರವಿರುವವರಿಗೆ ಅವರ ಬಗ್ಗೆ ತಿಳಿಸುತ್ತಾನೆ. ಯಾರ ಕರ್ಮಗಳು ಅವನನ್ನು ನಿಧಾನಗೊಳಿಸುತ್ತವೆಯೋ, ಅವನ ವಂಶವು ಅವನನ್ನು ಮುಂದಕ್ಕೆ ಒಯ್ಯುವುದಿಲ್ಲ."

[صحيح] - [رواه مسلم] - [صحيح مسلم - 2699]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ಮುಸ್ಲಿಂ ಅಲ್ಲಾಹನಿಂದ ಪಡೆಯುವ ಪ್ರತಿಫಲವು ಇತರ ಮುಸ್ಲಿಮರಿಗಾಗಿ ಅವನು ನಿರ್ವಹಿಸುವ ಕೆಲಸಗಳ ಅದೇ ಸ್ವರೂಪದ್ದಾಗಿರುತ್ತದೆ. ಯಾರು ಇಹಲೋಕದ ಕಷ್ಟಗಳಲ್ಲಿ ಒಂದು ಕಷ್ಟವನ್ನು ಮತ್ತು ತೊಂದರೆಯನ್ನು ಒಬ್ಬ ಸತ್ಯವಿಶ್ವಾಸಿಯಿಂದ ನಿವಾರಿಸುತ್ತಾನೋ, ತೊಲಗಿಸುತ್ತಾನೋ, ತೆಗೆದುಹಾಕುತ್ತಾನೋ ಅಥವಾ ಇಲ್ಲದಂತೆ ಮಾಡುತ್ತಾನೋ, ಅಲ್ಲಾಹು ಪುನರುತ್ಥಾನದ ದಿನದ ಕಷ್ಟಗಳಲ್ಲಿ ಒಂದನ್ನು ಅವನಿಂದ ನಿವಾರಿಸುವ ಮೂಲಕ ಅವನಿಗೆ ಪ್ರತಿಫಲವನ್ನು ನೀಡುತ್ತಾನೆ. ಯಾರು ಕಷ್ಟದಲ್ಲಿರುವವರಿಗೆ ಸುಲಭಗೊಳಿಸುತ್ತಾನೋ ಮತ್ತು ಕ್ಲಿಷ್ಟತೆಯನ್ನು ತೊಡೆದು ಹಾಕಿ ಸರಳಗೊಳಿಸುತ್ತಾನೋ, ಅಲ್ಲಾಹು ಇಹಲೋಕ ಮತ್ತು ಪರಲೋಕದಲ್ಲಿ ಅವನಿಗೆ ಸುಲಭಗೊಳಿಸುತ್ತಾನೆ. ಯಾರು ಒಬ್ಬ ಮುಸಲ್ಮಾನನಿಂದ ಸಂಭವಿಸುವ ಮತ್ತು ಇತರ ಯಾರೂ ತಿಳಿಯಬಾರದೆಂದು ಅವನು ಬಯಸುವ ಪ್ರಮಾದಗಳನ್ನು ಮತ್ತು ದೋಷಗಳನ್ನು ಮುಚ್ಚಿಡುತ್ತಾನೋ, ಅಲ್ಲಾಹು ಇಹಲೋಕ ಮತ್ತು ಪರಲೋಕದಲ್ಲಿ ಅವನ ತಪ್ಪುಗಳನ್ನು ಮುಚ್ಚಿಡುತ್ತಾನೆ. ದಾಸನು ಧಾರ್ಮಿಕ ಮತ್ತು ಲೌಕಿಕ ಒಳಿತುಗಳಲ್ಲಿ ತನ್ನ ಸಹೋದರನಿಗೆ ಸಹಾಯ ಮಾಡುತ್ತಿರುವವರೆಗೂ ಅಲ್ಲಾಹು ಆ ದಾಸನಿಗೆ ಸಹಾಯ ಮಾಡುತ್ತಿರುತ್ತಾನೆ. ಸಹಾಯವು ಪ್ರಾರ್ಥನೆ, ದೈಹಿಕ ನೆರವು, ಆರ್ಥಿಕ ನೆರವು ಇತ್ಯಾದಿಗಳ ಮೂಲಕವೂ ಆಗಿರಬಹುದು. ಯಾರು ಅಲ್ಲಾಹನ ಸಂಪ್ರೀತಿಯನ್ನು ಉದ್ದೇಶವಾಗಿಟ್ಟು ಧಾರ್ಮಿಕ ಜ್ಞಾನವನ್ನು ಪಡೆಯಲು ಒಂದು ದಾರಿಯಲ್ಲಿ ನಡೆಯುತ್ತಾರೋ, ಅಲ್ಲಾಹು ಅವರಿಗೆ ಸ್ವರ್ಗಕ್ಕಿರುವ ದಾರಿಯನ್ನು ಸುಗಮಗೊಳಿಸುತ್ತಾನೆ. ಒಂದು ಗುಂಪು ಜನರು ಅಲ್ಲಾಹನ ಮನೆಗಳ (ಮಸೀದಿಗಳ) ಪೈಕಿ ಒಂದರಲ್ಲಿ, ಅಲ್ಲಾಹನ ಗ್ರಂಥವನ್ನು ಪಠಿಸಲು ಮತ್ತು ಅದನ್ನು ತಮ್ಮ ನಡುವೆ ಅಧ್ಯಯನ ಮಾಡಲು ಒಟ್ಟುಗೂಡುತ್ತಾರೆ ಎಂದಾದರೆ, ಅವರ ಮೇಲೆ ಮನಃಶಾಂತಿ ಮತ್ತು ಗಾಂಭೀರ್ಯವು ಇಳಿಯುತ್ತದೆ, ಅಲ್ಲಾಹನ ಕರುಣೆಯು ಅವರನ್ನು ಆವರಿಸಿ ವ್ಯಾಪಿಸುತ್ತದೆ, ದೇವದೂತರುಗಳು ಅವರನ್ನು ಸುತ್ತುವರಿಯುತ್ತಾರೆ ಮತ್ತು ಅಲ್ಲಾಹು ತನ್ನ ಆಪ್ತ ದೇವದೂತರುಗಳ ಸಮ್ಮುಖದಲ್ಲಿ ಅವರನ್ನು ಹೊಗಳುತ್ತಾನೆ. ಅಲ್ಲಾಹು ಅತ್ಯುನ್ನತ ಸಭೆಯಲ್ಲಿ ತನ್ನ ದಾಸನ ಬಗ್ಗೆ ಉಲ್ಲೇಖಿಸುವುದು ಬಹಳ ದೊಡ್ಡ ಗೌರವದ ವಿಷಯವಾಗಿದೆ. ಯಾರ ಸತ್ಕರ್ಮಗಳು ಕಡಿಮೆಯಾಗಿರುತ್ತದೋ ಅವರನ್ನು ಸತ್ಕರ್ಮಿಗಳ ಸ್ಥಾನಕ್ಕೆ ಸೇರಿಸಲಾಗುವುದಿಲ್ಲ. ಆದ್ದರಿಂದ, ತಮ್ಮ ವಂಶದ ಶ್ರೇಷ್ಠತೆ ಮತ್ತು ತಮ್ಮ ಪೂರ್ವಜರ ಅರ್ಹತೆಯನ್ನು ನಂಬಿ ಸತ್ಕರ್ಮಗಳನ್ನು ನಿರ್ಲಕ್ಷಿಸಬೇಡಿ.

ಹದೀಸಿನ ಪ್ರಯೋಜನಗಳು

  1. ಇಬ್ನ್ ದಕೀಕುಲ್-ಈದ್ ಹೇಳಿದರು: "ಇದೊಂದು ಸರ್ವಶ್ರೇಷ್ಠ ಹದೀಸ್ ಆಗಿದ್ದು, ಇದು ವಿವಿಧ ರೀತಿಯ ಜ್ಞಾನಗಳು, ತತ್ವಗಳು ಮತ್ತು ಶಿಷ್ಟಾಚಾರಗಳನ್ನು ಒಳಗೊಂಡಿದೆ. ಇದರಲ್ಲಿ ಮುಸ್ಲಿಮರ ಅಗತ್ಯಗಳನ್ನು ಪೂರೈಸುವ ಮತ್ತು ಸಾಧ್ಯವಾಗುವ ರೀತಿಯಲ್ಲಿ ಅವರಿಗೆ ಉಪಕಾರ ಮಾಡುವ ಶ್ರೇಷ್ಠತೆಯನ್ನು ಎತ್ತಿ ತೋರಿಸಲಾಗಿದೆ. ಅದು ಜ್ಞಾನ, ಸಂಪತ್ತು, ಸಹಾಯ, ಉಪಯುಕ್ತ ಸಲಹೆಗಳನ್ನು ನೀಡುವುದು, ಉಪದೇಶ ಮಾಡುವುದು ಅಥವಾ ಇತರ ವಿಧಾನಗಳ ಮೂಲಕ ಆಗಿರಬಹುದು."
  2. ಕಷ್ಟದಲ್ಲಿರುವವರಿಗೆ ಸುಲಭಗೊಳಿಸುವುದನ್ನು ಪ್ರೋತ್ಸಾಹಿಸಲಾಗಿದೆ.
  3. ಒಬ್ಬ ಮುಸ್ಲಿಮನಿಗೆ ಸಹಾಯ ಮಾಡಲು ಪ್ರೋತ್ಸಾಹಿಸಲಾಗಿದೆ. ಅವನು ತನ್ನ ಸಹೋದರನಿಗೆ ಸಹಾಯ ಮಾಡಿದ್ದಕ್ಕೆ ಅನುಗುಣವಾಗಿ ಅಲ್ಲಾಹು ಅವನಿಗೆ ಸಹಾಯ ಮಾಡುತ್ತಾನೆ.
  4. ಮುಸ್ಲಿಮನ ತಪ್ಪುಗಳನ್ನು ಮುಚ್ಚಿಡುವುದರಲ್ಲಿ ಅವನ ನ್ಯೂನತೆಗಳನ್ನು (ಅಥವಾ ಖಾಸಗಿ ವಿಷಯಗಳನ್ನು) ತನಿಖೆ ಮಾಡದಿರುವುದು ಒಳಪಡುತ್ತದೆ. ಪೂರ್ವಿಕರಲ್ಲಿ ಒಬ್ಬರು ಹೀಗೆ ಹೇಳಿದ್ದಾರೆಂದು ವರದಿಯಾಗಿದೆ: "ನಾನು ಯಾವುದೇ ನ್ಯೂನತೆಗಳಿಲ್ಲದ ಜನರನ್ನು ಭೇಟಿಯಾದೆ. ಆದರೆ, ಅವರು ಇತರರ ನ್ಯೂನತೆಗಳ ಬಗ್ಗೆ ಮಾತನಾಡಿದರು. ಇದರ ಪರಿಣಾಮವಾಗಿ, ಆ ಜನರು ಇವರ ನ್ಯೂನತೆಗಳನ್ನು ಹೇಳಿಕೊಳ್ಳಲು ಪ್ರಾರಂಭಿಸಿದರು. ನಾನು ನ್ಯೂನತೆಗಳನ್ನು ಹೊಂದಿದ್ದ ಜನರನ್ನು ಭೇಟಿಯಾದೆ. ಆದರೆ, ಅವರು ಇತರರ ನ್ಯೂನತೆಗಳನ್ನು ಹೇಳುತ್ತಿರಲಿಲ್ಲ. ಆದ್ದರಿಂದ, ಅವರ ನ್ಯೂನತೆಗಳು ಯಾರಿಗೂ ತಿಳಿಯದಂತೆ ಮರೆತುಬಿಡಲಾಯಿತು."
  5. ಇತರರ ತಪ್ಪುಗಳನ್ನು ಮುಚ್ಚಿಡಬೇಕು ಎಂದರೆ, ಕೆಡುಕನ್ನು ತಡೆಯಬಾರದು ಮತ್ತು ಅದನ್ನು ಬದಲಾಯಿಸಬಾರದು ಎಂದಲ್ಲ. ಬದಲಾಗಿ, ಅದನ್ನು ಬದಲಾಯಿಸಬೇಕು ಮತ್ತು ಅದೇ ಸಮಯದಲ್ಲಿ ಅದನ್ನು ಮುಚ್ಚಿಡಬೇಕು. ಇದು ದುಷ್ಕರ್ಮ ಅಥವಾ ಅತಿರೇಕದಲ್ಲಿ ಕುಖ್ಯಾತಿ ಪಡೆಯದವರಿಗೆ ಅನ್ವಯಿಸುತ್ತದೆ. ಆದರೆ, ಅಂತಹ ಕುಖ್ಯಾತಿಯನ್ನು ಪಡೆದವರ ಬಗ್ಗೆ ಹೇಳುವುದಾದರೆ, ಅವರ ತಪ್ಪುಗಳನ್ನು ಮರೆಮಾಚುವುದು ಸೂಕ್ತವಲ್ಲ; ಬದಲಿಗೆ, ಅವನ ವಿಷಯವನ್ನು ಅಧಿಕಾರದಲ್ಲಿರುವವರಿಗೆ ತಲುಪಿಸಬೇಕು - ಇದು ಹೆಚ್ಚಿನ ಹಾನಿಗೆ ಕಾರಣವಾಗುವುದಿಲ್ಲ ಎಂದಾದರೆ ಮಾತ್ರ. ಏಕೆಂದರೆ, ಅವನ ತಪ್ಪುಗಳನ್ನು ಮರೆಮಾಡಿದರೆ ಅದು ಅವನನ್ನು ದುಷ್ಕರ್ಮಗಳಲ್ಲಿ ಮುಂದುವರಿಯಲು ಪ್ರೋತ್ಸಾಹಿಸುತ್ತದೆ ಮತ್ತು ಇತರರಿಗೆ ಹಾನಿ ಮಾಡಲು ಅವನಿಗೆ ಧೈರ್ಯ ನೀಡುತ್ತದೆ. ಅದೇ ರೀತಿ, ಅದು ಇತರ ದುಷ್ಟರಿಗೂ ಮತ್ತು ಮೊಂಡರಿಗೂ (ಅಪರಾಧ ಮಾಡಲು) ಧೈರ್ಯ ನೀಡುತ್ತದೆ.
  6. ಜ್ಞಾನವನ್ನು ಪಡೆಯಲು, ಕುರ್‌ಆನನ್ನು ಪಠಿಸಲು ಮತ್ತು ಅಧ್ಯಯನ ಮಾಡಲು ಪ್ರೋತ್ಸಾಹಿಸಲಾಗಿದೆ.
  7. ನವವಿ ಹೇಳಿದರು: "ಮಸೀದಿಯಲ್ಲಿ ಕುರ್‌ಆನ್ ಪಠಿಸಲು ಒಟ್ಟುಗೂಡುವುದರ ಶ್ರೇಷ್ಠತೆಗೆ ಈ ಹದೀಸ್ ಪುರಾವೆಯಾಗಿದೆ... ಮದ್ರಸಗಳು, ಕಾರ್ಯಾಗಾರಗಳು ಅಥವಾ ಅಂತಹುದೇ ಸಭೆಗಳು ಸಹ ಅಲ್ಲಾಹು ಇಚ್ಛಿಸಿದರೆ ಇದೇ ಶ್ರೇಷ್ಠತೆಯನ್ನು ಹೊಂದಿವೆ."
  8. ಅಲ್ಲಾಹು ಪ್ರತಿಫಲವನ್ನು ಇಟ್ಟಿರುವುದು ವಂಶಗಳ ಆಧಾರದಲ್ಲಲ್ಲ, ಬದಲಾಗಿ ಕರ್ಮಗಳ ಆಧಾರದಲ್ಲಾಗಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ الأسامية الهولندية الغوجاراتية الرومانية المجرية الموري الجورجية
ಅನುವಾದಗಳನ್ನು ತೋರಿಸಿ
ಇನ್ನಷ್ಟು