+ -

عن الْأَغَرِّ رضي الله عنه، وَكَانَ مِنْ أَصْحَابِ النَّبِيِّ صَلَّى اللهُ عَلَيْهِ وَسَلَّمَ، قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«يَا أَيُّهَا النَّاسُ تُوبُوا إِلَى اللهِ، فَإِنِّي أَتُوبُ فِي الْيَوْمِ إِلَيْهِ مِائَةَ مَرَّةٍ».

[صحيح] - [رواه مسلم] - [صحيح مسلم: 2702]
المزيــد ...

ಅಗರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) - ಇವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಲ್ಲಿ ಒಬ್ಬರಾಗಿದ್ದರು - ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಓ ಜನರೇ, ಅಲ್ಲಾಹನ ಕಡೆಗೆ ಪಶ್ಚಾತ್ತಾಪ ಪಡಿರಿ. ಏಕೆಂದರೆ ನಾನು ದಿನಕ್ಕೆ ನೂರು ಬಾರಿ ಅವನ ಕಡೆಗೆ ಪಶ್ಚಾತ್ತಾಪ ಪಡುತ್ತೇನೆ."

[صحيح] - [رواه مسلم] - [صحيح مسلم - 2702]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಿಗೆ ಅಲ್ಲಾಹನ ಕಡೆಗೆ ನಿರಂತರ ಪಶ್ಚಾತ್ತಾಪ ಪಡಲು ಮತ್ತು ಅವನಲ್ಲಿ ಕ್ಷಮೆಯಾಚನೆ ಮಾಡಲು ಆದೇಶಿಸುತ್ತಾರೆ. ತನ್ನ ಗತ ಮತ್ತು ಮುಂಬರುವ ಪಾಪಗಳೆಲ್ಲವೂ ಕ್ಷಮಿಸಲ್ಪಟ್ಟಿದ್ದರೂ ಸಹ, ತಾನು ಪ್ರತಿದಿನ ನೂರಕ್ಕಿಂತ ಹೆಚ್ಚು ಬಾರಿ ಅಲ್ಲಾಹನ ಕಡೆಗೆ ಪಶ್ಚಾತ್ತಾಪ ಪಡುತ್ತೇನೆ ಮತ್ತು ಅವನಲ್ಲಿ ಕ್ಷಮೆಯಾಚನೆ ಮಾಡುತ್ತೇನೆಂದು ಅವರು ತಮ್ಮ ಬಗ್ಗೆ ತಿಳಿಸುತ್ತಾರೆ. ಇದು ಸರ್ವಶಕ್ತನಾದ ಅಲ್ಲಾಹನಿಗೆ ತೋರುವ ಸಂಪೂರ್ಣ ವಿನಯ ಮತ್ತು ದಾಸ್ಯವನ್ನು ಸೂಚಿಸುತ್ತದೆ.

ಹದೀಸಿನ ಪ್ರಯೋಜನಗಳು

  1. ಪ್ರತಿಯೊಬ್ಬರೂ, ತಮ್ಮ ಪದವಿ ಮತ್ತು ಸತ್ಯವಿಶ್ವಾಸದ ಮಟ್ಟವನ್ನು ಲೆಕ್ಕಿಸದೆ, ಸರ್ವಶಕ್ತನಾದ ಅಲ್ಲಾಹನ ಕಡೆಗೆ ಮರಳುವ ಮತ್ತು ಪಶ್ಚಾತ್ತಾಪದ ಮೂಲಕ ತಮ್ಮನ್ನು ತಾವು ಪರಿಪೂರ್ಣಗೊಳಿಸಿಕೊಳ್ಳುವ ಅಗತ್ಯವಿದೆ. ಸರ್ವಶಕ್ತನಾದ ಅಲ್ಲಾಹನ ಹಕ್ಕುಗಳನ್ನು ಪೂರೈಸುವಲ್ಲಿ ಯಾರೂ ಪರಿಪೂರ್ಣರಲ್ಲ: "ಮತ್ತು ಓ ಸತ್ಯವಿಶ್ವಾಸಿಗಳೇ! ನೀವೆಲ್ಲರೂ ಒಟ್ಟಾಗಿ ಅಲ್ಲಾಹನ ಕಡೆಗೆ ಪಶ್ಚಾತ್ತಾಪದಿಂದ ತಿರುಗಿರಿ."
  2. ಪಶ್ಚಾತ್ತಾಪವು ಸಾಮಾನ್ಯವಾಗಿ ಎಲ್ಲರೂ ನಿರ್ವಹಿಸಬೇಕಾಗಿದೆ. ನಿಷೇಧಿತ ಕೃತ್ಯಗಳನ್ನು ಮತ್ತು ಪಾಪಗಳನ್ನು ಮಾಡುವವರು ಅಥವಾ ಕಡ್ಡಾಯ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಎಡವುವವರು ಎಲ್ಲರೂ ಸಹ ಅದರಲ್ಲಿ ಸಮಾನರಾಗಿದ್ದಾರೆ.
  3. ಪಶ್ಚಾತ್ತಾಪದ ಸ್ವೀಕಾರಕ್ಕೆ ನಿಷ್ಕಳಂಕತೆಯು (ಇಖ್ಲಾಸ್) ಒಂದು ಷರತ್ತಾಗಿದೆ. ಅಲ್ಲಾಹನ ಹೊರತು ಇತರರ ಭಯದಿಂದ ಪಾಪವನ್ನು ತ್ಯಜಿಸುವವನು ಪಶ್ಚಾತ್ತಾಪ ಪಟ್ಟವನಾಗುವುದಿಲ್ಲ.
  4. ನವವಿ ಹೇಳಿದರು: "ಪಶ್ಚಾತ್ತಾಪಕ್ಕೆ ಮೂರು ಷರತ್ತುಗಳಿವೆ: ಪಾಪವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದು, ಅದನ್ನು ಮಾಡಿದ್ದಕ್ಕಾಗಿ ವಿಷಾದಿಸುವುದು ಮತ್ತು ಅಂತಹ ಪಾಪವನ್ನು ಮುಂದೆ ಎಂದಿಗೂ ಮಾಡುವುದಿಲ್ಲ ಎಂದು ದೃಢವಾಗಿ ನಿರ್ಧರಿಸುವುದು. ಪಾಪವು ಮನುಷ್ಯರಿಗೆ ಸಂಬಂಧಿಸಿದ್ದಾಗಿದ್ದರೆ, ಅದಕ್ಕೆ ನಾಲ್ಕನೇ ಷರತ್ತು ಇದೆ: ಅದೇನೆಂದರೆ, ಅನ್ಯಾಯವಾಗಿ ತೆಗೆದುಕೊಂಡದ್ದನ್ನು ಹಿಂದಿರುಗಿಸುವುದು ಅಥವಾ ಅನ್ಯಾಯಕ್ಕೊಳಗಾದ ವ್ಯಕ್ತಿಯೊಡನೆ ಕ್ಷಮೆ ಕೇಳುವುದು."
  5. ನಾವು ಗಮನಿಸಬೇಕಾದ ಒಂದು ಅಂಶವೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕ್ಷಮೆ ಯಾಚಿಸುತ್ತಿದ್ದರು ಎಂಬುದರ ಅರ್ಥ ಅವರು ಪಾಪಗಳನ್ನು ಮಾಡುತ್ತಿದ್ದರು ಎಂದಲ್ಲ. ಬದಲಿಗೆ, ಅದು ಅವರ ದಾಸ್ಯದ ಪರಿಪೂರ್ಣತೆ ಮತ್ತು ಸರ್ವಶಕ್ತನಾದ ಅಲ್ಲಾಹನ ಧ್ಯಾನದೊಂದಿಗೆ ಅವರು ಹೊಂದಿದ್ದ ನಿರಂತರ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ, ಅದು ಅಲ್ಲಾಹನ ಹಕ್ಕುಗಳ ಮಹತ್ವವನ್ನು ಮತ್ತು ಅವನ ಅನುಗ್ರಹಗಳಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಅದು ಕಡಿಮೆಯೇ ಎಂಬ ಅರಿವನ್ನು ದಾಸನಿಗೆ ನೀಡುತ್ತದೆ. ಅದು ಅವರ ನಂತರದ ಸಮುದಾಯಕ್ಕೆ ನೀಡಲಾದ ಶಾಸನವಾಗಿ ಭಾಗವಾಗಿದೆ. ಇಂತಹ ಅನೇಕ ವಿವೇಕಗಳು ಇದರಲ್ಲಿವೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ವಿಯೆಟ್ನಾಮೀಸ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ الأسامية الهولندية الغوجاراتية الرومانية المجرية الموري الجورجية
ಅನುವಾದಗಳನ್ನು ತೋರಿಸಿ
ಇನ್ನಷ್ಟು