+ -

عَنْ جَابِرِ بْنِ عَبْدِ اللَّهِ رضي الله عنهما أَنَّ النَّبِيَّ صَلَّى اللهُ عَلَيْهِ وَسَلَّمَ قَالَ:
«أُعْطِيتُ خَمْسًا لَمْ يُعْطَهُنَّ أَحَدٌ قَبْلِي: نُصِرْتُ بِالرُّعْبِ مَسِيرَةَ شَهْرٍ، وَجُعِلَتْ لِي الأَرْضُ مَسْجِدًا وَطَهُورًا، فَأَيُّمَا رَجُلٍ مِنْ أُمَّتِي أَدْرَكَتْهُ الصَّلاَةُ فَلْيُصَلِّ، وَأُحِلَّتْ لِي المَغَانِمُ، وَلَمْ تَحِلَّ لِأَحَدٍ قَبْلِي، وَأُعْطِيتُ الشَّفَاعَةَ، وَكَانَ النَّبِيُّ يُبْعَثُ إِلَى قَوْمِهِ خَاصَّةً وَبُعِثْتُ إِلَى النَّاسِ عَامَّةً».

[صحيح] - [متفق عليه] - [صحيح البخاري: 335]
المزيــد ...

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನನಗಿಂತ ಮೊದಲು ಯಾರಿಗೂ ನೀಡಲಾಗಿರದ ಐದು ವಿಷಯಗಳನ್ನು ನನಗೆ ನೀಡಲಾಗಿದೆ. ಒಂದು ತಿಂಗಳ ಪ್ರಯಾಣದಷ್ಟು ದೂರದ ತನಕ ನನಗೆ ಭಯದ ಮೂಲಕ ಸಹಾಯ ಮಾಡಲಾಗಿದೆ. ನನಗೆ ಭೂಮಿಯನ್ನು ಮಸೀದಿ ಮತ್ತು ಶುದ್ಧೀಕರಣದ ವಸ್ತುವಾಗಿ ಮಾಡಿಕೊಡಲಾಗಿದೆ. ನನ್ನ ಸಮುದಾಯದ ವ್ಯಕ್ತಿಗೆ ಯಾವುದೇ ಸ್ಥಳದಲ್ಲಿ ನಮಾಝಿನ ಸಮಯವಾದರೂ ಆತ ನಮಾಝ್ ಮಾಡಬಹುದು. ನನಗೆ ಯುದ್ಧಾರ್ಜಿತ ಸೊತ್ತನ್ನು ಅನುಮತಿಸಲಾಗಿದೆ. ನನಗಿಂತ ಮೊದಲಿನ ಯಾವುದೇ ಪ್ರವಾದಿಗೂ ಇದನ್ನು ಅನುಮತಿಸಲಾಗಿರಲಿಲ್ಲ. ನನಗೆ ಶಿಫಾರಸ್ಸು ಮಾಡುವ ಅಧಿಕಾರವನ್ನು ನೀಡಲಾಗಿದೆ. ಇತರ ಪ್ರವಾದಿಗಳನ್ನು ವಿಶೇಷವಾಗಿ ಅವರ ಜನತೆಗೆ ಮಾತ್ರ ಕಳುಹಿಸಲಾಗುತ್ತಿತ್ತು. ಆದರೆ ನನ್ನನ್ನು ಸಂಪೂರ್ಣ ಮನುಕುಲಕ್ಕೆ ಕಳುಹಿಸಲಾಗಿದೆ."

[صحيح] - [متفق عليه] - [صحيح البخاري - 335]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಅವರಿಗೆ ಐದು ವಿಶೇಷತೆಗಳನ್ನು ನೀಡಿದ್ದಾನೆ. ಅವುಗಳನ್ನು ಅವರಿಗಿಂತ ಮೊದಲಿನ ಯಾವುದೇ ಪ್ರವಾದಿಗೂ ನೀಡಲಾಗಿರಲಿಲ್ಲ.
ಒಂದು: ನನ್ನ ಶತ್ರುಗಳು ನನ್ನಿಂದ ಒಂದು ತಿಂಗಳ ಪ್ರಯಾಣದಷ್ಟು ದೂರದಲ್ಲಿದ್ದರೂ ಸಹ ಅವರ ಹೃದಯಗಳಲ್ಲಿ ನನ್ನ ಬಗ್ಗೆ ಭಯವನ್ನು ಹಾಕಿ ನನಗೆ ಸಹಾಯ ಮಾಡಲಾಗಿದೆ.
ಎರಡು: ನಮಗೆ ಭೂಮಿಯನ್ನು ಮಸೀದಿಯಾಗಿ ಮಾಡಿಕೊಡಲಾಗಿದೆ. ನಾವು ಎಲ್ಲೇ ಇದ್ದರೂ ಅಲ್ಲಿ ನಮಗೆ ನಮಾಝ್ ಮಾಡಬಹುದು. ನೀರು ದೊರೆಯದಿದ್ದರೆ ಮಣ್ಣನ್ನು ಶುದ್ಧೀಕರಣವಾಗಿ ಬಳಸಬಹುದು.
ಮೂರು: ನಮಗೆ ಯುದ್ಧಾರ್ಜಿತ ಸೊತ್ತನ್ನು ಅನುಮತಿಸಲಾಗಿದೆ. ಯುದ್ಧಾರ್ಜಿತ ಸೊತ್ತು ಎಂದರೆ ಮುಸಲ್ಮಾನರು ಸತ್ಯನಿಷೇಧಿಗಳ ವಿರುದ್ಧ ಯುದ್ಧ ಮಾಡಿ ಸಂಗ್ರಹಿಸುವ ಸೊತ್ತುಗಳು.
ನಾಲ್ಕು: ಪುನರುತ್ಥಾನ ದಿನದ ದಿಗಿಲಿನಿಂದ ಜನರಿಗೆ ಆರಾಮ ನೀಡುವುದಕ್ಕಾಗಿ ಮಹಾ ಶಿಫಾರಸ್ಸು ಮಾಡುವ ಅಧಿಕಾರವನ್ನು ನನಗೆ ನೀಡಲಾಗಿದೆ.
ಐದು: ನನ್ನನ್ನು ಸಂಪೂರ್ಣ ಮನುಕುಲಕ್ಕೆ—ಮನುಷ್ಯರು ಮತ್ತು ಜಿನ್ನ್‌ಗಳ ಕಡೆಗೆ ಕಳುಹಿಸಲಾಗಿದೆ. ಆದರೆ ನನಗಿಂತ ಮೊದಲಿನ ಪ್ರವಾದಿಗಳನ್ನು ಅವರವರ ಜನತೆಗೆ ಮಾತ್ರ ಕಳುಹಿಸಲಾಗುತ್ತಿತ್ತು.

ಹದೀಸಿನ ಪ್ರಯೋಜನಗಳು

  1. ಅಲ್ಲಾಹನ ಅನುಗ್ರಹಗಳನ್ನು ತಿಳಿಸಲು ಮತ್ತು ಅದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಅರ್ಪಿಸಲು ಆ ಅನುಗ್ರಹಗಳನ್ನು ಎಣಿಸುವುದು ಧರ್ಮಸಮ್ಮತವಾಗಿದೆ.
  2. ಈ ವಿಶೇಷತೆಗಳನ್ನು ದಯಪಾಲಿಸುವ ಮೂಲಕ ಅಲ್ಲಾಹು ಈ ಸಮುದಾಯಕ್ಕೆ ಮತ್ತು ಅದರ ಪ್ರವಾದಿಗೆ ಶ್ರೇಷ್ಠತೆಯನ್ನು ನೀಡಿದ್ದಾನೆ.
  3. ಯಾವುದೇ ಸ್ಥಿತಿಯಲ್ಲಿದ್ದರೂ ನಮಾಝಿನ ಸಮಯವಾಗುವಾಗ ನಮಾಝ್ ಮಾಡುವುದು ಕಡ್ಡಾಯವಾಗಿದೆ. ಸಾಧ್ಯವಾದ ರೀತಿಯಲ್ಲಿ ಅದರ ಷರತ್ತುಗಳು, ಸ್ತಂಭಗಳು ಮತ್ತು ಕಡ್ಡಾಯಕಾರ್ಯಗಳನ್ನು ನಿರ್ವಹಿಸಬೇಕಾಗಿದೆ.
  4. ಇತರ ಪ್ರವಾದಿಗಳ ನಡುವೆ ನಮ್ಮ ಪ್ರವಾದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತ್ರ ವಿಶೇಷವಾಗಿ ನೀಡಲಾದ ಅನೇಕ ಶಿಫಾರಸ್ಸು (ಶಫಾಅತ್) ಗಳಿವೆ. ಒಂದು: ಜನರನ್ನು ವಿಚಾರಣೆಗೆ ಕರೆಯಬೇಕೆಂದು ಮಾಡುವ ಶಿಫಾರಸ್ಸು. ಎರಡು: ಸ್ವರ್ಗವಾಸಿಗಳನ್ನು ಸ್ವರ್ಗಕ್ಕೆ ಪ್ರವೇಶಗೊಳಿಸಲು ಮಾಡುವ ಶಿಫಾರಸ್ಸು. ಮೂರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ದೊಡ್ಡಪ್ಪ ಅಬೂತಾಲಿಬರಿಗೆ, ಅವರಿಗೆ ನರಕದಲ್ಲಿ ಶಿಕ್ಷೆಯನ್ನು ಕಡಿಮೆಗೊಳಿಸಲು ವಿಶೇಷವಾಗಿ ಮಾಡುವ ಶಿಫಾರಸ್ಸು. ಇದು ನರಕದಿಂದ ಮುಕ್ತಿ ನೀಡುವುದಕ್ಕಲ್ಲ. ಏಕೆಂದರೆ, ಅವರು ಸತ್ಯನಿಷೇಧಿಯಾಗಿ ಸತ್ತಿದ್ದಾರೆ.
  5. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ತಿಳಿಸಿರದ ಇನ್ನೂ ಅನೇಕ ವಿಶೇಷತೆಗಳಿವೆ. ಅವು: ಅವರಿಗೆ ಕಡಿಮೆ ಮಾತುಗಳಲ್ಲಿ ಹೆಚ್ಚು ವಿಷಯಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು (ಸಮಗ್ರ ವಾಕ್ಚಾತುರ್ಯವನ್ನು) ನೀಡಲಾಗಿದೆ. ಅವರ ಮೂಲಕ ಪ್ರವಾದಿತ್ವಕ್ಕೆ ಮೊಹರು ಹಾಕಲಾಗಿದೆ. (ಅಂದರೆ ಅವರ ನಂತರ ಬೇರೆ ಪ್ರವಾದಿಗಳಿಲ್ಲ). ನಾವು ನಮಾಝ್ ಮಾಡಲು ನಿಲ್ಲುವ ಸಾಲುಗಳು ದೇವದೂತರುಗಳು ನಿಲ್ಲುವ ಸಾಲಿನಂತೆ ಮಾಡಲಾಗಿದೆ. ಇಂತಹ ಇನ್ನೂ ಅನೇಕ ವಿಶೇಷತೆಗಳಿವೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الهولندية الغوجاراتية القيرقيزية النيبالية الرومانية المجرية الموري المالاجاشية الأورومو الأوكرانية الجورجية المقدونية
ಅನುವಾದಗಳನ್ನು ತೋರಿಸಿ
ಇನ್ನಷ್ಟು