عن عبد الله بن عمرو بن العاص رضي الله عنهما:
عن النبي صلى الله عليه وسلم أنه كان إذا دخل المسجد قال: «أعوذ بالله العظيم، وبوجهه الكريم، وسلطانه القديم، من الشيطان الرَّجِيم»، قال: أَقَطُّ؟ قلت: نعم، قال: فإذا قال ذلك قال الشيطان: حُفِظَ منِّي سائر اليوم.
[حسن] - [رواه أبو داود] - [سنن أبي داود: 466]
المزيــد ...
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಬಹಿಷ್ಕೃತನಾದ ಶೈತಾನನಿಂದ ನಾನು ಮಹಾನನಾದ ಅಲ್ಲಾಹನೊಂದಿಗೆ, ಅವನ ಗೌರವಾನ್ವಿತ ಮುಖದೊಂದಿಗೆ ಮತ್ತು ಅವನ ಅನಶ್ವರ ಅಧಿಕಾರದೊಂದಿಗೆ ರಕ್ಷೆ ಬೇಡುತ್ತೇನೆ." ಅವರು ಕೇಳಿದರು: "ಇಷ್ಟೇ ಏನು?" ನಾನು ಹೇಳಿದೆ: "ಹೌದು." ಅವರು ಹೇಳಿದರು: "ಇದನ್ನು ಪಠಿಸಿದರೆ ಶೈತಾನನು ಹೀಗೆ ಹೇಳುವನು: ಈ ಇಡೀ ದಿನ ಅವನು ನನ್ನಿಂದ ರಕ್ಷಿಸಲ್ಪಟ್ಟಿದ್ದಾನೆ."
[حسن] - [رواه أبو داود] - [سنن أبي داود - 466]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಅಊದು ಬಿಲ್ಲಾಹಿಲ್ ಅಝೀಮ್" - ನಾನು ಅಲ್ಲಾಹನೊಂದಿಗೆ ಮತ್ತು ಅವನ ಗುಣಲಕ್ಷಣಗಳೊಂದಿಗೆ ರಕ್ಷೆ ಬೇಡುತ್ತೇನೆ ಮತ್ತು ಆಶ್ರಯ ಬೇಡುತ್ತೇನೆ. "ವಬಿವಜ್‌ಹಿಹಿಲ್ ಕರೀಮ್" - ಅವನ ಉದಾರ ಮತ್ತು ಗೌರವಾರ್ಹ ಮುಖದೊಂದಿಗೆ. "ವಸುಲ್ತಾನಿಹಿ" - ಅವನ ಸೃಷ್ಟಿಗಳ ಪೈಕಿ ಅವನಿಚ್ಛಿಸಿದವರ ಮೇಲೆ ಅವನಿಗಿರುವ ಪ್ರಾಬಲ್ಯ, ಸಾಮರ್ಥ್ಯ ಮತ್ತು ಅಧಿಕಾರದೊಂದಿಗೆ. "ಅಲ್ ಕದೀಮ್" - ಶಾಶ್ವತ ಮತ್ತು ಅನಶ್ವರವಾದ. "ಮಿನ ಶ್ಶೈತಾನಿ ರ್‍ರಜೀಮ್" - ಅಲ್ಲಾಹನ ಕರುಣೆಯಿಂದ ದೂರಗೊಳಿಸಲಾದ ಮತ್ತು ಬಹಿಷ್ಕರಿಸಲಾದ ಶೈತಾನನಿಂದ. ಅಂದರೆ, ಓ ಅಲ್ಲಾಹ್! ನನ್ನನ್ನು ಅವನ ಪಿಸುಮಾತುಗಳು, ಅವನ ಪ್ರಲೋಭನೆಗಳು, ಅವನ ಹೆಜ್ಜೆಗಳು, ಅವನ ಆಲೋಚನೆಗಳು, ಅವನ ಒಳನೋಟಗಳು ಮತ್ತು ಅವನ ದುರ್ಮಾರ್ಗದಿಂದ ರಕ್ಷಿಸು. ಏಕೆಂದರೆ, ದುರ್ಮಾರ್ಗಕ್ಕೆ, ಪ್ರಲೋಭನೆಗಳಿಗೆ ಮತ್ತು ಅವಿವೇಕತನಗಳಿಗೆ ಅವನೇ ಕಾರಣಕರ್ತನು. ಆಗ ಒಬ್ಬರು ಅಬ್ದುಲ್ಲಾ ಬಿನ್ ಅಮ್ರ್ ರೊಡನೆ ಕೇಳಿದರು: "ಇಷ್ಟೇ ಏನು?" ಅಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದು ಇಷ್ಟೇ ಏನು? ಅವರು “ಹೌದು” ಎಂದು ಉತ್ತರಿಸಿದರು.
ಮಸೀದಿಗೆ ಪ್ರವೇಶಿಸುವವನು ಈ ಪ್ರಾರ್ಥನೆ ಪಠಿಸಿದರೆ, ಶೈತಾನನು ಹೇಳುವನು: "ಮಸೀದಿಗೆ ಪ್ರವೇಶಿಸಿದ ಈ ವ್ಯಕ್ತಿ ಎಲ್ಲಾ ಸಮಯಗಳಲ್ಲೂ ರಾತ್ರಿಯಲ್ಲೂ ಹಗಲಲ್ಲೂ ನನ್ನಿಂದ ರಕ್ಷಿಸಲ್ಪಟ್ಟಿದ್ದಾನೆ."