+ -

عَنْ ابْنِ عَبَّاسٍ رَضِيَ اللَّهُ عَنْهُمَا أَنَّ رَسُولَ اللَّهِ صَلَّى اللَّهُ عَلَيْهِ وَسَلَّمَ قَالَ:
«إنَّ اللَّهَ تَجَاوَزَ لِي عَنْ أُمَّتِي الخَطَأَ وَالنِّسْيَانَ وَمَا اسْتُكْرِهُوا عَلَيْهِ».

[قال النووي: حديث حسن] - [رواه ابن ماجه والبيهقي وغيرهما] - [الأربعون النووية: 39]
المزيــد ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಅಲ್ಲಾಹು ನನಗಾಗಿ, ನನ್ನ ಸಮುದಾಯದ (ಜನರು ಮಾಡುವ) ಪ್ರಮಾದಗಳನ್ನು, ಮರೆವನ್ನು, ಮತ್ತು ಅವರು ಬಲವಂತದಿಂದ ಮಾಡಿರುವುದನ್ನು ಕ್ಷಮಿಸಿದ್ದಾನೆ."

[قال النووي: حديث حسن] - [رواه ابن ماجه والبيهقي وغيرهما] - [الأربعون النووية - 39]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹು ಅವರ ಸಮುದಾಯವನ್ನು ಮೂರು ವಿಷಯಗಳಲ್ಲಿ ಕ್ಷಮಿಸಿದ್ದಾನೆ: ಮೊದಲನೆಯದು: ಪ್ರಮಾದಗಳು. ಅಂದರೆ, ಅವರಿಂದ ಉದ್ದೇಶಪೂರ್ವಕವಲ್ಲದೆ ಸಂಭವಿಸಿದ್ದು. ಅಂದರೆ, ಒಬ್ಬ ಮುಸ್ಲಿಮನಿಗೆ ತನ್ನ ಕ್ರಿಯೆಯಿಂದ ತಾನು ಉದ್ದೇಶಿಸಿದ್ದಲ್ಲದೆ ಬೇರೆಯೇ ಸಂಭವಿಸುವುದು. ಎರಡನೆಯದು: ಮರೆವು. ಅಂದರೆ, ಒಬ್ಬ ಮುಸ್ಲಿಂ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾನೆ. ಆದರೆ ಕಾರ್ಯೋನ್ಮುಖನಾಗುವಾಗ ಅದನ್ನು ಮರೆತುಬಿಡುತ್ತಾನೆ. ಇದರಲ್ಲೂ ಯಾವುದೇ ಪಾಪವಿಲ್ಲ. ಮೂರನೆಯದು: ಬಲವಂತ. ಒಬ್ಬ ಮನುಷ್ಯನಿಗೆ ಅವನು ಮಾಡಲು ಬಯಸದ ಒಂದು ಕಾರ್ಯವನ್ನು ಬಲವಂತದಿಂದ ಮಾಡಿಸುವುದು. ಆದರೆ, ಅವನಿಗೆ ಆ ಬಲವಂತವನ್ನು ತಡೆಯಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಬೇಕು. ಹಾಗಿದ್ದಲ್ಲಿ, ಅವನ ಮೇಲೆ ಯಾವುದೇ ಪಾಪ ಅಥವಾ ದೋಷವಿರುವುದಿಲ್ಲ. ಆದರೆ, ಗಮನಿಸಬೇಕಾದ ವಿಷಯವೇನೆಂದರೆ, ಈ ಹದೀಸ್‌ನಲ್ಲಿ ಹೇಳಿರುವ ವಿಷಯವು ನಿಷಿದ್ಧ ಕಾರ್ಯವನ್ನು ಮಾಡುವುದರಲ್ಲಿ ಮನುಷ್ಯ ಮತ್ತು ಅಲ್ಲಾಹನ ನಡುವೆ ಇರುವ ಪಾಪಕ್ಕೆ ಸಂಬಂಧಿಸಿದೆ. ಆದ್ದರಿಂದ, ಅವನು ಅಲ್ಲಾಹು ಆದೇಶಿಸಿದ ಕಾರ್ಯವನ್ನು ಮರೆವಿನಿಂದ ಬಿಟ್ಟು ಬಿಟ್ಟರೆ, ಅದು ರದ್ದಾಗುವುದಿಲ್ಲ (ಅದನ್ನು ನೆನಪಾದಾಗ ನಿರ್ವಹಿಸಬೇಕು). ಹಾಗೆಯೇ, ಅವನ ಆ ಕಾರ್ಯದಿಂದಾಗಿ (ಮರೆವಿನಿಂದ ಅಥವಾ ಪ್ರಮಾದದಿಂದ) ಒಂದು ಅಪರಾಧವು ಸಂಭವಿಸಿದರೆ, ಅದರಿಂದ ಇನ್ನೊಬ್ಬ ಮನುಷ್ಯನಿಗಿರುವ ಹಕ್ಕು ರದ್ದಾಗುವುದಿಲ್ಲ. ಉದಾಹರಣೆಗೆ, ಪ್ರಮಾದದಿಂದ ಕೊಲೆ ಮಾಡಿದರೆ, ರಕ್ತಪರಿಹಾರ ನೀಡುವುದು ಕಡ್ಡಾಯವಾಗುತ್ತದೆ. ಅಥವಾ ಪ್ರಮಾದದಿಂದ ಒಂದು ವಾಹನವನ್ನು ಹಾಳುಮಾಡಿದರೆ, ಅದಕ್ಕೆ ಪರಿಹಾರ ನೀಡುವುದು ಕಡ್ಡಾಯವಾಗುತ್ತದೆ.

ಹದೀಸಿನ ಪ್ರಯೋಜನಗಳು

  1. ಅಲ್ಲಾಹನಿಗೆ ತನ್ನ ದಾಸರ ಮೇಲಿರುವ ವಿಶಾಲವಾದ ಕರುಣೆ ದಯೆಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ, ಈ ಮೂರು ಪರಿಸ್ಥಿತಿಗಳಲ್ಲಿ ಅವರಿಂದ ಪಾಪ ಸಂಭವಿಸಿದರೆ ಅವನು ಆ ಪಾಪವನ್ನು ತೆಗೆದುಹಾಕುತ್ತಾನೆ.
  2. ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಸಮುದಾಯದ ಮೇಲೆ ಅಲ್ಲಾಹು ತೋರಿದ ಅನುಗ್ರಹವನ್ನು ತಿಳಿಸಲಾಗಿದೆ.
  3. ಪಾಪವನ್ನು ತೆಗೆದುಹಾಕುವುದು ಎಂದರೆ, ನಿಯಮವನ್ನು ಅಥವಾ ಪರಿಹಾರ ನೀಡಬೇಕಾದ ಹೊಣೆಗಾರಿಕೆಯನ್ನು ತೆಗೆದುಹಾಕುವುದು ಎಂದರ್ಥವಲ್ಲ. ಉದಾಹರಣೆಗೆ, ವುಝೂ ಮಾಡಲು ಮರೆತು, ತಾನು ಶುದ್ಧನಾಗಿದ್ದೇನೆಂದು ಭಾವಿಸಿ ನಮಾಝ್ ಮಾಡಿದರೆ, ಅದರಿಂದ ಯಾವುದೇ ದೋಷವಿಲ್ಲ. ಆದರೆ, ವುಝೂ ಮಾಡಿ ನಮಾಝ್ ಅನ್ನು ಪುನಃ ನಿರ್ವಹಿಸುವುದು ಕಡ್ಡಾಯವಾಗುತ್ತದೆ.
  4. ಬಲವಂತದಿಂದ ಮಾಡಲಾದ ಪಾಪವು ರದ್ದಾಗಲು ಕೆಲವು ಷರತ್ತುಗಳು ಅನ್ವಯವಾಗುತ್ತವೆ. ಉದಾಹರಣೆಗೆ, ಬಲವಂತಪಡಿಸುವವನು ತಾನು ಬೆದರಿಕೆ ಹಾಕಿದ್ದನ್ನು ಕಾರ್ಯಗತಗೊಳಿಸಲು ಸಮರ್ಥನಾಗಿರಬೇಕು.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ ಜರ್ಮನ್ ಪಶ್ತೋ الأسامية الألبانية الأمهرية الغوجاراتية القيرقيزية النيبالية اليوروبا الليتوانية الدرية الصربية الطاجيكية الكينياروندا المجرية التشيكية الموري الولوف الأذربيجانية الأوزبكية الأوكرانية الجورجية المقدونية الخميرية
ಅನುವಾದಗಳನ್ನು ತೋರಿಸಿ
ಇನ್ನಷ್ಟು