عَنْ أَنَسِ بْنِ مَالِكٍ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«لَا عَدْوَى، وَلَا طِيَرَةَ، وَيُعْجِبُنِي الْفَأْلُ» قَالَ قِيلَ: وَمَا الْفَأْلُ؟ قَالَ: «الْكَلِمَةُ الطَّيِّبَةُ».
[صحيح] - [متفق عليه] - [صحيح مسلم: 2224]
المزيــد ...
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅದ್ವಾ (ಅಂಟುರೋಗ) ಇಲ್ಲ ಮತ್ತು ತಿಯರ (ಅಪಶಕುನ) ಇಲ್ಲ. ಆದರೆ ಫಅಲ್ (ಶುಭಶಕುನ) ನನಗಿಷ್ಟವಾಗಿದೆ." ಅವರೊಡನೆ ಕೇಳಲಾಯಿತು: "ಶುಭಶಕುನ ಎಂದರೇನು?" ಅವರು ಉತ್ತರಿಸಿದರು: "ಒಳ್ಳೆಯ ಮಾತು."
[صحيح] - [متفق عليه] - [صحيح مسلم - 2224]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹನ ವಿಧಿ-ನಿರ್ಣಯವಿಲ್ಲದೆ ಒಬ್ಬರಿಂದ ಇನ್ನೊಬ್ಬರಿಗೆ ಸ್ವಯಂ ಹರಡುತ್ತದೆ ಎಂದು ಅಜ್ಞಾನಕಾಲದ ಜನರು ನಂಬುತ್ತಿದ್ದ ಅಂಟುರೋಗವೆಂಬುದು ಸುಳ್ಳು. ಹಾಗೆಯೇ, ಅಪಶಕುನವೆಂಬುದು ಸುಳ್ಳು. ಅಪಶಕುನ ಎಂದರೆ ಹಕ್ಕಿ, ಪ್ರಾಣಿ, ಅಂಗವಿಕಲರು, ಕೆಲವು ಸಂಖ್ಯೆಗಳು, ದಿನಗಳು ಮುಂತಾದ ನಾವು ಕಾಣುವ ಅಥವಾ ಕೇಳುವ ಯಾವುದಾದರೂ ವಸ್ತುಗಳನ್ನು ಅಶುಭವೆಂದು ನಂಬುವುದು. ಇಲ್ಲಿ ನಿರ್ದಿಷ್ಟವಾಗಿ "ತೈರ್" (ಹಕ್ಕಿ, ಶಕುನ) ಎಂಬ ಪದವನ್ನು ಪ್ರಸ್ತಾಪಿಸಿದ್ದು ಏಕೆಂದರೆ ಅಜ್ಞಾನಕಾಲದಲ್ಲಿ ಇದು ಪ್ರಖ್ಯಾತವಾಗಿತ್ತು. ಪ್ರಯಾಣ ಅಥವಾ ವ್ಯಾಪಾರದಂತಹ ಚಟುವಟಿಕೆಗಳ ಪ್ರಾರಂಭದಲ್ಲಿ ಜನರು ಹಕ್ಕಿಯನ್ನು ಹಾರಿಸುವ ಮೂಲಕ ಶಕುನ ನೋಡುತ್ತಿದ್ದ ಕಾರಣ ಈ ಹೆಸರು ಬಂದಿದೆ. ಹಕ್ಕಿ ಬಲಕ್ಕೆ ಹಾರಿಹೋದರೆ, ಅವರು ಅದನ್ನು ಶುಭವೆಂದು ಪರಿಗಣಿಸಿ ತಮ್ಮ ಕಾರ್ಯದಲ್ಲಿ ಮುಂದುವರಿಯುತ್ತಿದ್ದರು. ಆದರೆ ಅದು ಎಡಕ್ಕೆ ಹಾರಿಹೋದರೆ, ಅವರು ಅದನ್ನು ಅಶುಭವೆಂದು ಪರಿಗಣಿಸಿ ತಮ್ಮ ಉದ್ದೇಶಿತ ಕಾರ್ಯವನ್ನು ಮೊಟಕುಗೊಳಿಸುತ್ತಿದ್ದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತನಗೆ ಶುಭಶಕುನವೆಂದರೆ ಇಷ್ಟ ಎಂದು ತಿಳಿಸಿದರು. ಶುಭಶಕುನವೆಂದರೆ, ಒಂದು ಒಳ್ಳೆಯ ಮಾತಾಗಿದ್ದು ಅದನ್ನು ಕೇಳಿದಾಗ ಮನುಷ್ಯನಿಗೆ ಸಂತೋಷ ಮತ್ತು ಆನಂದ ಉಂಟಾಗುತ್ತದೆ ಮತ್ತು ಅದು ಅವನು ತನ್ನ ಪರಿಪಾಲಕನ (ಅಲ್ಲಾಹನ) ಬಗ್ಗೆ ಸದ್ಭಾವನೆಯನ್ನು ಇಟ್ಟುಕೊಳ್ಳುವಂತೆ ಮಾಡುತ್ತದೆ.