عَنْ عَبْدِ اللَّهِ بْنِ عُمَرَ رَضِيَ اللَّهُ عَنْهُمَا قَالَ: أَخَذَ رَسُولُ اللَّهِ صَلَّى اللهُ عَلَيْهِ وَسَلَّمَ بِمَنْكِبِي، فَقَالَ:
«كُنْ فِي الدُّنْيَا كَأَنَّكَ غَرِيبٌ أَوْ عَابِرُ سَبِيلٍ»، وَكَانَ ابْنُ عُمَرَ، يَقُولُ: إِذَا أَمْسَيْتَ فَلاَ تَنْتَظِرِ الصَّبَاحَ، وَإِذَا أَصْبَحْتَ فَلاَ تَنْتَظِرِ المَسَاءَ، وَخُذْ مِنْ صِحَّتِكَ لِمَرَضِكَ، وَمِنْ حَيَاتِكَ لِمَوْتِكَ.
[صحيح] - [رواه البخاري] - [صحيح البخاري: 6416]
المزيــد ...
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಹೆಗಲನ್ನು ಹಿಡಿದು ಹೇಳಿದರು:
"ಇಹಲೋಕದಲ್ಲಿ ಒಬ್ಬ ಅನಿವಾಸಿಯಂತೆ ಅಥವಾ ಒಬ್ಬ ದಾರಿಹೋಕನಂತೆ ಜೀವಿಸು." ಇಬ್ನ್ ಉಮರ್ ಹೇಳುತ್ತಿದ್ದರು: "ಸಂಜೆಯಾದರೆ ಬೆಳಗನ್ನು ನಿರೀಕ್ಷಿಸಬೇಡಿ ಮತ್ತು ಬೆಳಗಾದರೆ ಸಂಜೆಯನ್ನು ನಿರೀಕ್ಷಿಸಬೇಡಿ. ಅನಾರೋಗ್ಯಕ್ಕೆ ಮುನ್ನ ಆರೋಗ್ಯವನ್ನು ಮತ್ತು ಸಾಯುವುದಕ್ಕೆ ಮುನ್ನ ಜೀವನವನ್ನು ಸದುಪಯೋಗಪಡಿಸಿ."
[صحيح] - [رواه البخاري] - [صحيح البخاري - 6416]
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಹೆಗಲನ್ನು ಹಿಡಿದು ಹೇಳಿದರು: ನೀನು ಇಹಲೋಕದಲ್ಲಿ , ಆಸರೆಯಾಗಿ ಯಾವುದೇ ವಸತಿಯಿಲ್ಲದ ಮತ್ತು ಸಾಂತ್ವನ ಹೇಳಲು ಯಾರೂ ಜೊತೆಗಾರರಿಲ್ಲದ ಹಾಗೂ ಅಲ್ಲಾಹನಿಂದ ದೂರವಾಗಲು ಕಾರಣರಾಗುವ ಕುಟುಂಬ, ಮಕ್ಕಳು ಹಾಗೂ ಸಂಬಂಧಿಗಳನ್ನು ಊರಲ್ಲಿ ಬಿಟ್ಟು ಪರಿಚಯವಿಲ್ಲದ ಒಂದು ಊರಿಗೆ ಬಂದಿರುವ ಒಬ್ಬ ಅನಿವಾಸಿಯಂತೆ ಜೀವಿಸು. ಅಲ್ಲ, ಒಬ್ಬ ಅನಿವಾಸಿಗಿಂತಲೂ ಹೆಚ್ಚು ಕಠಿಣವಾದ ರೀತಿಯಲ್ಲಿ ಜೀವಿಸು. ಅಂದರೆ ತನ್ನ ಸ್ವದೇಶವನ್ನು ಗುರಿಯಾಗಿಟ್ಟು ದಾರಿಯಲ್ಲಿ ಸಾಗುತ್ತಿರುವ ಒಬ್ಬ ದಾರಿಹೋಕನಂತೆ ಜೀವಿಸು. ಏಕೆಂದರೆ, ಒಬ್ಬ ಅನಿವಾಸಿ ಕೆಲವೊಮ್ಮೆ ವಿದೇಶದಲ್ಲಿ ಶಾಶ್ವತವಾಗಿ ನೆಲೆಸಬಹುದು. ಆದರೆ, ತನ್ನ ಊರನ್ನು ತಲುಪುವ ಉದ್ದೇಶ ಹೊಂದಿರುವ ದಾರಿಹೋಕ ಹಾಗಲ್ಲ. ಏಕೆಂದರೆ, ದಾರಿಹೋಕನು ಶೀಘ್ರವಾಗಿ ಸಾಗುತ್ತಾನೆ, ಎಲ್ಲೂ ನಿಲ್ಲುವುದಿಲ್ಲ ಮತ್ತು ತನ್ನ ಊರನ್ನು ತಲುಪುವ ಬಗ್ಗೆ ಹುರುಪಿನಲ್ಲಿರುತ್ತಾನೆ. ಒಬ್ಬ ಯಾತ್ರಿಕನು ತನ್ನ ಯಾತ್ರೆಗೆ ಅಗತ್ಯವಿರುವುದನ್ನು ಮಾತ್ರ ಆವಶ್ಯಪಡುವಂತೆ, ಸತ್ಯವಿಶ್ವಾಸಿಯು ಕೂಡ ಪರಲೋಕದ ತನ್ನ ಸ್ಥಳವನ್ನು ತಲುಪಲು ಅಗತ್ಯವಿರುವುದನ್ನು ಮಾತ್ರ ಈ ಲೋಕದಿಂದ ಆವಶ್ಯಪಡುತ್ತಾನೆ.
ಇಬ್ನ್ ಉಮರ್ ಈ ಉಪದೇಶದಂತೆ ನಡೆದುಕೊಳ್ಳುತ್ತಿದ್ದರು ಮತ್ತು ಹೇಳುತ್ತಿದ್ದರು: ಬೆಳಗಾದರೆ ಸಂಜೆಯನ್ನು ನಿರೀಕ್ಷಿಸಬೇಡಿ ಮತ್ತು ಸಂಜೆಯಾದರೆ ಬೆಳಗನ್ನು ನಿರೀಕ್ಷಿಸಬೇಡಿ. ನೀವು ನಿಮ್ಮನ್ನು ಸಮಾಧಿಯಲ್ಲಿರುವ ಜನರೊಂದಿಗೆ ಲೆಕ್ಕ ಮಾಡಿರಿ. ಏಕೆಂದರೆ, ಆಯುಷ್ಯವು ಆರೋಗ್ಯ ಮತ್ತು ಅನಾರೋಗ್ಯದಿಂದ ಮುಕ್ತವಾಗಿರುವುದಿಲ್ಲ. ಆದ್ದರಿಂದ, ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಆರೋಗ್ಯದಲ್ಲಿರುವ ನಿಮ್ಮ ಸಮಯವನ್ನು ಸತ್ಕರ್ಮಗಳಿಗಾಗಿ ವಿನಿಯೋಗಿಸಲು ಆತುರಪಡಿರಿ. ನಿಮ್ಮ ಮತ್ತು ಸತ್ಕರ್ಮಗಳ ನಡುವೆ ಅನಾರೋಗ್ಯವು ಅಡ್ಡವಾಗಿ ಬರುವುದಕ್ಕೆ ಮೊದಲು ನಿಮ್ಮ ಆರೋಗ್ಯವನ್ನು ಒಳಿತಿನ ಕಾರ್ಯಗಳಿಗಾಗಿ ಸದುಪಯೋಗಪಡಿಸಿ. ಇಹಲೋಕದಲ್ಲಿ ನಿಮ್ಮ ಜೀವನವನ್ನು ಸದುಪಯೋಗಪಡಿಸಿ ಮತ್ತು ಮರಣಾನಂತರ ನಿಮಗೆ ಪ್ರಯೋಜನ ನೀಡುವ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿರಿ.