عن أبي سعيد الخُدْريِّ رضي الله عنه قال: سمعت رسول الله صلى الله عليه وسلم يقول:
«مَنْ رَأَى مِنْكُمْ مُنْكَرًا فَلْيُغَيِّرْهُ بِيَدِهِ، فَإِنْ لَمْ يَسْتَطِعْ فَبِلِسَانِهِ، فَإِنْ لَمْ يَسْتَطِعْ فَبِقَلْبِهِ، وَذَلِكَ أَضْعَفُ الْإِيمَانِ».
[صحيح] - [رواه مسلم] - [صحيح مسلم: 49]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಿಮ್ಮಲ್ಲಿ ಯಾರಾದರೂ ಒಂದು ಕೆಡುಕನ್ನು ಕಂಡರೆ ಅದನ್ನು ತನ್ನ ಕೈಯಿಂದ ಬದಲಾಯಿಸಲಿ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ. ಅದು ಕೂಡ ಸಾಧ್ಯವಾಗದಿದ್ದರೆ ಹೃದಯದಿಂದ. ಅದು ಅತಿ ದುರ್ಬಲ ವಿಶ್ವಾಸವಾಗಿದೆ."
[صحيح] - [رواه مسلم] - [صحيح مسلم - 49]
ಪ್ರತಿಯೊಬ್ಬರೂ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಡುಕುಗಳನ್ನು ಬದಲಾಯಿಸಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಅಜ್ಞಾಪಿಸುತ್ತಿದ್ದಾರೆ. ಕೆಡುಕುಗಳೆಂದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರು ವಿರೋಧಿಸಿದ ಕಾರ್ಯಗಳು. ಕೆಡುಕುಗಳನ್ನು ಕಂಡರೆ ಅದನ್ನು ಕೈಯಿಂದ ಬದಲಾಯಿಸುವುದು ಕಡ್ಡಾಯವಾಗಿದೆ—ಅದು ಸಾಧ್ಯವಾದರೆ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ ಬದಲಾಯಿಸಬೇಕು. ನಾಲಿಗೆಯಿಂದ ಬದಲಾಯಿಸುವುದು ಎಂದರೆ, ಕೆಡುಕು ಮಾಡುವವನನ್ನು ಅದರಿಂದ ತಡೆಯುವುದು, ಅವನಿಗೆ ಅದರ ಹಾನಿಗಳನ್ನು ವಿವರಿಸಿಕೊಡುವುದು ಮತ್ತು ಆ ಕೆಡುಕಿನ ಬದಲು ಒಳಿತಿನ ಕಡೆಗೆ ಅವನಿಗೆ ಮಾರ್ಗದರ್ಶನ ಮಾಡುವುದು. ಇದು ಕೂಡ ಸಾಧ್ಯವಾಗದಿದ್ದರೆ ಹೃದಯದಿಂದ ಬದಲಾಯಿಸಬೇಕು. ಹೃದಯದಿಂದ ಬದಲಾಯಿಸುವುದು ಎಂದರೆ, ಕೆಡುಕನ್ನು ಅಸಹ್ಯ ಪಡುವುದು ಮತ್ತು ಸಾಧ್ಯವಾದರೆ ಅದನ್ನು (ಕೈಯಿಂದ ಅಥವಾ ನಾಲಿಗೆಯಿಂದ) ಬದಲಾಯಿಸುವೆನೆಂದು ದೃಢನಿರ್ಧಾರ ಮಾಡುವುದು. ಹೃದಯದಿಂದ ಬದಲಾಯಿಸುವುದು ಕೆಡುಕನ್ನು ಬದಲಾಯಿಸುವ ವಿಷಯದಲ್ಲಿ ಸತ್ಯವಿಶ್ವಾಸದ ಅತಿ ಕಡಿಮೆ ಮಟ್ಟವಾಗಿದೆ.