+ -

عَنْ عَائِشَةَ أُمِّ المُؤْمِنينَ رَضِيَ اللهُ عَنْهَا قَالَتْ:
كَانَ رَسُولُ اللهِ صَلَّى اللهُ عَلَيْهِ وَسَلَّمَ إِذَا دَخَلَ الْعَشْرُ أَحْيَا اللَّيْلَ، وَأَيْقَظَ أَهْلَهُ، وَجَدَّ وَشَدَّ الْمِئْزَرَ.

[صحيح] - [متفق عليه] - [صحيح مسلم: 1174]
المزيــد ...

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"(ರಮದಾನ್ ತಿಂಗಳ ಕೊನೆಯ) ಹತ್ತು ದಿನಗಳು ಪ್ರಾರಂಭವಾದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿಯನ್ನು ಜೀವಂತಗೊಳಿಸುತ್ತಿದ್ದರು, ತಮ್ಮ ಕುಟುಂಬವನ್ನು ಎಬ್ಬಿಸುತ್ತಿದ್ದರು, ಪರಿಶ್ರಮಪಡುತ್ತಿದ್ದರು ಮತ್ತು ತಮ್ಮ ಧೋತಿಯನ್ನು ಬಿಗಿಗೊಳಿಸುತ್ತಿದ್ದರು."

[صحيح] - [متفق عليه] - [صحيح مسلم - 1174]

ವಿವರಣೆ

ರಮದಾನ್ ತಿಂಗಳ ಕೊನೆಯ ಹತ್ತು ದಿನಗಳು ಪ್ರಾರಂಭವಾದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಡೀ ರಾತ್ರಿಯನ್ನು ವಿವಿಧ ಸತ್ಕರ್ಮಗಳಿಂದ ಜೀವಂತಗೊಳಿಸುತ್ತಿದ್ದರು. ಅವರು ತಮ್ಮ ಕುಟುಂಬವನ್ನು ನಮಾಝ್ ಮಾಡಲು ಎಬ್ಬಿಸುತ್ತಿದ್ದರು. ಅವರು ಸಾಮಾನ್ಯವಾಗಿ ಮಾಡುತ್ತಿದ್ದಕ್ಕಿಂತ ಹೆಚ್ಚು ಆರಾಧನೆಗಳನ್ನು ಮಾಡುತ್ತಿದ್ದರು. ಅವರು ತಮ್ಮನ್ನು ಸಂಪೂರ್ಣವಾಗಿ ಆರಾಧನೆಗೆ ಅರ್ಪಿಸಿಕೊಳ್ಳುತ್ತಿದ್ದರು ಮತ್ತು ತಮ್ಮ ಪತ್ನಿಯರ ಸಂಪರ್ಕವನ್ನು ಕಡಿದುಕೊಳ್ಳುತ್ತಿದ್ದರು.

ಹದೀಸಿನ ಪ್ರಯೋಜನಗಳು

  1. ಸತ್ಕರ್ಮಗಳನ್ನು ಮಾಡುವ ಮೂಲಕ ಶ್ರೇಷ್ಠ ಸಮಯಗಳನ್ನು ಸದುಪಯೋಗಪಡಿಸಬೇಕೆಂದು ಪ್ರೋತ್ಸಾಹಿಸಲಾಗಿದೆ.
  2. ನವವಿ ಹೇಳಿದರು: "ಈ ಹದೀಸ್‌ನಿಂದ ಅರ್ಥವಾಗುವ ವಿಷಯಗಳೇನೆಂದರೆ: ರಮದಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಆರಾಧನಾ ಕರ್ಮಗಳನ್ನು ಹೆಚ್ಚಿಸುವುದು ಅಪೇಕ್ಷಣೀಯವಾಗಿದೆ ಮತ್ತು ಅದರ ರಾತ್ರಿಗಳನ್ನು ಆರಾಧನಾ ಕರ್ಮಗಳೊಂದಿಗೆ ಜೀವಂತಗೊಳಿಸುವುದು ಅಪೇಕ್ಷಣೀಯವಾಗಿದೆ."
  3. ವ್ಯಕ್ತಿ ತನ್ನ ಕುಟುಂಬದ ಬಗ್ಗೆ ಆಸಕ್ತಿ ಹೊಂದಿರಬೇಕು, ಅವರಿಗೆ ಆರಾಧನೆಯಲ್ಲಿ ತೊಡಗಿಸಿಕೊಳ್ಳಲು ಆದೇಶಿಸಬೇಕು ಮತ್ತು ಅವರ ವಿಷಯದಲ್ಲಿ ತಾಳ್ಮೆಯಿಂದ ಇರಬೇಕು.
  4. ಸತ್ಕರ್ಮಗಳನ್ನು ಮಾಡಲು ದೃಢನಿರ್ಧಾರ, ತಾಳ್ಮೆ ಮತ್ತು ಪರಿಶ್ರಮ ಬೇಕಾಗುತ್ತದೆ.
  5. ನವವಿ ಹೇಳಿದರು: "ಧೋತಿಯನ್ನು ಬಿಗಿಗೊಳಿಸುತ್ತಿದ್ದರು" ಎಂಬ ಮಾತಿನ ಅರ್ಥದ ಬಗ್ಗೆ ವಿದ್ವಾಂಸರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೆಲವರು ಹೀಗೆ ಹೇಳಿದ್ದಾರೆ: ಅದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇತರ ಸಮಯಗಳಲ್ಲಿ ಸಾಮಾನ್ಯವಾಗಿ ನಿರ್ವಹಿಸುತ್ತಿದ್ದ ಆರಾಧನೆಗಿಂತಲೂ ಹೆಚ್ಚು ಆರಾಧನೆಗಳನ್ನು ನಿರ್ವಹಿಸಲು ಪರಿಶ್ರಮಿಸುತ್ತಿದ್ದರೆಂದು ಸೂಚಿಸುತ್ತದೆ. ಇದರ ಅರ್ಥ ಆರಾಧನಾ ಕರ್ಮಗಳಲ್ಲಿ ಶ್ರದ್ಧೆ ತೋರಿಸುವುದು. "ನಾನು ಈ ವಿಷಯಕ್ಕಾಗಿ ನನ್ನ ಧೋತಿಯನ್ನು ಬಿಗಿಗೊಳಿಸಿದೆ" ಎಂದು ಹೇಳಿದರೆ ಅದರ ಅರ್ಥ: ನಾನು ಅದಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದೇನೆ ಮತ್ತು ನಾನು ಅದಕ್ಕೆ ನನ್ನ ಎಲ್ಲಾ ಸಮಯವನ್ನು ಮೀಸಲಿಟ್ಟಿದ್ದೇನೆ ಎಂದಾಗಿದೆ. ಇತರ ಕೆಲವರು ಹೀಗೆ ಹೇಳಿದ್ದಾರೆ: ಅದು ಆರಾಧನಾ ಕರ್ಮಗಳ ಕಡೆಗೆ ಗಮನಹರಿಸಲು ಮಹಿಳೆಯರಿಂದ ದೂರ ಸರಿಯುವುದು ಎಂಬುದನ್ನು ಸೂಚಿಸುವ ಒಂದು ರೂಪಕ ಪ್ರಯೋಗವಾಗಿದೆ."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ الأسامية الهولندية الغوجاراتية الرومانية المجرية الموري الجورجية
ಅನುವಾದಗಳನ್ನು ತೋರಿಸಿ