+ -

عَنِ النُّعْمَانِ بْنِ بَشِيرٍ رَضِيَ اللَّهُ عَنْهُمَا عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«مَثَلُ القَائِمِ عَلَى حُدُودِ اللَّهِ وَالوَاقِعِ فِيهَا، كَمَثَلِ قَوْمٍ اسْتَهَمُوا عَلَى سَفِينَةٍ، فَأَصَابَ بَعْضُهُمْ أَعْلاَهَا وَبَعْضُهُمْ أَسْفَلَهَا، فَكَانَ الَّذِينَ فِي أَسْفَلِهَا إِذَا اسْتَقَوْا مِنَ المَاءِ مَرُّوا عَلَى مَنْ فَوْقَهُمْ، فَقَالُوا: لَوْ أَنَّا خَرَقْنَا فِي نَصِيبِنَا خَرْقًا وَلَمْ نُؤْذِ مَنْ فَوْقَنَا، فَإِنْ يَتْرُكُوهُمْ وَمَا أَرَادُوا هَلَكُوا جَمِيعًا، وَإِنْ أَخَذُوا عَلَى أَيْدِيهِمْ نَجَوْا، وَنَجَوْا جَمِيعًا».

[صحيح] - [رواه البخاري] - [صحيح البخاري: 2493]
المزيــد ...

ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹನ ಹದ್ದುಗಳನ್ನು ಪಾಲಿಸುವವರ ಮತ್ತು ಅವುಗಳನ್ನು ಉಲ್ಲಂಘಿಸುವವರ ಉದಾಹರಣೆಯು ಚೀಟಿ ಹಾಕಿ ಹಡಗಿನಲ್ಲಿ ಪ್ರಯಾಣಿಸಿದ ಕೆಲವು ಜನರಂತೆ. ಅವರಲ್ಲಿ ಕೆಲವರು ಹಡಗಿನ ಮೇಲ್ಭಾಗದಲ್ಲಿ ಮತ್ತು ಕೆಲವರು ಕೆಳಭಾಗದಲ್ಲಿ ಆಸನವನ್ನು ಪಡೆದರು. ಕೆಳಭಾಗದಲ್ಲಿರುವವರಿಗೆ ನೀರಿನ ಅಗತ್ಯ ಬಂದರೆ ಅವರು ಮೇಲ್ಭಾಗಕ್ಕೆ ಬರುತ್ತಿದ್ದರು. ಆದ್ದರಿಂದ ಅವರು ಹೇಳಿದರು: ನಮ್ಮ ಈ ಭಾಗದಲ್ಲಿ ನಾವು ಒಂದು ತೂತು ಕೊರೆದರೆ ನಮಗೆ ಮೇಲ್ಭಾಗದಲ್ಲಿರುವವರಿಗೆ ತೊಂದರೆ ಕೊಡಬೇಕಾಗಿ ಬರುವುದಿಲ್ಲ. ಅವರು (ಮೇಲ್ಭಾಗದಲ್ಲಿರುವವರು) ಇವರ ಉದ್ದೇಶದಂತೆ ನಡೆಯಲು ಇವರನ್ನು ಹಾಗೆಯೇ ಬಿಟ್ಟುಬಿಟ್ಟರೆ ಎಲ್ಲರೂ ನಾಶವಾಗುತ್ತಾರೆ. ಅವರು ಇವರ ಕೈ ಹಿಡಿದು (ತಡೆದರೆ) ಅವರೂ ಉಳಿಯುತ್ತಾರೆ ಮತ್ತು ಇತರರೂ ಉಳಿಯುತ್ತಾರೆ."

[صحيح] - [رواه البخاري] - [صحيح البخاري - 2493]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅಲ್ಲಾಹನ ಹದ್ದುಗಳನ್ನು ಪಾಲಿಸುವವರು, ಅಲ್ಲಾಹನ ಆಜ್ಞೆಗಳಲ್ಲಿ ನೇರವಾಗಿ ನಿಲ್ಲುವವರು ಮತ್ತು ಒಳಿತನ್ನು ಆದೇಶಿಸುತ್ತಲೂ ಕೆಡುಕನ್ನು ವಿರೋಧಿಸುತ್ತಲೂ ಇರುವವರ ಉಪಮೆ ನೀಡಿದ್ದಾರೆ. ಅಲ್ಲಾಹನ ಹದ್ದುಗಳನ್ನು ಉಲ್ಲಂಘಿಸುವವರು, ಒಳಿತನ್ನು ಬಿಟ್ಟು ಕೆಡುಕಿನ ಮಾರ್ಗದಲ್ಲಿ ಸಂಚರಿಸುವವರ ಉದಾಹರಣೆಯನ್ನು ಮತ್ತು ಅದು ಸಮಾಜದ ರಕ್ಷಣೆಯ ಮೇಲೆ ಬೀರುವ ಪರಿಣಾಮವನ್ನು ಹಡಗಿನಲ್ಲಿ ಪ್ರಯಾಣ ಮಾಡುವ ಜನರಿಗೆ ಹೋಲಿಸುತ್ತಿದ್ದಾರೆ. ಹಡಗಿನ ಮೇಲ್ಭಾಗದಲ್ಲಿ ಯಾರು ಕೂರಬೇಕು ಮತ್ತು ಕೆಳಭಾಗದಲ್ಲಿ ಯಾರು ಕೂರಬೇಕೆಂದು ಅವರು ಚೀಟಿ ಹಾಕಿ ನಿರ್ಧರಿಸಿದರು. ಹೀಗೆ ಕೆಲವರು ಮೇಲ್ಭಾಗದಲ್ಲಿ ಮತ್ತು ಕೆಲವರು ಕೆಳಭಾಗದಲ್ಲಿ ಆಸನ ಪಡೆದರು. ಕೆಳಭಾಗದಲ್ಲಿರುವವರಿಗೆ ನೀರು ಸೇದಬೇಕಾಗಿ ಬಂದರೆ ಮೇಲ್ಭಾಗದಲ್ಲಿರುವವರ ಮೂಲಕ ಹಾದು ಹೋಗಬೇಕಾಗುತ್ತಿತ್ತು. ಆಗ ಕೆಳಭಾಗದಲ್ಲಿರುವವರು ಹೇಳಿದರು: "ನಾವು ಕೆಳಭಾಗದ ನಮ್ಮ ಸ್ಥಳದಲ್ಲಿ ಒಂದು ತೂತು ಕೊರೆದು ನೀರು ಪಡೆಯೋಣ. ಇದರಿಂದ ನಮ್ಮ ಮೇಲಿರುವವರಿಗೆ ತೊಂದರೆಯಾಗುವುದು ತಪ್ಪುತ್ತದೆ." ಮೇಲ್ಭಾಗದಲ್ಲಿರುವವರು ಅವರನ್ನು ಹಾಗೆ ಮಾಡಲು ಬಿಟ್ಟುಬಿಟ್ಟರೆ, ಅವರೆಲ್ಲರೂ ಹಡಗಿನಲ್ಲಿ ಮುಳುಗುವುದು ನಿಶ್ಚಿತ. ಆದರೆ ಅವರು ಅದನ್ನು ತಡೆದರೆ, ಎರಡು ಕಡೆಯವರೂ ಜೀವಂತ ಉಳಿಯುತ್ತಾರೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية الموري المالاجاشية الأورومو الولوف الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಸಮಾಜದ ಉಳಿವು ಮತ್ತು ರಕ್ಷಣೆಯಲ್ಲಿ ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು ಮಹತ್ವದ ಪಾತ್ರ ವಹಿಸುತ್ತದೆ.
  2. ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಉದಾಹರಣೆಗಳನ್ನು ಹೇಳುವುದು ಬೋಧನೆಯ ಒಂದು ಶೈಲಿಯಾಗಿದೆ.
  3. ಬಹಿರಂಗವಾಗಿರುವ ಕೆಡುಕನ್ನು ತಡೆಯದೆ ಅಸಡ್ಡೆ ತೋರಿದರೆ, ಅದು ಎಲ್ಲರೂ ಅನುಭವಿಸಬೇಕಾದಂತಹ ಹಾನಿಗೆ ಕಾರಣವಾಗಬಹುದು.
  4. ದುರುಳರು ಭೂಮಿಯಲ್ಲಿ ಕಿಡಿಗೇಡಿತನ ಮಾಡುವುದನ್ನು ತಡೆಯದಿದ್ದರೆ ಅದು ಸಂಪೂರ್ಣ ಸಮಾಜ ನಾಶಕ್ಕೆ ಕಾರಣವಾಗಬಹುದು.
  5. ಕರ್ಮವನ್ನು ಮಾಡುವ ಉದ್ದೇಶವು ಒಳ್ಳೆಯದಾಗಿದ್ದರೂ ಮಾಡುವ ವಿಧಾನ ತಪ್ಪಾಗಿದ್ದರೆ ಅದು ಸತ್ಕರ್ಮವಾಗುವುದಿಲ್ಲ.
  6. ಮುಸ್ಲಿಂ ಸಮಾಜದ ಹೊಣೆಗಾರಿಕೆ ಎಲ್ಲರ ಮೇಲಿದೆ. ಯಾವುದೋ ಒಬ್ಬ ನಿರ್ದಿಷ್ಟ ವ್ಯಕ್ತಿಯ ಮೇಲೆ ಮಾತ್ರವಲ್ಲ.
  7. ಕೆಲವೊಂದು ಜನರು ಮಾಡುವ ತಪ್ಪನ್ನು ಇತರರು ವಿರೋಧಿಸದಿದ್ದರೆ ಸಾಮಾನ್ಯವಾಗಿ ಎಲ್ಲರಿಗೂ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರುತ್ತದೆ.
  8. ಕೆಡುಕಿನ ಜನರು ಕಪಟವಿಶ್ವಾಸಿಗಳಂತೆ ತಮ್ಮ ಕೆಡುಕನ್ನು ಒಳಿತಿನ ವೇಷ ತೊಡಿಸಿ ಸಮಾಜಕ್ಕೆ ತೋರಿಸುತ್ತಾರೆ.