عَنْ أَبِي هُرَيْرَةَ رَضِيَ اللهُ عنه سَمِعْتُ رَسُولَ اللهِ صلى الله عليه وسلم يَقُولُ:
«قَالَ اللهُ تَعَالَى: قَسَمْتُ الصَّلَاةَ بَيْنِي وَبَيْنَ عَبْدِي نِصْفَيْنِ، وَلِعَبْدِي مَا سَأَلَ، فَإِذَا قَالَ الْعَبْدُ: {الْحَمْدُ لِلهِ رَبِّ الْعَالَمِينَ}، قَالَ اللهُ تَعَالَى: حَمِدَنِي عَبْدِي، وَإِذَا قَالَ: {الرَّحْمَنِ الرَّحِيمِ}، قَالَ اللهُ تَعَالَى: أَثْنَى عَلَيَّ عَبْدِي، وَإِذَا قَالَ: {مَالِكِ يَوْمِ الدِّينِ}، قَالَ: مَجَّدَنِي عَبْدِي، -وَقَالَ مَرَّةً: فَوَّضَ إِلَيَّ عَبْدِي-، فَإِذَا قَالَ: {إِيَّاكَ نَعْبُدُ وَإِيَّاكَ نَسْتَعِينُ}، قَالَ: هَذَا بَيْنِي وَبَيْنَ عَبْدِي وَلِعَبْدِي مَا سَأَلَ، فَإِذَا قَالَ: {اهْدِنَا الصِّرَاطَ الْمُسْتَقِيمَ، صِرَاطَ الَّذِينَ أَنْعَمْتَ عَلَيْهِمْ غَيْرِ الْمَغْضُوبِ عَلَيْهِمْ وَلا الضَّالِّينَ}، قَالَ: هَذَا لِعَبْدِي وَلِعَبْدِي مَا سَأَلَ».
[صحيح] - [رواه مسلم] - [صحيح مسلم: 395]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಅಲ್ಲಾಹು ಹೇಳುತ್ತಾನೆ: ನಾನು ನಮಾಝನ್ನು ನನ್ನ ಮತ್ತು ನನ್ನ ದಾಸನ ನಡುವೆ ಎರಡು ಭಾಗಗಳಾಗಿ ವಿಭಜಿಸಿದ್ದೇನೆ. ನನ್ನ ದಾಸನಿಗೆ ಅವನು ಬೇಡುವುದೆಲ್ಲವೂ ಇದೆ. ಅವನು ‘ಅಲ್‍ಹಮ್ದುಲಿಲ್ಲಾಹಿ ರಬ್ಬಿಲ್ ಆಲಮೀನ್’ ಎಂದು ಹೇಳುವಾಗ ಅಲ್ಲಾಹು, 'ನನ್ನ ದಾಸ ನನ್ನನ್ನು ಸ್ತುತಿಸಿದ್ದಾನೆ' ಎಂದು ಹೇಳುತ್ತಾನೆ. ಅವನು ‘ಅರ್‍ರಹ್ಮಾನಿರ್‍ರಹೀಮ್’ ಎಂದು ಹೇಳುವಾಗ ಅಲ್ಲಾಹು, 'ನನ್ನ ದಾಸ ನನ್ನನ್ನು ಪ್ರಶಂಸಿಸಿದ್ದಾನೆ' ಎಂದು ಹೇಳುತ್ತಾನೆ. ಅವನು ‘ಮಾಲಿಕಿ ಯೌಮಿದ್ದೀನ್’ ಎಂದು ಹೇಳುವಾಗ ಅಲ್ಲಾಹು, 'ನನ್ನ ದಾಸ ನನ್ನನ್ನು ಮಹತ್ವಪಡಿಸಿದ್ದಾನೆ' ಎಂದು ಹೇಳುತ್ತಾನೆ. ಇನ್ನೊಂದು ಬಾರಿ ಅವನು ಹೇಳುತ್ತಾನೆ: 'ನನ್ನ ದಾಸ (ಅವನ ಎಲ್ಲ ವಿಷಯಗಳನ್ನು) ನನಗೆ ಅರ್ಪಿಸಿದ್ದಾನೆ.' ಅವನು ‘ಇಯ್ಯಾಕ ನಅ್‌ಬುದು ವಇಯ್ಯಾಕ ನಸ್ತಾಈನ್’ ಎಂದು ಹೇಳುವಾಗ ಅಲ್ಲಾಹು, 'ಇದು ನನ್ನ ಮತ್ತು ನನ್ನ ದಾಸನ ನಡುವೆಯಿರುವ ವಿಷಯ. ನನ್ನ ದಾಸನಿಗೆ ಅವನು ಬೇಡುವುದೆಲ್ಲವೂ ಇದೆ' ಎಂದು ಹೇಳುತ್ತಾನೆ. ಅವನು ‘ಇಹ್ದಿನ ಸ್ಸಿರಾತಲ್ ಮುಸ್ತಕೀಂ, ಸಿರಾತಲ್ಲದೀನ ಅನ್‍ಅಮ್ತ ಅಲೈಹಿಂ ಗೈರಿಲ್ ಮಗ್‍ದೂಬಿ ಅಲೈಹಿಂ ವಲದ್ದಾಲ್ಲೀನ್’ ಎಂದು ಹೇಳುವಾಗ ಅಲ್ಲಾಹು, 'ಇದು ನನ್ನ ದಾಸನಿಗೆ. ನನ್ನ ದಾಸನಿಗೆ ಅವನು ಬೇಡುವುದೆಲ್ಲವೂ ಇದೆ' ಎಂದು ಹೇಳುತ್ತಾನೆ."
[صحيح] - [رواه مسلم] - [صحيح مسلم - 395]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಕುದ್ಸಿ ಹದೀಸ್‌ನಲ್ಲಿ ಹೀಗೆ ಹೇಳುತ್ತಾನೆ: ನಮಾಝಿನಲ್ಲಿ ಪಠಿಸಲಾಗುವ ಸೂರ ಫಾತಿಹವನ್ನು ನಾನು ನನ್ನ ಮತ್ತು ನನ್ನ ದಾಸನ ನಡುವೆ ಎರಡು ಭಾಗಗಳಾಗಿ ವಿಭಜಿಸಿದ್ದೇನೆ. ಒಂದು ಭಾಗ ನನಗೆ ಮತ್ತು ಇನ್ನೊಂದು ಭಾಗ ನನ್ನ ದಾಸನಿಗೆ.
ಮೊದಲನೆಯ ಭಾಗವು ಸ್ತುತಿ, ಪ್ರಶಂಸೆ ಮತ್ತು ಅಲ್ಲಾಹನ ಮಹಿಮೆಯನ್ನು ಒಳಗೊಂಡಿದ್ದು ಅದಕ್ಕಾಗಿ ನಾನು ನನ್ನ ದಾಸನಿಗೆ ಅತ್ಯುತ್ತಮ ಪ್ರತಿಫಲ ನೀಡುತ್ತೇನೆ.
ಎರಡನೆಯ ಭಾಗವು ವಿನಮ್ರತೆ ಮತ್ತು ಪ್ರಾರ್ಥನೆಯನ್ನು ಒಳಗೊಂಡಿದ್ದು, ನಾನು ಅವನ ಪ್ರಾರ್ಥನೆಗೆ ಉತ್ತರಿಸುತ್ತೇನೆ ಮತ್ತು ಅವನ ಬೇಡಿಕೆಯನ್ನು ಈಡೇರಿಸುತ್ತೇನೆ.
ನಮಾಝ್ ಮಾಡುವವರು "ಅಲ್‍ಹಮ್ದುಲಿಲ್ಲಾಹಿ ರಬ್ಬಿಲ್ ಆಲಮೀನ್" ಎಂದು ಹೇಳುವಾಗ, ಅಲ್ಲಾಹು "ನನ್ನ ದಾಸ ನನ್ನನ್ನು ಸ್ತುತಿಸಿದ್ದಾನೆ" ಎಂದು ಹೇಳುತ್ತಾನೆ. ಅವರು "ಅರ್‍ರಹ್ಮಾನಿರ್‍ರಹೀಮ್" ಎಂದು ಹೇಳುವಾಗ, ಅಲ್ಲಾಹು "ನನ್ನ ದಾಸ ನನ್ನನ್ನು ಸ್ತುತಿಸಿ ಪ್ರಶಂಸಿದ್ದಾನೆ ಮತ್ತು ನಾನು ನನ್ನ ಸೃಷ್ಟಿಗಳಿಗೆ ತೋರಿದ ಅನುಗ್ರಹಗಳೆಲ್ಲವನ್ನೂ ಒಪ್ಪಿಕೊಂಡಿದ್ದಾನೆ" ಎಂದು ಹೇಳುತ್ತಾನೆ. ಅವನು "ಮಾಲಿಕಿ ಯೌಮಿದ್ದೀನ್" ಎಂದು ಹೇಳುವಾಗ, ಅಲ್ಲಾಹು "ನನ್ನ ದಾಸ ನನ್ನನ್ನು ಮಹತ್ವಪಡಿಸಿದ್ದಾನೆ" ಎಂದು ಹೇಳುತ್ತಾನೆ. ಇದು ಅತಿದೊಡ್ಡ ಗೌರವವಾಗಿದೆ.
ಅವನು "ಇಯ್ಯಾಕ ನಅ್‌ಬುದು ವಇಯ್ಯಾಕ ನಸ್ತಾಈನ್" ಎಂದು ಹೇಳುವಾಗ, ಅಲ್ಲಾಹು "ಇದು ನನ್ನ ಮತ್ತು ನನ್ನ ದಾಸನ ನಡುವೆಯಿರುವ ವಿಷಯ" ಎಂದು ಹೇಳುತ್ತಾನೆ.
ಈ ವಚನದ ಮೊದಲಾರ್ಧ ಭಾಗವಾದ "ಇಯ್ಯಾಕ ನಅ್‌ಬುದು" ಅಲ್ಲಾಹನಿಗಾಗಿದೆ. ಇದು ಅಲ್ಲಾಹನ ದೈವಿಕತೆಯನ್ನು ಅಂಗೀಕರಿಸಿ ಅವನನ್ನು ಆರಾಧಿಸುವ ಮೂಲಕ ಅವನಿಗೆ ಉತ್ತರಿಸುವುದಾಗಿದೆ. ಇದರಿಂದ ಅಲ್ಲಾಹನಿಗಿರುವ ಈ ಅರ್ಧಭಾಗವು ಪೂರ್ಣವಾಗುತ್ತದೆ.
ವಚನದ ದ್ವಿತೀಯಾರ್ಧ ಭಾಗವಾದ "ಇಯ್ಯಾಕ ನಸ್ತಈನ್" ದಾಸನಿಗಿರುವುದಾಗಿದೆ. ಇದು ಅಲ್ಲಾಹನಿಂದ ಸಹಾಯವನ್ನು ಬೇಡುವುದು ಮತ್ತು ಸಹಾಯ ಮಾಡುತ್ತೇನೆಂಬ ಅವನ ವಾಗ್ದಾನವನ್ನು ಒಳಗೊಂಡಿದೆ.
ದಾಸನು "ಇಹ್ದಿನ ಸ್ಸಿರಾತಲ್ ಮುಸ್ತಕೀಂ, ಸಿರಾತಲ್ಲದೀನ ಅನ್‍ಅಮ್ತ ಅಲೈಹಿಂ ಗೈರಿಲ್ ಮಗ್‍ದೂಬಿ ಅಲೈಹಿಂ ವಲದ್ದಾಲ್ಲೀನ್" ಎಂದು ಹೇಳುವಾಗ*, ಅಲ್ಲಾಹು "ಇದು ನನ್ನ ದಾಸನ ವಿನಮ್ರತೆ ಮತ್ತು ಪ್ರಾರ್ಥನೆಯಾಗಿದೆ. ನನ್ನ ದಾಸನಿಗೆ ಅವನು ಬೇಡಿದ್ದೆಲ್ಲವೂ ಇದೆ. ನಾನು ಅವನ ಪ್ರಾರ್ಥನೆಗೆ ಉತ್ತರ ನೀಡುತ್ತೇನೆ" ಎಂದು ಹೇಳುತ್ತಾನೆ.