+ -

عَنِ النَّوَّاسِ بْنِ سِمْعَانَ الْأَنْصَارِيِّ رضي الله عنه قَالَ:
سَأَلْتُ رَسُولَ اللهِ صَلَّى اللهُ عَلَيْهِ وَسَلَّمَ عَنِ الْبِرِّ وَالْإِثْمِ، فَقَالَ: «الْبِرُّ حُسْنُ الْخُلُقِ، وَالْإِثْمُ مَا حَاكَ فِي صَدْرِكَ، وَكَرِهْتَ أَنْ يَطَّلِعَ عَلَيْهِ النَّاسُ».

[صحيح] - [رواه مسلم] - [صحيح مسلم: 2553]
المزيــد ...

ನವ್ವಾಸ್ ಬಿನ್ ಸಮ್‌ಆನ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುಣ್ಯ ಮತ್ತು ಪಾಪದ ಬಗ್ಗೆ ಕೇಳಿದೆ. ಅವರು ಉತ್ತರಿಸಿದರು: "ಪುಣ್ಯವೆಂದರೆ ಅತ್ಯುತ್ತಮ ನಡವಳಿಕೆ. ಪಾಪವೆಂದರೆ ನಿನ್ನ ಎದೆಯಲ್ಲಿ ಕಸಿವಿಸಿ ಉಂಟು ಮಾಡುವ ಮತ್ತು ಜನರು ಅದನ್ನು ತಿಳಿದುಕೊಳ್ಳುವುದನ್ನು ನೀನು ಇಷ್ಟಪಡದ ವಿಷಯ."

[صحيح] - [رواه مسلم] - [صحيح مسلم - 2553]

ವಿವರಣೆ

ಪುಣ್ಯ ಮತ್ತು ಪಾಪದ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: ಅವರು ಉತ್ತರಿಸಿದರು:
ಪುಣ್ಯದ ಶ್ರೇಷ್ಠ ಲಕ್ಷಣಗಳು ಏನೆಂದರೆ, ಭಯಭಕ್ತಿಯ ಮೂಲಕ ಅಲ್ಲಾಹನೊಡನೆ ಉತ್ತಮ ನಡವಳಿಕೆಯನ್ನು ತೋರುವುದು, ನೋವನ್ನು ಸಹಿಸಿಕೊಳ್ಳುವ ಮೂಲಕ ಮನುಷ್ಯರೊಡನೆ ಉತ್ತಮ ನಡವಳಿಕೆ ತೋರುವುದು, ಕೋಪ ಕಡಿಮೆ ಮಾಡುವುದು, ಮುಖದಲ್ಲಿ ನಗು ಸೂಸುವುದು, ಮಧುರವಾಗಿ ಮಾತನಾಡುವುದು, ಸಂಬಂಧ ಬೆಸೆಯುವುದು, ವಿಧೇಯವಾಗಿ ನಡೆದುಕೊಳ್ಳುವುದು, ಅನುಕಂಪ ತೋರುವುದು, ಉತ್ತಮವಾಗಿ ವರ್ತಿಸುವುದು ಮತ್ತು ಸ್ನೇಹ ಮಾಡುವುದು.
ಪಾಪವೆಂದರೆ, ಮನಸ್ಸಿನಲ್ಲಿ ಚಡಪಡಿಕೆ ಉಂಟುಮಾಡುವ ಗೊಂದಲಗಳು ಮತ್ತು ಎದೆಯು ಅದಕ್ಕೆ ತೆರೆದುಕೊಳ್ಳಲು ಹಿಂಜರಿಯುವಂತದ್ದು. ಅದರಿಂದಾಗಿ ಹೃದಯದಲ್ಲಿ ಸಂದೇಹ ಉಂಟಾಗುತ್ತದೆ ಮತ್ತು ಅದು ಪಾಪವಾಗಿರುವುದರಿಂದ ಭಯ ಮೂಡುತ್ತದೆ. ಅದು ನೀಚವಾಗಿರುವುದರಿಂದ ಅದನ್ನು ಶ್ರೇಷ್ಠ ಮತ್ತು ಮಾದರಿಯೋಗ್ಯ ಜನರಿಗೆ ತಿಳಿಯಲು ನೀವು ಬಯಸುವುದಿಲ್ಲ. ಏಕೆಂದರೆ ಮನಸ್ಸು ಸ್ವಾಭಾವಿಕವಾಗಿ ಒಳಿತನ್ನು ಮಾತ್ರ ಜನರು ನೋಡಬೇಕೆಂದು ಬಯಸುತ್ತದೆ. ಅದು ತನ್ನ ಕೆಲವು ಕೆಲಸಗಳನ್ನು ಇತರರು ತಿಳಿಯಬಾರದೆಂದು ಬಯಸುತ್ತಿದ್ದರೆ, ಆ ಕೆಲಸಗಳು ಪಾಪಗಳಾಗಿದ್ದು ಅವುಗಳಲ್ಲಿ ಯಾವುದೇ ಒಳಿತಿಲ್ಲ.

ಹದೀಸಿನ ಪ್ರಯೋಜನಗಳು

  1. ಉತ್ತಮ ಗುಣನಡತೆಯನ್ನು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಉತ್ತಮ ನಡವಳಿಕೆಯು ಪುಣ್ಯದ ಶ್ರೇಷ್ಠ ಗುಣಲಕ್ಷಣಗಳಲ್ಲಿ ಒಂದಾಗಿದೆ.
  2. ಸತ್ಯ ಮತ್ತು ಸುಳ್ಳು ಸತ್ಯವಿಶ್ವಾಸಿಗೆ ಗೊಂದಲವನ್ನುಂಟುಮಾಡುವುದಿಲ್ಲ. ಬದಲಿಗೆ ಅವನು ತನ್ನ ಹೃದಯದಲ್ಲಿರುವ ಬೆಳಕಿನಿಂದ ಸತ್ಯವನ್ನು ಅರಿಯುತ್ತಾನೆ, ಮತ್ತು ಸುಳ್ಳಿನಿಂದ ದೂರವಾಗುತ್ತಾನೆ ಹಾಗೂ ಅದನ್ನು ನಿರಾಕರಿಸುತ್ತಾನೆ.
  3. ಹೃದಯದಲ್ಲಿ ಆತಂಕ ಮತ್ತು ಚಡಪಡಿಕೆ ಉಂಟಾಗುವುದು ಮತ್ತು ಜನರು ಅದನ್ನು ತಿಳಿಯಬಾರದೆಂದು ಬಯಸುವುದು ಪಾಪದ ಚಿಹ್ನೆಗಳಲ್ಲಿ ಒಂದಾಗಿದೆ.
  4. ಸನದಿ ಹೇಳಿದರು: "ಇದು (ಹದೀಸಿನಲ್ಲಿ ಹೇಳಲಾದ ಪಾಪ-ಪುಣ್ಯಗಳು) ಜನರು ನಿರ್ದಿಷ್ಟವಾಗಿ ಸರಿಯೋ ತಪ್ಪೋ ಎಂದು ತಿಳಿದಿರದ ಸಂದೇಹಾತ್ಮಕ ವಿಷಯಗಳ ಬಗ್ಗೆಯಾಗಿದೆ. ಇಲ್ಲದಿದ್ದರೆ, ಶರಿಯತ್‌ನಲ್ಲಿ ಆದೇಶಿಸಲಾದ ಕಾರ್ಯಗಳು ಮತ್ತು ಅವುಗಳಿಗೆ ವಿರುದ್ಧವಾಗಿ ಯಾವುದೇ ಪುರಾವೆಗಳು ಇಲ್ಲದಿದ್ದರೆ, ಅವೆಲ್ಲವೂ ಪುಣ್ಯವಾಗಿವೆ. ಅದೇ ರೀತಿ ಶರಿಯತ್ ನಿಷೇಧಿಸಿದ ಕಾರ್ಯಗಳು ಪಾಪಗಳಾಗಿವೆ. ಇವುಗಳಿಗೆ ಸಂಬಂಧಿಸಿ ಹೃದಯದೊಡನೆ ವಿಧಿ ಕೇಳಬೇಕಾದ ಅಥವಾ ಸಮಾಧಾನ ಉಂಟಾಗುತ್ತದೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ.
  5. ಹದೀಸಿನಲ್ಲಿ ಹೇಳಲಾಗಿರುವುದು ಸ್ವಸ್ಥವಾದ ಸಹಜ ಮನೋಧರ್ಮವನ್ನು ಹೊಂದಿರುವವರ ಬಗ್ಗೆಯಾಗಿದೆಯೇ ವಿನಾ ಸ್ವೇಚ್ಛೆಗೆ ದಾಸರಾಗಿ ತಮ್ಮ ಮನಸ್ಸು ಹೇಳಿದ್ದೇ ಪುಣ್ಯ ಮತ್ತು ತಮ್ಮ ಮನಸ್ಸು ಹೇಳಿದ್ದೇ ಪಾಪ ಎಂದು ನಿರ್ಧರಿಸುವ ಬುಡಮೇಲಾದ ಹೃದಯಗಳಿರುವವರ ಬಗ್ಗೆಯಲ್ಲ."
  6. ತೀಬಿ ಹೇಳಿದರು: "ಹೀಗೆ ಹೇಳಲಾಗುತ್ತದೆ: ಹದೀಸಿನಲ್ಲಿ ಪುಣ್ಯವನ್ನು ವಿವಿಧ ಅರ್ಥಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಕೆಲವು ಸ್ಥಳಗಳಲ್ಲಿ (ಪುಣ್ಯ ಎಂದರೆ) ಮನಸ್ಸು ಮತ್ತು ಹೃದಯವು ಸಮಾಧಾನ ಪಡೆಯುವ ವಿಷಯವೆಂದು ವ್ಯಾಖ್ಯಾನಿಸಲಾಗಿದೆ. ಕೆಲವು ಸ್ಥಳಗಳಲ್ಲಿ ನಂಬಿಕೆಯೆಂದು ವ್ಯಾಖ್ಯಾನಿಸಲಾಗಿದೆ. ಕೆಲವು ಸ್ಥಳದಲ್ಲಿ ಅಲ್ಲಾಹನಿಗೆ ಹತ್ತಿರಗೊಳಿಸುವ ಕಾರ್ಯವೆಂದು ವ್ಯಾಖ್ಯಾನಿಸಲಾಗಿದೆ. ಇಲ್ಲಿ ಅದನ್ನು ಉತ್ತಮ ನಡವಳಿಕೆಯೆಂದು ವ್ಯಾಖ್ಯಾನಿಸಲಾಗಿದೆ. ಉತ್ತಮ ನಡವಳಿಕೆಯನ್ನು ನೋವನ್ನು ಸಹಿಸಿಕೊಳ್ಳುವುದು ಮತ್ತು ಕೋಪ ಕಡಿಮೆ ಮಾಡುವುದು, ಮುಖದಲ್ಲಿ ನಗು ಬೀರುವುದು, ಮಧುರವಾಗಿ ಮಾತನಾಡುವುದು ಎಂದು ವ್ಯಾಖ್ಯಾನಿಸಲಾಗಿದೆ. ಇವೆಲ್ಲವೂ ಹೆಚ್ಚು-ಕಡಿಮೆ ಒಂದು ಅರ್ಥವನ್ನು ಹೊಂದಿವೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الهولندية الغوجاراتية النيبالية الرومانية المجرية الموري الأوكرانية الجورجية المقدونية
ಅನುವಾದಗಳನ್ನು ತೋರಿಸಿ
ಇನ್ನಷ್ಟು