عَنْ عَبْدِ اللهِ بنِ مَسعُودٍ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«عَلَيْكُمْ بِالصِّدْقِ، فَإِنَّ الصِّدْقَ يَهْدِي إِلَى الْبِرِّ، وَإِنَّ الْبِرَّ يَهْدِي إِلَى الْجَنَّةِ، وَمَا يَزَالُ الرَّجُلُ يَصْدُقُ وَيَتَحَرَّى الصِّدْقَ حَتَّى يُكْتَبَ عِنْدَ اللهِ صِدِّيقًا، وَإِيَّاكُمْ وَالْكَذِبَ، فَإِنَّ الْكَذِبَ يَهْدِي إِلَى الْفُجُورِ، وَإِنَّ الْفُجُورَ يَهْدِي إِلَى النَّارِ، وَمَا يَزَالُ الرَّجُلُ يَكْذِبُ وَيَتَحَرَّى الْكَذِبَ حَتَّى يُكْتَبَ عِنْدَ اللهِ كَذَّابًا».
[صحيح] - [متفق عليه] - [صحيح مسلم: 2607]
المزيــد ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸತ್ಯಕ್ಕೆ ನಿಷ್ಠರಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸತ್ಯವು ಒಳಿತಿಗೆ ಒಯ್ಯುತ್ತದೆ ಮತ್ತು ಒಳಿತು ಸ್ವರ್ಗಕ್ಕೆ ಒಯ್ಯುತ್ತದೆ. ಒಬ್ಬ ಮನುಷ್ಯನು ಅಲ್ಲಾಹನ ಬಳಿ ಅತ್ಯಂತ ಸತ್ಯವಂತನೆಂದು ದಾಖಲಿಸಲ್ಪಡುವವರೆಗೂ ಸತ್ಯವನ್ನು ಹೇಳುತ್ತಲೇ ಇರುತ್ತಾನೆ ಮತ್ತು ಸತ್ಯಕ್ಕಾಗಿ ಪರಿಶ್ರಮಿಸುತ್ತಲೇ ಇರುತ್ತಾನೆ. ಸುಳ್ಳಿನ ಬಗ್ಗೆ ಎಚ್ಚರವಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸುಳ್ಳು ಕೆಡುಕಿಗೆ ಒಯ್ಯುತ್ತದೆ ಮತ್ತು ಕೆಡುಕು ನರಕಕ್ಕೆ ಒಯ್ಯುತ್ತದೆ. ಒಬ್ಬ ಮನುಷ್ಯನು ಅಲ್ಲಾಹನ ಬಳಿ ಅತ್ಯಂತ ಸುಳ್ಳು ಹೇಳುವವನೆಂದು ದಾಖಲಿಸಲ್ಪಡುವವರೆಗೂ ಸುಳ್ಳು ಹೇಳುತ್ತಲೇ ಇರುತ್ತಾನೆ ಮತ್ತು ಸುಳ್ಳಿಗಾಗಿ ಪರಿಶ್ರಮಿಸುತ್ತಲೇ ಇರುತ್ತಾನೆ."
[صحيح] - [متفق عليه] - [صحيح مسلم - 2607]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯ ಹೇಳಲು ಆದೇಶಿಸಿದ್ದಾರೆ ಮತ್ತು ಸತ್ಯದೊಂದಿಗೆ ಇರುವ ನಿಷ್ಠೆಯು ನಿರಂತರವಾದ ಸತ್ಕರ್ಮಗಳಿಗೆ ತಲುಪಿಸುತ್ತದೆ ಮತ್ತು ನಿರಂತರವಾಗಿ ಸತ್ಕರ್ಮಗಳನ್ನು ಮಾಡುವುದರಿಂದ ಮನುಷ್ಯನು ಸ್ವರ್ಗಕ್ಕೆ ತಲುಪುತ್ತಾನೆ ಎಂದು ತಿಳಿಸಿದ್ದಾರೆ. ಅವನು ಏಕಾಂತದಲ್ಲೂ ಬಹಿರಂಗದಲ್ಲೂ ಪದೇ ಪದೇ ಸತ್ಯವನ್ನೇ ಹೇಳುತ್ತಿದ್ದರೆ ಅತ್ಯಂತ ಸತ್ಯವಂತ ಎಂಬ ಪದವಿಗೆ ಅರ್ಹನಾಗುತ್ತಾನೆ. ಅದು ಸತ್ಯವಂತಿಕೆಯ ಪರಮೋಚ್ಛ ಸ್ಥಿತಿಯಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಸುಳ್ಳು ಹಾಗೂ ನಿಷ್ಫಲ ಮಾತುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ, ಅದು ನೇರ ಮಾರ್ಗದಿಂದ ತಪ್ಪಿ ಹೋಗಲು ಮತ್ತು ಕೆಡುಕು ಹಾಗೂ ಪಾಪ ಕೃತ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ. ನಂತರ ಅದು ಅವನನ್ನು ನರಕಕ್ಕೆ ತಲುಪಿಸುತ್ತದೆ. ಅವನು ಅಲ್ಲಾಹನ ಬಳಿ ಸುಳ್ಳುಗಾರನೆಂದು ದಾಖಲಿಸಲ್ಪಡುವವರೆಗೂ ಸುಳ್ಳು ಹೇಳುವುದನ್ನು ಹೆಚ್ಚಿಸುತ್ತಲೇ ಇರುತ್ತಾನೆ.