عَنْ أَبِي هُرَيْرَةَ رضي الله عنه أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«حَقُّ الْمُسْلِمِ عَلَى الْمُسْلِمِ سِتٌّ» قِيلَ: مَا هُنَّ يَا رَسُولَ اللهِ؟، قَالَ: «إِذَا لَقِيتَهُ فَسَلِّمْ عَلَيْهِ، وَإِذَا دَعَاكَ فَأَجِبْهُ، وَإِذَا اسْتَنْصَحَكَ فَانْصَحْ لَهُ، وَإِذَا عَطَسَ فَحَمِدَ اللهَ فَسَمِّتْهُ، وَإِذَا مَرِضَ فَعُدْهُ وَإِذَا مَاتَ فَاتَّبِعْهُ».
[صحيح] - [رواه مسلم] - [صحيح مسلم: 2162]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲೆ ಆರು ಹಕ್ಕುಗಳಿವೆ." ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು ಎಂದು ಕೇಳಲಾಯಿತು. ಅವರು ಉತ್ತರಿಸಿದರು: "ನೀನು ಅವನನ್ನು ಭೇಟಿಯಾದರೆ, ಅವನಿಗೆ ಸಲಾಂ ಹೇಳುವುದು; ಅವನು ನಿನ್ನನ್ನು ಆಹ್ವಾನಿಸಿದರೆ, ಅವನ ಆಹ್ವಾನವನ್ನು ಸ್ವೀಕರಿಸುವುದು; ಅವನು ನಿನ್ನಲ್ಲಿ ಸಲಹೆ ಕೇಳಿದರೆ, ಅವನಿಗೆ ಸಲಹೆ ನೀಡುವುದು; ಅವನು ಸೀನಿದ ನಂತರ ಅಲ್ಲಾಹನನ್ನು ಸ್ತುತಿಸಿದರೆ, ಅವನಿಗೆ ತಸ್ಮೀತ್ ಮಾಡುವುದು; ಅವನು ಅನಾರೋಗ್ಯಕ್ಕೆ ಒಳಗಾದಾಗ, ಅವನನ್ನು ಸಂದರ್ಶಿಸುವುದು; ಮತ್ತು ಅವನು ನಿಧನನಾದರೆ ಅವನ ಮೃತದೇಹವನ್ನು ಹಿಂಬಾಲಿಸುವುದು."
[صحيح] - [رواه مسلم] - [صحيح مسلم - 2162]
ಪ್ರವಾದಿಯವರು ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲೆ ಆರು ಹಕ್ಕುಬಾಧ್ಯತೆಗಳಿವೆ: ಮೊದಲನೆಯದು: ಅವನನ್ನು ಭೇಟಿಯಾದಾಗ "ಅಸ್ಸಲಾಂ ಅಲೈಕುಂ" (ನಿನ್ನ ಮೇಲೆ ಶಾಂತಿ ಇರಲಿ) ಎಂದು ಸಲಾಂ ಹೇಳುವುದು, ಮತ್ತು ಅವನು ಅದಕ್ಕೆ "ವಅಲೈಕುಂ ಸಲಾಂ" (ನಿನ್ನ ಮೇಲೂ ಶಾಂತಿ ಇರಲಿ) ಎಂದು ಹೇಳುವ ಮೂಲಕ ಉತ್ತರಿಸುವುದು. ಎರಡನೆಯದು: ಅವನು ನಿನ್ನನ್ನು ಔತಣಕೂಟಕ್ಕೆ ಅಥವಾ ಇತರ ಶುಭ ಸಮಾರಂಭಕ್ಕೆ ಆಹ್ವಾನಿಸಿದರೆ ಅವನ ಆಹ್ವಾನವನ್ನು ಸ್ವೀಕರಿಸುವುದು. ಮೂರನೆಯದು: ಅವನು ಸಲಹೆ ಕೇಳಿದರೆ ಅವನಿಗೆ ಸಲಹೆ ನೀಡುವುದು. ಸಲಹೆ ನೀಡುವಾಗ ಉತ್ಪ್ರೇಕ್ಷೆ ಅಥವಾ ವಂಚನೆ ಇರಬಾರದು. ನಾಲ್ಕನೆಯದು: ಅವನು ಸೀನಿದ ನಂತರ "ಅಲ್‌ಹಮ್ದುಲಿಲ್ಲಾಹ್" (ಅಲ್ಲಾಹನಿಗೆ ಸ್ತುತಿ) ಎಂದು ಹೇಳಿದರೆ, ಯರ್ಹಮುಕಲ್ಲಾಹ್ (ಅಲ್ಲಾಹು ನಿನಗೆ ದಯೆ ತೋರಲಿ) ಎಂದು ಹೇಳುವ ಮೂಲಕ ಅವನಿಗೆ ತಶ್ಮೀತ್ ಮಾಡುವುದು. ಅವನು ಅದಕ್ಕೆ "ಯಹ್‌ದೀಕುಮುಲ್ಲಾಹು ವಯುಸ್ಲಿಹು ಬಾಲಕುಮ್" (ಅಲ್ಲಾಹನು ನಿಮಗೆ ಮಾರ್ಗದರ್ಶನ ನೀಡಲಿ ಮತ್ತು ನಿಮ್ಮ ವ್ಯವಹಾರಗಳನ್ನು ಸರಿಪಡಿಸಲಿ) ಎಂದು ಹೇಳುವ ಮೂಲಕ ಉತ್ತರಿಸುವುದು. ಐದನೆಯದು: ಅವನು ಅನಾರೋಗ್ಯದಿಂದ ಬಳಲುತ್ತಿರುವಾಗ ಅವನ ಆರೋಗ್ಯವನ್ನು ವಿಚಾರಿಸಲು ಸಂದರ್ಶಿಸುವುದು. ಆರನೆಯದು: ಅವನು ಸಾವನ್ನಪ್ಪಿದರೆ ಅವನಿಗೆ ಜನಾಝ ನಮಾಝ್ ನಿರ್ವಹಿಸುವುದು, ಅವನನ್ನು ಸಮಾಧಿ ಮಾಡುವ ತನಕ ಅವನ ಮೃತದೇಹವನ್ನು ಹಿಂಬಾಲಿಸುವುದು.