عَنْ مُعَاذَةَ قَالَتْ:
سَأَلْتُ عَائِشَةَ، فَقُلْتُ: مَا بَالُ الْحَائِضِ تَقْضِي الصَّوْمَ، وَلَا تَقْضِي الصَّلَاةَ؟ فَقَالَتْ: أَحَرُورِيَّةٌ أَنْتِ؟ قُلْتُ: لَسْتُ بِحَرُورِيَّةٍ، وَلَكِنِّي أَسْأَلُ. قَالَتْ: كَانَ يُصِيبُنَا ذَلِكَ، فَنُؤْمَرُ بِقَضَاءِ الصَّوْمِ، وَلَا نُؤْمَرُ بِقَضَاءِ الصَّلَاةِ.

[صحيح] - [متفق عليه] - [صحيح مسلم: 335]
المزيــد ...

ಮುಆದಾ ರಿಂದ ವರದಿ: ಅವರು ಹೇಳಿದರು:
ನಾನು ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಂದಿಗೆ ಕೇಳಿದೆ: "ಋತುಮತಿಯಾದ ಮಹಿಳೆ ಉಪವಾಸವನ್ನು ಖಝಾ ನಿರ್ವಹಿಸಲು (ಬಿಟ್ಟುಹೋದ ಉಪವಾಸಗಳನ್ನು ನಂತರ ಆಚರಿಸಲು) ಮತ್ತು ನಮಾಝ್ ಖಝಾ ನಿರ್ವಹಿಸದಿರಲು ಕಾರಣವೇನು?" ಆಗ ಅವರು (ಆಯಿಷಾ) ಕೇಳಿದರು: "ನೀನು 'ಹರೂರಿಯ್ಯ' ಆಗಿದ್ದೀಯಾ?" ನಾನು ಹೇಳಿದೆ: "ನಾನು ಹರೂರಿಯ್ಯ ಅಲ್ಲ, ಆದರೆ ನಾನು (ತಿಳುವಳಿಕೆಗಾಗಿ) ಕೇಳುತ್ತಿದ್ದೇನೆ". ಅವರು (ಆಯಿಷಾ) ಹೇಳಿದರು: "ನಮಗೆ ಅದು (ಋತುಚಕ್ರ) ಸಂಭವಿಸುತ್ತಿತ್ತು, ಆಗ ನಮಗೆ ಉಪವಾಸವನ್ನು ಖಝಾ ನಿರ್ವಹಿಸಲು ಆದೇಶಿಸಲಾಗುತ್ತಿತ್ತು, ಮತ್ತು ನಮಾಝ್ ಅನ್ನು ಖಝಾ ನಿರ್ವಹಿಸಲು ಆದೇಶಿಸಲಾಗುತ್ತಿರಲಿಲ್ಲ".

[صحيح] - [متفق عليه] - [صحيح مسلم - 335]

ವಿವರಣೆ

ಮುಆದಾ ಅಲ್-ಅದವಿಯ್ಯಾ ರವರು ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಕೇಳಿದರು: ಋತುಮತಿಯಾದ ಮಹಿಳೆಯು ಉಪವಾಸವನ್ನು ಖಝಾ ನಿರ್ವಹಿಸಲು ಮತ್ತು ನಮಾಝ್ ಖಝಾ ನಿರ್ವಹಿಸದಿರಲು ಕಾರಣವೇನು? ಆಗ ಅವರು (ಆಯಿಷಾ) ಕೇಳಿದರು: ನೀನು ಮೊಂಡು ಮತ್ತು ತೀಕ್ಷ್ಣ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳುವ ಖವಾರಿಜ್‌ನ ಹರೂರಿಯ್ಯ ಪಂಗಡದವಳೇ? ಅವರು (ಮುಆದಾ) ಹೇಳಿದರು: ನಾನು ಹರೂರಿಯ್ಯ ಅಲ್ಲ, ಆದರೆ ನಾನು (ತಿಳುವಳಿಕೆಗಾಗಿ) ಕೇಳುತ್ತಿದ್ದೇನೆ. ಅವರು (ಆಯಿಷಾ) ಹೇಳಿದರು: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ನಮಗೆ ಋತುಚಕ್ರ ಸಂಭವಿಸುತ್ತಿತ್ತು, ಆಗ ನಮಗೆ ಉಪವಾಸವನ್ನು ಖಝಾ ನಿರ್ವಹಿಸಲು ಆದೇಶಿಸಲಾಗುತ್ತಿತ್ತು, ಮತ್ತು ನಮಾಝ್ ಅನ್ನು ಖಝಾ ನಿರ್ವಹಿಸಲು ಆದೇಶಿಸಲಾಗುತ್ತಿರಲಿಲ್ಲ.

ಹದೀಸಿನ ಪ್ರಯೋಜನಗಳು

  1. ಮೊಂಡುತನ ಮತ್ತು ತರ್ಕಕ್ಕಾಗಿ ಪ್ರಶ್ನೆ ಕೇಳುವ ಪ್ರತಿಯೊಬ್ಬರನ್ನೂ ಖಂಡಿಸಲಾಗಿದೆ.
  2. 'ಹರೂರಿಯ್ಯ' ಎಂದರೆ ಕೂಫಾದ ಸಮೀಪ 'ಹರೂರಾ' ಎಂಬ ಪಟ್ಟಣದ ಹೆಸರು. ಇಲ್ಲಿನ ಖವಾರಿಜ್‌ಗಳ ಒಂದು ಪಂಗಡವನ್ನು ಹರೂರಿಯ್ಯ ಎಂದು ಕರೆಯಲಾಗುತ್ತದೆ. ಮುಆದಾ ಪ್ರಶ್ನಿಸುವ ರೀತಿಯನ್ನು ನೋಡಿ ಆಯಿಷಾ ಆಕೆಯನ್ನು, ಕಟ್ಟುನಿಟ್ಟಿನ ಸ್ವಭಾವ, ಹೆಚ್ಚು ಪ್ರಶ್ನೆಗಳನ್ನು ಕೇಳುವುದು ಮತ್ತು ಅದರಲ್ಲಿ ಮೊಂಡುತನ ತೋರುವುದಕ್ಕಾಗಿ ಖ್ಯಾತರಾಗಿರುವ ಹರೂರಿಯ್ಯ ಪಂಗಡಕ್ಕೆ ಹೋಲಿಸಿದರು.
  3. ಕಲಿಯಲು ಮತ್ತು ಮಾರ್ಗದರ್ಶನ ಪಡೆಯಲು ಬಯಸುವವನಿಗೆ ಶಿಕ್ಷಕನು ವಿಷಯಗಳನ್ನು ವಿವರಿಸಿಕೊಡಬೇಕೆಂದು ತಿಳಿಸಲಾಗಿದೆ.
  4. ಮೂಲ ಪಠ್ಯದೊಂದಿಗೆ (ನಸ್ಸ್) ಉತ್ತರಿಸುವುದು ಉತ್ತಮವಾಗಿದೆ. ಏಕೆಂದರೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಪ್ರಶ್ನಿಸಿದಾಕೆ ಕೇಳಿದ (ತಾರ್ಕಿಕ) ಅರ್ಥಕ್ಕೆ ಹೋಗಲಿಲ್ಲ. ಏಕೆಂದರೆ ಮೂಲ ಪಠ್ಯದೊಂದಿಗೆ ಉತ್ತರಿಸುವುದು ವಿರೋಧವನ್ನು ಹೆಚ್ಚು ಪರಿಣಾಮಕಾರಿಯಾಗಿ ತಡೆಯುತ್ತದೆ.
  5. ಅಲ್ಲಾಹು ಮತ್ತು ಅವನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೀರ್ಪಿಗೆ ಶರಣಾಗುವುದು. ದಾಸನಿಗೆ ಅದರ ಹಿಂದಿನ ವಿವೇಕ (ಹಿಕ್ಮತ್) ಅರ್ಥವಾಗದಿದ್ದರೂ ಸಹ.
  6. ಇಮಾಮ್ ನವವಿ ಹೇಳುತ್ತಾರೆ: "ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರ ಮಾತಿನ ಅರ್ಥವೇನೆಂದರೆ, ಖವಾರಿಜ್‌ಗಳ ಒಂದು ಪಂಗಡವು ಋತುಮತಿಯಾದ ಮಹಿಳೆಗೆ ಋತುಚಕ್ರದ ಸಮಯದಲ್ಲಿ ಬಿಟ್ಟುಹೋದ ನಮಾಝ್‌ಗಳನ್ನು ಖಝಾ ನಿರ್ವಹಿಸುವುದನ್ನು ಕಡ್ಡಾಯಗೊಳಿಸುತ್ತದೆ. ಇದು ಮುಸ್ಲಿಮರ ಒಮ್ಮತಾಭಿಪ್ರಾಯಕ್ಕೆ (ಇಜ್ಮಾ) ವಿರುದ್ಧವಾಗಿದೆ. ಆಯಿಷಾ ಕೇಳಿದ ಈ ಪ್ರಶ್ನೆಯು ಖಂಡನಾತ್ಮಕ ಪ್ರಶ್ನೆಯಾಗಿತ್ತು. ಅಂದರೆ, ಇದು ಹರೂರಿಯ್ಯಗಳ ಮಾರ್ಗವಾಗಿದೆ. ಅದು ಬಹಳ ಕೆಟ್ಟ ಮಾರ್ಗವಾಗಿದೆ."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ