+ -

عَنْ أُسَامَةَ بْنِ زَيْدٍ رضي الله عنه قَالَ: قِيلَ لَهُ: أَلَا تَدْخُلُ عَلَى عُثْمَانَ فَتُكَلِّمَهُ؟ فَقَالَ: أَتَرَوْنَ أَنِّي لَا أُكَلِّمُهُ إِلَّا أُسْمِعُكُمْ؟ وَاللهِ لَقَدْ كَلَّمْتُهُ فِيمَا بَيْنِي وَبَيْنَهُ، مَا دُونَ أَنْ أَفْتَتِحَ أَمْرًا لَا أُحِبُّ أَنْ أَكُونَ أَوَّلَ مَنْ فَتَحَهُ، وَلَا أَقُولُ لِأَحَدٍ يَكُونُ عَلَيَّ أَمِيرًا: إِنَّهُ خَيْرُ النَّاسِ بَعْدَمَا سَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ:
«يُؤْتَى بِالرَّجُلِ يَوْمَ الْقِيَامَةِ، فَيُلْقَى فِي النَّارِ، فَتَنْدَلِقُ أَقْتَابُ بَطْنِهِ، فَيَدُورُ بِهَا كَمَا يَدُورُ الْحِمَارُ بِالرَّحَى، فَيَجْتَمِعُ إِلَيْهِ أَهْلُ النَّارِ، فَيَقُولُونَ: يَا فُلَانُ مَا لَكَ؟ أَلَمْ تَكُنْ تَأْمُرُ بِالْمَعْرُوفِ، وَتَنْهَى عَنِ الْمُنْكَرِ؟ فَيَقُولُ: بَلَى، قَدْ كُنْتُ آمُرُ بِالْمَعْرُوفِ وَلَا آتِيهِ، وَأَنْهَى عَنِ الْمُنْكَرِ وَآتِيهِ».

[صحيح] - [متفق عليه] - [صحيح مسلم: 2989]
المزيــد ...

ಉಸಾಮ ಬಿನ್ ಝೈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರೊಡನೆ ಒಬ್ಬರು ಕೇಳಿದರು: "ನೀವೇಕೆ ಉಸ್ಮಾನ್ ರವರ ಬಳಿಗೆ ಹೋಗಿ ಅವರಲ್ಲಿ ಮಾತನಾಡುವುದಿಲ್ಲ?" ಅವರು ಉತ್ತರಿಸಿದರು: "ನಿಮಗೆ ಕೇಳಿಸುವ ರೀತಿಯಲ್ಲೇ ನಾನು ಅವರಲ್ಲಿ ಮಾತನಾಡಬೇಕು ಎಂದು ನೀವು ಭಾವಿಸಿದ್ದೀರಾ? ಅಲ್ಲಾಹನಾಣೆ! ನಾನು ಅವರೊಡನೆ ನಮ್ಮಿಬ್ಬರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ಆದರೆ, ನಾನೇ ಮೊದಲು ಪ್ರಾರಂಭಿಸುವುದನ್ನು ನಾನು ಇಷ್ಟಪಡದ ವಿಷಯಗಳ ಬಗ್ಗೆ ನಾನು ಅವರಲ್ಲಿ ಮಾತನಾಡಿಲ್ಲ. ನನ್ನ ಆಡಳಿತಗಾರನಾಗುವ ಯಾವುದೇ ವ್ಯಕ್ತಿಯನ್ನೂ, ಅವನು ಜನರಲ್ಲೇ ಅತಿಶ್ರೇಷ್ಠನೆಂದು ನಾನು ಹೇಳುವುದಿಲ್ಲ—ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ರೀತಿ ಹೇಳುವುದನ್ನು ಕೇಳಿದ ಬಳಿಕ:
"ಪುನರುತ್ಥಾನ ದಿನದಂದು ಒಬ್ಬ ವ್ಯಕ್ತಿಯನ್ನು ತರಲಾಗುವುದು ಮತ್ತು ಅವನನ್ನು ನರಕಕ್ಕೆ ಎಸೆಯಲಾಗುವುದು. ಆಗ ಅವನ ಕರುಳುಗಳು ಹೊಟ್ಟೆಯಿಂದ ಹೊರ ಚೆಲ್ಲುವುವು. ಕತ್ತೆಯು ಗಾಣಕ್ಕೆ ಸುತ್ತು ಬರುವಂತೆ ಅವನು ಅದರೊಂದಿಗೆ ಸುತ್ತು ಬರುವನು. ಆಗ ನರಕವಾಸಿಗಳು ಅವನ ಬಳಿ ನೆರೆದು ಕೇಳುವರು: "ಓ ಇಂತಿಂತಹನೇ! ನಿನಗೇನಾಯಿತು? ನೀನು ಒಳಿತನ್ನು ಆದೇಶಿಸುತ್ತಲೂ, ಕೆಡುಕಿನಿಂದ ತಡೆಯುತ್ತಲೂ ಇದ್ದೆ ತಾನೇ?" ಅವನು ಉತ್ತರಿಸುವನು: "ಹೌದು, ನಾನು ಒಳಿತನ್ನು ಆದೇಶಿಸುತ್ತಿದ್ದೆ, ಆದರೆ ನಾನು ಅದನ್ನು ಮಾಡುತ್ತಿರಲಿಲ್ಲ. ನಾನು ಕೆಡುಕಿನಿಂದ ತಡೆಯುತ್ತಿದ್ದೆ, ಆದರೆ ನಾನೇ ಅದನ್ನು ಮಾಡುತ್ತಿದ್ದೆ."

[صحيح] - [متفق عليه] - [صحيح مسلم - 2989]

ವಿವರಣೆ

ಉಸಾಮ ಬಿನ್ ಝೈದ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಒಬ್ಬರು ಕೇಳಿದರು: "ನೀವು ಉಸ್ಮಾನ್ ಬಿನ್ ಅಫ್ಫಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ ಹೋಗಿ, ಜನರಲ್ಲಿ ಭುಗಿಲೆದ್ದ ಸಂಘರ್ಷದ ಬಗ್ಗೆ ಅವರೊಡನೆ ಮಾತನಾಡಿ, ಅದನ್ನು ಸಂಪೂರ್ಣವಾಗಿ ನಂದಿಸಲು ಏಕೆ ಪ್ರಯತ್ನಿಸುವುದಿಲ್ಲ?" ಆಗ ಅವರು, "ತಾನು ಸಂಘರ್ಷವನ್ನು ಇನ್ನಷ್ಟು ಉದ್ರಿಕ್ತಗೊಳಿಸುವುದಕ್ಕಲ್ಲ, ಬದಲಿಗೆ ಸಂಧಾನ ಮಾಡುವ ಉದ್ದೇಶದಿಂದ ಅವರೊಡನೆ ವೈಯುಕ್ತಿಕವಾಗಿ ಮಾತನಾಡಿದ್ದೇನೆ" ಎಂದು ತಿಳಿಸಿದರು. ಜನರ ಮುಂದೆ ಆಡಳಿತಗಾರರನ್ನು ಬಹಿರಂಗವಾಗಿ ಖಂಡಿಸಿ, ಅವರನ್ನು ಖಲೀಫರ ವಿರುದ್ಧ ಎತ್ತಿಕಟ್ಟಲು ನಾನು ಬಯಸುವುದಿಲ್ಲ. ಏಕೆಂದರೆ, ಅದು ಕ್ಷೋಭೆ ಮತ್ತು ಕೆಡುಕಿಗೆ ಸಾಗಿಸುವ ದ್ವಾರವಾಗಿದ್ದು, ಅದನ್ನು ಮೊತ್ತಮೊದಲು ತೆರೆಯುವವನು ನಾನಾಗಲಾರೆ ಎಂದು ಅವರು ತಿಳಿಸಿದರು.
ನಂತರ ಉಸಾಮ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಹೇಳುವುದೇನೆಂದರೆ, ಅವರು ಆಡಳಿತಗಾರರಿಗೆ ರಹಸ್ಯವಾಗಿ ಹಿತವಚನ ನೀಡುತ್ತಾರೆ ಮತ್ತು ಆಡಳಿತಗಾರರೂ ಸೇರಿದಂತೆ ಯಾರೊಡನೆಯೂ ಅವರು ಬೆಣ್ಣೆ ಹಚ್ಚಿ ಮಾತನಾಡುವವರಲ್ಲ. ಅದೇ ರೀತಿ, ಅವರನ್ನು ಯಾರನ್ನೂ ಹೊಗಳಿ ಅಟ್ಟಕ್ಕೇರಿಸುವುದಿಲ್ಲ ಮತ್ತು ಇಲ್ಲದ್ದನ್ನು ಹೇಳಿ ಮುಖಸ್ತುತಿ ಮಾಡುವುದೂ ಇಲ್ಲ. ಇದು ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಮಾತನ್ನು ಕೇಳಿದ ನಂತರವಾಗಿತ್ತು. ಅದೇನೆಂದರೆ, ಪುನರುತ್ಥಾನ ದಿನದಂದು ಒಬ್ಬ ವ್ಯಕ್ತಿಯನ್ನು ತರಲಾಗಿ ನರಕಕ್ಕೆ ಎಸೆಯಲಾಗುವುದು. ಆಗ ಬೆಂಕಿಯ ತೀವ್ರತೆ ಮತ್ತು ಶಿಕ್ಷೆಯ ಕಠೋರತೆಯಿಂದಾಗಿ ತಕ್ಷಣ ಅವನ ಕರುಳು ಹೊಟ್ಟೆಯಿಂದ ಹೊರ ಬರುವುದು. ಆಗ ಅವನು ಈ ಸ್ಥಿತಿಯಲ್ಲಿ ಧಾನ್ಯವನ್ನು ಹುಡಿ ಮಾಡುವ ಗಾಣದ ಕಲ್ಲಿಗೆ ಕತ್ತೆ ಸುತ್ತು ಬರುವಂತೆ ತನ್ನ ಕರುಳಿನೊಂದಿಗೆ ಸುತ್ತು ಬರುವನು. ಆಗ ನರಕವಾಸಿಗಳು ವೃತ್ತಾಕಾರದಲ್ಲಿ ಅವನ ಸುತ್ತಲೂ ನೆರೆದು ಅವನೊಡನೆ ಕೇಳುವರು: "ಓ ಇಂತಿಂತಹನೇ! ನೀನು ಒಳಿತನ್ನು ಆದೇಶಿಸುತ್ತಲೂ, ಕೆಡುಕಿನಿಂದ ತಡೆಯುತ್ತಲೂ ಇದ್ದೆ ತಾನೇ?"
ಅವನು ಉತ್ತರಿಸುವನು: "ನಿಶ್ಚಯವಾಗಿಯೂ ನಾನು ಒಳಿತನ್ನು ಆದೇಶಿಸುತ್ತಿದ್ದೆ, ಆದರೆ ನಾನು ಅದನ್ನು ಮಾಡುತ್ತಿರಲಿಲ್ಲ ಮತ್ತು ನಾನು ಕೆಡುಕಿನಿಂದ ತಡೆಯುತ್ತಿದ್ದೆ, ಆದರೆ ನಾನೇ ಅದನ್ನು ಮಾಡುತ್ತಿದ್ದೆ."

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الصربية الرومانية المالاجاشية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಮೂಲನಿಯಮದ ಪ್ರಕಾರ, ಆಡಳಿತಗಾರರಿಗೆ ಹಿತವಚನ ನೀಡುವುದು ವೈಯುಕ್ತಿಕವಾಗಿರಬೇಕೇ ವಿನಾ ಜನರ ನಡುವೆ ಬಹಿರಂಗವಾಗಿ ಆಡಳಿತಗಾರರ ಬಗ್ಗೆ ಮಾತನಾಡಬಾರದು.
  2. ಹೇಳುವುದು ಮತ್ತು ಮಾಡುವುದು ತದ್ವಿರುದ್ಧವಾಗಿರುವವರಿಗೆ ಕಠೋರ ಎಚ್ಚರಿಕೆ ನೀಡಲಾಗಿದೆ.
  3. ಆಡಳಿತಗಾರರಿಗೆ ಮರ್ಯಾದೆ ನೀಡಬೇಕು, ಸಹಾನುಭೂತಿ ತೋರಬೇಕು, ಅವರಿಗೆ ಒಳಿತನ್ನು ಆದೇಶಿಸಬೇಕು ಮತ್ತು ಅವರನ್ನು ಕೆಡುಕಿನಿಂದ ತಡೆಯಬೇಕೆಂದು ತಿಳಿಸಲಾಗಿದೆ.
  4. ಸತ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಡಳಿತಗಾರರೊಡನೆ ಬೆಣ್ಣೆ ಹಚ್ಚಿದ ಮಾತುಗಳನ್ನಾಡುವುದನ್ನು ಮತ್ತು ಇಲ್ಲದ ವಿಷಯಗಳನ್ನು ಹೇಳಿ ಮುಖಸ್ತುತಿ ಮಾಡುವವನಂತೆ ಆಡಳಿತಗಾರರ ಆಂತರ್ಯದಲ್ಲಿರುವುದಕ್ಕೆ ವಿರುದ್ಧವಾದುದನ್ನು ಹೊರಗೆ ವ್ಯಕ್ತಪಡಿಸುವುದನ್ನು ಖಂಡಿಸಲಾಗಿದೆ.
ಇನ್ನಷ್ಟು