عَنْ أَبِي هُرَيْرَةَ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«سَبْعَةٌ يُظِلُّهُمُ اللَّهُ تَعَالَى فِي ظِلِّهِ يَوْمَ لاَ ظِلَّ إِلَّا ظِلُّهُ: إِمَامٌ عَدْلٌ، وَشَابٌّ نَشَأَ فِي عِبَادَةِ اللَّهِ، وَرَجُلٌ قَلْبُهُ مُعَلَّقٌ فِي المَسَاجِدِ، وَرَجُلاَنِ تَحَابَّا فِي اللَّهِ، اجْتَمَعَا عَلَيْهِ وَتَفَرَّقَا عَلَيْهِ، وَرَجُلٌ دَعَتْهُ امْرَأَةٌ ذَاتُ مَنْصِبٍ وَجَمَالٍ فَقَالَ: إِنِّي أَخَافُ اللَّهَ، وَرَجُلٌ تَصَدَّقَ بِصَدَقَةٍ فَأَخْفَاهَا حَتَّى لاَ تَعْلَمَ شِمَالُهُ مَا تُنْفِقُ يَمِينُهُ، وَرَجُلٌ ذَكَرَ اللَّهَ خَالِيًا، فَفَاضَتْ عَيْنَاهُ».
[صحيح] - [متفق عليه] - [صحيح البخاري: 1423]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹನ ನೆರಳಲ್ಲದೆ ಬೇರೆ ನೆರಳಿಲ್ಲದ ದಿನ (ಪುನರುತ್ಥಾನ ದಿನ) ದಂದು ಅವನು ಏಳು (ರೀತಿಯ) ಜನರಿಗೆ ತನ್ನ ನೆರಳಿನಲ್ಲಿ ನೆರಳು ನೀಡುತ್ತಾನೆ: ನ್ಯಾಯ ನೀತಿ ಪಾಲಿಸುವ ಆಡಳಿತಗಾರ, ಅಲ್ಲಾಹುವಿನ ಆರಾಧನೆಯಲ್ಲಿಯೇ ಬೆಳೆದು ದೊಡ್ಡವನಾದ ಯುವಕ, ಮಸೀದಿಗಳೊಂದಿಗೆ ಹೃದಯವು ಅವಿನಾಭಾವ ಸಂಬಂಧ ಹೊಂದಿರುವ ವ್ಯಕ್ತಿ, ಅಲ್ಲಾಹುವಿಗಾಗಿ ಪರಸ್ಪರ ಪ್ರೀತಿಸಿದ ಇಬ್ಬರು ವ್ಯಕ್ತಿಗಳು - ಅವರು ಅವನಿಗಾಗಿಯೇ ಒಂದಾದರು ಮತ್ತು ಅವನಿಗಾಗಿಯೇ ಬೇರ್ಪಟ್ಟರು, ಸ್ಥಾನಮಾನ ಮತ್ತು ಸೌಂದರ್ಯವುಳ್ಳ ಮಹಿಳೆಯೊಬ್ಬಳು (ವ್ಯಭಿಚಾರಕ್ಕೆ) ಆಹ್ವಾನಿಸಿದಾಗ, 'ಖಂಡಿತವಾಗಿಯೂ ನಾನು ಅಲ್ಲಾಹುವನ್ನು ಭಯಪಡುತ್ತೇನೆ' ಎಂದು ಹೇಳಿದ ವ್ಯಕ್ತಿ. ದಾನವನ್ನು (ಸದಕಾ) ನೀಡಿದ ವ್ಯಕ್ತಿ - ಅವನು ಅದನ್ನು ಎಷ್ಟು ಗುಪ್ತವಾಗಿಟ್ಟನೆಂದರೆ ಅವನ ಬಲಗೈ ಖರ್ಚು (ದಾನ) ಮಾಡಿದ್ದು ಅವನ ಎಡಗೈಗೆ ತಿಳಿಯಲಿಲ್ಲ ಮತ್ತು ಏಕಾಂತದಲ್ಲಿ ಅಲ್ಲಾಹುವನ್ನು ಸ್ಮರಿಸಿ, ಕಣ್ಣುಗಳು ಕಣ್ಣೀರಿನಿಂದ ತುಂಬಿ ಹರಿದ ವ್ಯಕ್ತಿ."
[صحيح] - [متفق عليه] - [صحيح البخاري - 1423]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳಲ್ಲಿ ಏಳು ರೀತಿಯ ಜನರಿಗೆ ಶುಭವಾರ್ತೆ ನೀಡಿದ್ದಾರೆ. ಯಾವ ದಿನ ಅಲ್ಲಾಹುವಿನ ನೆರಳಲ್ಲದೆ ಬೇರೆ ನೆರಳಿಲ್ಲವೋ ಅಂದು, ಸರ್ವೋನ್ನತನಾದ ಅಲ್ಲಾಹು ಅವರಿಗೆ ತನ್ನ 'ಅರ್ಶ್' (ಸಿಂಹಾಸನ) ನ ನೆರಳಿನಲ್ಲಿ ಆಶ್ರಯ ನೀಡುತ್ತಾನೆ: ಮೊದಲನೆಯವನು: ತನ್ನ ವಿಷಯದಲ್ಲಿ ದುಷ್ಕರ್ಮಗಳನ್ನು ಮಾಡದೆ ನ್ಯಾಯ ಪಾಲಿಸುವ ಮತ್ತು ತನ್ನ ಪ್ರಜೆಗಳ ನಡುವೆ ಅನ್ಯಾಯ ಮಾಡದೆ ನ್ಯಾಯ ಪಾಲಿಸುವ ಆಡಳಿತಗಾರ. ಅವನು ಅತ್ಯುನ್ನತ ಅಧಿಕಾರ ಹೊಂದಿರುವವನು. ಮುಸ್ಲಿಮರ ವಿಷಯದಲ್ಲಿ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಂಡು ಅದರಲ್ಲಿ ನ್ಯಾಯ ಪಾಲಿಸುವ ಪ್ರತಿಯೊಬ್ಬನೂ ಈ ವಿಧದಲ್ಲಿ ಸೇರುತ್ತಾನೆ. ಎರಡನೆಯವನು: ಅಲ್ಲಾಹುವಿನ ಆರಾಧನೆಯಲ್ಲಿಯೇ ಬೆಳೆದು, ತನ್ನ ಯೌವನ ಮತ್ತು ಚೈತನ್ಯವನ್ನು ಅದರಲ್ಲಿಯೇ ವಿನಿಯೋಗಿಸಿ, ಅದೇ ಸ್ಥಿತಿಯಲ್ಲಿ ಮರಣ ಹೊಂದುವ ಯುವಕ. ಮೂರನೆಯವನು: ಮಸೀದಿಯೊಂದಿಗೆ ಹೃದಯವು ಗಾಢವಾಗಿ ಸಂಬಂಧ ಹೊಂದಿರುವ ವ್ಯಕ್ತಿ. ಅವನು ಮಸೀದಿಯಿಂದ ಹೊರಬಂದರೂ ಮತ್ತೆ ಅದಕ್ಕೆ ಮರಳಲು ಹಂಬಲಿಸುತ್ತಾನೆ. ಏಕೆಂದರೆ, ಅವನಿಗೆ ಮಸೀದಿಯ ಮೇಲಿನ ತೀವ್ರ ಪ್ರೀತಿಯಿದೆ, ಸದಾ ಮಸೀದಿಯಲ್ಲೇ ಇರಲು ಬಯಸುತ್ತಾನೆ ಮತ್ತು ಅವನಿಗೆ ದೈಹಿಕವಾದ ಅನಿವಾರ್ಯ ಕಾರಣಗಳಿಂದ ಮಸೀದಿಗೆ ಹೋಗಲು ಸಾಧ್ಯವಾಗದಿದ್ದರೂ ಹೃದಯದಿಂದ ನಿರಂತರವಾಗಿ ಮಸೀದಿಯೊಂದಿಗೆ ಸಂಪರ್ಕದಲ್ಲಿರುತ್ತಾನೆ. ನಾಲ್ಕನೆಯವನು: ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ನಿಜವಾಗಿಯೂ ಅಲ್ಲಾಹುವಿಗಾಗಿಯೇ ಪ್ರೀತಿಸಿದರು. ಅವರು ಭೌತಿಕವಾಗಿ ಒಟ್ಟಿಗೆ ಇರಲಿ ಅಥವಾ ಇಲ್ಲದಿರಲಿ, ಮರಣವು ಅವರನ್ನು ಬೇರ್ಪಡಿಸುವವರೆಗೆ ಯಾವುದೇ ಲೌಕಿಕ ಕಾರಣಕ್ಕಾಗಿ ಆ ಧಾರ್ಮಿಕ ಪ್ರೀತಿಯನ್ನು ಅವರು ಮುರಿಯಲಿಲ್ಲ. ಐದನೆಯವನು: ಉತ್ತಮ ವಂಶ, ಗೌರವ, ಪ್ರತಿಷ್ಠೆ, ಸ್ಥಾನಮಾನ, ಸಂಪತ್ತು ಮತ್ತು ಸೌಂದರ್ಯವುಳ್ಳ ಮಹಿಳೆಯೊಬ್ಬಳು ಕೆಟ್ಟ ಕಾರ್ಯಕ್ಕಾಗಿ (ವ್ಯಭಿಚಾರಕ್ಕಾಗಿ) ತನ್ನ ಕಡೆಗೆ ಆಹ್ವಾನಿಸಿದಾಗ, ಅದನ್ನು ನಿರಾಕರಿಸಿ 'ಖಂಡಿತವಾಗಿಯೂ ನಾನು ಅಲ್ಲಾಹುವನ್ನು ಭಯಪಡುತ್ತೇನೆ' ಎಂದು ಹೇಳಿದ ವ್ಯಕ್ತಿ. ಆರನೆಯವನು: ಸ್ವಲ್ಪ ಅಥವಾ ಹೆಚ್ಚು ದಾನವನ್ನು ನೀಡಿ, ಅದರಲ್ಲಿ ಯಾವುದೇ ತೋರಿಕೆ ಮಾಡದ ವ್ಯಕ್ತಿ. ಅವನು ಅದನ್ನು ಎಷ್ಟೊಂದು ಗುಪ್ತವಾಗಿಟ್ಟನೆಂದರೆ, ಅವನ ಬಲಗೈ ನೀಡಿದ್ದು ಅವನ ಎಡಗೈಗೂ ತಿಳಿಯಲಿಲ್ಲ. ಏಳನೆಯವರು: ಜನರಿಂದ ದೂರವಿದ್ದು ಏಕಾಂತದಲ್ಲಿ, ಹೃದಯದ ಸ್ಮರಣೆಯಿಂದ ಅಥವಾ ಧಿಕ್ರ್ ಹೇಳುವ ಮೂಲಕ ತನ್ನ ನಾಲಿಗೆಯಿಂದ ಅಲ್ಲಾಹುವನ್ನು ಸ್ಮರಿಸಿದ ವ್ಯಕ್ತಿ. ಆಗ ಅಲ್ಲಾಹುವಿನ ಭಯ ಮತ್ತು ಗೌರವದಿಂದ ಅವನ ಕಣ್ಣುಗಳಿಂದ ಕಣ್ಣೀರು ತುಂಬಿ ಹರಿಯಿತು.