____
[] - []
المزيــد ...
ಅಬೂ ಅಬ್ದುಲ್ಲಾ ಅನ್ನುಅಮಾನ್ ಇಬ್ನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಹಲಾಲ್ ಅತ್ಯಂತ ಸ್ಪಷ್ಟವಾಗಿದೆ ಮತ್ತು ಹರಾಮ್ ಕೂಡ ಅತ್ಯಂತ ಸ್ಪಷ್ಟವಾಗಿದೆ. ಇವೆರಡರ ಮಧ್ಯೆ ಸಂಶಯಾಸ್ಪದ ವಿಷಯಗಳಿವೆ. ಜನರಲ್ಲಿ ಹೆಚ್ಚಿನವರಿಗೂ ಅವುಗಳ ಬಗ್ಗೆ ಜ್ಞಾನವಿಲ್ಲ. ಯಾರು ಈ ಸಂಶಯಾಸ್ಪದ ವಿಷಯಗಳಿಂದ ದೂರವಿರುತ್ತಾನೋ, ಅವನು ತನ್ನ ಧರ್ಮ ಮತ್ತು ಘನತೆಯನ್ನು ಕಾಪಾಡಿಕೊಂಡನು. ಯಾರು ಈ ಸಂಶಯಾಸ್ಪದ ವಿಷಯಗಳಲ್ಲಿ ಒಳಪಡುತ್ತಾನೋ ಅವನು ಹರಾಮ್‌ನಲ್ಲಿ ಒಳಪಡುತ್ತಾನೆ. ಅವನ ಸ್ಥಿತಿಯು (ಪ್ರವೇಶಾನುಮತಿಯಿಲ್ಲದ) ಹುಲ್ಲುಗಾವಲಿನ ಅಂಚಿನಲ್ಲಿ ತನ್ನ ಕುರಿಮಂದೆಯನ್ನು ಮೇಯಿಸುವ ಒಬ್ಬ ಕುರಿಗಾಹಿಯಂತೆ. ಅವನ ಕುರಿಗಳು ಹುಲ್ಲುಗಾವಲಿನೊಳಗೆ ನುಗ್ಗಿ ಮೇಯುವ ಸಾಧ್ಯತೆಯಿದೆ. ಎಚ್ಚರಾ! ಪ್ರತಿಯೊಬ್ಬ ರಾಜನಿಗೂ ಒಂದು (ನಿಷೇಧಿತ) ವಲಯವಿದೆ. ಎಚ್ಚರಾ! ಅಲ್ಲಾಹು ನಿಷೇಧಿಸಿದ ಕಾರ್ಯಗಳು ಅವನ (ನಿಷೇಧಿತ) ವಲಯವಾಗಿದೆ. ಎಚ್ಚರಾ! ದೇಹದಲ್ಲಿ ಒಂದು ಮಾಂಸದ ತುಂಡಿದೆ. ಅದು ಸರಿಯಾದರೆ ಸಂಪೂರ್ಣ ದೇಹವು ಸರಿಯಾಗುತ್ತದೆ. ಅದು ಕೆಟ್ಟರೆ ಸಂಪೂರ್ಣ ದೇಹವು ಕೆಡುತ್ತದೆ. ಎಚ್ಚರಾ! ಅದು ಹೃದಯವಾಗಿದೆ."
[صحيح] - [رواه البخاري ومسلم] - [الأربعون النووية - 6]
ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಸಾಮಾನ್ಯ ಸಿದ್ಧಾಂತವನ್ನು ವಿವರಿಸುತ್ತಾರೆ. ಧರ್ಮದ ಪ್ರಕಾರ ಆ ಸಿದ್ಧಾಂತದಲ್ಲಿ ಮೂರು ಭಾಗಗಳಿವೆ: ಸ್ಪಷ್ಟವಾಗಿರುವ ಧರ್ಮಸಮ್ಮತ ಕಾರ್ಯಗಳು, ಸ್ಪಷ್ಟವಾಗಿರುವ ಧರ್ಮನಿಷೇಧಿತ ಕಾರ್ಯಗಳು ಮತ್ತು ಅಸ್ಪಷ್ಟವಾದ ಸಂಶಯಾಸ್ಪದ ವಿಷಯಗಳು. ಇವು ಧರ್ಮಸಮ್ಮತವೋ ಅಥವಾ ಧರ್ಮನಿಷಿದ್ಧವೋ ಎಂಬ ಬಗ್ಗೆ ಸ್ಪಷ್ಟ ನಿಯಮಗಳಿಲ್ಲ. ಜನರಲ್ಲಿ ಹೆಚ್ಚಿನವರಿಗೆ ಅವುಗಳ ನಿಯಮಗಳ ಬಗ್ಗೆ ತಿಳಿದಿಲ್ಲ.
ತಮಗೆ ಸಂಶಯಾಸ್ಪದವಾಗಿ ತೋರುವ ಈ ವಿಷಯಗಳನ್ನು ಯಾರು ತೊರೆಯುತ್ತಾರೋ, ಅವರು ನಿಷೇಧಿತ ಕೃತ್ಯಗಳಲ್ಲಿ ಒಳಗೊಳ್ಳದಂತೆ ತಮ್ಮ ಧರ್ಮವನ್ನು ರಕ್ಷಿಸುತ್ತಾರೆ, ಮತ್ತು ಇಂತಿಂತಹ ನಿಷಿದ್ಧ ಕೃತ್ಯವನ್ನು ಮಾಡಿದ್ದಾನೆ ಎಂಬ ಜನರ ಆಕ್ಷೇಪಗಳಿಂದ ತಮ್ಮ ಘನತೆಯನ್ನು ರಕ್ಷಿಸುತ್ತಾರೆ. ಯಾರು ಇಂತಹ ಸಂಶಯಾಸ್ಪದ ವಿಷಯಗಳಿಂದ ದೂರವಿರುವುದಿಲ್ಲವೋ, ಅವರು ಒಂದೋ ನಿಷಿದ್ಧ ಕೃತ್ಯದಲ್ಲಿ ಒಳಗೊಳ್ಳುತ್ತಾರೆ, ಅಥವಾ ಜನರ ಆಕ್ಷೇಪಗಳಿಗೆ ಗುರಿಯಾಗುತ್ತಾರೆ. ಸಂಶಯಾಸ್ಪದ ಕೃತ್ಯಗಳನ್ನು ಮಾಡುವವರ ಬಗ್ಗೆ ವಿವರಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒಂದು ಉದಾಹರಣೆಯನ್ನು ನೀಡುತ್ತಾರೆ. ಅವರ ಸ್ಥಿತಿಯು ನಿಷೇಧಿತ ವಲಯದ ಆಸುಪಾಸಿನಲ್ಲಿ ಕುರಿಗಳನ್ನು ಮೇಯಿಸುವ ಒಬ್ಬ ಕುರಿಗಾಹಿಯಂತೆ. ಆ ಕುರಿಗಳು ನಿಷೇಧಿತ ವಲಯಕ್ಕೆ ಹತ್ತಿರದಲ್ಲೇ ಇರುವುದರಿಂದ ಅವು ಅದರೊಳಗೆ ಪ್ರವೇಶಿಸುವ ಸಾಧ್ಯತೆಗಳಿವೆ. ಹಾಗೆಯೇ, ಸಂಶಯಾಸ್ಪದ ವಿಷಯಗಳ ಬಳಿ ಸುಳಿಯುವವರು ನಿಷೇಧಿತ ಕೃತ್ಯಗಳಿಗೆ ಬಹಳ ಹತ್ತಿರದಲ್ಲಿರುವುದರಿಂದ ಅವುಗಳಲ್ಲಿ ಒಳಗೊಳ್ಳುವ ಸಾಧ್ಯತೆಗಳಿವೆ. ಇದರ ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೇಹದಲ್ಲಿ ಒಂದು ಮಾಂಸದ ಮುದ್ದೆ (ಹೃದಯ) ಇದೆ ಎಂದು ಹೇಳುತ್ತಾರೆ. ಅದು ಸರಿಯಾದರೆ ದೇಹವು ಸರಿಯಾಗುತ್ತದೆ ಮತ್ತು ಅದು ಕೆಟ್ಟರೆ ದೇಹವು ಕೆಡುತ್ತದೆ ಎಂದು ಅವರು ಹೇಳುತ್ತಾರೆ.