عَنْ أَبِي هُرَيْرَةَ رضي الله عنه قَالَ:
قَالَ رَسُولُ اللَّهِ صَلَّى اللهُ عَلَيْهِ وَسَلَّمَ: «إِنَّ اللَّهَ قَالَ: مَنْ عَادَى لِي وَلِيًّا فَقَدْ آذَنْتُهُ بِالحَرْبِ، وَمَا تَقَرَّبَ إِلَيَّ عَبْدِي بِشَيْءٍ أَحَبَّ إِلَيَّ مِمَّا افْتَرَضْتُ عَلَيْهِ، وَمَا يَزَالُ عَبْدِي يَتَقَرَّبُ إِلَيَّ بِالنَّوَافِلِ حَتَّى أُحِبَّهُ، فَإِذَا أَحْبَبْتُهُ: كُنْتُ سَمْعَهُ الَّذِي يَسْمَعُ بِهِ، وَبَصَرَهُ الَّذِي يُبْصِرُ بِهِ، وَيَدَهُ الَّتِي يَبْطِشُ بِهَا، وَرِجْلَهُ الَّتِي يَمْشِي بِهَا، وَإِنْ سَأَلَنِي لَأُعْطِيَنَّهُ، وَلَئِنِ اسْتَعَاذَنِي لَأُعِيذَنَّهُ، وَمَا تَرَدَّدْتُ عَنْ شَيْءٍ أَنَا فَاعِلُهُ تَرَدُّدِي عَنْ نَفْسِ المُؤْمِنِ، يَكْرَهُ المَوْتَ وَأَنَا أَكْرَهُ مَسَاءَتَهُ».
[صحيح] - [رواه البخاري] - [صحيح البخاري: 6502]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಹೇಳಿದನು: ನನ್ನ ಮಿತ್ರರ ಮೇಲೆ ದ್ವೇಷ ತೋರುವವನು ಯಾರೋ ಅವನ ವಿರುದ್ಧ ನಾನು ಯುದ್ಧವನ್ನು ಘೋಷಿಸಿದ್ದೇನೆ. ನಾನು ನನ್ನ ದಾಸನಿಗೆ ಕಡ್ಡಾಯಗೊಳಿಸಿದ ಕರ್ಮಗಳ ಮೂಲಕವಲ್ಲದೆ ನಾನು ಇಷ್ಟಪಡುವ ಇತರ ಯಾವುದರ ಮೂಲಕವೂ ಅವನು ನನಗೆ ಹತ್ತಿರವಾಗುವುದಿಲ್ಲ. ನನ್ನ ದಾಸನು ಹೆಚ್ಚುವರಿ ಕರ್ಮಗಳನ್ನು (ಐಚ್ಛಿಕ ಕರ್ಮಗಳನ್ನು) ಮಾಡುವ ಮೂಲಕ ನನಗೆ ಹತ್ತಿರವಾಗುತ್ತಲೇ ಇರುತ್ತಾನೆ, ಎಲ್ಲಿಯವರೆಗೆಂದರೆ ನಾನು ಅವನನ್ನು ಪ್ರೀತಿಸುವ ತನಕ. ನಾನು ಅವನನ್ನು ಪ್ರೀತಿಸಿದರೆ, ಅವನು ಕೇಳುವ ಅವನ ಶ್ರವಣ ನಾನಾಗುತ್ತೇನೆ, ಅವನು ನೋಡುವ ಅವನ ದೃಷ್ಟಿ ನಾನಾಗುತ್ತೇನೆ, ಅವನು ಹಿಡಿಯುವ ಅವನ ಕೈ ನಾನಾಗುತ್ತೇನೆ ಮತ್ತು ಅವನು ನಡೆಯುವ ಅವನ ಕಾಲು ನಾನಾಗುತ್ತೇನೆ. ಅವನು ನನ್ನಲ್ಲಿ ಏನಾದರೂ ಕೇಳಿದರೆ ನಾನು ಅದನ್ನು ಖಂಡಿತ ಕೊಡುತ್ತೇನೆ. ಅವನು ನನ್ನಲ್ಲಿ ರಕ್ಷೆ ಬೇಡಿದರೆ ನಾನು ಖಂಡಿತ ಅವನಿಗೆ ರಕ್ಷೆ ನೀಡುತ್ತೇನೆ. ನನ್ನ ದಾಸನ ಆತ್ಮವನ್ನು ವಶಪಡಿಸಲು ನಾನು ಹಿಂಜರಿಯುವಂತೆ, ನಾನು ಮಾಡುವ ಇತರ ಯಾವುದರ ಬಗ್ಗೆಯೂ ನಾನು ಹಿಂಜರಿಯುವುದಿಲ್ಲ. ಏಕೆಂದರೆ, ಅವನು ಮರಣವನ್ನು ಇಷ್ಟಪಡುವುದಿಲ್ಲ ಮತ್ತು ಅವನನ್ನು ನೋಯಿಸಲು ನಾನು ಇಷ್ಟಪಡುವುದಿಲ್ಲ."
[صحيح] - [رواه البخاري] - [صحيح البخاري - 6502]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಕುದ್ಸಿ (ಪವಿತ್ರ) ಹದೀಸಿನಲ್ಲಿ ಹೀಗೆ ಹೇಳಿದ್ದಾನೆ: ಯಾರಾದರೂ ನನ್ನ ಮಿತ್ರರಲ್ಲಿ ಸೇರಿದ ಒಬ್ಬರಿಗೆ ತೊಂದರೆ ಕೊಟ್ಟರೆ, ಅವರಿಗೆ ಸಿಟ್ಟು ಬರುವಂತೆ ಮಾಡಿದರೆ, ಅಥವಾ ಅವರನ್ನು ದ್ವೇಷಿಸಿದರೆ ನಾನು ಅವನ ವಿರುದ್ಧ ವೈರವನ್ನು ಘೋಷಿಸಿದ್ದೇನೆ.
ವಲಿ (ಅಲ್ಲಾಹನ ಮಿತ್ರ) ಎಂದರೆ, ಅಲ್ಲಾಹನನ್ನು ಭಯಪಟ್ಟು ಜೀವಿಸುವ ಸತ್ಯವಿಶ್ವಾಸಿ. ದಾಸನಿಗೆ ವಿಶ್ವಾಸ ಮತ್ತು ದೇವಭಯವು ಎಷ್ಟರ ಮಟ್ಟಿಗೆ ಇರುತ್ತದೋ ಅಷ್ಟರ ಮಟ್ಟಿಗೆ ಅವನಿಗೆ ಅಲ್ಲಾಹನ ಸ್ನೇಹವು ದೊರೆಯುತ್ತದೆ. ಅಲ್ಲಾಹು ಕಡ್ಡಾಯಗೊಳಿಸಿದ ಕರ್ಮಗಳ ಮೂಲಕವಲ್ಲದೆ ಅವನು ಇಷ್ಟಪಡುವ ಇತರ ಯಾವುದರ ಮೂಲಕವೂ ಮುಸಲ್ಮಾನನು ಅವನಿಗೆ ಹತ್ತಿರವಾಗುವುದಿಲ್ಲ. ಕಡ್ಡಾಯ ಕರ್ಮಗಳು ಎಂದರೆ ಆಜ್ಞಾಪಾಲನೆಯ ಕರ್ಮಗಳನ್ನು ನಿರ್ವಹಿಸುವುದು ಮತ್ತು ನಿಷೇಧಿತ ಕರ್ಮಗಳಿಂದ ದೂರವಿರುವುದು. ಮುಸಲ್ಮಾನನು ಕಡ್ಡಾಯ ಕರ್ಮಗಳನ್ನು ನಿರ್ವಹಿಸುವುದರ ಜೊತೆಗೆ ಹೆಚ್ಚುವರಿ ಕರ್ಮಗಳನ್ನು (ಐಚ್ಛಿಕ ಕರ್ಮಗಳನ್ನು) ನಿರ್ವಹಿಸುತ್ತಾ ಅಲ್ಲಾಹನಿಗೆ ಹತ್ತಿರವಾಗುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ ಅವನ ಪ್ರೀತಿಯನ್ನು ಗಳಿಸುವ ತನಕ. ಅಲ್ಲಾಹು ಅವನನ್ನು ಪ್ರೀತಿಸಿದರೆ, ಅವನು ಈ ನಾಲ್ಕು ಅಂಗಗಳನ್ನು ಸರಿಯಾಗಿ ಬಳಸುವಂತೆ ಮಾಡುತ್ತಾನೆ:
ಅವನ ಶ್ರವಣವನ್ನು ಸರಿಯಾಗಿ ಬಳಸುವಂತೆ ಮಾಡುತ್ತಾನೆ. ಇದರಿಂದ ಅಲ್ಲಾಹನಿಗೆ ಇಷ್ಟವಿರುವುದನ್ನು ಮಾತ್ರ ಅವನು ಕೇಳುತ್ತಾನೆ.
ಅವನ ದೃಷ್ಟಿಯನ್ನು ಸರಿಯಾಗಿ ಬಳಸುವಂತೆ ಮಾಡುತ್ತಾನೆ. ಇದರಿಂದ ಅಲ್ಲಾಹು ನೋಡಲು ಇಷ್ಟಪಡುವುದನ್ನು ಮಾತ್ರ ಅವನು ನೋಡುತ್ತಾನೆ.
ಅವನ ಕೈಯನ್ನು ಸರಿಯಾಗಿ ಬಳಸುವಂತೆ ಮಾಡುತ್ತಾನೆ. ಇದರಿಂದ ಅಲ್ಲಾಹನಿಗೆ ಇಷ್ಟವಿರುವುದನ್ನು ಮಾತ್ರ ಅವನು ತನ್ನ ಕೈಯಿಂದ ಮಾಡುತ್ತಾನೆ.
ಅವರ ಕಾಲನ್ನು ಸರಿಯಾಗಿ ಬಳಸುವಂತೆ ಮಾಡುತ್ತಾನೆ. ಇದರಿಂದ ಅಲ್ಲಾಹು ಇಷ್ಟಪಡುವ ಕಡೆಗೆ ಮಾತ್ರ ಅವನು ನಡೆಯುತ್ತಾನೆ ಮತ್ತು ಒಳಿತಿರುವ ವಿಷಯಕ್ಕಾಗಿ ಮಾತ್ರ ಪರಿಶ್ರಮಿಸುತ್ತಾನೆ.
ಇಷ್ಟೇ ಅಲ್ಲದೆ, ಅವನು ಅಲ್ಲಾಹನೊಡನೆ ಏನಾದರೂ ಕೇಳಿದರೆ, ನಿಶ್ಚಯವಾಗಿಯೂ ಅವನು ಕೇಳಿದ್ದನ್ನು ಅಲ್ಲಾಹು ಅವನಿಗೆ ಕೊಡುತ್ತಾನೆ. ಈ ರೀತಿ ಅಲ್ಲಾಹು ಅವನ ಪ್ರಾರ್ಥನೆಗೆ ಉತ್ತರ ನೀಡುವವನಾಗುತ್ತಾನೆ. ಅವನು ಅಲ್ಲಾಹನಲ್ಲಿ ಅಭಯಕೋರಿದರೆ, ಅಥವಾ ರಕ್ಷಣೆಗಾಗಿ ಮೊರೆಯಿಟ್ಟರೆ, ನಿಶ್ಚಯವಾಗಿಯೂ ಅಲ್ಲಾಹು ಅವನಿಗೆ ಅಭಯ ನೀಡುತ್ತಾನೆ ಮತ್ತು ಅವನು ಭಯಪಡುವ ವಸ್ತುವಿನಿಂದ ಅವನನ್ನು ರಕ್ಷಿಸುತ್ತಾನೆ.
ನಂತರ ಸರ್ವಶಕ್ತನಾದ ಅಲ್ಲಾಹು ಹೇಳಿದನು: ಸತ್ಯವಿಶ್ವಾಸಿಯ ಮೇಲೆ ನನಗಿರುವ ಕರುಣೆಯಿಂದ ಅವನ ಆತ್ಮವನ್ನು ವಶಪಡಿಸಲು ನಾನು ಹಿಂಜರಿಯುವಂತೆ, ಇತರ ಯಾವ ಕಾರ್ಯದ ಬಗ್ಗೆಯೂ ನಾನು ಹಿಂಜರಿಯುವುದಿಲ್ಲ. ಏಕೆಂದರೆ, ಮರಣದಲ್ಲಿರುವ ನೋವಿನಿಂದಾಗಿ ಅವನು ಮರಣವನ್ನು ಇಷ್ಟಪಡುವುದಿಲ್ಲ, ಮತ್ತು ಸತ್ಯವಿಶ್ವಾಸಿಗೆ ನೋವುಂಟುಮಾಡುವ ಯಾವುದನ್ನೂ ಅಲ್ಲಾಹು ಇಷ್ಟಪಡುವುದಿಲ್ಲ.