+ -

عَنْ أَبِي هُرَيْرَةَ رَضِيَ اللَّهُ عَنْهُ قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«قَالَ اللَّهُ: كُلُّ عَمَلِ ابْنِ آدَمَ لَهُ، إِلَّا الصِّيَامَ، فَإِنَّهُ لِي وَأَنَا أَجْزِي بِهِ، وَالصِّيَامُ جُنَّةٌ، وَإِذَا كَانَ يَوْمُ صَوْمِ أَحَدِكُمْ فَلاَ يَرْفُثْ وَلاَ يَصْخَبْ، فَإِنْ سَابَّهُ أَحَدٌ أَوْ قَاتَلَهُ، فَلْيَقُلْ إِنِّي امْرُؤٌ صَائِمٌ، وَالَّذِي نَفْسُ مُحَمَّدٍ بِيَدِهِ، لَخُلُوفُ فَمِ الصَّائِمِ أَطْيَبُ عِنْدَ اللَّهِ مِنْ رِيحِ المِسْكِ، لِلصَّائِمِ فَرْحَتَانِ يَفْرَحُهُمَا: إِذَا أَفْطَرَ فَرِحَ، وَإِذَا لَقِيَ رَبَّهُ فَرِحَ بِصَوْمِهِ».

[صحيح] - [متفق عليه] - [صحيح البخاري: 1904]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹು ಹೇಳಿದನು: ಆದಮರ ಪುತ್ರ ಮಾಡುವ ಎಲ್ಲಾ ಕರ್ಮಗಳು ಅವನಿಗೇ ಆಗಿವೆ; ಉಪವಾಸದ ಹೊರತು. ಅದು ನನಗಾಗಿದೆ ಮತ್ತು ನಾನೇ ಅದಕ್ಕೆ ಪ್ರತಿಫಲವನ್ನು ನೀಡುತ್ತೇನೆ. ಉಪವಾಸವು ಗುರಾಣಿಯಾಗಿದೆ. ನಿಮ್ಮೆಲ್ಲೊಬ್ಬನು ಉಪವಾಸದಲ್ಲಿರುವಾಗ ಅಶ್ಲೀಲವಾಗಿ ವರ್ತಿಸದಿರಲಿ ಅಥವಾ ಉಚ್ಚ ಸ್ವರದಲ್ಲಿ ಮಾತನಾಡದಿರಲಿ. ಯಾರಾದರೂ ಅವನನ್ನು ದೂಷಿಸಿದರೆ ಅಥವಾ ಅವನೊಂದಿಗೆ ಜಗಳವಾಡಿದರೆ, ಅವನು "ನಾನು ಉಪವಾಸದಲ್ಲಿದ್ದೇನೆ" ಎಂದು ಹೇಳಲಿ. ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಉಪವಾಸಿಗನ ಬಾಯಿಯ ದುರ್ಗಂಧವು ಅಲ್ಲಾಹನ ಬಳಿ ಕಸ್ತೂರಿಗಿಂತಲೂ ಹೆಚ್ಚು ಪರಿಮಳವುಳ್ಳದ್ದಾಗಿದೆ. ಉಪವಾಸಿಗನಿಗೆ ಎರಡು ಸಂತೋಷಗಳಿದ್ದು ಅವನು ಆ ಸಂತೋಷಗಳನ್ನು ಆಸ್ವಾದಿಸುತ್ತಾನೆ: ಒಂದು: ಉಪವಾಸ ಪಾರಣೆ ಮಾಡುವಾಗ ದೊರೆಯುವ ಸಂತೋಷ, ಇನ್ನೊಂದು ಉಪವಾಸದ ಮೂಲಕ ಅವನ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವಾಗ ದೊರೆಯುವ ಸಂತೋಷ."

[صحيح] - [متفق عليه] - [صحيح البخاري - 1904]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಕುದ್ಸಿ ಹದೀಸಿನಲ್ಲಿ ಹೀಗೆ ಹೇಳುತ್ತಾನೆ:
ಆದಮರ ಪುತ್ರ ಮಾಡುವ ಎಲ್ಲಾ ಕರ್ಮಗಳು ಹತ್ತರಿಂದ ಏಳುನೂರು ಪಟ್ಟು ಇಮ್ಮಡಿ ಪ್ರತಿಫಲಗಳನ್ನು ಹೊಂದಿರುತ್ತವೆ; ಆದರೆ ಉಪವಾಸದ ಹೊರತು. ಏಕೆಂದರೆ ಅದರಲ್ಲಿ ತೋರಿಕೆ ಇಲ್ಲದಿರುವುದರಿಂದ ಅದು ನನಗಿರುವುದಾಗಿದೆ. ಅದಕ್ಕೆ ನಾನೇ ಪ್ರತಿಫಲವನ್ನು ನೀಡುತ್ತೇನೆ. ಅದರ ಪ್ರತಿಫಲ ಎಷ್ಟೆಂದು ಮತ್ತು ಅದಕ್ಕೆ ಎಷ್ಟು ಪಟ್ಟು ಇಮ್ಮಡಿ ಪ್ರತಿಫಲಗಳನ್ನು ನೀಡಲಾಗುತ್ತದೆ ಎಂದು ನನ್ನ ಹೊರತು ಯಾರೂ ತಿಳಿದಿಲ್ಲ.
ನಂತರ ಅವರು ಹೇಳುತ್ತಾರೆ: "ಉಪವಾಸವು ಗುರಾಣಿಯಾಗಿದೆ." ಅಂದರೆ ಅದು ನರಕದಿಂದ ರಕ್ಷಿಸುವ ತಡೆಗೋಡೆ, ಪರದೆ ಮತ್ತು ಭದ್ರಕೋಟೆಯಾಗಿದೆ. ಏಕೆಂದರೆ ಉಪವಾಸವೆಂದರೆ ಸ್ವೇಚ್ಛೆಗಳಿಂದ ಮತ್ತು ಪಾಪಕರ್ಮಗಳಿಂದ ದೂರವಿರುವಾಗಿದೆ. ಮತ್ತು ನರಕವು ಸ್ವೇಚ್ಛೆಗಳಿಂದ ಆವೃತವಾಗಿದೆ.
"ನಿಮ್ಮೆಲ್ಲೊಬ್ಬನು ಉಪವಾಸದಲ್ಲಿರುವಾಗ ಅಶ್ಲೀಲವಾಗಿ ವರ್ತಿಸದಿರಲಿ" ಅಂದರೆ ಸಂಭೋಗ ಮತ್ತು ಸರಸ-ಸಲ್ಲಾಪಗಳನ್ನು ಮಾಡದಿರಲಿ ಮತ್ತು ಅಶ್ಲೀಲವಾದ ಯಾವುದೇ ಮಾತುಗಳನ್ನು ಆಡದಿರಲಿ.
"ಉಚ್ಛ ಸ್ವರದಲ್ಲಿ ಮಾತನಾಡದಿರಲಿ" ಅಂದರೆ ಜಗಳವಾಡುವುದು ಮತ್ತು ಬೊಬ್ಬೆ ಹೊಡೆಯುವುದನ್ನು ಮಾಡದಿರಲಿ.
ರಮದಾನ್ ತಿಂಗಳಲ್ಲಿ ಉಪವಾಸದಲ್ಲಿರುವಾಗ "ಯಾರಾದರೂ ಅವನನ್ನು ದೂಷಿಸಿದರೆ ಅಥವಾ ಅವನೊಂದಿಗೆ ಜಗಳವಾಡಿದರೆ, ಅವನು "ನಾನು ಉಪವಾಸದಲ್ಲಿದ್ದೇನೆ" ಎಂದು ಹೇಳಲಿ. ಇದರಿಂದ ಅವನು ದೂಷಿಸುವುದನ್ನು ಅಥವಾ ಜಗಳವಾಡುವುದನ್ನು ನಿಲ್ಲಿಸಬಹುದು. ಇನ್ನು ಅವನು ನಿಜವಾಗಿಯೂ ಜಗಳಕ್ಕೆ ಬಂದರೆ, ಹಗುರವಾದ ರೀತಿಯಲ್ಲಿ ಅವನನ್ನು ಎದುರಿಸಲಿ.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಆತ್ಮವು ಯಾರ ಕೈಯಲ್ಲಿದೆಯೋ ಅವನ ಮೇಲೆ ಆಣೆ ಮಾಡಿ ಹೇಳುವುದೇನೆಂದರೆ, ಉಪವಾಸದ ಕಾರಣದಿಂದ ಉಪವಾಸಿಗನ ಬಾಯಲ್ಲಿ ಉಂಟಾಗುವ ದುರ್ಗಂಧವು ಪುನರುತ್ಥಾನ ದಿನದಂದು ಅಲ್ಲಾಹನ ಬಳಿ ನಿಮ್ಮ ಬಳಿಯಿರುವ ಕಸ್ತೂರಿಗಿಂತಲೂ ಹೆಚ್ಚು ಪರಿಮಳವುಳ್ಳದ್ದಾಗಿದೆ ಮತ್ತು ಜುಮಾ ದಿನಗಳಲ್ಲಿ ಹಾಗೂ ಅಲ್ಲಾಹನನ್ನು ಸ್ಮರಿಸುವ ಸಭೆಗಳಲ್ಲಿ ಹಚ್ಚುವುದನ್ನು ಪ್ರೋತ್ಸಾಹಿಸಲಾದ ಕಸ್ತೂರಿಗಿಂತಲೂ ಹೆಚ್ಚು ಪ್ರತಿಫಲವುಳ್ಳದ್ದಾಗಿದೆ.
ಉಪವಾಸಿಗನಿಗೆ ಎರಡು ಸಂತೋಷಗಳಿದ್ದು ಅವನು ಆ ಸಂತೋಷಗಳನ್ನು ಆಸ್ವಾದಿಸುತ್ತಾನೆ: ಒಂದು: ಉಪವಾಸ ಪಾರಣೆ ಮಾಡುವಾಗ ಅವನು ಸಂತೋಷಪಡುತ್ತಾನೆ. ಏಕೆಂದರೆ ಅದು ಅವನ ಹಸಿವೆ ಮತ್ತು ಬಾಯಾರಿಕೆಯನ್ನು ನಿವಾರಿಸುತ್ತದೆ. ಉಪವಾಸವನ್ನು ಪೂರ್ತಿ ಮಾಡಿದ್ದಕ್ಕಾಗಿ, ಆರಾಧನೆಯನ್ನು ನೆರವೇರಿಸಿದ್ದಕ್ಕಾಗಿ, ಅಲ್ಲಾಹು ಅದನ್ನು ಸುಲಭಗೊಳಿಸಿದ್ದಕ್ಕಾಗಿ ಮತ್ತು ಅದರಿಂದ ಮುಂದೆ ಉಪವಾಸ ಆಚರಿಸಲು ಅವನಿಗೆ ಶಕ್ತಿ ದೊರೆತದ್ದಕ್ಕಾಗಿ ಅವನು ಸಂತೋಷಪಡುತ್ತಾನೆ.
"ಇನ್ನೊಂದು ಉಪವಾಸದ ಮೂಲಕ ಅವನ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವಾಗ ದೊರೆಯುವ ಸಂತೋಷ." ಅಂದರೆ ಅಲ್ಲಾಹನಿಂದ ಪ್ರತಿಫಲ ದೊರೆಯುವಾಗ ಉಂಟಾಗುವ ಸಂತೋಷ.

ಹದೀಸಿನ ಪ್ರಯೋಜನಗಳು

  1. ಉಪವಾಸದ ಶ್ರೇಷ್ಠತೆಯನ್ನು ಮತ್ತು ಅದು ಉಪವಾಸಿಗನನ್ನು ಇಹಲೋಕದಲ್ಲಿ ಸ್ವೇಚ್ಛೆಗಳಿಂದ ಮತ್ತು ಪರಲೋಕದಲ್ಲಿ ನರಕ ಶಿಕ್ಷೆಯಿಂದ ಕಾಪಾಡುತ್ತದೆ ಎಂದು ತಿಳಿಸಲಾಗಿದೆ.
  2. ಅಶ್ಲೀಲ ಮತ್ತು ಅನಗತ್ಯ ಮಾತುಗಳನ್ನು ತೊರೆಯುವುದು, ಜನರಿಂದ ತೊಂದರೆ ಅನುಭವಿಸುವಾಗ ತಾಳ್ಮೆ ತೋರುವುದು ಹಾಗೂ ತಾಳ್ಮೆ ಮತ್ತು ಉಪಕಾರದ ಮೂಲಕ ಅವರ ಕೆಡುಕುಗಳನ್ನು ಎದುರಿಸುವುದು ಉಪವಾಸದ ಶಿಷ್ಟಾಚಾರಗಳಾಗಿವೆ.
  3. ಉಪವಾಸಿಗನು ಅಥವಾ ಆರಾಧಕನು ತನ್ನ ಆರಾಧನೆಯನ್ನು ಪೂರ್ತಿಗೊಳಿಸುವಾಗ ಅಥವಾ ಅದು ಪೂರ್ತಿಯಾಗುವಾಗ ಸಂತೋಷಪಡುವುದರಿಂದ ಪರಲೋಕದಲ್ಲಿ ಅವನಿಗೆ ದೊರೆಯುವ ಪ್ರತಿಫಲದಲ್ಲಿ ಕಡಿತ ಉಂಟಾಗುವುದಿಲ್ಲ.
  4. ಅಲ್ಲಾಹನನ್ನು ಭೇಟಿಯಾಗುವಾಗ, ಅಂದರೆ ತಾಳ್ಮೆ ತೋರಿದವರಿಗೆ ಮತ್ತು ಉಪವಾಸಿಗರಿಗೆ ಅಲ್ಲಾಹು ಲೆಕ್ಕವಿಲ್ಲದಷ್ಟು ಪ್ರತಿಫಲಗಳನ್ನು ಪೂರ್ಣವಾಗಿ ನೀಡುವಾಗ ದೊರೆಯುವ ಸಂತೋಷವೇ ಸಂಪೂರ್ಣವಾದ ಸಂತೋಷ.
  5. ಅಗತ್ಯ ತಲೆದೋರುವಾಗ ಮತ್ತು ಜನರ ಹಿತವನ್ನು ದೃಷ್ಟಿಯಲ್ಲಿಟ್ಟು, ತಾನು ಸತ್ಕರ್ಮದಲ್ಲಿದ್ದೇನೆಂದು ಜನರಿಗೆ ಹೇಳುವುದು ತೋರಿಕೆಯಲ್ಲ. ಏಕೆಂದರೆ ಇಲ್ಲಿ ಉಪವಾಸಿಗನು ನಾನು ಉಪವಾಸದಲ್ಲಿದ್ದೇನೆ ಎಂದು ಹೇಳುತ್ತಿದ್ದಾನೆ.
  6. ಕೈಕಾಲುಗಳನ್ನು ಪಾಪ ಕೃತ್ಯಗಳಿಂದ ತಡೆಯುವವನು, ನಾಲಗೆಯನ್ನು ಸುಳ್ಳು, ಅಶ್ಲೀಲತೆ ಮತ್ತು ಸುಳ್ಳು ಸಾಕ್ಷಿಗಳಿಂದ ತಡೆಯುವವನು ಹಾಗೂ ಹೊಟ್ಟೆಯನ್ನು ಆಹಾರ ಮತ್ತು ಪಾನೀಯಗಳಿಂದ ತಡೆಯುವನೇ ಪೂರ್ಣ ರೀತಿಯಲ್ಲಿ ಉಪವಾಸ ಆಚರಿಸುವವನು.
  7. ಉಚ್ಛ ಸ್ವರದಲ್ಲಿ ಮಾತನಾಡುವುದು, ಜಗಳವಾಡುವುದು ಮತ್ತು ಬೊಬ್ಬೆ ಹೊಡೆಯುವುದು ಉಪವಾಸವಿಲ್ಲದ ಸ್ಥಿತಿಯಲ್ಲೂ ನಿಷೇಧಿಸಲಾಗಿದ್ದರೂ ಸಹ, ಉಪವಾಸವಿರುವ ಸ್ಥಿತಿಯಲ್ಲಿ ಇವುಗಳ ನಿಷೇಧವು ಹೆಚ್ಚು ಪ್ರಬಲವಾಗಿದೆ.
  8. ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ವರದಿ ಮಾಡುವ ಹದೀಸ್ ಆಗಿದ್ದು ಇದನ್ನು ಪವಿತ್ರ (ಕುದ್ಸಿ) ಅಥವಾ ದೈವಿಕ ಹದೀಸ್ ಎಂದು ಕರೆಯಲಾಗುತ್ತದೆ. ಇಂತಹ ಹದೀಸ್‌ಗಳ ಪದಗಳು ಮತ್ತು ಅದರ ಅರ್ಥವು ಅಲ್ಲಾಹನದ್ದೇ ಆಗಿವೆ. ಆದರೆ ಇವುಗಳಿಗೆ ಕುರ್‌ಆನ್‌ನ ವಚನಗಳಿಗೆ ಇರುವ ವಿಶೇಷತೆಗಳಿಲ್ಲ. ಅಂದರೆ ಈ ವಚನಗಳನ್ನು ಪಠಿಸುವುದು ಆರಾಧನೆಯಲ್ಲ, ಇವುಗಳನ್ನು ಸ್ಪರ್ಶಿಸಲು ಶುದ್ಧಿಯಿರಬೇಕಾದ ಅಗತ್ಯವಿಲ್ಲ ಮತ್ತು ಇವು ಸವಾಲಿನ ರೂಪದಲ್ಲಿ ಅಥವಾ ಪವಾಡದ ರೂಪದಲ್ಲಿ ಅವತೀರ್ಣವಾಗಿಲ್ಲ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الرومانية المجرية الموري المالاجاشية الأورومو الجورجية المقدونية
ಅನುವಾದಗಳನ್ನು ತೋರಿಸಿ