عَنْ أَبِي هُرَيْرَةَ رَضيَ اللهُ عنه:
أَنَّهُ لَقِيَهُ النَّبِيُّ صَلَّى اللهُ عَلَيْهِ وَسَلَّمَ فِي طَرِيقٍ مِنْ طُرُقِ الْمَدِينَةِ وَهُوَ جُنُبٌ، فَانْسَلَّ فَذَهَبَ فَاغْتَسَلَ، فَتَفَقَّدَهُ النَّبِيُّ صَلَّى اللهُ عَلَيْهِ وَسَلَّمَ، فَلَمَّا جَاءَهُ قَالَ: «أَيْنَ كُنْتَ يَا أَبَا هُرَيْرَةَ؟» قَالَ: يَا رَسُولَ اللهِ، لَقِيتَنِي وَأَنَا جُنُبٌ فَكَرِهْتُ أَنْ أُجَالِسَكَ حَتَّى أَغْتَسِلَ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «سُبْحَانَ اللهِ، إِنَّ الْمُؤْمِنَ لَا يَنْجُسُ».

[صحيح] - [متفق عليه] - [صحيح مسلم: 371]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಾದ ಒಂದು ದಾರಿಯಲ್ಲಿ ಅವರನ್ನು (ಅಬೂ ಹುರೈರರನ್ನು) ಭೇಟಿಯಾದರು. ಆಗ ಅವರು (ಅಬೂ ಹುರೈರಾ) ಜುನುಬ್ (ದೊಡ್ಡ ಅಶುದ್ಧಿ) ಆಗಿದ್ದರು. ಅವರು (ಅಬೂ ಹುರೈರ) ಮೆಲ್ಲನೆ ಅಲ್ಲಿಂದ ಸರಿದು ಹೋಗಿ ಸ್ನಾನ ಮಾಡಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಹುಡುಕಿದರು. ಅವರು (ಅಬೂ ಹುರೈರಾ) ಬಂದಾಗ, ಅವರು ಕೇಳಿದರು: "ಓ ಅಬೂ ಹುರೈರಾ, ನೀನು ಎಲ್ಲಿದ್ದೆ?". ಅವರು ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ, ನೀವು ನನ್ನನ್ನು ಭೇಟಿಯಾದಾಗ ನಾನು ದೊಡ್ಡ ಅಶುದ್ಧಿಯಲ್ಲಿದ್ದೆ. ಆದ್ದರಿಂದ ನಾನು ಸ್ನಾನ ಮಾಡುವವರೆಗೆ ನಿಮ್ಮೊಂದಿಗೆ ಕುಳಿತುಕೊಳ್ಳಲು ಇಷ್ಟಪಡಲಿಲ್ಲ". ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸುಬ್‌ಹಾನಲ್ಲಾಹ್! ಖಂಡಿತವಾಗಿಯೂ ಸತ್ಯವಿಶ್ವಾಸಿಯು ಎಂದಿಗೂ ಅಶುದ್ಧನಾಗುವುದಿಲ್ಲ".

[صحيح] - [متفق عليه] - [صحيح مسلم - 371]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಮದೀನಾದ ಒಂದು ರಸ್ತೆಯಲ್ಲಿ ಭೇಟಿಯಾದರು. ಆಗ ಅಬೂ ಹುರೈರಾ ಜನಾಬತ್‌ನ (ದೊಡ್ಡ ಅಶುದ್ಧಿ) ಸ್ಥಿತಿಯಲ್ಲಿದ್ದರು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲಿನ ಗೌರವದಿಂದಾಗಿ, ಆ ಸ್ಥಿತಿಯಲ್ಲಿ ಅವರೊಂದಿಗೆ ಕುಳಿತುಕೊಳ್ಳಲು ಮತ್ತು ಮಾತನಾಡಲು ಅಬೂ ಹುರೈರಾ ಇಷ್ಟಪಡಲಿಲ್ಲ. ಏಕೆಂದರೆ ತಾನು ಅಶುದ್ಧನಾಗಿದ್ದೇನೆ ಎಂದು ಅವರು ಭಾವಿಸಿದ್ದರು. ಆದ್ದರಿಂದ ಅವರು ರಹಸ್ಯವಾಗಿ ಹೋಗಿ ಸ್ನಾನ ಮಾಡಿ, ನಂತರ ಹಿಂತಿರುಗಿ ಬಂದು ಕುಳಿತರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರು ಎಲ್ಲಿಗೆ ಹೋಗಿದ್ದರೆಂದು ಕೇಳಿದರು. ಆಗ ಅವರು ತನ್ನ ಸ್ಥಿತಿಯನ್ನು ವಿವರಿಸಿದರು, ಮತ್ತು ತಾನು ಜನಾಬತ್‌ನಿಂದ ಅಶುದ್ಧನಾಗಿದ್ದರಿಂದ ಅವರೊಂದಿಗೆ ಕುಳಿತುಕೊಳ್ಳಲು ಇಷ್ಟಪಡಲಿಲ್ಲವೆಂದು ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಶ್ಚರ್ಯಪಟ್ಟು ಹೇಳಿದರು: ಖಂಡಿತವಾಗಿಯೂ ಸತ್ಯವಿಶ್ವಾಸಿಯು ಪರಿಶುದ್ಧನಾಗಿರುತ್ತಾನೆ ಮತ್ತು ಅವನು ಯಾವುದೇ ಸ್ಥಿತಿಯಲ್ಲಿ – ಬದುಕಿದ್ದಾಗ ಅಥವಾ ಮರಣ ಹೊಂದಿದಾಗ – ಅಶುದ್ಧನಾಗುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ಜನಾಬತ್ (ದೊಡ್ಡ ಅಶುದ್ಧಿ) ಯು ನಮಾಝ್ ಮಾಡುವುದು, ಮುಸ್'ಹಫ್ (ಕುರ್‌ಆನ್ ಪ್ರತಿ) ಅನ್ನು ಸ್ಪರ್ಶಿಸುವುದು ಮತ್ತು ಮಸೀದಿಯಲ್ಲಿ ತಂಗುವುದನ್ನು ಮಾತ್ರ ತಡೆಯುತ್ತದೆ. ಮುಸ್ಲಿಮರೊಂದಿಗೆ ಕುಳಿತುಕೊಳ್ಳುವುದನ್ನು ಮತ್ತು ಅವರನ್ನು ಭೇಟಿಯಾಗುವುದನ್ನು ಅದು ತಡೆಯುವುದಿಲ್ಲ, ಅಥವಾ ಅದರಿಂದ ದೊಡ್ಡ ಅಶುದ್ಧಿಯಿರುವ ವ್ಯಕ್ತಿಯು ಅಶುದ್ಧನಾಗುವುದಿಲ್ಲ.
  2. ಸತ್ಯವಿಶ್ವಾಸಿಯು ಬದುಕಿದ್ದಾಗಲೂ ಮತ್ತು ಮರಣ ಹೊಂದಿದ ನಂತರವೂ ಶುದ್ಧನಾಗಿರುತ್ತಾನೆ.
  3. ಶ್ರೇಷ್ಠತೆ, ಜ್ಞಾನ ಮತ್ತು ಸದ್ಗುಣವುಳ್ಳ ಜನರನ್ನು ಗೌರವಿಸುವುದು, ಮತ್ತು ಅತ್ಯುತ್ತಮ ರೀತಿಯಲ್ಲಿ ಅವರೊಂದಿಗೆ ಕುಳಿತುಕೊಳ್ಳುವುದು ಪ್ರೋತ್ಸಾಹನೀಯವಾಗಿದೆ.
  4. ಅನುಯಾಯಿಯು ಮುಖಂಡನ ಬಳಿಯಿಂದ ಹೊರಟುಹೋಗುವಾಗ ಅನುಮತಿ ಕೇಳುವುದನ್ನು ನಿಯಮಗೊಳಿಸಲಾಗಿದೆ. ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಮಗೆ ತಿಳಿಸದೆ ಹೋಗಿದ್ದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕ್ಷೇಪಿಸಿದರು. ಏಕೆಂದರೆ ಅನುಮತಿ ಕೇಳುವುದು ಉತ್ತಮ ಶಿಷ್ಟಾಚಾರಗಳಲ್ಲಿ ಒಂದಾಗಿದೆ.
  5. ಆಶ್ಚರ್ಯವಾದಾಗ 'ಸುಬ್‌ಹಾನಲ್ಲಾಹ್' ಎಂದು ಹೇಳಬೇಕೆಂದು ತಿಳಿಸಲಾಗಿದೆ.
  6. ಸಂಕೋಚಪಡುವ ವಿಷಯಗಳ ಬಗ್ಗೆ ವ್ಯಕ್ತಿ ತನ್ನ ಬಗ್ಗೆ ತಾನೇ ಮಾತನಾಡಲು ಅನುಮತಿಯಿದೆ. ಅದರಲ್ಲಿ ಒಳಿತಿದ್ದರೆ.
  7. ಸತ್ಯನಿಷೇಧಿ ಅಶುದ್ಧನಾಗಿರುತ್ತಾನೆ. ಆದರೆ ಅವನ ಅಶುದ್ಧಿಯು ಅವನ ವಿಶ್ವಾಸದ ಕೊಳೆಯಿಂದಾಗಿ ಆಧ್ಯಾತ್ಮಿಕವಾಗಿದೆ (ಭೌತಿಕವಲ್ಲ).
  8. ಇಮಾಮ್ ನವವಿ ಹೇಳುತ್ತಾರೆ: ಈ ಹದೀಸ್‌ನಲ್ಲಿರುವ ಇನ್ನೊಂದು ಶಿಷ್ಟಾಚಾರವೆಂದರೆ, ತನ್ನ ಅನುಯಾಯಿಯು ತಪ್ಪು ದಾರಿಯಲ್ಲಿರಬಹುದೆಂದು ಭಯಪಡುವಂತಹ ಯಾವುದೇ ಕಾರ್ಯವನ್ನು ಮಾಡಿದರೆ, ವಿದ್ವಾಂಸನು ಅದರ ಬಗ್ಗೆ ಕೇಳಬೇಕು, ಅವನಿಗೆ ಸರಿಯಾದ ಮಾರ್ಗವನ್ನು ತಿಳಿಸಬೇಕು, ಮತ್ತು ಅದರ ನಿಯಮವನ್ನು ವಿವರಿಸಬೇಕು. ಅಲ್ಲಾಹನೇ ಹೆಚ್ಚು ಬಲ್ಲವನು.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು