عَنْ أَبِي هُرَيْرَة رَضِيَ اللَّهُ عَنْهُ قَالَ: قَالَ رَسُول اللَّهِ صَلَّى اللهُ عَلَيْهِ وَسَلَّمَ:
«إنَّ اللَّهَ تَعَالَى قَالَ: مَنْ عَادَى لِي وَلِيًّا فَقْد آذَنْتُهُ بِالحَرْبِ، وَمَا تَقَرَّبَ إلَيَّ عَبْدِي بِشَيْءٍ أَحَبَّ إلَيَّ مِمَّا افْتَرَضْتُ عَلَيْهِ، وما يَزَالُ عَبْدِي يَتَقَرَّبُ إلَيَّ بِالنَّوَافِلِ حَتَّى أُحِبَّهُ، فَإِذَا أَحْبَبْتُهُ كُنْتُ سَمْعَهُ الَّذِي يَسْمَعُ بِهِ، وَبَصَرَهُ الَّذِي يُبْصِرُ بِهِ، وَيَدَهُ الَّتِي يَبْطِشُ بِهَا، وَرِجْلَهُ الَّتِي يَمْشِي بِهَا، وَإِنْ سَأَلَنِي لَأُعْطِيَنَّهُ، وَلَئِنْ اسْتَعَاذَنِي لَأُعِيذَنَّهُ».
[صحيح] - [رواه البخاري] - [الأربعون النووية: 38]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: 'ಯಾರು ನನ್ನ 'ವಲೀ' (ಆಪ್ತಮಿತ್ರ) ನೊಂದಿಗೆ ದ್ವೇಷ ಸಾಧಿಸುತ್ತಾನೋ, ನಾನು ಅವನ ವಿರುದ್ಧ ಯುದ್ಧವನ್ನು ಘೋಷಿಸಿದ್ದೇನೆ. ನಾನು ನನ್ನ ದಾಸನ ಮೇಲೆ ಕಡ್ಡಾಯಗೊಳಿಸಿದ್ದಕ್ಕಿಂತ ಹೆಚ್ಚು ಪ್ರಿಯವಾದ ಬೇರೆ ಯಾವುದೇ ವಿಷಯದಿಂದ ನನ್ನ ದಾಸನು ನನ್ನ ಸಾಮೀಪ್ಯವನ್ನು ಪಡೆಯುವುದಿಲ್ಲ. ನನ್ನ ದಾಸನು 'ನವಾಫಿಲ್' (ಐಚ್ಛಿಕ ಆರಾಧನೆಗಳು) ಗಳ ಮೂಲಕ ನನ್ನ ಸಾಮೀಪ್ಯವನ್ನು ಪಡೆಯುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ, ನಾನು ಅವನನ್ನು ಪ್ರೀತಿಸುವವರೆಗೆ. ನಾನೇನಾದರೂ ಅವನನ್ನು ಪ್ರೀತಿಸಿದರೆ, ನಾನು ಅವನು ಕೇಳುವ ಕಿವಿಯಾಗುತ್ತೇನೆ, ಅವನು ನೋಡುವ ಕಣ್ಣಾಗುತ್ತೇನೆ, ಅವನು ಹಿಡಿಯುವ ಕೈಯಾಗುತ್ತೇನೆ, ಮತ್ತು ಅವನು ನಡೆಯುವ ಕಾಲಾಗುತ್ತೇನೆ. ಒಂದು ವೇಳೆ ಅವನು ನನ್ನಲ್ಲಿ ಏನನ್ನಾದರೂ ಕೇಳಿದರೆ, ನಾನು ಖಂಡಿತವಾಗಿಯೂ ಅವನಿಗೆ ಅದನ್ನು ನೀಡುತ್ತೇನೆ, ಮತ್ತು ಒಂದು ವೇಳೆ ಅವನು ನನ್ನಲ್ಲಿ ಅಭಯ ಕೋರಿದರೆ, ನಾನು ಖಂಡಿತವಾಗಿಯೂ ಅವನಿಗೆ ಅಭಯ ನೀಡುತ್ತೇನೆ' ".
[صحيح] - [رواه البخاري] - [الأربعون النووية - 38]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸ್ ಕುದ್ಸಿಯಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಯಾರಾದರೂ ನನ್ನ 'ಔಲಿಯಾ' (ಆಪ್ತಮಿತ್ರರು) ಗಳಲ್ಲಿ ಒಬ್ಬ 'ವಲೀ'ಗೆ ನೋವುಂಟುಮಾಡಿದರೆ, ಕೋಪಗೊಳಿಸಿದರೆ ಮತ್ತು ದ್ವೇಷಿಸಿದರೆ, ನಾನು ಅವನೊಂದಿಗೆ ಯುದ್ಧ ಮಾಡುವೆನೆಂದು ತಿಳಿಸಿದ್ದೇನೆ ಮತ್ತು ಘೋಷಿಸಿದ್ದೇನೆ. 'ವಲೀ' ಎಂದರೆ ಅಲ್ಲಾಹನನ್ನು ಭಯಪಡುವ ಸತ್ಯವಿಶ್ವಾಸಿ. ದಾಸನಿಗೆ ಎಷ್ಟು ಈಮಾನ್ (ವಿಶ್ವಾಸ) ಮತ್ತು ತಖ್ವಾ (ದೇವಭಯ) ಇದೆಯೋ, ಆ ಮಟ್ಟಿಗೆ ಅವನಿಗೆ ಅಲ್ಲಾಹನ 'ವಿಲಾಯತ್' (ಮಿತ್ರತ್ವ/ರಕ್ಷಣೆ) ಯ ಪಾಲು ಇರುತ್ತದೆ. ಅಲ್ಲಾಹನಿಗೆ ಇಷ್ಟವಾದ ವಿಷಯಗಳ ಮೂಲಕವಲ್ಲದೆ ಒಬ್ಬ ಮುಸ್ಲಿಮನಿಗೆ ಅಲ್ಲಾಹನ ಸಾಮೀಪ್ಯವನ್ನು ಪಡೆಯಲು ಸಾಧ್ಯವಿಲ್ಲ. ಅಲ್ಲಾಹನಿಗೆ ಇಷ್ಟವಾದ ವಿಷಯಗಳೆಂದರೆ, ಸತ್ಕರ್ಮಗಳನ್ನು ನಿರ್ವಹಿಸುವುದು ಮತ್ತು ನಿಷಿದ್ಧ ಕಾರ್ಯಗಳಿಂದ ದೂರವಿರುವುದು ಮುಂತಾದ ಅವನು ಕಡ್ಡಾಯಗೊಳಿಸಿದ ಕಾರ್ಯಗಳಾಗಿವೆ. ಈ ಕಡ್ಡಾಯ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ ದಾಸನು 'ನವಾಫಿಲ್' (ಐಚ್ಛಿಕ ಆರಾಧನೆಗಳು) ಗಳ ಮೂಲಕವೂ ಅಲ್ಲಾಹನ ಸಾಮೀಪ್ಯವನ್ನು ಪಡೆಯುತ್ತಲೇ ಇರುತ್ತಾನೆ. ಎಲ್ಲಿಯವರೆಗೆಂದರೆ, ಅಲ್ಲಾಹನ ಪ್ರೀತಿಯನ್ನು ಗಳಿಸುವವರೆಗೆ. ಅಲ್ಲಾಹನೇನಾದರೂ ಅವನನ್ನು ಪ್ರೀತಿಸಿದರೆ, ಅಲ್ಲಾಹು ಅವನಿಗೆ ಈ ನಾಲ್ಕು ಅಂಗಗಳಲ್ಲಿ ಸರಿಯಾದುದನ್ನು ತೋರಿಸುತ್ತಾನೆ: ದಾಸನು ತನ್ನ ಕಿವಿಯಿಂದ ಸರಿಯಾದುದನ್ನು ಕೇಳುವಂತೆ ಮಾಡುತ್ತಾನೆ. ಇದರಿಂದ ದಾಸನು ಅಲ್ಲಾಹು ಸಂತೃಪ್ತನಾಗುವ ವಿಷಯವನ್ನು ಹೊರತುಪಡಿಸಿ ಬೇರೇನೂ ಕೇಳುವುದಿಲ್ಲ. ದಾಸನು ತನ್ನ ಕಣ್ಣಿನಿಂದ ಸರಿಯಾದುದನ್ನು ನೋಡುವಂತೆ ಮಾಡುತ್ತಾನೆ. ಇದರಿಂದ ದಾಸನು ಅಲ್ಲಾಹು ಸಂತೃಪ್ತನಾಗುವ ವಿಷಯವನ್ನು ಹೊರತುಪಡಿಸಿ ಬೇರೇನೂ ನೋಡುವುದಿಲ್ಲ. ದಾಸನು ತನ್ನ ಕೈಯಿಂದ ಸರಿಯಾದುದನ್ನು ಮಾಡುವಂತೆ ಮಾಡುತ್ತಾನೆ. ಇದರಿಂದ ದಾಸನು ಅಲ್ಲಾಹು ಸಂತೃಪ್ತನಾಗುವ ವಿಷಯವನ್ನು ಹೊರತುಪಡಿಸಿ ಬೇರೇನೂ ಮಾಡುವುದಿಲ್ಲ. ದಾಸನು ತನ್ನ ಕಾಲಿನಿಂದ ಸರಿಯಾದುದರ ಕಡೆಗೆ ನಡೆಯುವಂತೆ ಮಾಡುತ್ತಾನೆ. ಇದರಿಂದ ದಾಸನು ಅಲ್ಲಾಹು ಸಂತೃಪ್ತನಾಗುವ ವಿಷಯವನ್ನು ಹೊರತುಪಡಿಸಿ ಬೇರೆಲ್ಲಿಗೂ ನಡೆಯುವುದಿಲ್ಲ, ಒಳಿತಿನ ಕಾರ್ಯಗಳ ಕಡೆಗಲ್ಲದೆ ಬೇರೆಲ್ಲಿಗೂ ಓಡುವುದಿಲ್ಲ. ಇದರೊಂದಿಗೆ, ಒಂದು ವೇಳೆ ಅವನು ಅಲ್ಲಾಹನಲ್ಲಿ ಏನನ್ನಾದರೂ ಕೇಳಿದರೆ, ಅಲ್ಲಾಹು ಅವನು ಕೇಳಿದ್ದನ್ನು ಅವನಿಗೆ ನೀಡುತ್ತಾನೆ. ಆಗ ಅವನು ಪ್ರಾರ್ಥನೆಗಳು ಸ್ವೀಕರಿಸಲ್ಪಡುವ ವ್ಯಕ್ತಿಯಾಗುತ್ತಾನೆ. ಒಂದು ವೇಳೆ ಅವನು ರಕ್ಷಣೆಗಾಗಿ ಅಲ್ಲಾಹನಲ್ಲಿ ಅಭಯ ಕೋರಿದರೆ ಮತ್ತು ಅವನ ಮೊರೆ ಹೋದರೆ, ಸರ್ವಶಕ್ತನಾದ ಅಲ್ಲಾಹು ಅವನಿಗೆ ಅಭಯ ನೀಡುತ್ತಾನೆ ಮತ್ತು ಅವನು ಭಯಪಡುವ ವಿಷಯದಿಂದ ಅವನನ್ನು ರಕ್ಷಿಸುತ್ತಾನೆ.