عَنْ أَبِي هُرَيْرَةَ رَضِيَ اللَّهُ عَنْهُ قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«مَنْ كَانَتْ لَهُ مَظْلَمَةٌ لِأَخِيهِ مِنْ عِرْضِهِ أَوْ شَيْءٍ فَلْيَتَحَلَّلْهُ مِنْهُ اليَوْمَ، قَبْلَ أَلا يَكُونَ دِينَارٌ وَلاَ دِرْهَمٌ، إِنْ كَانَ لَهُ عَمَلٌ صَالِحٌ أُخِذَ مِنْهُ بِقَدْرِ مَظْلَمَتِهِ، وَإِلَمْ تَكُنْ لَهُ حَسَنَاتٌ أُخِذَ مِنْ سَيِّئَاتِ صَاحِبِهِ فَحُمِلَ عَلَيْهِ».
[صحيح] - [رواه البخاري] - [صحيح البخاري: 2449]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ತನ್ನ ಸಹೋದರನಿಗೆ ಅವನ ಗೌರವಕ್ಕೆ ಸಂಬಂಧಿಸಿದಂತೆ ಅಥವಾ ಬೇರೆ ಯಾವುದೇ ವಿಷಯದಲ್ಲಿ ಅನ್ಯಾಯ ಮಾಡಿದ್ದಾನೋ, ಅವನು ಇಂದೇ, ಅದನ್ನು ಅವನಿಂದ ಪರಿಹರಿಸಿಕೊಳ್ಳಲಿ. (ಅಂದರೆ) ಯಾವ ದಿನ ದೀನಾರ್ (ಚಿನ್ನದ ನಾಣ್ಯ) ಮತ್ತು ದಿರ್ಹಮ್ (ಬೆಳ್ಳಿಯ ನಾಣ್ಯ) ಗಳು ಇರುವುದಿಲ್ಲವೋ ಆ ದಿನ ಬರುವ ಮೊದಲು. (ಏಕೆಂದರೆ, ಆ ದಿನ) ಒಂದು ವೇಳೆ ಅವನ ಬಳಿ ಸತ್ಕರ್ಮಗಳಿದ್ದರೆ, ಅವನ ಅನ್ಯಾಯದ ಪ್ರಮಾಣಕ್ಕೆ ಅನುಗುಣವಾಗಿ ಅವನಿಂದ ತೆಗೆದುಕೊಳ್ಳಲಾಗುವುದು. ಇನ್ನು ಒಂದು ವೇಳೆ ಅವನ ಬಳಿ ಸತ್ಕರ್ಮಗಳು ಇಲ್ಲದಿದ್ದರೆ, ಅವನ ಸಂಗಡಿಗನ (ಅನ್ಯಾಯಕ್ಕೊಳಗಾದವನ) ಪಾಪಗಳಿಂದ (ಕೆಲವನ್ನು) ತೆಗೆದು ಅವನ ಮೇಲೆ ಹೇರಲಾಗುವುದು".
[صحيح] - [رواه البخاري] - [صحيح البخاري - 2449]
ಗೌರವ, ಸಂಪತ್ತು ಅಥವಾ ರಕ್ತದ ವಿಷಯದಲ್ಲಿ ತನ್ನ ಮುಸ್ಲಿಂ ಸಹೋದರನಿಗೆ ಅನ್ಯಾಯ ಮಾಡಿದ ಪ್ರತಿಯೊಬ್ಬನೂ, ತಾನು ಅನ್ಯಾಯ ಮಾಡಿದವನಿಂದ, ಈ ಪ್ರಪಂಚದಲ್ಲಿರುವಾಗಲೇ, ಪುನರುತ್ಥಾನ ದಿನ ಬರುವ ಮೊದಲು ಕ್ಷಮೆಯನ್ನು ಕೇಳಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸಿದರು. ಏಕೆಂದರೆ, ಆ ದಿನ ಅನ್ಯಾಯ ಮಾಡಿದವನಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಚಿನ್ನದ ದೀನಾರ್ ಅಥವಾ ಬೆಳ್ಳಿಯ ದಿರ್ಹಮ್ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಏಕೆಂದರೆ ಆ ದಿನ ಪ್ರತಿಫಲವು ಪುಣ್ಯಗಳ ಮತ್ತು ಪಾಪಗಳ ಮೂಲಕವಿರುತ್ತದೆ. ಅಂದರೆ, ಅನ್ಯಾಯಕ್ಕೊಳಗಾದವನು ತನಗೆ ಆದ ಅನ್ಯಾಯದ ಪ್ರಮಾಣಕ್ಕೆ ಅನುಗುಣವಾಗಿ ಅನ್ಯಾಯಗಾರನ ಪುಣ್ಯಗಳಿಂದ ಕೆಲವನ್ನು ತೆಗೆದುಕೊಳ್ಳುತ್ತಾನೆ. ಒಂದು ವೇಳೆ ಅನ್ಯಾಯಗಾರನ ಬಳಿ ಪುಣ್ಯಗಳಿಲ್ಲದಿದ್ದರೆ, ಅನ್ಯಾಯಕ್ಕೊಳಗಾದವನ ಪಾಪಗಳನ್ನು ಅನ್ಯಾಯದ ಪ್ರಮಾಣಕ್ಕೆ ಅನುಗುಣವಾಗಿ ಅನ್ಯಾಯಗಾರನ ಮೇಲೆ ಹಾಕಲಾಗುತ್ತದೆ.