عَنْ أَبِي هُرَيْرَةَ رضي الله عنه عَنِ النَّبِيِّ صلى الله عليه وسلم قَالَ:
«دَعُونِي مَا تَرَكْتُكُمْ، إِنَّمَا هَلَكَ مَنْ كَانَ قَبْلَكُمْ بِسُؤَالِهِمْ وَاخْتِلَافِهِمْ عَلَى أَنْبِيَائِهِمْ، فَإِذَا نَهَيْتُكُمْ عَنْ شَيْءٍ فَاجْتَنِبُوهُ، وَإِذَا أَمَرْتُكُمْ بِأَمْرٍ فَأْتُوا مِنْهُ مَا اسْتَطَعْتُمْ».
[صحيح] - [متفق عليه] - [صحيح البخاري: 7288]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಾನು ನಿಮ್ಮನ್ನು ಬಿಟ್ಟಂತೆಯೇ ನೀವು ನನ್ನನ್ನು ಬಿಡಿ. ನಿಮಗಿಂತ ಮೊದಲಿನವರು ನಾಶವಾಗಿದ್ದು ಅವರು ತಮ್ಮ ಪ್ರವಾದಿಗಳೊಂದಿಗೆ ಪ್ರಶ್ನೆ ಕೇಳಿ ನಂತರ ಅದಕ್ಕೆ ವಿರುದ್ಧವಾಗಿ ಸಾಗಿದ ಕಾರಣದಿಂದಾಗಿದೆ. ಆದ್ದರಿಂದ, ನಾನು ನಿಮಗೆ ಒಂದು ವಿಷಯವನ್ನು ನಿಷೇಧಿಸಿದರೆ ಅದರಿಂದ ದೂರವಿರಿ. ನಾನು ನಿಮಗೆ ಏನಾದರೂ ಆಜ್ಞಾಪಿಸಿದರೆ, ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅದನ್ನು ನಿರ್ವಹಿಸಿರಿ."
[صحيح] - [متفق عليه] - [صحيح البخاري - 7288]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಧರ್ಮಶಾಸ್ತ್ರದ ನಿಯಮಗಳು ಮೂರು ವಿಧಗಳಲ್ಲಿವೆ: ಮೌನ ವಹಿಸಲಾದ ವಿಷಯಗಳು, ನಿಷೇಧಿಸಲಾದ ವಿಷಯಗಳು ಮತ್ತು ಆಜ್ಞಾಪಿಸಲಾದ ವಿಷಯಗಳು.
ಮೊದಲನೆಯ ವಿಧವು ಶಾಸ್ತ್ರವು ಮೌನ ವಹಿಸಿದ ವಿಷಯಗಳು. ಅವುಗಳಿಗೆ ಯಾವುದೇ ನಿಯಮಗಳಿಲ್ಲ. ಮೂಲತತ್ವದ ಪ್ರಕಾರ ಯಾವುದೇ ವಿಷಯವೂ ಕಡ್ಡಾಯವಲ್ಲ. ಆದರೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ, ಕಡ್ಡಾಯ ಅಥವಾ ನಿಷೇಧದ ಬಗ್ಗೆ ವಿಧಿ ಅವತೀರ್ಣವಾಗಬಹುದು ಎಂಬ ಭಯದಿಂದ ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಕೇಳದಿರುವುದು ಕಡ್ಡಾಯವಾಗಿತ್ತು. ಏಕೆಂದರೆ, ಅಲ್ಲಾಹು ದಾಸರ ಮೇಲಿರುವ ಕರುಣೆಯಿಂದಾಗಿ ಅವುಗಳನ್ನು (ಕಡ್ಡಾಯ ಅಥವಾ ನಿಷಿದ್ಧವೆನ್ನದೆ) ಬಿಟ್ಟಿದ್ದನು. ಆದರೆ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣಾನಂತರ, ಧಾರ್ಮಿಕ ವಿಧಿ ಕೇಳುವ ಉದ್ದೇಶದಿಂದ, ಅಥವಾ ಧಾರ್ಮಿಕ ವಿಷಯಗಳಲ್ಲಿ ಅಗತ್ಯವಾದ ಜ್ಞಾನವನ್ನು ಪಡೆಯುವ ಉದ್ದೇಶದಿಂದ ಪ್ರಶ್ನೆ ಕೇಳುವುದಾದರೆ, ಅದಕ್ಕೆ ಅನುಮತಿಯಿದೆ, ಮಾತ್ರವಲ್ಲದೆ ಅದು ಅತ್ಯಾವಶ್ಯಕವೂ ಆಗಿದೆ. ಆದರೆ, ಪ್ರಶ್ನೆ ಕೇಳುವುದು ಮೊಂಡುತನ ಮತ್ತು ಸೋಗಲಾಡಿತನದಿಂದಾಗಿದ್ದರೆ, ಅದನ್ನೇ ಈ ಹದೀಸಿನಲ್ಲಿ ಪ್ರಶ್ನೆ ಕೇಳಬಾರದೆಂದು ಹೇಳಲಾಗಿದೆ. ಏಕೆಂದರೆ, ಅದು ಬನೂ ಇಸ್ರಾಯೀಲರಿಗೆ ಸಂಭವಿಸಿದ ಅದೇ ಅವಸ್ಥೆಗೆ ಒಯ್ಯುವ ಸಾಧ್ಯತೆಯಿದೆ. ಅವರೊಡನೆ ಒಂದು ಹಸುವನ್ನು ಕೊಯ್ಯಲು ಆದೇಶಿಸಲಾಗಿತ್ತು. ಅವರು ಯಾವುದೇ ಒಂದು ಹಸುವನ್ನು ಕೊಯ್ದಿದ್ದರೆ ಆ ಆಜ್ಞೆಯನ್ನು ಪಾಲಿಸಿದಂತಾಗುತ್ತಿತ್ತು. ಆದರೆ ಅವರು ಕಠೋರತನ ತೋರಿಸಿದಾಗ, ಅವರಿಗೆ ಕಠೋರಗೊಳಿಸಲಾಯಿತು.
ಎರಡನೆಯದು: ನಿಷೇಧಿತ ವಿಷಯಗಳು. ಅಂದರೆ, ತೊರೆಯುವವನಿಗೆ ಪ್ರತಿಫಲ ಮತ್ತು ಮಾಡುವವನಿಗೆ ಶಿಕ್ಷೆಯಿರುವ ವಿಷಯಗಳು. ಇವೆಲ್ಲವುಗಳಿಂದ ದೂರವಿರುವುದು ಕಡ್ಡಾಯವಾಗಿದೆ.
ಮೂರನೆಯದು: ಆಜ್ಞಾಪಿಸಲಾದ ವಿಷಯಗಳು. ಅಂದರೆ, ಮಾಡುವವನಿಗೆ ಪ್ರತಿಫಲ ಮತ್ತು ತೊರೆಯುವವನಿಗೆ ಶಿಕ್ಷೆಯಿರುವ ವಿಷಯಗಳು. ಇವುಗಳನ್ನು ಸಾಮರ್ಥ್ಯಕ್ಕೆ ತಕ್ಕಂತೆ ನಿರ್ವಹಿಸುವುದು ಕಡ್ಡಾಯವಾಗಿದೆ.