عَنْ أَبِي هُرَيْرَةَ رَضيَ اللهُ عنه قَالَ:
جَاءَ رَجُلٌ إِلَى رَسُولِ اللهِ صَلَّى اللهُ عَلَيْهِ وَسَلَّمَ، فَقَالَ: يَا رَسُولَ اللهِ، أَرَأَيْتَ إِنْ جَاءَ رَجُلٌ يُرِيدُ أَخْذَ مَالِي؟ قَالَ: «فَلَا تُعْطِهِ مَالَكَ» قَالَ: أَرَأَيْتَ إِنْ قَاتَلَنِي؟ قَالَ: «قَاتِلْهُ» قَالَ: أَرَأَيْتَ إِنْ قَتَلَنِي؟ قَالَ: «فَأَنْتَ شَهِيدٌ»، قَالَ: أَرَأَيْتَ إِنْ قَتَلْتُهُ؟ قَالَ: «هُوَ فِي النَّارِ».

[صحيح] - [رواه مسلم] - [صحيح مسلم: 140]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಒಬ್ಬ ವ್ಯಕ್ತಿ ಬಂದು ನನ್ನ ಸಂಪತ್ತನ್ನು ಕಸಿದುಕೊಳ್ಳಲು ಬಯಸಿದರೆ (ನಾನೇನು ಮಾಡಬೇಕು) ಎಂದು ತಿಳಿಸಿರಿ?" ಪ್ರವಾದಿಯವರು ಹೇಳಿದರು: "ನಿನ್ನ ಸಂಪತ್ತನ್ನು ಅವನಿಗೆ ಕೊಡಬೇಡ". ಅವರು (ವ್ಯಕ್ತಿ) ಕೇಳಿದರು: "ಅವನು ನನ್ನೊಂದಿಗೆ ಹೋರಾಡಿದರೆ (ನಾನೇನು ಮಾಡಬೇಕು) ಎಂದು ತಿಳಿಸಿರಿ?" ಪ್ರವಾದಿಯವರು ಹೇಳಿದರು: "ಅವನೊಂದಿಗೆ ಹೋರಾಡು". ಅವರು ಕೇಳಿದರು: "ಅವನು ನನ್ನನ್ನು ಕೊಂದರೆ (ನನ್ನ ಗತಿಯೇನು) ಎಂದು ತಿಳಿಸಿರಿ?" ಪ್ರವಾದಿಯವರು ಹೇಳಿದರು: "ಹಾಗಾದರೆ ನೀನು ಶಹೀದ್ (ಹುತಾತ್ಮ)". ಅವರು ಕೇಳಿದರು: "ನಾನು ಅವನನ್ನು ಕೊಂದರೆ (ಅವನ ಗತಿಯೇನು) ಎಂದು ತಿಳಿಸಿರಿ?". ಪ್ರವಾದಿಯವರು ಹೇಳಿದರು: "ಅವನು ನರಕದಲ್ಲಿರುತ್ತಾನೆ".

[صحيح] - [رواه مسلم] - [صحيح مسلم - 140]

ವಿವರಣೆ

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಒಬ್ಬ ವ್ಯಕ್ತಿ ಬಂದು ನನ್ನ ಸಂಪತ್ತನ್ನು ಕಸಿದುಕೊಳ್ಳಲು ಬಯಸಿದರೆ (ನಾನೇನು ಮಾಡಬೇಕು) ಎಂದು ತಿಳಿಸಿರಿ? ಪ್ರವಾದಿಯವರು ಹೇಳಿದರು: ನೀನು ಅವನಿಗೆ ಶರಣಾಗಿ ನಿನ್ನ ಸಂಪತ್ತನ್ನು ಅವನಿಗೆ ನೀಡುವುದು ಕಡ್ಡಾಯವಲ್ಲ. ಅವರು (ವ್ಯಕ್ತಿ) ಕೇಳಿದರು: ಅವನು ನನ್ನೊಂದಿಗೆ ಹೋರಾಡಿದರೆ (ನಾನೇನು ಮಾಡಬೇಕು) ಎಂದು ತಿಳಿಸಿರಿ? ಪ್ರವಾದಿಯವರು ಹೇಳಿದರು: ಅವನೊಂದಿಗೆ ಹೋರಾಡಲು ನಿನಗೆ ಅನುಮತಿಯಿದೆ. ಅವರು (ವ್ಯಕ್ತಿ) ಕೇಳಿದರು: ಅವನು ನನ್ನನ್ನು ಕೊಂದರೆ (ನನ್ನ ಗತಿಯೇನು) ಎಂದು ತಿಳಿಸಿರಿ? ಪ್ರವಾದಿಯವರು ಹೇಳಿದರು: ಹಾಗಾದರೆ ನೀನು ಶಹೀದ್ (ಹುತಾತ್ಮ) ಆಗುವೆ. ಅವರು (ವ್ಯಕ್ತಿ) ಕೇಳಿದರು: ನಾನು ಅವನನ್ನು ಕೊಂದರೆ (ಅವನ ಗತಿಯೇನು) ಎಂದು ತಿಳಿಸಿರಿ? ಪ್ರವಾದಿಯವರು ಹೇಳಿದರು: ಅವನು ಪುನರುತ್ಥಾನ ದಿನದಂದು ನರಕದಲ್ಲಿ ಶಿಕ್ಷಿಸಲ್ಪಡಲು ಅರ್ಹನಾಗುತ್ತಾನೆ.

ಹದೀಸಿನ ಪ್ರಯೋಜನಗಳು

  1. ಇಮಾಮ್ ನವವಿ ಹೇಳುತ್ತಾರೆ: "ಕುಟುಂಬದ ರಕ್ಷಣೆ ಮಾಡುವುದು ಕಡ್ಡಾಯವಾಗಿದೆ ಎಂಬುದರಲ್ಲಿ ಭಿನ್ನಮತವಿಲ್ಲ. ಆದರೆ, ಆತ್ಮರಕ್ಷಣೆಗಾಗಿ (ಆಕ್ರಮಣಕಾರನನ್ನು) ಕೊಲ್ಲುವ ಬಗ್ಗೆ ನಮ್ಮ ಮತ್ತು ಇತರ ಮಝ್‌ಹಬ್‌ಗಳಲ್ಲಿ ಭಿನ್ನಾಭಿಪ್ರಾಯವಿದೆ. ಸಂಪತ್ತಿನ ರಕ್ಷಣೆ ಮಾಡುವುದು ಅನುಮತಿಸಲ್ಪಟ್ಟಿದೆಯೇ ವಿನಾ ಕಡ್ಡಾಯವಲ್ಲ."
  2. ಕರ್ಮಕ್ಕಿಂತ ಮೊದಲು ಜ್ಞಾನ (ಪಡೆಯಬೇಕು) ಎಂಬುದಕ್ಕೆ ಈ ಹದೀಸ್ ಪುರಾವೆಯಾಗಿದೆ. ಈ ಸಹಾಬಿಯು ತಾನು ಕರ್ಮವೆಸಗುವ ಮೊದಲು ತನ್ನ ಮೇಲೆ ಕಡ್ಡಾಯವಾಗಿರುವುದು ಏನು ಎಂದು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು.
  3. ಆಕ್ರಮಣಕಾರನನ್ನು ತಡೆಯುವಾಗ ಹಂತಹಂತವಾದ ಕ್ರಮಗಳನ್ನು ಅನುಸರಿಸಬೇಕು. ಅವನೊಂದಿಗೆ ಹೋರಾಟವನ್ನು ಪ್ರಾರಂಭಿಸುವ ಮೊದಲು ಉಪದೇಶ ನೀಡಬೇಕು ಅಥವಾ (ಇತರರನ್ನು) ಸಹಾಯಕ್ಕಾಗಿ ಕೂಗಿಕೊಳ್ಳಬೇಕು. ಒಂದು ವೇಳೆ ಅವನೊಂದಿಗೆ ಹೋರಾಟವನ್ನು ಪ್ರಾರಂಭಿಸಿದರೆ, ಅವನನ್ನು ಕೊಲ್ಲುವುದಲ್ಲ, ಬದಲಿಗೆ ಅವನನ್ನು ತಡೆಯುವುದೇ ಮುಖ್ಯ ಗುರಿಯಾಗಿರಬೇಕು.
  4. ಮುಸ್ಲಿಮನ ರಕ್ತ, ಸಂಪತ್ತು ಮತ್ತು ಮಾನವು ಪವಿತ್ರವಾಗಿದೆ ಎಂದು ತಿಳಿಸಲಾಗಿದೆ.
  5. ಇಮಾಮ್ ನವವಿ ಹೇಳುತ್ತಾರೆ: "ತಿಳಿದಿರಲಿ, ಶಹೀದ್ (ಹುತಾತ್ಮ) ಮೂರು ವಿಧಗಳಾಗಿರುತ್ತಾರೆ. ಒಂದು: ಸತ್ಯನಿಷೇಧಿಗಳೊಂದಿಗಿನ ಯುದ್ಧದಲ್ಲಿ, ಯುದ್ಧಕ್ಕೆ ಸಂಬಂಧಿಸಿದ ಕಾರಣಗಳಿಂದ ಕೊಲ್ಲಲ್ಪಟ್ಟವನು. ಇವನಿಗೆ ಪರಲೋಕದ ಪುಣ್ಯದಲ್ಲಿ ಮತ್ತು ಇಹಲೋಕದ ವಿಧಿಗಳಲ್ಲಿ ಶಹೀದ್‌ನ ಸ್ಥಾನಮಾನವಿದೆ. ಅವನನ್ನು ಸ್ನಾನ ಮಾಡಿಸಲಾಗುವುದಿಲ್ಲ ಮತ್ತು ಅವನಿಗೆ (ಜನಾಝಾ) ನಮಾಝ್ ನಿರ್ವಹಿಸಲಾಗುವುದಿಲ್ಲ. ಎರಡು: ಪುಣ್ಯದಲ್ಲಿ ಶಹೀದ್‌ನ ಸ್ಥಾನಮಾನವಿದೆ, ಆದರೆ ಇಹಲೋಕದ ವಿಧಿಗಳಲ್ಲಿ ಇಲ್ಲ. ಉದಾಹರಣೆಗೆ, ಹೊಟ್ಟೆಯ ಕಾಯಿಲೆಯಿಂದ ಮರಣ ಹೊಂದಿದವನು, ಪ್ಲೇಗ್‌ನಿಂದ ಮರಣ ಹೊಂದಿದವನು, ಕಟ್ಟಡ ಕುಸಿದು ಮರಣ ಹೊಂದಿದವನು, ತನ್ನ ಸಂಪತ್ತನ್ನು ರಕ್ಷಿಸುವಾಗ ಕೊಲ್ಲಲ್ಪಟ್ಟವನು, ಮತ್ತು ಅಧಿಕೃತ ಹದೀಸ್‌ಗಳಲ್ಲಿ ಶಹೀದ್ ಎಂದು ಹೆಸರಿಸಲ್ಪಟ್ಟವರು. ಇವರನ್ನು ಸ್ನಾನ ಮಾಡಿಸಲಾಗುತ್ತದೆ ಮತ್ತು ಇವರಿಗೆ (ಜನಾಝ) ನಮಾಝ್ ನಿರ್ವಹಿಸಲಾಗುತ್ತದೆ. ಇವರಿಗೆ ಪರಲೋಕದಲ್ಲಿ ಶಹೀದ್‌ಗಳ ಪುಣ್ಯವಿದೆ. ಆದರೆ ಇವರ ಪುಣ್ಯವು ಮೊದಲನೆಯವರ ಪುಣ್ಯದಷ್ಟೇ ಇರಬೇಕೆಂದಿಲ್ಲ. ಮೂರು: ಯುದ್ಧದ ಸೊತ್ತಿನಲ್ಲಿ ವಂಚನೆ ಮಾಡಿದವನು ಮತ್ತು ಅವನಂತೆಯೇ ಯಾರನ್ನು ಶಹೀದ್ ಎಂದು ಕರೆಯುವುದನ್ನು ಹದೀಸ್‌ಗಳಲ್ಲಿ ನಿರಾಕರಿಸಲಾಗಿದೆಯೋ, ಅವನು ಸತ್ಯನಿಷೇಧಿಗಳೊಂದಿಗಿನ ಯುದ್ಧದಲ್ಲಿ ಕೊಲ್ಲಲ್ಪಟ್ಟರೆ, ಅವನಿಗೆ ಇಹಲೋಕದಲ್ಲಿ ಶಹೀದ್‌ನ ವಿಧಿ ಅನ್ವಯಿಸುತ್ತದೆ. ಅಂದರೆ ಅವನನ್ನು ಸ್ನಾನ ಮಾಡಿಸಲಾಗುವುದಿಲ್ಲ, ಮತ್ತು ಅವನಿಗೆ (ಜನಾಝ) ನಮಾಝ್ ನಿರ್ವಹಿಸಲಾಗುವುದಿಲ್ಲ. ಆದರೆ, ಅವನಿಗೆ ಪರಲೋಕದಲ್ಲಿ ಪರಿಪೂರ್ಣವಾದ ಪುಣ್ಯವಿರುವುದಿಲ್ಲ."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು