عَنِ الْبَرَاءِ بْنِ عَازِبٍ رَضيَ اللهُ عنه قَالَ:
أَمَرَنَا رَسُولُ اللهِ صَلَّى اللهُ عَلَيْهِ وَسَلَّمَ بِسَبْعٍ، وَنَهَانَا عَنْ سَبْعٍ: أَمَرَنَا بِعِيَادَةِ الْمَرِيضِ، وَاتِّبَاعِ الْجَنَازَةِ، وَتَشْمِيتِ الْعَاطِسِ، وَإِبْرَارِ الْقَسَمِ، أَوِ الْمُقْسِمِ، وَنَصْرِ الْمَظْلُومِ، وَإِجَابَةِ الدَّاعِي، وَإِفْشَاءِ السَّلَامِ، وَنَهَانَا عَنْ خَوَاتِيمَ -أَوْ عَنْ تَخَتُّمٍ- بِالذَّهَبِ، وَعَنْ شُرْبٍ بِالْفِضَّةِ، وَعَنِ الْمَيَاثِرِ، وَعَنِ الْقَسِّيِّ، وَعَنْ لُبْسِ الْحَرِيرِ وَالْإِسْتَبْرَقِ وَالدِّيبَاجِ.
[صحيح] - [متفق عليه] - [صحيح مسلم: 2066]
المزيــد ...
ಬರಾಅ್ ಬಿನ್ ಆಝಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಏಳು ವಿಷಯಗಳನ್ನು ಮಾಡಲು ಆದೇಶಿಸಿದರು ಮತ್ತು ಏಳು ವಿಷಯಗಳಿಂದ ನಮ್ಮನ್ನು ತಡೆದರು: ರೋಗಿಯನ್ನು ಸಂದರ್ಶಿಸುವುದು, ಜನಾಝಾವನ್ನು (ಮೃತ ದೇಹವನ್ನು) ಹಿಂಬಾಲಿಸುವುದು, ಸೀನಿದವನಿಗೆ (ಅವನು 'ಅಲ್-ಹಮ್ದುಲಿಲ್ಲಾಹ್' ಹೇಳಿದರೆ) ಪ್ರತ್ಯುತ್ತರಿಸುವುದು (ತಶ್ಮೀತ್ ಮಾಡುವುದು), ಆಣೆ ಮಾಡಿದವನ ಆಣೆಯನ್ನು ಪೂರ್ಣಗೊಳಿಸುವುದು (ಅಥವಾ ಆಣೆ ಮಾಡಿದವನಿಗೆ ಸಹಾಯ ಮಾಡುವುದು), ದಮನಿತನಿಗೆ ಸಹಾಯ ಮಾಡುವುದು, ಆಮಂತ್ರಣವನ್ನು ಸ್ವೀಕರಿಸುವುದು, ಸಲಾಮ್ ಹೇಳುವುದನ್ನು ಹಬ್ಬಿಸುವುದು - ಇವುಗಳನ್ನು ಅವರು ನಮಗೆ ಆದೇಶಿಸಿದರು. ಚಿನ್ನದ ಉಂಗುರಗಳನ್ನು ಧರಿಸುವುದರಿಂದ - ಅಥವಾ ಚಿನ್ನವನ್ನು ಧರಿಸುವುದರಿಂದ, ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯುವುದರಿಂದ, 'ಮಯಾಸಿರ್'ಗಳಿಂದ, 'ಅಲ್-ಖಸ್ಸೀ'ಯಿಂದ,
(ಶುದ್ಧ) ರೇಷ್ಮೆಯನ್ನು ಧರಿಸುವುದರಿಂದ, 'ಇಸ್ತಬ್ರಖ್' ಧರಿಸುವುದರಿಂದ, 'ದೀಬಾಜ್' ಧರಿಸುವುದರಿಂದ ಅವರು ನಮ್ಮನ್ನು ತಡೆದರು.
[صحيح] - [متفق عليه] - [صحيح مسلم - 2066]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಸ್ಲಿಮರಿಗೆ ಏಳು ಲಕ್ಷಣಗಳನ್ನು ಆದೇಶಿಸಿದರು ಮತ್ತು ಏಳು ಲಕ್ಷಣಗಳಿಂದ ಅವರನ್ನು ತಡೆದರು. ಅವರು ಆದೇಶಿಸಿದ ವಿಷಯಗಳು: ಮೊದಲನೆಯದು: ರೋಗಿಯನ್ನು ಸಂದರ್ಶಿಸುವುದು. ಎರಡನೆಯದು: ಜನಾಝಾಗಳನ್ನು ಹಿಂಬಾಲಿಸುವುದು ಮತ್ತು ಅವುಗಳ ನಮಾಝ್‌ನಲ್ಲಿ ಹಾಗೂ ಸಮಾಧಿ ಮಾಡುವುದರಲ್ಲಿ ಭಾಗವಹಿಸುವುದು, ಮತ್ತು ಅವರಿಗಾಗಿ ಪ್ರಾರ್ಥಿಸುವುದು. ಮೂರನೆಯದು: ಸೀನಿದವನು 'ಅಲ್-ಹಮ್ದುಲಿಲ್ಲಾಹ್' ಎಂದು ಹೇಳಿದರೆ ಅವನಿಗಾಗಿ ಪ್ರಾರ್ಥಿಸುವುದು, ಅಂದರೆ ಅವನಿಗೆ 'ಯರ್ಹಮುಕಲ್ಲಾಹ್' (ಅಲ್ಲಾಹು ನಿನ್ನ ಮೇಲೆ ಕರುಣೆ ತೋರಲಿ) ಎಂದು ಹೇಳುವುದು. ನಾಲ್ಕನೆಯದು: ಆಣೆ ಮಾಡಿದವನ ಆಣೆಯನ್ನು ಪೂರ್ಣಗೊಳಿಸುವುದು ಮತ್ತು ಅವನನ್ನು ನಂಬುವುದು. ಇದರರ್ಥ, ಯಾರಾದರೂ ಒಂದು ವಿಷಯದ ಮೇಲೆ ಆಣೆ ಮಾಡಿದ್ದರೆ ಮತ್ತು (ಅವನಿಗೆ ಅದನ್ನು ಪೂರ್ಣಗೊಳಿಸಲಾಗದೆ) ಅದನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಿದ್ದರೆ, ನೀವು ಹಾಗೆ ಮಾಡಬೇಕು. ಇದರಿಂದ ಅವನಿಗೆ ತನ್ನ ಆಣೆಗಾಗಿ ಪ್ರಾಯಶ್ಚಿತ್ತ ನೀಡುವುದು ತಪ್ಪುತ್ತದೆ. ಐದನೆಯದು: ದಮನಿತನಿಗೆ ಸಹಾಯ ಮಾಡುವುದು, ಅವನಿಗೆ ಬೆಂಬಲ ನೀಡುವುದು ಮತ್ತು ಸಾಧ್ಯವಾದಷ್ಟರ ಮಟ್ಟಿಗೆ ದಮನಕಾರಿಯಿಂದ ಅವನ ಮೇಲೆ ಉಂಟಾಗುವ ದೌರ್ಜನ್ಯವನ್ನು ತಡೆಯುವುದು. ಆರನೆಯದು: ಔತಣಕೂಟದ ಆಮಂತ್ರಣವನ್ನು ಸ್ವೀಕರಿಸುವುದು. ಉದಾಹರಣೆಗೆ ಮದುವೆಯ ಔತಣ (ವಲೀಮಾ), ಅಥವಾ ಅಖೀಖಾ (ಮಗುವಿನ ಜನನದ ಪ್ರಯುಕ್ತ ನೀಡುವ ಔತಣ), ಅಥವಾ ಇತರ ಔತಣಗಳು. ಏಳನೆಯದು: ಸಲಾಮ್ ಹೇಳುವುದನ್ನು ಹಬ್ಬಿಸುವುದು, ಪ್ರಚಾರ ಮಾಡುವುದು ಮತ್ತು ಅದಕ್ಕೆ ಪ್ರತ್ಯುತ್ತರಿಸುವುದು. ಅವರು ನಿಷೇಧಿಸಿದ ವಿಷಯಗಳು: ಮೊದಲನೆಯದು: ಚಿನ್ನದ ಉಂಗುರಗಳನ್ನು ಧರಿಸುವುದು ಮತ್ತು ಚಿನ್ನದಿಂದ ಅಲಂಕರಿಸಿಕೊಳ್ಳುವುದು. ಎರಡನೆಯದು: ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯುವುದು. ಮೂರನೆಯದು: 'ಮಯಾಸಿರ್' ಮೇಲೆ ಕುಳಿತುಕೊಳ್ಳುವುದು. ಇವು ರೇಷ್ಮೆಯಿಂದ ಮಾಡಿದ ಹಾಸುಗಳಾಗಿದ್ದು, ಕುದುರೆಯ ಜೀನು ಮತ್ತು ಒಂಟೆಯ ತೇರಿನ ಮೇಲೆ ಕುಳಿತುಕೊಳ್ಳುವುದಕ್ಕಾಗಿ ಇರಿಸಲಾಗುತ್ತದೆ. ನಾಲ್ಕನೆಯದು: ರೇಷ್ಮೆಯೊಂದಿಗೆ ಮಿಶ್ರಿತವಾದ ನಾರಿನಿಂದ ಮಾಡಿದ ಬಟ್ಟೆಯನ್ನು ಧರಿಸುವುದು. ಇದನ್ನು 'ಖಸ್ಸೀ' ಎಂದು ಕರೆಯಲಾಗುತ್ತದೆ. ಐದನೆಯದು: (ಶುದ್ಧ) ರೇಷ್ಮೆಯನ್ನು ಧರಿಸುವುದು. ಆರನೆಯದು: 'ಇಸ್ತಬ್ರಖ್' ಧರಿಸುವುದು. ಇದು ದಪ್ಪ ರೇಷ್ಮೆಯಾಗಿದೆ. ಏಳನೆಯದು: 'ದೀಬಾಜ್' ಧರಿಸುವುದು. ಇದು ಅತ್ಯುತ್ತಮ ಮತ್ತು ಅತ್ಯಂತ ಬೆಲೆಬಾಳುವ ರೇಷ್ಮೆಯಾಗಿದೆ.