عَنْ سَلْمَانَ الْفَارِسِيِّ رَضيَ اللهُ عنه قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ:
«ثَلَاثَةٌ لَا يُكَلِّمُهُمُ اللَّهُ يَوْمَ الْقِيَامَةِ وَلَا يُزَكِّيهِمْ وَلَهُمْ عَذَابٌ أَلِيمٌ: أُشَيْمِطٌ زَانٍ، وَعَائِلٌ مُسْتَكْبِرٌ، وَرَجُلٌ جَعَلَ اللَّهَ لَهُ بِضَاعَةً، فَلَا يَبِيعُ إِلَّا بِيَمِينِهِ وَلَا يَشْتَرِي إِلَّا بِيَمِينِهِ».
[صحيح] - [رواه الطبراني] - [المعجم الصغير: 821]
المزيــد ...
ಸಲ್ಮಾನ್ ಅಲ್-ಫಾರಿಸೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮೂರು (ವರ್ಗದ) ಜನರೊಂದಿಗೆ ಅಲ್ಲಾಹು ಪುನರುತ್ಥಾನ ದಿನದಂದು ಮಾತನಾಡುವುದಿಲ್ಲ, ಅವರನ್ನು ಪರಿಶುದ್ಧಗೊಳಿಸುವುದಿಲ್ಲ, ಮತ್ತು ಅವರಿಗೆ ಯಾತನಾಮಯ ಶಿಕ್ಷೆಯಿದೆ: (ಅವರು ಯಾರೆಂದರೆ) ವೃದ್ಧ ವ್ಯಭಿಚಾರಿ, ಅಹಂಕಾರಿ ಬಡವ, ಮತ್ತು ಅಲ್ಲಾಹನನ್ನು ತನ್ನ ವ್ಯಾಪಾರದ ವಸ್ತುವನ್ನಾಗಿ ಮಾಡಿಕೊಂಡ ವ್ಯಕ್ತಿ. ಅವನು ಆಣೆಯಿಡದೆ ಮಾರಾಟ ಮಾಡುವುದಿಲ್ಲ ಮತ್ತು ಆಣೆಯಿಡದೆ ಖರೀದಿಸುವುದಿಲ್ಲ".
[صحيح] - [رواه الطبراني] - [المعجم الصغير - 821]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂರು ವರ್ಗದ ಜನರ ಬಗ್ಗೆ ತಿಳಿಸಿದ್ದಾರೆ. ಅವರು ಪಶ್ಚಾತ್ತಾಪ ಪಡದಿದ್ದರೆ ಅಥವಾ ಅವರಿಗೆ ಕ್ಷಮೆ ದೊರೆಯದಿದ್ದರೆ, ಪುನರುತ್ಥಾನ ದಿನದಂದು ಅವರು ಮೂರು ಶಿಕ್ಷೆಗಳಿಗೆ ಅರ್ಹರಾಗುತ್ತಾರೆ: ಮೊದಲನೆಯದು: ಅಲ್ಲಾಹು ಅವನ ತೀವ್ರವಾದ ಕೋಪದಿಂದಾಗಿ, ಅವರೊಂದಿಗೆ ಪುನರುತ್ಥಾನ ದಿನದಂದು ಮಾತನಾಡುವುದಿಲ್ಲ. ಬದಲಿಗೆ ಅವರಿಂದ ವಿಮುಖನಾಗುತ್ತಾನೆ. ಅಥವಾ, ಅವರಿಗೆ ಸಂತೋಷವನ್ನು ನೀಡದ ಮತ್ತು ಅವರ ಮೇಲಿನ ತನ್ನ ಅಸಮಾಧಾನವನ್ನು ಸೂಚಿಸುವ ಮಾತನ್ನು ಅವರೊಂದಿಗೆ ಮಾತನಾಡುತ್ತಾನೆ. ಎರಡನೆಯದು: ಅವನು ಅವರನ್ನು ಪರಿಶುದ್ಧಗೊಳಿಸುವುದಿಲ್ಲ, ಅವರನ್ನು ಪ್ರಶಂಸಿಸುವುದಿಲ್ಲ ಮತ್ತು ಪಾಪಗಳಿಂದ ಅವರನ್ನು ಶುದ್ಧೀಕರಿಸುವುದಿಲ್ಲ. ಮೂರನೆಯದು: ಅವರಿಗೆ ಪರಲೋಕದಲ್ಲಿ ನೋವುಂಟುಮಾಡುವ ತೀವ್ರವಾದ ಶಿಕ್ಷೆಯಿದೆ. ಈ ವರ್ಗದವರು ಯಾರೆಂದರೆ: ಮೊದಲ ವರ್ಗ: ವೃದ್ಧನಾಗಿದ್ದು ವ್ಯಭಿಚಾರದ ಅಶ್ಲೀಲ ಕೃತ್ಯದಲ್ಲಿ ತೊಡಗುವ ವ್ಯಕ್ತಿ. ಎರಡನೆಯ ವರ್ಗ: ಸಂಪತ್ತಿಲ್ಲದ ಬಡವ. ಆದರೂ ಅವನು ಜನರ ಮೇಲೆ ಅಹಂಕಾರ ಪಡುತ್ತಾನೆ. ಮೂರನೆಯ ವರ್ಗ: ಮಾರಾಟ ಮತ್ತು ಖರೀದಿಯಲ್ಲಿ ಅಲ್ಲಾಹನ ಮೇಲೆ ಅತಿಯಾಗಿ ಆಣೆಯಿಡುವವನು. ಇದರಿಂದ ಅವನು ಅಲ್ಲಾಹನ ಹೆಸರನ್ನು ಅವಮಾನಿಸುತ್ತಾನೆ ಮತ್ತು ಅದನ್ನು ಸಂಪತ್ತನ್ನು ಗಳಿಸುವ ಸಾಧನವನ್ನಾಗಿ ಮಾಡಿಕೊಳ್ಳುತ್ತಾನೆ.