+ -

عَنْ أَنَسِ بْنِ مَالِكٍ رَضيَ اللهُ عنهُ قَالَ:
لَمَّا نَزَلَتْ: {إِنَّا فَتَحْنَا لَكَ فَتْحًا مُبِينًا لِيَغْفِرَ لَكَ اللهُ} إِلَى قَوْلِهِ {فَوْزًا عَظِيمًا} [الفتح: ١-٥] مَرْجِعَهُ مِنَ الْحُدَيْبِيَةِ، وَهُمْ يُخَالِطُهُمُ الْحُزْنُ وَالْكَآبَةُ، وَقَدْ نَحَرَ الْهَدْيَ بِالْحُدَيْبِيَةِ، فَقَالَ: «لَقَدْ أُنْزِلَتْ عَلَيَّ آيَةٌ هِيَ أَحَبُّ إِلَيَّ مِنَ الدُّنْيَا جَمِيعًا».

[صحيح] - [رواه مسلم] - [صحيح مسلم: 1786]
المزيــد ...

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಹುದೈಬಿಯ್ಯಾದಿಂದ ಹಿಂತಿರುಗುವಾಗ, “ಖಂಡಿತವಾಗಿಯೂ ನಾವು ನಿಮಗೆ ಸ್ಪಷ್ಟವಾದ ವಿಜಯವನ್ನು ನೀಡಿದ್ದೇವೆ, ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಪಾಪಗಳನ್ನು ಕ್ಷಮಿಸಲು..” ಎಂಬಲ್ಲಿಂದ “...ಮಹಾನ್ ವಿಜಯವಾಗಿದೆ.” [ಸೂರಃ ಅಲ್-ಫತ್ಹ್: 1-5] ಎಂಬ ವಚನಗಳು ಅವತೀರ್ಣವಾದವು. ಆಗ ಅವರ (ಸಹಾಬಿಗಳ) ಮನಸ್ಸಿನಲ್ಲಿ ದುಃಖ ಮತ್ತು ಖಿನ್ನತೆ ತುಂಬಿಕೊಂಡಿತ್ತು. ಅವರು ಹುದೈಬಿಯ್ಯಾದಲ್ಲಿಯೇ ಬಲಿ ಪ್ರಾಣಿಗಳನ್ನು ವಧೆ ಮಾಡಿದ್ದರು. ಆಗ ಅವರು (ಪ್ರವಾದಿ) ಹೇಳಿದರು: "ಖಂಡಿತವಾಗಿಯೂ ನನಗೆ ಒಂದು ಆಯತ್ (ವಚನ) ಅವತೀರ್ಣವಾಗಿದೆ, ಅದು ನನಗೆ ಇಡೀ ಪ್ರಪಂಚಕ್ಕಿಂತ ಹೆಚ್ಚು ಪ್ರಿಯವಾಗಿದೆ".

[صحيح] - [رواه مسلم] - [صحيح مسلم - 1786]

ವಿವರಣೆ

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತಿಳಿಸುವುದೇನೆಂದರೆ: ಹುದೈಬಿಯ್ಯಾದಿಂದ ಹಿಂತಿರುಗುವ ಸಮಯದಲ್ಲಿ ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಈ ವಚನಗಳು ಅವತೀರ್ಣವಾದವು: “ಖಂಡಿತವಾಗಿಯೂ ನಾವು ನಿಮಗೆ ಸ್ಪಷ್ಟವಾದ ವಿಜಯವನ್ನು ನೀಡಿದ್ದೇವೆ. ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಪಾಪಗಳನ್ನು ಕ್ಷಮಿಸಲು, ಮತ್ತು ನಿಮ್ಮ ಮೇಲೆ ತನ್ನ ಅನುಗ್ರಹವನ್ನು ಪೂರ್ಣಗೊಳಿಸಲು, ಹಾಗೂ ನಿಮಗೆ ನೇರ ಮಾರ್ಗವನ್ನು ತೋರಿಸಲು. ಮತ್ತು ಅಲ್ಲಾಹು ನಿಮಗೆ ಪ್ರಬಲವಾದ ಸಹಾಯವನ್ನು ನೀಡಲು. ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಶಾಂತಿಯನ್ನು ಇಳಿಸಿದವನು ಅವನೇ — ಅವರ ಈಮಾನ್‌ನೊಂದಿಗೆ (ವಿಶ್ವಾಸದೊಂದಿಗೆ) ಇನ್ನಷ್ಟು ಈಮಾನ್ ಹೆಚ್ಚಾಗಲಿ ಎಂದು. ಮತ್ತು ಆಕಾಶಗಳು ಹಾಗೂ ಭೂಮಿಯ ಸೈನ್ಯಗಳು ಅಲ್ಲಾಹನಿಗೆ ಸೇರಿವೆ. ಮತ್ತು ಅಲ್ಲಾಹು ಎಲ್ಲವನ್ನೂ ಬಲ್ಲವನು ಹಾಗೂ ವಿವೇಕಪೂರ್ಣನಾಗಿದ್ದಾನೆ. ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರನ್ನು, ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗಗಳಲ್ಲಿ ಪ್ರವೇಶಿಸುವಂತೆ ಮಾಡಲು, ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು, ಮತ್ತು ಅವರ ಪಾಪಗಳನ್ನು ಅವರಿಂದ ಅಳಿಸಿಹಾಕಲು. ಮತ್ತು ಇದು ಅಲ್ಲಾಹನ ಬಳಿ ಮಹಾನ್ ವಿಜಯವಾಗಿದೆ.”[ಸೂರ ಅಲ್-ಫತ್ಹ್: 1-5]. ಆಗ ಸಹಾಬಿಗಳ ಮನಸ್ಸಿನಲ್ಲಿ ದುಃಖ ಮತ್ತು ಖಿನ್ನತೆ ಮಿಶ್ರಿತವಾಗಿತ್ತು. ಏಕೆಂದರೆ (ಹುದೈಬಿಯ್ಯಾ) ಒಪ್ಪಂದದ ಷರತ್ತುಗಳ ಕಾರಣದಿಂದಾಗಿ ಅವರಿಗೆ ಉಮ್ರಾ ನಿರ್ವಹಿಸುವುದಕ್ಕೆ ತಡೆಯುಂಟಾಗಿತ್ತು. ಅದು ಮುಸ್ಲಿಮರ ಪರವಾಗಿಲ್ಲ ಎಂದು ಅವರು ಭಾವಿಸಿದ್ದರು. ಅವರು ಹುದೈಬಿಯ್ಯಾದಲ್ಲಿಯೇ ಬಲಿ ಪ್ರಾಣಿಗಳನ್ನು ವಧೆ ಮಾಡಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಖಂಡಿತವಾಗಿಯೂ ನನಗೆ ಒಂದು ಆಯತ್ ಅವತೀರ್ಣವಾಗಿದೆ. ಅದು ನನಗೆ ಇಡೀ ಪ್ರಪಂಚಕ್ಕಿಂತ ಹೆಚ್ಚು ಪ್ರಿಯವಾಗಿದೆ.” ನಂತರ ಅವರು ಅದನ್ನು ಪಠಿಸಿದರು.

ಹದೀಸಿನ ಪ್ರಯೋಜನಗಳು

  1. ಹುದೈಬಿಯ್ಯಾ ಒಪ್ಪಂದವೆಂಬ ಮಹಾನ್ ವಿಜಯದ ಮೂಲಕ, ಸರ್ವಶಕ್ತನಾದ ಅಲ್ಲಾಹು ತನ್ನ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ ನೀಡಿದ ಅನುಗ್ರಹದ ಮಹತ್ವವನ್ನು ವಿವರಿಸಲಾಗಿದೆ. ಏಕೆಂದರೆ ಅಲ್ಲಾಹು ಹೇಳುತ್ತಾನೆ: “ಖಂಡಿತವಾಗಿಯೂ ನಾವು ನಿಮಗೆ ಸ್ಪಷ್ಟವಾದ ವಿಜಯವನ್ನು ನೀಡಿದ್ದೇವೆ”.
  2. ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಾಹನ ಆದೇಶಕ್ಕೆ ಬಾಗಿ ಶರಣಾದಾಗ, ಅಲ್ಲಾಹು ಅವರಿಗೆ ದಯಪಾಲಿಸಿದ ಅನುಗ್ರಹವನ್ನು ವಿವರಿಸಲಾಗಿದೆ. ಅದೇನೆಂದರೆ, ಅಲ್ಲಾಹು ಅವರ ಬಗ್ಗೆ ಹೇಳುತ್ತಾನೆ: “ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರನ್ನು, ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗಗಳಲ್ಲಿ ಪ್ರವೇಶಿಸುವಂತೆ ಮಾಡಲು…”
  3. ತನ್ನ ಪ್ರವಾದಿಯ ಮೇಲೆ ಮತ್ತು ಸತ್ಯವಿಶ್ವಾಸಿಗಳ ಮೇಲೆ ಅಲ್ಲಾಹನ ಅನುಗ್ರಹವನ್ನು ವಿವರಿಸಲಾಗಿದೆ. ಅದು ಹೇಗೆಂದರೆ, ಅಲ್ಲಾಹು ಅವರಿಗೆ ವಿಜಯ ಮತ್ತು ಗೆಲುವಿನ ವಾಗ್ದಾನ ನೀಡಿದನು.
  4. ಈ ವಚನದ ವ್ಯಾಖ್ಯಾನದಲ್ಲಿ ಸಅದೀ ಹೇಳುತ್ತಾರೆ: “ಖಂಡಿತವಾಗಿಯೂ ನಾವು ನಿಮಗೆ ಸ್ಪಷ್ಟವಾದ ವಿಜಯವನ್ನು ನೀಡಿದ್ದೇವೆ.” [ಅಲ್-ಫತ್ಹ್: 1]. ಇಲ್ಲಿ ಉಲ್ಲೇಖಿಸಲಾದ ವಿಜಯವು ಹುದೈಬಿಯ್ಯಾ ಒಪ್ಪಂದವಾಗಿದೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಮ್ರಾಕ್ಕಾಗಿ ಬಂದಾಗ ಮುಶ್ರಿಕ್‌ಗಳು ಅವರನ್ನು ತಡೆದರು. ಇದೊಂದು ದೀರ್ಘ ಘಟನೆಯಾಗಿದೆ. ಕೊನೆಗೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಂದಿಗೆ (ಮುಶ್ರಿಕ್‌ಗಳೊಂದಿಗೆ) ಹತ್ತು ವರ್ಷಗಳ ಕಾಲ ಯುದ್ಧವನ್ನು ನಿಲ್ಲಿಸಲು, ಮುಂದಿನ ವರ್ಷ ಉಮ್ರಾ ಮಾಡುವ ಅವಕಾಶ ನೀಡಲು, ಖುರೈಶರ ಒಪ್ಪಂದ ಮತ್ತು ಮೈತ್ರಿಯಲ್ಲಿ ಸೇರಲು ಬಯಸುವವರು ಅವರೊಡನೆ ಸೇರಲು, ಮತ್ತು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಪ್ಪಂದ ಮತ್ತು ಕರಾರಿನಲ್ಲಿ ಸೇರಲು ಬಯಸುವವರು ಅವರೊಡನೆ ಸೇರಲು ಅನುಮತಿ ನೀಡಲು ಒಪ್ಪಂದ ಮಾಡಿಕೊಂಡರು. ಈ (ಒಪ್ಪಂದದ) ಕಾರಣದಿಂದಾಗಿ ಜನರು ನಿರ್ಭಯರಾದರು. ಇದು ಅಲ್ಲಾಹನ ಧರ್ಮದ ಕಡೆಗೆ ಆಹ್ವಾನ ನೀಡುವ (ದಅವತ್ ಮಾಡಲು) ವ್ಯಾಪಕ ಅವಕಾಶವನ್ನು ಒದಗಿಸಿತು. ಇದರಿಂದ ಯಾವುದೇ ಸ್ಥಳದಲ್ಲಿದ್ದ ಯಾವುದೇ ಸತ್ಯವಿಶ್ವಾಸಿಗೂ ಧರ್ಮ ಪ್ರಚಾರ ಮಾಡಲು ಮತ್ತು ಇಸ್ಲಾಂನ ಸತ್ಯಾಸತ್ಯತೆಯನ್ನು ತಿಳಿಯಲು ಆಸಕ್ತಿಯುಳ್ಳವರಿಗೆ ಅದನ್ನು ತಿಳಿಯಲು ಸಾಧ್ಯವಾಯಿತು. ಈ ಅವಧಿಯಲ್ಲಿ ಜನರು ಅಲ್ಲಾಹನ ಧರ್ಮಕ್ಕೆ ಗುಂಪು ಗುಂಪಾಗಿ ಪ್ರವೇಶಿಸಿದರು. ಈ ಕಾರಣದಿಂದಲೇ ಅಲ್ಲಾಹು ಇದನ್ನು 'ವಿಜಯ' (ಫತ್ಹ್) ಎಂದು ಕರೆದನು, ಮತ್ತು ಅದನ್ನು 'ಸ್ಪಷ್ಟವಾದ ವಿಜಯ' ಎಂದು ವರ್ಣಿಸಿದನು. ಏಕೆಂದರೆ, ಸತ್ಯನಿಷೇಧಿಗಳ ಊರುಗಳನ್ನು ಜಯಿಸುವುದರ ಉದ್ದೇಶವು ಅಲ್ಲಾಹನ ಧರ್ಮವನ್ನು ಎತ್ತಿಹಿಡಿಯುವುದು ಮತ್ತು ಮುಸ್ಲಿಮರಿಗೆ ವಿಜಯವನ್ನು ನೀಡುವುದಾಗಿದೆ. ಇದು ಈ ವಿಜಯದ ಮೂಲಕ ಸಾಧಿಸಲಾಗಿದೆ.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ