+ -

عَنْ أَبِي هُرَيْرَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«قَارِبُوا وَسَدِّدُوا، وَاعْلَمُوا أَنَّهُ لَنْ يَنْجُوَ أَحَدٌ مِنْكُمْ بِعَمَلِهِ» قَالُوا: يَا رَسُولَ اللهِ وَلَا أَنْتَ؟ قَالَ: «وَلَا أَنَا، إِلَّا أَنْ يَتَغَمَّدَنِيَ اللهُ بِرَحْمَةٍ مِنْهُ وَفَضْلٍ».

[صحيح] - [متفق عليه] - [صحيح مسلم: 2816]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸರಿಯಾದ ಮಾರ್ಗವನ್ನು ಅನುಸರಿಸಿ ಮತ್ತು ಸಾಧ್ಯವಾದಷ್ಟು ಹತ್ತಿರವಾಗಿರಿ, ಮತ್ತು ನಿಮ್ಮಲ್ಲಿ ಯಾರೂ ತಮ್ಮ ಕರ್ಮಗಳಿಂದಾಗಿ ಮೋಕ್ಷ ಪಡೆಯುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ." ಅವರು (ಅನುಯಾಯಿಗಳು) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನೀವು ಕೂಡ ಪಡೆಯುವುದಿಲ್ಲವೇ?" ಅವರು ಉತ್ತರಿಸಿದರು: "ನಾನೂ ಕೂಡ ಪಡೆಯುವುದಿಲ್ಲ, ಅಲ್ಲಾಹು ತನ್ನ ಕರುಣೆ ಮತ್ತು ಅನುಗ್ರಹದಿಂದ ನನ್ನನ್ನು ಆವರಿಸಿಕೊಳ್ಳುವ ಹೊರತು."

[صحيح] - [متفق عليه] - [صحيح مسلم - 2816]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಸಂಗಡಿಗರಿಗೆ ಸತ್ಕರ್ಮಗಳನ್ನು ಮಾಡಲು ಮತ್ತು ಅತಿರೇಕವಾಗಲೀ ಅಥವಾ ನಿರ್ಲಕ್ಷ್ಯವಾಗಲೀ ಇಲ್ಲದೆ ಸಾಧ್ಯವಾದಷ್ಟು ಅಲ್ಲಾಹನನ್ನು ಭಯಪಡಲು ಪ್ರೋತ್ಸಾಹಿಸುತ್ತಿದ್ದಾರೆ. ಹಾಗೆಯೇ, ಅವರ ಕರ್ಮಗಳು ಸ್ವೀಕಾರವಾಗಿ ಅವರ ಮೇಲೆ ಅಲ್ಲಾಹನ ದಯೆ ವರ್ಷಿಸುವಂತಾಗಲು ಅವರು ಅಲ್ಲಾಹನಿಗೆ ಸಂಪೂರ್ಣ ನಿಷ್ಕಳಂಕರಾಗಿ ಮತ್ತು ಸುನ್ನತ್‌ಗೆ ಅನುಗುಣವಾಗಿ ತಮ್ಮ ಕರ್ಮಗಳನ್ನು ಸರಿಪಡಿಸಬೇಕೆಂದು ಪ್ರೋತ್ಸಾಹಿಸುತ್ತಿದ್ದಾರೆ.
ನಂತರ ಅವರು ತಿಳಿಸುವುದೇನೆಂದರೆ, ನಿಮ್ಮಲ್ಲಿ ಯಾರೂ ತಮ್ಮ ಕರ್ಮಗಳಿಂದ ಮಾತ್ರ ಮೋಕ್ಷ ಪಡೆಯುವುದಿಲ್ಲ. ಬದಲಿಗೆ, ಮೋಕ್ಷ ಪಡೆಯಬೇಕಾದರೆ ಅಲ್ಲಾಹನ ಕರುಣೆ ಇರಬೇಕಾದುದು ಅತ್ಯಗತ್ಯವಾಗಿದೆ.
ಅವರು (ಅನುಯಾಯಿಗಳು) ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಕರ್ಮಗಳು ಅತಿಮಹತ್ವವುಳ್ಳದ್ದಾಗಿದ್ದೂ ಸಹ ನೀವು ಕೂಡ ಅವುಗಳಿಂದ ಮೋಕ್ಷ ಪಡೆಯುವುದಿಲ್ಲವೇ?
ಅವರು ಉತ್ತರಿಸಿದರು: ನಾನು ಕೂಡ ಮೋಕ್ಷ ಪಡೆಯುವುದಿಲ್ಲ. ಅಲ್ಲಾಹು ತನ್ನ ಕರುಣೆಯಿಂದ ನನ್ನನ್ನು ಮುಚ್ಚಿಬಿಡುವ ಹೊರತು.

ಹದೀಸಿನ ಪ್ರಯೋಜನಗಳು

  1. ನವವಿ ಹೇಳಿದರು: "ಸರಿಯಾದ ಮಾರ್ಗವನ್ನು ಅನುಸರಿಸಿ ಮತ್ತು ಸಾಧ್ಯವಾದಷ್ಟು ಹತ್ತಿರವಾಗಿರಿ" ಅಂದರೆ, ಸರಿಯಾದ ಮಾರ್ಗವನ್ನು ಹುಡುಕಿರಿ ಮತ್ತು ಅದಕ್ಕೆ ಅನುಗುಣವಾಗಿ ಕರ್ಮವೆಸಗಿರಿ. ಆದರೆ ನಿಮಗೆ ಹಾಗೆ ಮಾಡಲು ಸಾಧ್ಯವಾಗದಿದ್ದರೆ, "ಸಾಧ್ಯವಾದಷ್ಟು ಹತ್ತಿರವಾಗಿರಿ" ಅಂದರೆ, ಅದರ ಹತ್ತಿರ ಇರಲು ಪ್ರಯತ್ನಿಸಿರಿ. ಸರಿಯಾದ ಮಾರ್ಗ ಎಂದರೆ ದಿಟವಾದ ಮಾರ್ಗ. ಅಂದರೆ ಅತಿರೇಕ ಮತ್ತು ನಿರ್ಲಕ್ಷ್ಯದ ನಡುವಿನಲ್ಲಿದೆ. ಆದ್ದರಿಂದ ನೀವು ಅತಿರೇಕಕ್ಕೆ ಹೋಗಬೇಡಿ ಅಥವಾ ನಿರ್ಲಕ್ಷ್ಯ ಮಾಡಬೇಡಿ.
  2. ಇಬ್ನ್ ಬಾಝ್ ಹೇಳಿದರು: ದುಷ್ಕರ್ಮಗಳು ನರಕ ಪ್ರವೇಶಕ್ಕೆ ಕಾರಣವಾಗುವಂತೆಯೇ ಸತ್ಕರ್ಮಗಳು ಸ್ವರ್ಗ ಪ್ರವೇಶಕ್ಕೆ ಕಾರಣವಾಗುತ್ತವೆ. ಆದರೆ ಅವರು ಕೇವಲ ಅವರ ಕರ್ಮಗಳಿಂದ ಮಾತ್ರ ಸ್ವರ್ಗವನ್ನು ಪ್ರವೇಶಿಸುವುದಿಲ್ಲ. ಬದಲಿಗೆ, ಅದಕ್ಕೆ ಅಲ್ಲಾಹನ ಕ್ಷಮೆ ಮತ್ತು ಕರುಣೆ ಅತ್ಯಗತ್ಯವಾಗಿದೆಯೆಂದು ಈ ಹದೀಸ್ ಹೇಳುತ್ತದೆ. ಅವರು ತಮ್ಮ ಕರ್ಮಗಳ ಮೂಲಕ ಸ್ವರ್ಗವನ್ನು ಪ್ರವೇಶಿಸುತ್ತಾರಾದರೂ, ಅದನ್ನು ಅವರಿಗೆ ಕಡ್ಡಾಯಗೊಳಿಸಿದ್ದು ಅಲ್ಲಾಹನ ಕರುಣೆ, ಕ್ಷಮೆ ಮತ್ತು ಕ್ಷಮಾಪಣೆಯಾಗಿದೆ.
  3. ಯಾರೂ ತಮ್ಮ ಕರ್ಮಗಳಿಂದ - ಅದು ಎಷ್ಟೇ ಶ್ರೇಷ್ಠ ಮಟ್ಟಕ್ಕೆ ತಲುಪಿದ್ದರೂ ಸಹ - ವಂಚಿತರಾಗಬಾರದು ಮತ್ತು ಹೆಮ್ಮೆಪಡಬಾರದು. ಏಕೆಂದರೆ ಅಲ್ಲಾಹನ ಹಕ್ಕು ಅವರ ಕರ್ಮಗಳಿಗಿಂತಲೂ ದೊಡ್ಡದು. ಬದಲಿಗೆ, ಮನುಷ್ಯನು ಭಯ ಮತ್ತು ನಿರೀಕ್ಷೆ ಎರಡನ್ನೂ ಹೊಂದಿರಬೇಕು.
  4. ದಾಸರ ಮೇಲಿರುವ ಅಲ್ಲಾಹನ ಅನುಗ್ರಹ ಮತ್ತು ಕರುಣೆ ಅವರ ಕರ್ಮಗಳಿಗಿಂತಲೂ ವಿಶಾಲವಾಗಿದೆಯೆಂದು ತಿಳಿಸಲಾಗಿದೆ.
  5. ಸತ್ಕರ್ಮಗಳು ಸ್ವರ್ಗ ಪ್ರವೇಶಕ್ಕೆ ಕಾರಣವಾಗುತ್ತವೆ. ಆದರೆ ಅದನ್ನು ಪಡೆಯಲು ಸಾಧ್ಯವಾಗುವುದು ಅಲ್ಲಾಹನ ಅನುಗ್ರಹ ಮತ್ತು ಕರುಣೆಯಿಂದ ಮಾತ್ರವಾಗಿದೆ.
  6. ಕಿರ್ಮಾನಿ ಹೇಳಿದರು: "ಜನರೆಲ್ಲರೂ ಅಲ್ಲಾಹನ ಕರುಣೆಯಿಂದಲೇ ಹೊರತು ಸ್ವರ್ಗವನ್ನು ಪ್ರವೇಶಿಸುವುದಿಲ್ಲ ಎಂದಾದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೂಡ, ಅವರು ಸ್ವರ್ಗವನ್ನು ಖಂಡಿತವಾಗಿಯೂ ಪ್ರವೇಶಿಸುತ್ತಾರಾದರೂ ಅಲ್ಲಾಹನ ಕರುಣೆಯಿಂದಲ್ಲದೆ ಸ್ವರ್ಗವನ್ನು ಪ್ರವೇಶಿಸುವುದಿಲ್ಲ ಎಂದು ವಿಶೇಷವಾಗಿ ಹೇಳಿರುವುದರಿಂದ, ಅವರ ಹೊರತಾದವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ."
  7. ನವವಿ ಹೇಳಿದರು: ಸರ್ವಶಕ್ತನಾದ ಅಲ್ಲಾಹನ ವಚನದಲ್ಲಿ ಹೀಗಿದೆ: "ನೀವು ಮಾಡುತ್ತಿರುವ ಕರ್ಮಗಳಿಂದಾಗಿ ನೀವು ಸ್ವರ್ಗವನ್ನು ಪ್ರವೇಶಿಸಿರಿ." [ನಹ್ಲ್: 32]، "ನೀವು ಮಾಡುತ್ತಿರುವ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ." [ಝುಖ್ರುಫ್: 72]، ಕರ್ಮಗಳಿಂದಾಗಿ ಮನುಷ್ಯನು ಸ್ವರ್ಗ ಪ್ರವೇಶ ಮಾಡುತ್ತಾನೆಂದು ಈ ಮೇಲಿನ ವಚನಗಳು ಸೂಚಿಸುತ್ತವೆ. ಈ ವಚನಗಳು ಈ ಹದೀಸ್‌ಗಳಿಗೆ ವಿರುದ್ಧವಾಗಿಲ್ಲ. ಬದಲಿಗೆ, ಈ ವಚನಗಳ ಅರ್ಥವೇನೆಂದರೆ, ಸ್ವರ್ಗವನ್ನು ಪ್ರವೇಶಿಸಲು ಕರ್ಮಗಳು ಕಾರಣ ಎಂಬುದು ಸರಿ. ಆದರೆ ಕರ್ಮಗಳಿಗಿರುವ ಪ್ರೇರಣೆ, ಅವುಗಳನ್ನು ನಿರ್ವಹಿಸುವುದಕ್ಕಿರುವ ನಿಷ್ಕಳಂಕತೆ ಮತ್ತು ಅವುಗಳ ಸ್ವೀಕಾರ ಎಲ್ಲವೂ ಅಲ್ಲಾಹನ ಕರುಣೆ ಮತ್ತು ಅನುಗ್ರಹವನ್ನು ಅವಲಂಬಿಸಿಕೊಂಡಿವೆ. ಆದ್ದರಿಂದ, ಯಾರೂ ಕೂಡ ಕೇವಲ ತನ್ನ ಕರ್ಮಗಳಿಂದ ಸ್ವರ್ಗವನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿರುವುದು ಸರಿಯಾಗಿದೆ. ಇದನ್ನೇ ಹದೀಸ್‌ಗಳು ಸೂಚಿಸುತ್ತಿವೆ. ಹಾಗೆಯೇ ಅವನು ತನ್ನ ಕರ್ಮಗಳಿಂದ ಅದನ್ನು ಪ್ರವೇಶಿಸುತ್ತಾನೆ ಎಂದು ಹೇಳಿರುವುದು ಕೂಡ ಸರಿಯಾಗಿದೆ. ಅಂದರೆ ಕರ್ಮಗಳ ಕಾರಣದಿಂದ ಎಂದರ್ಥ. ಇದು ಅಲ್ಲಾಹನ ಕರುಣೆಯ ಸಂಕೇತವಾಗಿದೆ.
  8. ಇಬ್ನುಲ್ ಜೌಝಿ ಹೇಳಿದರು: ಇದಕ್ಕೆ ನಾಲ್ಕು ರೀತಿಯ ಉತ್ತರಗಳಿವೆ: ಮೊದಲನೆಯದು: ಸತ್ಕರ್ಮವನ್ನು ಮಾಡಲು ಪ್ರೇರಣೆ ದೊರೆಯುವುದು ಅಲ್ಲಾಹನ ಕರುಣೆಯಿಂದ. ಅಲ್ಲಾಹನ ಕರುಣೆ ಪೂರ್ವಭಾವಿಯಾಗಿ ಇಲ್ಲದಿರುತ್ತಿದ್ದರೆ, ಮೋಕ್ಷ ಪಡೆಯಲು ಕಾರಣವಾಗುವ ವಿಶ್ವಾಸ ಅಥವಾ ಸತ್ಕರ್ಮಗಳು ಉಂಟಾಗುತ್ತಿರಲಿಲ್ಲ. ಎರಡನೆಯದು: ಯಜಮಾನನು ಗುಲಾಮನನ್ನು ಇಟ್ಟುಕೊಳ್ಳುವುದು ಅವನಿಂದ ಪ್ರಯೋಜನ ಪಡೆಯಲು. ಆದ್ದರಿಂದ, ಅವನು ತನ್ನ ಯಜಮಾನನಿಗಾಗಿ ಕರ್ಮವೆಸಗಬೇಕಾದುದು ಅತ್ಯರ್ಹವಾಗಿದೆ. ದಾಸನು ಮಾಡಿದ ಕರ್ಮಗಳಿಗೆ ಯಜಮಾನನು ಪ್ರತಿಫಲ ನೀಡುವುದು ತನ್ನ ಉದಾರತೆಯಿಂದಾಗಿದೆಯೇ (ಹೊರತು ಅದು ಅವನಿಗೆ ಕಡ್ಡಾಯವಲ್ಲ). ಮೂರನೆಯದು: ಕೆಲವು ಹದೀಸ್‌ಗಳಲ್ಲಿ ಹೇಳಿರುವಂತೆ, ಸ್ವರ್ಗಕ್ಕೆ ಪ್ರವೇಶವುಂಟಾಗುವುದು ಅಲ್ಲಾಹನ ಕರುಣೆಯಿಂದ. ಆದರೆ ಸ್ವರ್ಗದಲ್ಲಿ ಅವರ ಸ್ಥಾನಮಾನವನ್ನು ನಿರ್ಧರಿಸುವುದು ಅವರ ಕರ್ಮಗಳಾಗಿವೆ. ನಾಲ್ಕನೆಯದು: ಸತ್ಕರ್ಮಗಳು ಸಣ್ಣ ಅವಧಿಯಲ್ಲಿ ನಿರ್ವಹಿಸಿದ್ದಾಗಿದ್ದರೂ ಅದಕ್ಕಿರುವ ಪ್ರತಿಫಲವು ಅಂತ್ಯವಿಲ್ಲದ್ದಾಗಿದೆ. ಅಂತ್ಯವಿರುವುದಕ್ಕೆ ಅಂತ್ಯವಿಲ್ಲದ್ದನ್ನು ಪ್ರತಿಫಲವಾಗಿ ನೀಡುವುದು ಉದಾರತೆಯಿಂದಾಗಿದೆಯೇ ಹೊರತು ಕರ್ಮಗಳಿಂದಾಗಿಯಲ್ಲ.
  9. ರಾಫಿಈ ಹೇಳಿದರು: ಮೋಕ್ಷವನ್ನು ಪಡೆಯಲು ಮತ್ತು ಉನ್ನತ ಸ್ಥಾನಮಾನಗಳನ್ನು ಗಳಿಸಲು ದಾಸನು ತನ್ನ ಕರ್ಮಗಳನ್ನು ಅವಲಂಬಿಸಬಾರದು. ಏಕೆಂದರೆ, ಅವನು ಕರ್ಮವೆಸಗಿರುವುದು ಅಲ್ಲಾಹನ ಪ್ರೇರಣೆಯಿಂದ ಮಾತ್ರವಾಗಿದೆ. ಮತ್ತು ಅವನು ಪಾಪವನ್ನು ತ್ಯಜಿಸಿರುವುದು ಅಲ್ಲಾಹನ ರಕ್ಷಣೆಯಿಂದ ಮಾತ್ರವಾಗಿದೆ. ಇವೆಲ್ಲವೂ ಅಲ್ಲಾಹನ ಅನುಗ್ರಹ ಮತ್ತು ಕರುಣೆಯಾಗಿವೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الهولندية الغوجاراتية النيبالية المجرية الجورجية المقدونية
ಅನುವಾದಗಳನ್ನು ತೋರಿಸಿ
ಇನ್ನಷ್ಟು