عَنْ عَبْدِ اللَّهِ بنِ مَسْعُودٍ رَضِيَ اللَّهُ عَنْهُ قَالَ: قَالَ رَسُولُ اللَّهِ صَلَّى اللَّهُ عَلَيْهِ وَسَلَّمَ:
«مَنْ حَلَفَ عَلَى يَمِينٍ وَهُوَ فِيهَا فَاجِرٌ لِيَقْتَطِعَ بِهَا مَالَ امْرِئٍ مُسْلِمٍ، لَقِيَ اللَّهَ وَهُوَ عَلَيْهِ غَضْبَانُ». قَالَ: فَقَالَ الْأَشْعَثُ: فِيَّ وَاللَّهِ كَانَ ذَلِكَ؛ كَانَ بَيْنِي وَبَيْنَ رَجُلٍ مِنَ الْيَهُودِ أَرْضٌ، فَجَحَدَنِي، فَقَدَّمْتُهُ إِلَى النَّبِيِّ صَلَّى اللَّهُ عَلَيْهِ وَسَلَّمَ فَقَالَ لِي رَسُولُ اللَّهِ صَلَّى اللَّهُ عَلَيْهِ وَسَلَّمَ: «أَلَكَ بَيِّنَةٌ؟» قُلْتُ: لَا. قَالَ: فَقَالَ لِلْيَهُودِيِّ: «احْلِفْ». قَالَ: قُلْتُ: يَا رَسُولَ اللَّهِ، إِذَنْ يَحْلِفَ وَيَذْهَبَ بِمَالِي. فَأَنْزَلَ اللَّهُ تَعَالَى: {إِنَّ الَّذِينَ يَشْتَرُونَ بِعَهْدِ اللَّهِ وَأَيْمَانِهِمْ ثَمَنًا قَلِيلًا}. إِلَى آخِرِ الْآيَةِ.
[صحيح] - [متفق عليه] - [صحيح البخاري: 2416]
المزيــد ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಒಬ್ಬ ಮುಸ್ಲಿಂ ವ್ಯಕ್ತಿಯ ಸಂಪತ್ತನ್ನು ಕಸಿದುಕೊಳ್ಳಲು ಸುಳ್ಳು ಪ್ರಮಾಣವನ್ನು ಮಾಡುತ್ತಾನೋ, ಅವನು ಅಲ್ಲಾಹನನ್ನು ಭೇಟಿಯಾಗುವುದು ಅಲ್ಲಾಹು ಅವನ ಮೇಲೆ ಕೋಪಗೊಂಡಿರುವ ಸ್ಥಿತಿಯಲ್ಲಾಗಿದೆ".
(ವರದಿಗಾರರು) ಹೇಳುತ್ತಾರೆ: ಆಗ ಅಶ್‌ಅಸ್ (ಇಬ್ನ್ ಖೈಸ್) ಹೇಳಿದರು: "ಅಲ್ಲಾಹನಾಣೆ, ಅದು ನನ್ನ ವಿಷಯದಲ್ಲಿಯೇ ಆಗಿತ್ತು! ನನಗೂ ಮತ್ತು ಯಹೂದಿಗಳಲ್ಲಿರುವ ಒಬ್ಬ ವ್ಯಕ್ತಿಗೂ ಒಂದು ಜಮೀನು ಇತ್ತು. ಅವನು ನನ್ನ ಹಕ್ಕನ್ನು ನೀಡಲು ನಿರಾಕರಿಸಿದನು. ನಾನು ಅವನನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕರೆತಂದೆನು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಹೇಳಿದರು: 'ನಿನ್ನ ಬಳಿ ಪುರಾವೆ ಇದೆಯೇ?'. ನಾನು ಹೇಳಿದೆನು: 'ಇಲ್ಲ'. (ವರದಿಗಾರರು) ಹೇಳುತ್ತಾರೆ: ಆಗ ಪ್ರವಾದಿಯವರು ಯಹೂದಿಗೆ ಹೇಳಿದರು: 'ಪ್ರಮಾಣ ಮಾಡು'. ಅಶ್‌ಅಸ್ ಹೇಳುತ್ತಾರೆ: ನಾನು ಹೇಳಿದೆನು: 'ಓ ಅಲ್ಲಾಹನ ಸಂದೇಶವಾಹಕರೇ, ಹಾಗಾದರೆ ಅವನು ಪ್ರಮಾಣ ಮಾಡಿ ನನ್ನ ಸಂಪತ್ತನ್ನು ತೆಗೆದುಕೊಂಡು ಹೋಗುತ್ತಾನೆ!'. ಆಗ ಸರ್ವಶಕ್ತನಾದ ಅಲ್ಲಾಹು (ಈ ವಚನವನ್ನು) ಅವತೀರ್ಣಗೊಳಿಸಿದನು: "ಖಂಡಿತವಾಗಿಯೂ ಯಾರು ಅಲ್ಲಾಹನ ಕರಾರು ಮತ್ತು ತಮ್ಮ ಪ್ರಮಾಣಗಳಿಗೆ ಬದಲಾಗಿ ಅಲ್ಪ ಮೌಲ್ಯವನ್ನು ಖರೀದಿಸುತ್ತಾರೋ..." [ಸೂರಃ ಆಲ್-ಇಮ್ರಾನ್: 77] ವಚನದ ಕೊನೆಯವರೆಗೆ.
[صحيح] - [متفق عليه] - [صحيح البخاري - 2416]
ಅಲ್ಲಾಹನ ಮೇಲೆ ಪ್ರಮಾಣ ಮಾಡುವವನಿಗೆ ಆ ಪ್ರಮಾಣದ ಮೂಲಕ ಬೇರೆಯವರ ಸಂಪತ್ತನ್ನು ವಶಪಡಿಸಿಕೊಳ್ಳಲು ಅದರಲ್ಲಿ ತಾನು ಸುಳ್ಳು ಹೇಳುತ್ತಿದ್ದೇನೆಂದು ತಿಳಿದಿದ್ದೂ ಹಾಗೆ ಪ್ರಮಾಣ ಮಾಡುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ್ದಾರೆ. ಅಂತಹವನು ಅಲ್ಲಾಹನನ್ನು ಭೇಟಿಯಾಗುವುದು ಅಲ್ಲಾಹು ಅವನ ಮೇಲೆ ಕೋಪಗೊಂಡಿರುವ ಸ್ಥಿತಿಯಲ್ಲಾಗಿದೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ಹೇಳಿದ್ದು ತಮ್ಮ ವಿಷಯದಲ್ಲಿಯೇ ಎಂದು ಅಶ್‌ಅಸ್ ಇಬ್ನ್ ಖೈಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸಿದರು. ಅವರಿಗೂ ಮತ್ತು ಯಹೂದಿಗಳಲ್ಲಿ ಒಬ್ಬ ವ್ಯಕ್ತಿಗೂ ಜಮೀನಿನ ಒಡೆತನದ ಬಗ್ಗೆ ವಿವಾದವಿತ್ತು. ಅವರಿಬ್ಬರೂ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ತೀರ್ಪಿಗಾಗಿ ಬಂದರು. ಪ್ರವಾದಿಯವರು ಅಶ್‌ಅಸ್‌ಗೆ ಹೇಳಿದರು: ನೀನು ಹೇಳಿಕೊಳ್ಳುವುದನ್ನು ರುಜುವಾತು ಪಡಿಸಲು ನೀನು ಪುರಾವೆ ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ನಿನಗೆ ಅದು ಸಾಧ್ಯವಾಗದಿದ್ದರೆ, ನೀನು ಆರೋಪ ಹೊರಿಸುತ್ತಿರುವ ನಿನ್ನ ಎದುರುವಾದಿಯ ಪ್ರಮಾಣವನ್ನು ಹೊರತುಪಡಿಸಿ ನಿನಗೆ ಬೇರೆ ದಾರಿಯಿಲ್ಲ. ಆಗ ಅಶ್‌ಅಸ್ ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಹಾಗಾದರೆ ಯಹೂದಿ ವ್ಯಕ್ತಿಯು (ಸುಳ್ಳು) ಪ್ರಮಾಣ ಮಾಡುತ್ತಾನೆ. ಅವನು ಅದಕ್ಕೆ ಹಿಂಜರಿಯುವುದಿಲ್ಲ ಮತ್ತು ಅವನು ನನ್ನ ಸಂಪತ್ತನ್ನು ತೆಗೆದುಕೊಂಡು ಹೋಗುತ್ತಾನೆ. ಆಗ ಸರ್ವಶಕ್ತನಾದ ಅಲ್ಲಾಹು ಕುರ್‌ಆನ್‌ನಲ್ಲಿ ಅದನ್ನು ಸತ್ಯವೆಂದು ದೃಢೀಕರಿಸುತ್ತಾ ಈ ವಚನವನ್ನು ಅವತೀರ್ಣಗೊಳಿಸಿದನು: "ಖಂಡಿತವಾಗಿಯೂ ಯಾರು ಖರೀದಿಸುತ್ತಾರೋ" ಅಂದರೆ ಬದಲಾಯಿಸಿಕೊಳ್ಳುತ್ತಾರೋ "ಅಲ್ಲಾಹನ ಕರಾರಿಗೆ", ಮತ್ತು ಅಮಾನತ್ತನ್ನು ಪೂರೈಸಲು ಅವನು ಸತ್ಯವಿಶ್ವಾಸಿಗಳಿಗೆ ನೀಡಿದ ಉಪದೇಶಕ್ಕೆ ಬದಲಾಗಿ "ಮತ್ತು ತಮ್ಮ ಪ್ರಮಾಣಗಳಿಗೆ" ಮತ್ತು ಸುಳ್ಳು ಹೇಳುತ್ತಾ ಅವನ ಹೆಸರಿನಲ್ಲಿ ಮಾಡುವ ಆಣೆಗಳಿಗೆ ಬದಲಾಗಿ "ಅಲ್ಪ ಮೌಲ್ಯವನ್ನು" ಇಹಲೋಕದ ನಶ್ವರ ವಸ್ತುಗಳಿಂದ, "ಅಂಥವರಿಗೆ ಪರಲೋಕದಲ್ಲಿ ಯಾವುದೇ ಪಾಲು ಇಲ್ಲ" ಮತ್ತು ಯಾವುದೇ ಅಂಶವಿಲ್ಲ "ಮತ್ತು ಅಲ್ಲಾಹು ಅವರೊಂದಿಗೆ ಮಾತನಾಡುವುದಿಲ್ಲ", ಅವರಿಗೆ ಸಂತೋಷವನ್ನು ನೀಡುವ ಮತ್ತು ಪ್ರಯೋಜನಕಾರಿಯಾದ ಮಾತುಗಳನ್ನಾಡುವುದಿಲ್ಲ, ಬದಲಿಗೆ ಅವರ ಮೇಲೆ ಕೋಪಗೊಂಡಿರುತ್ತಾನೆ, "ಮತ್ತು ಪುನರುತ್ಥಾನ ದಿನದಂದು ಅವರ ಕಡೆಗೆ ನೋಡುವುದಿಲ್ಲ", ಕರುಣೆ ಮತ್ತು ಉಪಕಾರದ ನೋಟದಿಂದ ನೋಡುವುದಿಲ್ಲ, "ಮತ್ತು ಅವರನ್ನು ಪರಿಶುದ್ಧಗೊಳಿಸುವುದಿಲ್ಲ", ಉತ್ತಮ ಪ್ರಶಂಸೆಯೊಂದಿಗೆ, ಅಥವಾ ಕ್ಷಮೆಯ ಮೂಲಕ ಪಾಪಗಳು ಮತ್ತು ಕಲ್ಮಶಗಳಿಂದ ಅವರನ್ನು ಶುದ್ಧೀಕರಿಸುವುದಿಲ್ಲ "ಮತ್ತು ಅವರಿಗೆ ಯಾತನಾಮಯ ಶಿಕ್ಷೆಯಿದೆ" ನೋವಿನಿಂದ ತುಂಬಿದ ಶಿಕ್ಷೆಯಿದೆ, ಅವರು ಮಾಡಿದ ಕೃತ್ಯಗಳ ಕಾರಣದಿಂದಾಗಿ.