عَنْ عَبْدِ اللَّهِ بْنِ عَمْرٍو رضي الله عنهما قال: قال رَسولُ اللهِ صَلَّى اللهُ عَلَيْهِ وَسَلَّمَ:
«أَرْبَعٌ مَنْ كُنَّ فِيهِ كَانَ مُنَافِقًا، وَإِنْ كَانَتْ خَصْلَةٌ مِنْهُنَّ فِيهِ كَانَتْ فِيهِ خَصْلَةٌ مِنَ النِّفَاقِ حَتَّى يَدَعَهَا: مَنْ إِذَا حَدَّثَ كَذَبَ، وإِذَا وَعَدَ أَخْلَفَ، وإذَا خَاصَمَ فَجَرَ، وَإِذَا عَاهَدَ غَدَرَ».
[صحيح] - [رواه البخاري ومسلم] - [الأربعون النووية: 48]
المزيــد ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಾಲ್ಕು (ಗುಣಲಕ್ಷಣಗಳು) ಯಾರಲ್ಲಿವೆಯೋ ಅವನು ಮುನಾಫಿಕ್ (ಕಪಟವಿಶ್ವಾಸಿ) ಆಗಿರುತ್ತಾನೆ. ಅವುಗಳಲ್ಲಿ ಒಂದು ಗುಣಲಕ್ಷಣವು ಯಾರಲ್ಲಿರುತ್ತದೆಯೋ, ಅವನು ಅದನ್ನು ಬಿಡುವವರೆಗೆ ಅವನಲ್ಲಿ 'ನಿಫಾಖ್' (ಕಪಟತನ) ದ ಒಂದು ಗುಣಲಕ್ಷಣವಿರುತ್ತದೆ: ಅವನು ಮಾತನಾಡಿದಾಗ ಸುಳ್ಳು ಹೇಳುತ್ತಾನೆ. ಅವನು ವಾಗ್ದಾನ ಮಾಡಿದಾಗ ಅದನ್ನು ಮುರಿಯುತ್ತಾನೆ. ಅವನು ಜಗಳವಾಡಿದಾಗ ಕೆಟ್ಟದಾಗಿ ವರ್ತಿಸುತ್ತಾನೆ. ಅವನು ಒಪ್ಪಂದ ಮಾಡಿಕೊಂಡಾಗ ದ್ರೋಹ ಬಗೆಯುತ್ತಾನೆ".
[صحيح] - [رواه البخاري ومسلم] - [الأربعون النووية - 48]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನಾಲ್ಕು ಲಕ್ಷಣಗಳ ಬಗ್ಗೆ ಎಚ್ಚರಿಸಿದ್ದಾರೆ. ಇವು ಒಬ್ಬ ಮುಸಲ್ಮಾನನಲ್ಲಿ ಒಟ್ಟುಗೂಡಿದರೆ ಅವನು ಈ ಲಕ್ಷಣಗಳಿಂದಾಗಿ ಕಪಟವಿಶ್ವಾಸಿಗಳನ್ನು ತೀವ್ರವಾಗಿ ಹೋಲುತ್ತಾನೆ. ಯಾರಲ್ಲಿ ಈ ಲಕ್ಷಣಗಳು ಹೆಚ್ಚಾಗಿ ಕಾಣುತ್ತವೆಯೋ ಅವರು ಇದರಲ್ಲಿ ಸೇರುತ್ತಾರೆ. ಆದರೆ, ಯಾರಲ್ಲಿ ಈ ಲಕ್ಷಣಗಳು ಅಪರೂಪವಾಗಿ ಕಾಣುತ್ತವೆಯೋ ಅವರು ಇದರಲ್ಲಿ ಸೇರುವುದಿಲ್ಲ. ಆ ಲಕ್ಷಣಗಳು ಯಾವುದೆಂದರೆ:
ಒಂದು: ಮಾತನಾಡುವಾಗ ಉದ್ದೇಶಪೂರ್ವಕ ಸುಳ್ಳು ಹೇಳುವುದು ಮತ್ತು ಮಾತಿನಲ್ಲಿ ಪ್ರಾಮಾಣಿಕತೆಯನ್ನು ಪಾಲಿಸದಿರುವುದು.
ಎರಡು: ಯಾವುದಾದರೂ ಕರಾರು ಮಾಡಿಕೊಂಡರೆ ಅದನ್ನು ನೆರವೇರಿಸದಿರುವುದು ಮತ್ತು ಕರಾರು ಮಾಡಿಕೊಂಡವನಿಗೆ ದ್ರೋಹವೆಸಗುವುದು.
ಮೂರು: ಭರವಸೆ ನೀಡಿದರೆ ಅದನ್ನು ಪೂರ್ತಿ ಮಾಡದೆ ಮೋಸ ಮಾಡುವುದು.
ನಾಲ್ಕು: ಯಾರಾದರೂ ಒಬ್ಬರೊಂದಿಗೆ ತರ್ಕ ಮಾಡಿದರೆ ಅಥವಾ ಜಗಳವಾಡಿದರೆ, ತೀವ್ರ ಸ್ವರೂಪದಲ್ಲಿ ತರ್ಕಿಸುತ್ತಾ ಸತ್ಯದಿಂದ ದೂರ ಸರಿಯುವುದು, ವಾದದಲ್ಲಿ ಕುತರ್ಕಗಳನ್ನು ಬಳಸುವುದು ಮತ್ತು ಸುಳ್ಳುಗಳನ್ನು ಹೇಳುವುದು.
ಕಾಪಟ್ಯ ಎಂದರೆ ಒಳಗಿರುವುದಕ್ಕೆ ವಿರುದ್ಧವಾಗಿರುವುದನ್ನು ಹೊರಗಡೆ ತೋರಿಸುವುದಾಗಿದೆ. ಈ ಲಕ್ಷಣಗಳನ್ನು ಹೊಂದಿರುವವರಲ್ಲಿ ಇದು ಕಂಡುಬರುತ್ತದೆ. ಅವರು ಯಾರೊಡನೆ ಮಾತನಾಡುತ್ತಾರೋ, ಯಾರಿಗೆ ಭರವಸೆ ನೀಡುತ್ತಾರೋ, ಯಾರು ಅವರ ಮೇಲೆ ವಿಶ್ವಾಸವಿಡುತ್ತಾರೋ, ಯಾರೊಂದಿಗೆ ಅವರು ತರ್ಕ ಮಾಡುತ್ತಾರೋ, ಯಾರಿಗೆ ಅವರು ಮಾತು ಕೊಡುತ್ತಾರೋ ಅವರೊಂದಿಗೆ ಇವರ ಕಾಪಟ್ಯವು ಇರುತ್ತದೆಯೇ ಹೊರತು ಇವರು ಹೊರಗೆ ಮುಸ್ಲಿಮರಂತೆ ವರ್ತಿಸುತ್ತಾ ಒಳಗೆ ಸತ್ಯನಿಷೇಧವನ್ನು ಹೊಂದಿರುವ ಇಸ್ಲಾಂನಲ್ಲಿರುವ ಕಪಟವಿಶ್ವಾಸಿಗಳಲ್ಲ. ಯಾರಲ್ಲಿ ಈ ಲಕ್ಷಣಗಳಲ್ಲೊಂದು ಇರುತ್ತದೆಯೋ ಅವರು ಅದನ್ನು ತೊರೆಯುವ ತನಕ ಅವರಲ್ಲಿ ಕಾಪಟ್ಯದ ಒಂದು ಅಂಶವಿರುತ್ತದೆ.