عَنْ عَائِشَةَ أُمِّ المُؤْمِنِينَ رَضِيَ اللَّهُ عَنْها أَنَّهَا قَالَتْ:
أَوَّلُ مَا بُدِئَ بِهِ رَسُولُ اللَّهِ صَلَّى اللهُ عَلَيْهِ وَسَلَّمَ مِنَ الوَحْيِ الرُّؤْيَا الصَّالِحَةُ فِي النَّوْمِ، فَكَانَ لاَ يَرَى رُؤْيَا إِلَّا جَاءَتْ مِثْلَ فَلَقِ الصُّبْحِ، ثُمَّ حُبِّبَ إِلَيْهِ الخَلاَءُ، وَكَانَ يَخْلُو بِغَارِ حِرَاءٍ فَيَتَحَنَّثُ فِيهِ -وَهُوَ التَّعَبُّدُ- اللَّيَالِيَ ذَوَاتِ العَدَدِ قَبْلَ أَنْ يَنْزِعَ إِلَى أَهْلِهِ، وَيَتَزَوَّدُ لِذَلِكَ، ثُمَّ يَرْجِعُ إِلَى خَدِيجَةَ فَيَتَزَوَّدُ لِمِثْلِهَا، حَتَّى جَاءَهُ الحَقُّ وَهُوَ فِي غَارِ حِرَاءٍ، فَجَاءَهُ المَلَكُ فَقَالَ: اقْرَأْ، قَالَ: «مَا أَنَا بِقَارِئٍ» قَالَ: «فَأَخَذَنِي فَغَطَّنِي حَتَّى بَلَغَ مِنِّي الجَهْدَ ثُمَّ أَرْسَلَنِي، فَقَالَ: اقْرَأْ، قُلْتُ: مَا أَنَا بِقَارِئٍ، فَأَخَذَنِي فَغَطَّنِي الثَّانِيَةَ حَتَّى بَلَغَ مِنِّي الجَهْدَ ثُمَّ أَرْسَلَنِي، فَقَالَ: اقْرَأْ، فَقُلْتُ: مَا أَنَا بِقَارِئٍ، فَأَخَذَنِي فَغَطَّنِي الثَّالِثَةَ ثُمَّ أَرْسَلَنِي، فَقَالَ: {اقْرَأْ بِاسْمِ رَبِّكَ الَّذِي خَلَقَ خَلَقَ الإِنْسَانَ مِنْ عَلَقٍ اقْرَأْ وَرَبُّكَ الأَكْرَمُ}»، [العلق:1-3] فَرَجَعَ بِهَا رَسُولُ اللَّهِ صَلَّى اللهُ عَلَيْهِ وَسَلَّمَ يَرْجُفُ فُؤَادُهُ، فَدَخَلَ عَلَى خَدِيجَةَ بِنْتِ خُوَيْلِدٍ رَضِيَ اللَّهُ عَنْهَا، فَقَالَ: «زَمِّلُونِي، زَمِّلُونِي» فَزَمَّلُوهُ حَتَّى ذَهَبَ عَنْهُ الرَّوْعُ، فَقَالَ لِخَدِيجَةَ وَأَخْبَرَهَا الخَبَرَ: «لَقَدْ خَشِيتُ عَلَى نَفْسِي» فَقَالَتْ خَدِيجَةُ: كَلَّا وَاللَّهِ مَا يُخْزِيكَ اللَّهُ أَبَدًا، إِنَّكَ لَتَصِلُ الرَّحِمَ، وَتَحْمِلُ الكَلَّ، وَتَكْسِبُ المَعْدُومَ، وَتَقْرِي الضَّيْفَ، وَتُعِينُ عَلَى نَوَائِبِ الحَقِّ، فَانْطَلَقَتْ بِهِ خَدِيجَةُ حَتَّى أَتَتْ بِهِ وَرَقَةَ بْنَ نَوْفَلِ بْنِ أَسَدِ بْنِ عَبْدِ العُزَّى، ابْنَ عَمِّ خَدِيجَةَ، وَكَانَ امْرَأً تَنَصَّرَ فِي الجَاهِلِيَّةِ، وَكَانَ يَكْتُبُ الكِتَابَ العِبْرَانِيَّ، فَيَكْتُبُ مِنَ الإِنْجِيلِ بِالعِبْرَانِيَّةِ مَا شَاءَ اللَّهُ أَنْ يَكْتُبَ، وَكَانَ شَيْخًا كَبِيرًا قَدْ عَمِيَ، فَقَالَتْ لَهُ خَدِيجَةُ: يَا ابْنَ عَمِّ، اسْمَعْ مِنَ ابْنِ أَخِيكَ، فَقَالَ لَهُ وَرَقَةُ: يَا ابْنَ أَخِي، مَاذَا تَرَى؟ فَأَخْبَرَهُ رَسُولُ اللَّهِ صَلَّى اللهُ عَلَيْهِ وَسَلَّمَ خَبَرَ مَا رَأَى، فَقَالَ لَهُ وَرَقَةُ: هَذَا النَّامُوسُ الَّذِي نَزَّلَ اللَّهُ عَلَى مُوسَى، يَا لَيْتَنِي فِيهَا جَذَعًا، لَيْتَنِي أَكُونُ حَيًّا إِذْ يُخْرِجُكَ قَوْمُكَ، فَقَالَ رَسُولُ اللَّهِ صَلَّى اللهُ عَلَيْهِ وَسَلَّمَ: «أَوَ مُخْرِجِيَّ هُمْ؟»، قَالَ: نَعَمْ، لَمْ يَأْتِ رَجُلٌ قَطُّ بِمِثْلِ مَا جِئْتَ بِهِ إِلَّا عُودِيَ، وَإِنْ يُدْرِكْنِي يَوْمُكَ أَنْصُرْكَ نَصْرًا مُؤَزَّرًا. ثُمَّ لَمْ يَنْشَبْ وَرَقَةُ أَنْ تُوُفِّيَ، وَفَتَرَ الوَحْيُ.

[صحيح] - [متفق عليه] - [صحيح البخاري: 3]
المزيــد ...

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ವಹೀ' (ದೇವವಾಣಿ) ಪ್ರಾರಂಭವಾಗಿದ್ದು ನಿದ್ರೆಯಲ್ಲಿನ ಸತ್ಯವಾದ ಕನಸುಗಳ ಮೂಲಕ. ಅವರು ಯಾವುದೇ ಕನಸನ್ನು ಕಂಡರೂ, ಅದು ಬೆಳಗಿನ ಜಾವದ ಬೆಳಕಿನಂತೆ ನಿಜವಾಗುತ್ತಿತ್ತು. ನಂತರ, ಅವರಿಗೆ ಏಕಾಂತವಾಸವು ಇಷ್ಟವಾಯಿತು. ಅವರು 'ಹಿರಾ' ಗುಹೆಯಲ್ಲಿ ಏಕಾಂತದಲ್ಲಿರುತ್ತಿದ್ದರು, ಮತ್ತು ತಮ್ಮ ಕುಟುಂಬದ ಬಳಿಗೆ ಮರಳಿ ಬರುವ ಮೊದಲು ಅನೇಕ ರಾತ್ರಿಗಳವರೆಗೆ ಅದರಲ್ಲಿ (ಗುಹೆಯಲ್ಲಿ) 'ತಹನ್ನುಸ್' (ಆರಾಧನೆ) ಮಾಡುತ್ತಿದ್ದರು. ಇದಕ್ಕಾಗಿ ಅವರು ಆಹಾರ ಸಿದ್ಧತೆ ಮಾಡಿಕೊಂಡು ಹೋಗುತ್ತಿದ್ದರು. ನಂತರ ಅವರು (ತಮ್ಮ ಪತ್ನಿ) ಖದೀಜಾ ರವರ ಬಳಿಗೆ ಮರಳಿ, ಮತ್ತೆ ಅಷ್ಟೇ ರಾತ್ರಿಗಳಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕೊನೆಗೆ ಅವರು ಹಿರಾ ಗುಹೆಯಲ್ಲಿದ್ದಾಗ ಸತ್ಯವು ಅವರ ಬಳಿಗೆ ಬಂದಿತು. ದೇವದೂತ ಜಿಬ್ರೀಲ್ ರವರು ಅವರ ಬಳಿಗೆ ಬಂದು ಹೇಳಿದರು: "ಓದಿರಿ". (ಪ್ರವಾದಿ) ಹೇಳಿದರು: "ನನಗೆ ಓದಲು ಬರುವುದಿಲ್ಲ". ಅವರು (ಪ್ರವಾದಿ) ಹೇಳುತ್ತಾರೆ: "ಆಗ ಅವರು (ಜಿಬ್ರೀಲ್) ನನ್ನನ್ನು ಹಿಡಿದು ಬಿಗಿದಪ್ಪಿದರು. ಎಷ್ಟರಮಟ್ಟಿಗೆ ಎಂದರೆ ನನಗೆ ತೀವ್ರ ಸಂಕಷ್ಟ ಅನುಭವವಾಯಿತು. ನಂತರ ಅವರು ನನ್ನನ್ನು ಬಿಟ್ಟು, 'ಓದಿರಿ' ಎಂದು ಹೇಳಿದರು. ನಾನು ಹೇಳಿದೆನು: 'ನನಗೆ ಓದಲು ಬರುವುದಿಲ್ಲ'. ಆಗ ಅವರು ನನ್ನನ್ನು ಎರಡನೇ ಬಾರಿಗೆ ಹಿಡಿದು ಬಿಗಿದಪ್ಪಿದರು. ಎಷ್ಟರಮಟ್ಟಿಗೆ ಎಂದರೆ ನನಗೆ ತೀವ್ರ ಸಂಕಷ್ಟ ಅನುಭವವಾಯಿತು. ನಂತರ ಅವರು ನನ್ನನ್ನು ಬಿಟ್ಟು 'ಓದಿರಿ' ಎಂದು ಹೇಳಿದರು. ನಾನು ಹೇಳಿದೆನು: 'ನನಗೆ ಓದಲು ಬರುವುದಿಲ್ಲ'. ಆಗ ಅವರು ನನ್ನನ್ನು ಮೂರನೇ ಬಾರಿಗೆ ಹಿಡಿದು ಬಿಗಿದಪ್ಪಿದರು. ನಂತರ ನನ್ನನ್ನು ಬಿಟ್ಟು ಹೇಳಿದರು: “ಸೃಷ್ಟಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಓದಿರಿ. ಅವನು ಮನುಷ್ಯನನ್ನು 'ಅಲಖ್' (ರಕ್ತದ ಹೆಪ್ಪುಗಟ್ಟಿದ ತುಂಡಿ) ನಿಂದ ಸೃಷ್ಟಿಸಿದನು. ಓದಿರಿ, ಮತ್ತು ನಿಮ್ಮ ಪರಿಪಾಲಕನು ಮಹಾ ಉದಾರಿಯಾಗಿದ್ದಾನೆ.” [ಸೂರ ಅಲ್-ಅಲಖ್: 1-3]". ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರೊಂದಿಗೆ (ಆ ವಚನಗಳೊಂದಿಗೆ) ತಮ್ಮ ಹೃದಯವು ಕಂಪಿಸುತ್ತಿದ್ದಂತೆ (ಭಯಭೀತರಾಗಿ) ಹಿಂತಿರುಗಿದರು. ಅವರು ಖದೀಜಾ ಬಿಂತ್ ಖುವೈಲಿದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿ ಬಂದು ಹೇಳಿದರು: "ನನ್ನನ್ನು ಹೊದಿಸಿರಿ! ನನ್ನನ್ನು ಹೊದಿಸಿರಿ!". ಅವರು (ಖದೀಜಾ) ಅವರನ್ನು ಹೊದಿಸಿದರು. ಕೊನೆಗೆ ಅವರ ಭಯವು ದೂರವಾದಾಗ, ಅವರು ಖದೀಜಾ ರಿಗೆ ನಡೆದ ಸಂಗತಿಯನ್ನು ವಿವರಿಸಿ, "ನನಗೆ ನನ್ನ ಪ್ರಾಣದ ಬಗ್ಗೆ ಭಯವಾಗುತ್ತಿದೆ" ಎಂದರು. ಆಗ ಖದೀಜಾ ಹೇಳಿದರು: "ಇಲ್ಲ! ಅಲ್ಲಾಹನಾಣೆ, ಅಲ್ಲಾಹು ನಿಮ್ಮನ್ನು ಎಂದಿಗೂ ಅವಮಾನಿಸುವುದಿಲ್ಲ. ಖಂಡಿತವಾಗಿಯೂ ನೀವು ಸಂಬಂಧಗಳನ್ನು ಬೆಸೆಯುತ್ತೀರಿ, ಭಾರವನ್ನು (ಅಶಕ್ತರ ಹೊರೆಯನ್ನು) ಹೊರುತ್ತೀರಿ, ಇಲ್ಲದವನಿಗೆ ಸಂಪಾದಿಸಿ ಕೊಡುತ್ತೀರಿ, ಅತಿಥಿ ಸತ್ಕಾರ ಮಾಡುತ್ತೀರಿ, ಮತ್ತು ಸತ್ಯದ ಕಾರಣದಿಂದ ಉಂಟಾದ ವಿಪತ್ತುಗಳಲ್ಲಿ (ಜನರಿಗೆ) ಸಹಾಯ ಮಾಡುತ್ತೀರಿ". ನಂತರ ಖದೀಜಾ ಅವರನ್ನು ವರಖಾ ಇಬ್ನ್ ನೌಫಲ್ ಇಬ್ನ್ ಅಸದ್ ಇಬ್ನ್ ಅಬ್ದುಲ್ ಉಝ್ಝಾ ರವರ ಬಳಿಗೆ ಕರೆದುಕೊಂಡು ಹೋದರು. ಅವರು (ವರಖಾ) ಖದೀಜಾ ರವರ ಸೋದರ ಸಂಬಂಧಿಯಾಗಿದ್ದರು. ಅವರು ಅಜ್ಞಾನ ಕಾಲದಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದರು. ಅವರು ಹೀಬ್ರೂ ಭಾಷೆಯಲ್ಲಿ ಬರೆಯಬಲ್ಲವರಾಗಿದ್ದರು, ಮತ್ತು ಇಂಜೀಲ್ ಗ್ರಂಥದಿಂದ ಅಲ್ಲಾಹು ಇಚ್ಛಿಸಿದಷ್ಟನ್ನು ಹೀಬ್ರೂ ಭಾಷೆಯಲ್ಲಿ ಬರೆಯುತ್ತಿದ್ದರು. ಅವರಿಗೆ ಬಹಳ ವಯಸ್ಸಾಗಿತ್ತು ಮತ್ತು ಅವರು ಕುರುಡರಾಗಿದ್ದರು. ಖದೀಜಾ ಹೇಳಿದರು: "ಓ ನನ್ನ ಚಿಕ್ಕಪ್ಪನ ಮಗನೇ, ನಿಮ್ಮ ಸಹೋದರನ ಮಗನಿಂದ (ನಡೆದ ಸಂಗತಿಯನ್ನು) ಕೇಳಿರಿ". ವರಖಾ ಕೇಳಿದರು: "ಓ ನನ್ನ ಸಹೋದರನ ಮಗನೇ, ನೀನು ಏನನ್ನು ನೋಡಿದ್ದೀಯಾ?" ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾವು ನೋಡಿದ ಸಂಗತಿಯನ್ನು ಅವರಿಗೆ ತಿಳಿಸಿದರು. ಆಗ ವರಖಾ ಹೇಳಿದರು: "ಇದು ಅಲ್ಲಾಹು ಮೂಸಾ (ಅವರ ಮೇಲೆ ಶಾಂತಿಯಿರಲಿ) ರವರ ಬಳಿಗೆ ಕಳುಹಿಸಿದ್ದ ಅದೇ 'ನಾಮೂಸ್' (ಜಿಬ್ರೀಲ್) ಆಗಿದ್ದಾರೆ. ನಾನು ಆ ಸಮಯದಲ್ಲಿ (ನೀನು ಪ್ರವಾದಿ ಎಂದು ಘೋಷಿಸಿದಾಗ) ಯುವಕನಾಗಿದ್ದರೆ ಎಷ್ಟು ಚೆನ್ನಾಗಿತ್ತು! ನಿನ್ನ ಜನಾಂಗದವರು ನಿನ್ನನ್ನು (ಊರಿನಿಂದ) ಹೊರಹಾಕುವಾಗ ನಾನು ಬದುಕಿದ್ದರೆ ಎಷ್ಟು ಚೆನ್ನಾಗಿತ್ತು!" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಅವರು ನನ್ನನ್ನು ಹೊರಹಾಕುವರೇ?" ಅವರು (ವರಖಾ) ಹೇಳಿದರು: "ಹೌದು. ನೀನು ತಂದಿರುವುದರಂತಹದ್ದನ್ನು ತಂದ ಯಾವೊಬ್ಬ ವ್ಯಕ್ತಿಯೂ ದ್ವೇಷಿಸಲ್ಪಡದೆ ಉಳಿದಿಲ್ಲ. ಮತ್ತು ನಿನ್ನ ದಿನವು (ಆ ಸಮಯವು) ನನಗೆ ಸಿಕ್ಕರೆ (ನಾನು ಆಗ ಬದುಕಿದ್ದರೆ), ನಾನು ನಿನಗೆ ಪ್ರಬಲವಾದ ಸಹಾಯವನ್ನು ನೀಡುವೆನು". ನಂತರ ಸ್ವಲ್ಪ ಸಮಯದಲ್ಲೇ ವರಖಾ ಮರಣ ಹೊಂದಿದರು, ಮತ್ತು ದೇವವಾಣಿ (ಸ್ವಲ್ಪ ಕಾಲ) ನಿಂತುಹೋಯಿತು.

[صحيح] - [متفق عليه] - [صحيح البخاري - 3]

ವಿವರಣೆ

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತಿಳಿಸುವುದೇನೆಂದರೆ, ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೇವವಾಣಿ ಅವತೀರ್ಣವಾಗುವುದು ಪ್ರಾರಂಭವಾಗಿದ್ದು ನಿದ್ರೆಯಲ್ಲಿನ ಸತ್ಯವಾದ ಕನಸುಗಳ ಮೂಲಕ. ಅವರು ತಮ್ಮ ನಿದ್ರೆಯಲ್ಲಿ ಯಾವುದೇ ಕನಸನ್ನು ಕಂಡರೂ, ಅದು ಬೆಳಗಿನ ಜಾವದ ಬೆಳಕಿನಂತೆ ನಿಜವಾಗಿ ಬಿಡುತ್ತಿತ್ತು. ನಂತರ ಅವರಿಗೆ ಏಕಾಂತವಾಸವು ಪ್ರಿಯವಾಯಿತು. ಅವರು ಹಿರಾ ಗುಹೆಯಲ್ಲಿ ಏಕಾಂತದಲ್ಲಿರುತ್ತಿದ್ದರು ಮತ್ತು ತಮ್ಮ ಕುಟುಂಬದ ಬಳಿಗೆ ಮರಳುವ ಮೊದಲು ಅನೇಕ ರಾತ್ರಿಗಳವರೆಗೆ ಅಲ್ಲಿ ಆರಾಧನೆ ಮಾಡುತ್ತಿದ್ದರು. ಇದಕ್ಕಾಗಿ ಅವರು ಆಹಾರವನ್ನು ತೆಗೆದುಕೊಂಡು ಹೋಗುತ್ತಿದ್ದರು. ನಂತರ ಅವರು ಸತ್ಯವಿಶ್ವಾಸಿಗಳ ಮಾತೆ ಖದೀಜಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ ಮರಳಿ, ಮತ್ತೆ ಅಷ್ಟೇ ರಾತ್ರಿಗಳಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕೊನೆಗೆ ಅವರು ಹಿರಾ ಗುಹೆಯಲ್ಲಿದ್ದಾಗ ಸತ್ಯವಾದ ಆದೇಶವು ಅವರ ಬಳಿಗೆ ಬಂದಿತು. ದೇವದೂತ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅವರ ಬಳಿಗೆ ಬಂದು ಹೇಳಿದರು: ಓದಿರಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನನಗೆ ಓದಲು ಬರುವುದಿಲ್ಲ. ಆಗ ಅವರು (ಜಿಬ್ರೀಲ್) ನನ್ನನ್ನು ಹಿಡಿದು ಅಪ್ಪಿಕೊಂಡು ಗಟ್ಟಿಯಾಗಿ ಅದುಮಿದರು. ಎಷ್ಟರಮಟ್ಟಿಗೆ ಎಂದರೆ ನನಗೆ ತೀವ್ರ ಸಂಕಷ್ಟವು ಅನುಭವವಾಯಿತು. ನಂತರ ಅವರು ನನ್ನನ್ನು ಬಿಟ್ಟು ಹೇಳಿದರು: ಓದಿರಿ. ನಾನು ಹೇಳಿದೆನು: ನನಗೆ ಓದಲು ಬರುವುದಿಲ್ಲ. ಆಗ ಅವರು ನನ್ನನ್ನು ಎರಡನೇ ಬಾರಿಗೆ ಹಿಡಿದು ಅಪ್ಪಿಕೊಂಡರು. ಎಷ್ಟರಮಟ್ಟಿಗೆ ಎಂದರೆ ನನಗೆ ತೀವ್ರ ಸಂಕಷ್ಟವು ಅನುಭವವಾಯಿತು. ನಂತರ ಅವರು ನನ್ನನ್ನು ಬಿಟ್ಟು ಹೇಳಿದರು: ಓದಿರಿ. ನಾನು ಹೇಳಿದೆನು: ನನಗೆ ಓದಲು ಬರುವುದಿಲ್ಲ. ಆಗ ಅವರು ನನ್ನನ್ನು ಮೂರನೇ ಬಾರಿಗೆ ಹಿಡಿದು ಅಪ್ಪಿಕೊಂಡರು. ನಂತರ ನನ್ನನ್ನು ಬಿಟ್ಟು ಹೇಳಿದರು: “ಸೃಷ್ಟಿಸಿದ ನಿನ್ನ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಓದಿರಿ. ಅವನು ಮನುಷ್ಯನನ್ನು 'ಅಲಖ್' (ರಕ್ತದ ಹೆಪ್ಪುಗಟ್ಟಿದ ತುಂಡಿನಿಂದ) ಸೃಷ್ಟಿಸಿದನು. ಓದಿರಿ, ಮತ್ತು ನಿಮ್ಮ ಪರಿಪಾಲಕನು ಮಹಾ ಉದಾರಿಯಾಗಿದ್ದಾನೆ.” [ಅಲ್-ಅಲಖ್: 1-3]. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ವಚನಗಳೊಂದಿಗೆ ಮರಣದ ಭಯದಿಂದ ಕಂಪಿಸುವ ಹೃದಯದೊಂದಿಗೆ ಹಿಂದಿರುಗಿದರು. ಅವರು ತಮ್ಮ ಪತ್ನಿ ಸತ್ಯವಿಶ್ವಾಸಿಗಳ ಮಾತೆ ಖದೀಜಾ ಬಿಂತ್ ಖುವೈಲಿದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿ ಬಂದು ಹೇಳಿದರು: ನನ್ನನ್ನು ಬಟ್ಟೆಯಿಂದ ಸುತ್ತಿರಿ, ನನ್ನನ್ನು ಬಟ್ಟೆಯಿಂದ ಸುತ್ತಿರಿ. ಖದೀಜಾ ಅವರನ್ನು ಬಟ್ಟೆಯಿಂದ ಸುತ್ತಿದರು. ಕೊನೆಗೆ ಅವರ ಭಯವು ನಿವಾರಣೆಯಾದಾಗ, ಅವರು ಖದೀಜಾ ರಿಗೆ ನಡೆದ ಸಂಗತಿಯನ್ನು ವಿವರಿಸಿ ಹೇಳಿದರು: ನನಗೆ ನನ್ನ ಪ್ರಾಣದ ಬಗ್ಗೆ ಭಯವಾಗುತ್ತಿತು. ಆಗ ಖದೀಜಾ ಹೇಳಿದರು: ಇಲ್ಲ, ಅಲ್ಲಾಹನಾಣೆ, ಅಲ್ಲಾಹು ನಿಮ್ಮನ್ನು ಎಂದಿಗೂ ಅವಮಾನಿಸುವುದಿಲ್ಲ. ಖಂಡಿತವಾಗಿಯೂ ನೀವು ರಕ್ತಸಂಬಂಧಗಳನ್ನು ಬೆಸೆಯುತ್ತೀರಿ, ತನ್ನ ಅಗತ್ಯಗಳನ್ನು ಸ್ವಯಂ ಪೂರೈಸಲಾಗದ ದುರ್ಬಲನ ಹೊರೆಯನ್ನು ಹೊರುತ್ತೀರಿ, ಏನೂ ಇಲ್ಲದ ಬಡವನಿಗೆ ಸಂಪಾದಿಸಿ ಕೊಡುತ್ತೀರಿ; ಅಂದರೆ ನೀವು ಜನರಿಗೆ ಬೇರೆ ಯಾರ ಬಳಿಯೂ ಸಿಗದಂತಹದ್ದನ್ನು ನೀಡುತ್ತೀರಿ, ಅತಿಥಿ ಸತ್ಕಾರ ಮಾಡುತ್ತೀರಿ, ಮತ್ತು ಸತ್ಯದ ಕಾರಣದಿಂದ ಉಂಟಾದ ಆಪತ್ತುಗಳಲ್ಲಿ ಸಹಾಯ ಮಾಡುತ್ತೀರಿ. ನಂತರ ಖದೀಜಾ ಅವರನ್ನು ಕರೆದುಕೊಂಡು ವರಖಾ ಇಬ್ನ್ ನೌಫಲ್ ಇಬ್ನ್ ಅಸದ್ ಇಬ್ನ್ ಅಬ್ದುಲ್ ಉಝ್ಝಾ ರವರ ಬಳಿಗೆ ಹೋದರು. ಅವರು ಖದೀಜಾ ರವರ ಚಿಕ್ಕಪ್ಪನ ಪುತ್ರರಾಗಿದ್ದರು. ಅವರು ಅಜ್ಞಾನಯುಗದ ಧರ್ಮವನ್ನು ತ್ಯಜಿಸಿ ಕ್ರೈಸ್ತರಾಗಿದ್ದರು. ಅವರು ಇಂಜೀಲ್ ಗ್ರಂಥದಿಂದ ಹೀಬ್ರೂ ಭಾಷೆಯಲ್ಲಿ ಅಲ್ಲಾಹು ಇಚ್ಛಿಸಿದಷ್ಟನ್ನು ಬರೆಯುತ್ತಿದ್ದರು. ಅವರಿಗೆ ಬಹಳ ವಯಸ್ಸಾಗಿದ್ದು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದರು. ಖದೀಜಾ ಹೇಳಿದರು: ಓ ನನ್ನ ಚಿಕ್ಕಪ್ಪನ ಪುತ್ರರೇ, ನಿಮ್ಮ ಸಹೋದರನ ಮಗನಿಂದ ಕೇಳಿರಿ. ಆಗ ವರಖಾ ಕೇಳಿದರು: ಓ ನನ್ನ ಸಹೋದರನ ಮಗನೇ, ನೀನು ಏನನ್ನು ನೋಡಿದ್ದೀಯಾ? ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾವು ನೋಡಿದ್ದನ್ನು ಅವರಿಗೆ ತಿಳಿಸಿದರು. ಆಗ ವರಖಾ ಹೇಳಿದರು: ಇದು ಅಲ್ಲಾಹು ಪ್ರವಾದಿ ಮೂಸಾ (ಅವರ ಮೇಲೆ ಶಾಂತಿಯಿರಲಿ) ರವರ ಬಳಿಗೆ ಕಳುಹಿಸಿದ ಅದೇ ಜಿಬ್ರೀಲ್ ಆಗಿದ್ದಾರೆ. ಆ ಸಮಯದಲ್ಲಿ ನಾನು ಯುವಕನಾಗಿದ್ದರೆ ಎಷ್ಟು ಚೆನ್ನಾಗಿತ್ತು! ನಿನ್ನ ಜನಾಂಗದವರು ನಿನ್ನನ್ನು ಹೊರಹಾಕುವಾಗ ನಾನು ಬದುಕಿದ್ದರೆ ಎಷ್ಟು ಚೆನ್ನಾಗಿತ್ತು! ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: ಅವರು ನನ್ನನ್ನು ಹೊರಹಾಕುವರೇ?! ಅವರು ಹೇಳಿದರು: ಹೌದು. ನೀನು ತಂದಿರುವುದರಂತಹದ್ದನ್ನು ತಂದ ಯಾವೊಬ್ಬ ವ್ಯಕ್ತಿಯೂ ತೊಂದರೆಗೊಳಗಾಗದೆ ಮತ್ತು ದ್ವೇಷಿಸಲ್ಪಡದೆ ಉಳಿದಿಲ್ಲ. ಮತ್ತು ನಿನ್ನ ದಿನವು (ಆ ಸಮಯವು) ನನಗೆ ಸಿಕ್ಕರೆ, ನಾನು ನಿನಗೆ ಪ್ರಬಲವಾದ ಸಹಾಯವನ್ನು ನೀಡುವೆನು. ನಂತರ ಸ್ವಲ್ಪ ಸಮಯದಲ್ಲೇ ವರಖಾ ಮರಣ ಹೊಂದಿದರು, ಮತ್ತು ದೇವವಾಣಿ ಸ್ವಲ್ಪ ಕಾಲದವರೆಗೆ ವಿಳಂಬವಾಯಿತು.

ಹದೀಸಿನ ಪ್ರಯೋಜನಗಳು

  1. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೇವವಾಣಿ ಪ್ರಾರಂಭವಾದ ರೂಪವನ್ನು ವಿವರಿಸಲಾಗಿದೆ.
  2. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕನಸು ದೇವವಾಣಿಯ ವಿಧಗಳಲ್ಲಿ ಒಂದಾಗಿದೆ.
  3. (ಪ್ರಯಾಣ ಅಥವಾ ಆರಾಧನೆಗಾಗಿ) ಸಿದ್ಧತೆ ಮಾಡಿಕೊಳ್ಳುವುದು ನಿಯಮಗೊಳಿಸಲಾಗಿದೆ. ಅದು ತವಕ್ಕುಲ್‌ಗೆ (ಅಲ್ಲಾಹನ ಮೇಲಿನ ಭರವಸೆಗೆ) ವಿರುದ್ಧವಾಗಿಲ್ಲ. ಏಕೆಂದರೆ ತವಕ್ಕುಲ್ ಮಾಡುವವರ ನೇತಾರರಾದ ಪ್ರವಾದಿಯವರೇ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಮಾಡಿಕೊಂಡಿದ್ದರು.
  4. ಅಲ್ಲಾಹು ತನ್ನ ದಾಸರಿಗೆ ಅವರು ತಿಳಿಯದಿದ್ದನ್ನು ಕಲಿಸುವ ಮೂಲಕ ಮತ್ತು ಅವರನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿಗೆ ತರುವ ಮೂಲಕ ತೋರಿದ ಔದಾರ್ಯದ ಪರಿಪೂರ್ಣತೆಯನ್ನು ತಿಳಿಸಲಾಗಿದೆ.
  5. ಬರಹ ರೂಪದಲ್ಲಿರುವ ಜ್ಞಾನದ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಅದರಲ್ಲಿ ಅಸಂಖ್ಯಾತ ಮಹಾ ಪ್ರಯೋಜನಗಳಿವೆ. ಏಕೆಂದರೆ ಅದರ ಮೂಲಕ ಜ್ಞಾನಗಳನ್ನು ದಾಖಲಿಸಲಾಗುತ್ತದೆ, ತೀರ್ಪುಗಳನ್ನು ಬರೆಯಲಾಗುತ್ತದೆ, ಪೂರ್ವಿಕರ ಸಮಾಚಾರಗಳನ್ನು ಸಂರಕ್ಷಿಸಲಾಗುತ್ತದೆ, ಮತ್ತು ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥಗಳನ್ನು ಕಾಪಾಡಲಾಗುತ್ತದೆ, ಹಾಗೆಯೇ ಅದರಿಂದಾಗಿ ಧರ್ಮ ಹಾಗೂ ಪ್ರಪಂಚದ ಸಂಗತಿಗಳು ನೆಲೆನಿಲ್ಲುತ್ತವೆ.
  6. ಮೊಟ್ಟಮೊದಲು ಅವತೀರ್ಣವಾದ ಕುರ್‌ಆನ್ ವಚನ: “ಸೃಷ್ಟಿಸಿದ ನಿನ್ನ ಪರಿಪಾಲಕನ ಹೆಸರಿನಿಂದ ಓದು.” [ಅಲ್-ಅಲಖ್: 1].
  7. ಉತ್ತಮ ನಡವಳಿಕೆ ಮತ್ತು ಒಳಿತಿನ ಗುಣಗಳು ಕೆಟ್ಟ ಅಂತ್ಯ ಮತ್ತು ವಿವಿಧ ಆಪತ್ತುಗಳಿಂದ ರಕ್ಷಣೆ ಪಡೆಯಲು ಕಾರಣವಾಗುತ್ತವೆ. ಯಾರ ಒಳಿತು ಹೆಚ್ಚಾಗಿರುತ್ತದೆಯೋ, ಅವನ ಅಂತ್ಯವು ಉತ್ತಮವಾಗಿರುತ್ತದೆ, ಮತ್ತು ಅವನಿಗೆ ಧರ್ಮ ಮತ್ತು ಇಹಲೋಕವು ಸುರಕ್ಷಿತವಾಗಬಹುದೆಂಬ ನಿರೀಕ್ಷೆಯಿರುತ್ತದೆ.
  8. ಒಬ್ಬ ವ್ಯಕ್ತಿಯನ್ನು ಅವನ ಮುಂದೆಯೇ ಹೊಗಳುವುದು — ಅದರಲ್ಲಿ ಒಳಿತಿದ್ದರೆ — ಅನುಮತಿಸಲಾಗಿದೆ.
  9. ಭಯಭೀತನಾದವನಿಗೆ ಸಮಾಧಾನ ಪಡಿಸುವುದು, ಶುಭವಾರ್ತೆ ನೀಡುವುದು, ಮತ್ತು ಅವನು ಸುರಕ್ಷಿತನಾಗಿರುವನು ಎಂಬುದಕ್ಕೆ ಕಾರಣಗಳನ್ನು ತಿಳಿಸುವುದು ಸೂಕ್ತವಾಗಿದೆ.
  10. ಖದೀಜಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಪರಿಪೂರ್ಣತೆ, ಅವರ ಅಭಿಪ್ರಾಯದ ದೃಢತೆ, ಅವರ ಮನಸ್ಸಿನ ಶಕ್ತಿ ಮತ್ತು ಅವರ ಪಾಂಡಿತ್ಯದ ಆಳಕ್ಕೆ ಇದು ಅತ್ಯಂತ ದೊಡ್ಡ ಪುರಾವೆ ಮತ್ತು ಸಾಕ್ಷಿಯಾಗಿದೆ. ಅವರು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವರ್ಣಿಸುವಾಗ ಉನ್ನತ ಗುಣಗಳ ಎಲ್ಲಾ ಮೂಲಗಳನ್ನು ಮತ್ತು ಪ್ರಮುಖ ಅಂಶಗಳನ್ನು ಒಟ್ಟುಗೂಡಿಸಿದರು. ಏಕೆಂದರೆ ಉಪಕಾರವು ಒಂದೋ ಸಂಬಂಧಿಕರಿಗೆ ಅಥವಾ ಹೊರಗಿನವರಿಗೆ, ಅಥವಾ ದೈಹಿಕವಾಗಿ ಅಥವಾ ಆರ್ಥಿಕವಾಗಿ, ಅಥವಾ ಸ್ವತಂತ್ರನಾದವನಿಗೆ ಅಥವಾ ಇತರರಿಗೆ ಆಗಿರುತ್ತದೆ. ಅವರು (ಖದೀಜಾ) ವಿವರಣೆ ನೀಡಲು ಸೂಕ್ತವಾದ ಈ ಸಂದರ್ಭದಲ್ಲಿ ವಿಸ್ತಾರವಾಗಿ ಮಾತನಾಡಿದರು.
  11. ಯಾರಿಗಾದರೂ ಒಂದು ಸಮಸ್ಯೆ ಎದುರಾದರೆ, ಅವನು ತಾನು ಯಾರ ಸಲಹೆ ಮತ್ತು ಸರಿಯಾದ ಅಭಿಪ್ರಾಯದ ಮೇಲೆ ನಂಬಿಕೆ ಇಟ್ಟಿದ್ದಾನೋ ಅವರಿಗೆ ಅದನ್ನು ತಿಳಿಸುವುದು ಅಪೇಕ್ಷಿತವಾಗಿದೆ.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ತುರ್ಕಿ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ