عَنْ حُذَيْفَةَ رضي الله عنه قَالَ: كُنَّا عِنْدَ عُمَرَ رضي الله عنه، فَقَالَ: أَيُّكُمْ سَمِعَ رَسُولَ اللهِ صَلَّى اللهُ عَلَيْهِ وَسَلَّمَ يَذْكُرُ الْفِتَنَ؟ فَقَالَ قوْمٌ: نَحْنُ سَمِعْنَاهُ، فَقَالَ: لَعَلَّكُمْ تَعْنُونَ فِتْنَةَ الرَّجُلِ فِي أَهْلِهِ وَجَارِهِ؟ قَالُوا: أَجَلْ، قَالَ: تِلْكَ تُكَفِّرُهَا الصَّلَاةُ وَالصِّيَامُ وَالصَّدَقَةُ، وَلَكِنْ أَيُّكُمْ سَمِعَ النَّبِيَّ صَلَّى اللهُ عَلَيْهِ وَسَلَّمَ يَذْكُرُ الَّتِي تَمُوجُ مَوْجَ الْبَحْرِ؟ قَالَ حُذَيْفَةُ: فَأَسْكَتَ الْقَوْمُ، فَقُلْتُ: أَنَا، قَالَ: أَنْتَ لِلَّهِ أَبُوكَ، قَالَ حُذَيْفَةُ: سَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ:
«تُعْرَضُ الْفِتَنُ عَلَى الْقُلُوبِ كَالْحَصِيرِ عُودًا عُودًا، فَأَيُّ قَلْبٍ أُشْرِبَهَا نُكِتَ فِيهِ نُكْتَةٌ سَوْدَاءُ، وَأَيُّ قَلْبٍ أَنْكَرَهَا نُكِتَ فِيهِ نُكْتَةٌ بَيْضَاءُ، حَتَّى تَصِيرَ عَلَى قَلْبَيْنِ، عَلَى أَبْيَضَ مِثْلِ الصَّفَا فَلَا تَضُرُّهُ فِتْنَةٌ مَا دَامَتِ السَّمَاوَاتُ وَالْأَرْضُ، وَالْآخَرُ أَسْوَدُ مُرْبَادًّا كَالْكُوزِ، مُجَخِّيًا لَا يَعْرِفُ مَعْرُوفًا، وَلَا يُنْكِرُ مُنْكَرًا، إِلَّا مَا أُشْرِبَ مِنْ هَوَاهُ»، قَالَ حُذَيْفَةُ: وَحَدَّثْتُهُ، أَنَّ بَيْنَكَ وَبَيْنَهَا بَابًا مُغْلَقًا يُوشِكُ أَنْ يُكْسَرَ، قَالَ عُمَرُ: أَكَسْرًا لَا أَبَا لَكَ؟ فَلَوْ أَنَّهُ فُتِحَ لَعَلَّهُ كَانَ يُعَادُ، قُلْتُ: لَا بَلْ يُكْسَرُ، وَحَدَّثْتُهُ أَنَّ ذَلِكَ الْبَابَ رَجُلٌ يُقْتَلُ أَوْ يَمُوتُ حَدِيثًا لَيْسَ بِالْأَغَالِيطِ. قَالَ أَبُو خَالِدٍ: فَقُلْتُ لِسَعْدٍ: يَا أَبَا مَالِكٍ، مَا أَسْوَدُ مُرْبَادٌّ؟ قَالَ: شِدَّةُ الْبَيَاضِ فِي سَوَادٍ، قَالَ: قُلْتُ: فَمَا الْكُوزُ مُجَخِّيًا؟ قَالَ: مَنْكُوسًا.
[صحيح] - [رواه مسلم] - [صحيح مسلم: 144]
المزيــد ...
ಹುದೈಫಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ನಾವು ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿ ಇದ್ದೆವು. ಅವರು ಕೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಿತ್ನಾಗಳ ಬಗ್ಗೆ ಹೇಳುವುದನ್ನು ನಿಮ್ಮಲ್ಲಿ ಯಾರು ಕೇಳಿದ್ದೀರಿ?" ಆಗ ಒಂದು ಗುಂಪು ಜನರು ಹೇಳಿದರು: "ನಾವು ಕೇಳಿದ್ದೇವೆ". ಅವರು (ಉಮರ್) ಹೇಳಿದರು: "ಬಹುಶಃ ನೀವು ಒಬ್ಬ ವ್ಯಕ್ತಿಗೆ ಅವನ ಕುಟುಂಬ ಮತ್ತು ನೆರೆಯವರಿಂದ ಉಂಟಾಗುವ ಫಿತ್ನಾವನ್ನು (ಪರೀಕ್ಷೆಯನ್ನು) ಉದ್ದೇಶಿಸಿರಬಹುದು?". ಅವರು ಹೇಳಿದರು: "ಹೌದು". ಉಮರ್ ಹೇಳಿದರು: "ಅವುಗಳನ್ನು ನಮಾಝ್, ಉಪವಾಸ ಮತ್ತು ದಾನಗಳು ಅಳಿಸಿಹಾಕುತ್ತವೆ. ಆದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮುದ್ರದ ಅಲೆಗಳಂತೆ ಅಪ್ಪಳಿಸುವ ಫಿತ್ನಾದ ಬಗ್ಗೆ ಹೇಳುವುದನ್ನು ನಿಮ್ಮಲ್ಲಿ ಯಾರು ಕೇಳಿದ್ದೀರಿ?". ಹುದೈಫಾ ಹೇಳಿದರು: "ಆಗ ಜನರು ಮೌನವಾದರು. ನಾನು ಹೇಳಿದೆನು: 'ನಾನು (ಕೇಳಿದ್ದೇನೆ)'". ಅವರು (ಉಮರ್) ಹೇಳಿದರು: "ನೀನು! ನಿನ್ನ ತಂದೆ ಅಲ್ಲಾಹನಿಗೆ ಸೇರಿದವನು!" ಹುದೈಫಾ ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಕೇಳಿದೆನು:
"ಚಾಪೆಯನ್ನು ನೇಯುವಾಗ ಒಂದೊಂದೇ ಹುಲ್ಲನ್ನು ಸೇರಿಸುವಂತೆ ಹೃದಯಗಳ ಮೇಲೆ ಫಿತ್ನಾಗಳು ಪ್ರದರ್ಶಿತವಾಗುತ್ತವೆ. ಯಾವ ಹೃದಯವು ಅದನ್ನು ಹೀರಿಕೊಳ್ಳುತ್ತದೆಯೋ, ಅದರಲ್ಲಿ ಒಂದು ಕಪ್ಪು ಚುಕ್ಕೆ ಹಾಕಲ್ಪಡುತ್ತದೆ. ಯಾವ ಹೃದಯವು ಅದನ್ನು ನಿರಾಕರಿಸುತ್ತದೆಯೋ, ಅದರಲ್ಲಿ ಒಂದು ಬಿಳಿ ಚುಕ್ಕೆ ಹಾಕಲ್ಪಡುತ್ತದೆ. ಕೊನೆಗೆ ಹೃದಯಗಳು ಎರಡು ವಿಧಗಳಾಗುತ್ತವೆ: ಒಂದು ನುಣುಪಾದ ಬಂಡೆಯಂತೆ ಬಿಳುಪಾಗಿರುತ್ತದೆ. ಆಕಾಶಗಳು ಮತ್ತು ಭೂಮಿ ಇರುವವರೆಗೆ ಯಾವುದೇ ಫಿತ್ನಾ ಅದಕ್ಕೆ ಹಾನಿ ಮಾಡುವುದಿಲ್ಲ. ಇನ್ನೊಂದು ಕಪ್ಪು ಮತ್ತು ವಿವರ್ಣವಾಗಿ, ಕವುಚಿ ಹಾಕಿದ ಲೋಟದಂತೆ ಇರುತ್ತದೆ. ಅದು ಒಳಿತನ್ನು ಸ್ವೀಕರಿಸುವುದಿಲ್ಲ ಮತ್ತು ಕೆಡುಕನ್ನು ತಿರಸ್ಕರಿಸುವುದಿಲ್ಲ. ತನ್ನ ಮನದ ಇಚ್ಛೆಯು ಕುಡಿಸಿದ್ದನ್ನು ಹೊರತುಪಡಿಸಿ".
ಹುದೈಫಾ ಹೇಳುತ್ತಾರೆ: "ಮತ್ತು ನಾನು ಅವರಿಗೆ (ಉಮರ್‌ಗೆ) ಹೇಳಿದೆನು: ನಿಮ್ಮ ಮತ್ತು ಅದರ ನಡುವೆ ಮುಚ್ಚಿದ ಒಂದು ಬಾಗಿಲಿದೆ, ಅದು ಮುರಿಯುವ ಸಮಯ ಹತ್ತಿರದಲ್ಲಿದೆ." ಉಮರ್ ಕೇಳಿದರು: "ಅದು ಮುರಿಯುವುದೇ? ನಿನಗೆ ತಂದೆಯಿಲ್ಲದಿರಲಿ! ಒಂದು ವೇಳೆ ಅದನ್ನು ತೆರೆಯಲಾಗಿದ್ದರೆ, ಬಹುಶಃ ಅದನ್ನು ಮತ್ತೆ ಮುಚ್ಚಬಹುದಿತ್ತೇನೋ?" ನಾನು ಹೇಳಿದೆನು: "ಇಲ್ಲ, ಬದಲಿಗೆ ಅದು ಮುರಿಯಲ್ಪಡುತ್ತದೆ". ನಾನು ಅವರಿಗೆ (ಉಮರ್‌ಗೆ) ಹೇಳಿದೆನು: ಆ ಬಾಗಿಲು ಎಂದರೆ ಒಬ್ಬ ವ್ಯಕ್ತಿ, ಅವನು ಕೊಲ್ಲಲ್ಪಡುತ್ತಾನೆ ಅಥವಾ ಮರಣ ಹೊಂದುತ್ತಾನೆ - ಇದು ಕಟ್ಟು ಕಥೆಗಳಲ್ಲದ (ನಿಜವಾದ) ಹದೀಸ್ ಆಗಿದೆ.
(ವರದಿಗಾರ) ಅಬೂ ಖಾಲಿದ್ ಹೇಳುತ್ತಾರೆ: ನಾನು ಸಅದ್ (ಇನ್ನೊಬ್ಬ ವರದಿಗಾರ) ರಲ್ಲಿ ಕೇಳಿದೆನು: ಓ ಅಬೂ ಮಾಲಿಕ್, 'ಅಸ್ವದ್ ಮುರ್ಬಾದ್' ಎಂದರೇನು? ಅವರು ಹೇಳಿದರು: ಕಪ್ಪಿನಲ್ಲಿ ಗಡುಸಾದ ಬಿಳುಪು ಮಿಶ್ರಿತವಾಗಿರುವುದು. ನಾನು ಕೇಳಿದೆನು: ಹಾಗಾದರೆ 'ಅಲ್-ಕೂಝು ಮುಝಖ್ಖಿಯ್ಯನ್' ಎಂದರೇನು? ಅವರು ಹೇಳಿದರು: ಕವುಚಿ ಹಾಕಿದ್ದು.
[صحيح] - [رواه مسلم] - [صحيح مسلم - 144]
ಸತ್ಯವಿಶ್ವಾಸಿಗಳ ನಾಯಕ ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಸಭೆಯಲ್ಲಿ ಸಹಾಬಿಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಒಂದು ಗುಂಪು ಹಾಜರಿತ್ತು. ಅವರು ಕೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಿತ್ನಾಗಳ ಬಗ್ಗೆ ಹೇಳುವುದನ್ನು ನಿಮ್ಮಲ್ಲಿ ಯಾರು ಕೇಳಿದ್ದೀರಿ? ಕೆಲವರು ಹೇಳಿದರು: ಅವರು ಫಿತ್ನಾಗಳ ಬಗ್ಗೆ ಹೇಳುವುದನ್ನು ನಾವು ಕೇಳಿದ್ದೇವೆ. ಆಗ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಬಹುಶಃ ನೀವು ಒಬ್ಬ ವ್ಯಕ್ತಿಗೆ ಅವನ ಖಾಸಗಿ ವಿಷಯಗಳಲ್ಲಿ - ಅಂದರೆ ಅವನ ಹೆಂಡತಿ ಮತ್ತು ಮಕ್ಕಳ ವಿಷಯದಲ್ಲಿ - ಉಂಟಾಗುವ ಪರೀಕ್ಷೆ ಮತ್ತು ಇಕ್ಕಟ್ಟನ್ನು ಉದ್ದೇಶಿಸುತ್ತಿರಬಹುದು. ಅವರಿಗೆ ಅವನು ಅತಿಯಾದ ಪ್ರೀತಿ ತೋರಿಸುವುದು, ಅವರಿಗಾಗಿ ಅತ್ಯಾಸೆ ಹೊಂದುವುದು, ಅವರಿಂದಾಗಿ ಅವನು ಅನೇಕ ಒಳಿತುಗಳನ್ನು ಮಾಡದಿರುವುದು, ಅಥವಾ ಅವರ ಹಕ್ಕುಗಳನ್ನು ಪೂರೈಸುವಲ್ಲಿ ವಿಫಲವಾಗುವುದು, ಅವರಿಗೆ ಶಿಷ್ಟಾಚಾರ ಕಲಿಸುವಲ್ಲಿ ಮತ್ತು ಶಿಕ್ಷಣ ನೀಡುವಲ್ಲಿ ನಿರ್ಲಕ್ಷ್ಯ ಮಾಡುವುದು ಇತ್ಯಾದಿ. ಹಾಗೆಯೇ ಒಬ್ಬ ವ್ಯಕ್ತಿಗೆ ಅವನ ನೆರೆಯವರಿಂದ ಉಂಟಾಗುವ ಫಿತ್ನಾ ಕೂಡ. ಬಹುಶಃ ನೀವು ಅದನ್ನು ಉದ್ದೇಶಿಸುತ್ತಿದ್ದೀರಾ? ಅವರು ಹೇಳಿದರು: ಹೌದು. ಉಮರ್ ಹೇಳಿದರು: ಅವುಗಳು ವಿಚಾರಣೆಗೆ ಒಳಪಡುವ ಫಿತ್ನಾಗಳಾಗಿವೆ. ಅವುಗಳಲ್ಲಿ ಕೆಲವು ಪಾಪಗಳು ನಮಾಝ್, ಉಪವಾಸ ಮತ್ತು ದಾನದಂತಹ ಸತ್ಕಾರ್ಯಗಳಿಂದ ಪ್ರಾಯಶ್ಚಿತ್ತವಾಗುವ ನಿರೀಕ್ಷೆಯಿದೆ. ಆದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾರ್ವತ್ರಿಕ ಫಿತ್ನಾಗಳ ಬಗ್ಗೆ – ಅವುಗಳ ತೀವ್ರತೆ ಮತ್ತು ವ್ಯಾಪಕತೆಯ ಕಾರಣದಿಂದಾಗಿ ಅವು ಸಮುದ್ರದ ಅಲೆಗಳಂತೆ ಜನರನ್ನು ನಡುಗಿಸುತ್ತವೆ – ಹೇಳುವುದನ್ನು ನಿಮ್ಮಲ್ಲಿ ಯಾರು ಕೇಳಿದ್ದೀರಿ? ಆಗ ಜನರು ಮೌನವಾದರು. ಹುದೈಫಾ ಇಬ್ನುಲ್-ಯಮಾನ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ನಾನು ಕೇಳಿದ್ದೇನೆ. ಆಗ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಸಂತೋಷಪಟ್ಟು, ಅವರಿಗೆ ಹೇಳಿದರು: ನಿನ್ನಂತಹವನಿಗೆ ಜನ್ಮ ನೀಡಿದ ನಿನ್ನ ತಂದೆ ಅಲ್ಲಾಹನಿಗೆ ಸೇರಿದವನು! (ಅಂದರೆ ನೀನೆಷ್ಟು ಶ್ರೇಷ್ಠ!); ಹೇಳು. ಹುದೈಫಾ ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಫಿತ್ನಾಗಳು ಕಾಣಿಸಿಕೊಳ್ಳುತ್ತವೆ ಮತ್ತು ಹೇಗೆ ಹಾಸಿಗೆಯ ಚಾಪೆಯು ಅದರ ಮೇಲೆ ಮಲಗುವವನ ಪಕ್ಕಕ್ಕೆ ಅಂಟಿಕೊಳ್ಳುತ್ತದೆಯೋ ಹಾಗೆ ಮನುಷ್ಯನ ಹೃದಯದ ಭಾಗಕ್ಕೆ ಅವು ಅಂಟಿಕೊಳ್ಳುತ್ತವೆ. ಫಿತ್ನಾಗಳು ಹೃದಯಕ್ಕೆ ಅಂಟಿಕೊಳ್ಳುವುದರ ತೀವ್ರತೆಯಿಂದಾಗಿ ಅದರ ಮೇಲೆ ಪರಿಣಾಮ ಬೀರುತ್ತದೆ. ಈ ಫಿತ್ನಾಗಳು ಪುನರಾವರ್ತಿಸುತ್ತವೆ. ಒಂದರ ನಂತರ ಇನ್ನೊಂದು ಫಿತ್ನಾ ಬರುತ್ತದೆ. ಯಾವ ಹೃದಯವು ಅದರಲ್ಲಿ ಪ್ರವೇಶಿಸಿ, ಅದನ್ನು ಪ್ರೀತಿಸಿ, ಪಾನೀಯವು (ದೇಹದೊಂದಿಗೆ) ಬೆರೆಯುವಂತೆ ಅದು ಬೆರೆತುಹೋಗುತ್ತದೆಯೋ, ಅವನ ಹೃದಯದಲ್ಲಿ ಒಂದು ಕಪ್ಪು ಚುಕ್ಕೆ ಹಾಕಲ್ಪಡುತ್ತದೆ. ಯಾವ ಹೃದಯವು ಅದನ್ನು ತಿರಸ್ಕರಿಸುತ್ತದೆಯೋ, ಅದರಲ್ಲಿ ಒಂದು ಬಿಳಿ ಚುಕ್ಕೆ ಹಾಕಲ್ಪಡುತ್ತದೆ. ಕೊನೆಗೆ ಹೃದಯಗಳು ಎರಡು ವಿಧಗಳಾಗುತ್ತವೆ. ಒಂದು ಹೃದಯವು ಈಮಾನ್ (ವಿಶ್ವಾಸ) ನ ತೀವ್ರತೆಯಿಂದಾಗಿ ಮತ್ತು ದೋಷಗಳಿಂದ ಸುರಕ್ಷಿತವಾಗಿರುವುದರಿಂದಾಗಿ ಬಿಳುಪಾಗಿರುತ್ತದೆ. ಹೇಗೆ ನುಣುಪಾದ 'ಸಫಾ' ಬಂಡೆಗೆ ಏನೂ ಅಂಟಿಕೊಳ್ಳುವುದಿಲ್ಲವೋ ಹಾಗೆ, ಫಿತ್ನಾಗಳು ಅದಕ್ಕೆ ಅಂಟಿಕೊಂಡಿರುವುದಿಲ್ಲ ಮತ್ತು ಅದರ ಮೇಲೆ ಪರಿಣಾಮ ಬೀರುವುದಿಲ್ಲ. ಅವನು ಅಲ್ಲಾಹನನ್ನು ಭೇಟಿಯಾಗುವವರೆಗೆ ಯಾವುದೇ ಫಿತ್ನಾ ಅದಕ್ಕೆ ಹಾನಿ ಮಾಡುವುದಿಲ್ಲ. ಇನ್ನೊಂದು ಹೃದಯವು ಫಿತ್ನಾಗಳಿಂದಾಗಿ ಕಪ್ಪು ಬಣ್ಣಕ್ಕೆ ಬದಲಾಗಿರುತ್ತದೆ. ಅದು ವಾಲಿದ ಅಥವಾ ತಲೆಕೆಳಗಾದ ಲೋಟದಂತೆ ಇರುತ್ತದೆ. ಅದರಲ್ಲಿ ನೀರು ನಿಲ್ಲುವುದಿಲ್ಲ. ಹಾಗೆಯೇ ಈ ಹೃದಯಕ್ಕೆ ಯಾವುದೇ ಒಳಿತು ಅಥವಾ ವಿವೇಕವು ಅಂಟಿಕೊಳ್ಳುವುದಿಲ್ಲ. ಅದು ಏನನ್ನು ಪ್ರೀತಿಸುತ್ತದೆಯೋ ಮತ್ತು ಮೋಹಿಸುತ್ತದೆಯೋ ಅದರ ಹೊರತು ಬೇರೆ ಯಾವುದೇ ಒಳಿತನ್ನು ಅದು ಸ್ವೀಕರಿಸುವುದಿಲ್ಲ ಮತ್ತು ಕೆಡುಕನ್ನು ತಿರಸ್ಕರಿಸುವುದಿಲ್ಲ. ಹುದೈಫಾ ಉಮರ್‌ಗೆ ಹೇಳಿದರು: ಆ ಫಿತ್ನಾಗಳು ನಿಮ್ಮ ಜೀವಿತಕಾಲದಲ್ಲಿ ಬಹಿರಂಗವಾಗುವುದಿಲ್ಲ. ನಿಮ್ಮ ಮತ್ತು ಅದರ ನಡುವೆ ಮುಚ್ಚಿದ ಒಂದು ಬಾಗಿಲಿದೆ. ಅದು ಮುರಿಯುವ ಸಮಯ ಹತ್ತಿರದಲ್ಲಿದೆ. ಉಮರ್ ಕೇಳಿದರು: ಮುರಿಯುವುದೇ? ಒಂದು ವೇಳೆ ಅದನ್ನು ತೆರೆಯಲಾಗಿದ್ದರೆ, ಬಹುಶಃ ಅದನ್ನು ಮತ್ತೆ ಮುಚ್ಚಬಹುದಿತ್ತೇನೋ? ಹುದೈಫಾ ಹೇಳಿದರು: ಇಲ್ಲ, ಬದಲಿಗೆ ಅದು ಮುರಿಯುತ್ತದೆ. ಆ ಬಾಗಿಲು ಒಬ್ಬ ವ್ಯಕ್ತಿಯಾಗಿದ್ದು, ಅವನು ಕೊಲ್ಲಲ್ಪಡುತ್ತಾನೆ ಅಥವಾ ಮರಣ ಹೊಂದುತ್ತಾನೆ. ಮತ್ತು ನಾನು ತಿಳಿಸಿದ್ದು ಸತ್ಯವಾದ, ದೃಢೀಕರಿಸಲ್ಪಟ್ಟ ಸುದ್ದಿಯಾಗಿದೆ. ಅದು ಅಹ್ಲುಲ್ ಕಿತಾಬ್‌ಗಳ (ಯಹೂದ ಕ್ರೈಸ್ತರ) ಗ್ರಂಥಗಳಿಂದಲ್ಲ, ಅಥವಾ ಯಾವುದೇ ಅಭಿಪ್ರಾಯಪಡುವವನ ಸ್ವಂತ ವಿವೇಚನೆಯಿಂದಲ್ಲ. ಬದಲಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹದೀಸ್‌ನಿಂದಾಗಿದೆ.