عَنْ عَائِشَةَ أُمِّ المُؤْمِنينَ رضي الله عنها أَنَّ رَسُولَ اللَّهِ صَلَّى اللَّهُ عَلَيْهِ وَسَلَّمَ عَلَّمَهَا هَذَا الدُّعَاءَ:
«اللَّهُمَّ إِنِّي أَسْأَلُكَ مِنْ الْخَيْرِ كُلِّهِ، عَاجِلِهِ وَآجِلِهِ، مَا عَلِمْتُ مِنْهُ وَمَا لَمْ أَعْلَمْ، وَأَعُوذُ بِكَ مِنْ الشَّرِّ كُلِّهِ، عَاجِلِهِ وَآجِلِهِ، مَا عَلِمْتُ مِنْهُ وَمَا لَمْ أَعْلَمْ، اللَّهُمَّ إِنِّي أَسْأَلُكَ مِنْ خَيْرِ مَا سَأَلَكَ عَبْدُكَ وَنَبِيُّكَ، وَأَعُوذُ بِكَ مِنْ شَرِّ مَا عَاذَ بِهِ عَبْدُكَ وَنَبِيُّكَ، اللَّهُمَّ إِنِّي أَسْأَلُكَ الْجَنَّةَ، وَمَا قَرَّبَ إِلَيْهَا مِنْ قَوْلٍ أَوْ عَمَلٍ، وَأَعُوذُ بِكَ مِنْ النَّارِ، وَمَا قَرَّبَ إِلَيْهَا مِنْ قَوْلٍ أَوْ عَمَلٍ، وَأَسْأَلُكَ أَنْ تَجْعَلَ كُلَّ قَضَاءٍ قَضَيْتَهُ لِي خَيْرًا».
[صحيح] - [رواه ابن ماجه وأحمد] - [سنن ابن ماجه: 3846]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಈ ಪ್ರಾರ್ಥನೆಯನ್ನು ಕಲಿಸಿದರು:
"ಓ ಅಲ್ಲಾಹ್! ನಾನು ನಿನ್ನಲ್ಲಿ ತಕ್ಷಣದ ಮತ್ತು ತಡವಾಗಿರುವ ಎಲ್ಲಾ ಒಳಿತುಗಳನ್ನು ಬೇಡುತ್ತೇನೆ. ಅವುಗಳ ಪೈಕಿ ನಾನು ತಿಳಿದಿರುವುದನ್ನು ಮತ್ತು ತಿಳಿಯದಿರುವುದನ್ನು ಕೂಡ. ನಾನು ನಿನ್ನಲ್ಲಿ ತಕ್ಷಣದ ಮತ್ತು ತಡವಾಗಿರುವ ಎಲ್ಲಾ ಕೆಡುಕುಗಳಿಂದ ರಕ್ಷೆ ಬೇಡುತ್ತೇನೆ. ಅವುಗಳ ಪೈಕಿ ನಾನು ತಿಳಿದಿರುವುದರಿಂದ ಮತ್ತು ತಿಳಿಯದಿರುವುದರಿಂದ ಕೂಡ. ಓ ಅಲ್ಲಾಹ್! ನಿನ್ನ ದಾಸ ಮತ್ತು ನಿನ್ನ ಪ್ರವಾದಿ ಬೇಡಿದ ಎಲ್ಲಾ ಒಳಿತುಗಳನ್ನು ನಾನು ನಿನ್ನಲ್ಲಿ ಬೇಡುತ್ತೇನೆ. ನಿನ್ನ ದಾಸ ಮತ್ತು ನಿನ್ನ ಪ್ರವಾದಿ ರಕ್ಷೆ ಬೇಡಿದ ಎಲ್ಲಾ ಕೆಡುಕುಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಓ ಅಲ್ಲಾಹ್! ನಾನು ನಿನ್ನಲ್ಲಿ ಸ್ವರ್ಗವನ್ನು ಮತ್ತು ಅದಕ್ಕೆ ಹತ್ತಿರಗೊಳಿಸುವ ಮಾತುಗಳನ್ನು ಮತ್ತು ಕರ್ಮಗಳನ್ನು ಬೇಡುತ್ತೇನೆ. ನಾನು ನಿನ್ನಲ್ಲಿ ನರಕದಿಂದ ಮತ್ತು ಅದಕ್ಕೆ ಹತ್ತಿರಗೊಳಿಸುವ ಮಾತುಗಳಿಂದ ಹಾಗೂ ಕರ್ಮಗಳಿಂದ ರಕ್ಷೆ ಬೇಡುತ್ತೇನೆ. ನೀನು ನನ್ನ ವಿಷಯದಲ್ಲಿ ವಿಧಿಸಿದ ಎಲ್ಲಾ ವಿಧಿಗಳನ್ನು ನನಗೆ ಒಳಿತಾಗಿ ಮಾಡಬೇಕೆಂದು ಬೇಡುತ್ತೇನೆ."
[صحيح] - - [سنن ابن ماجه - 3846]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಯಿಶ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರಿಗೆ ಸಮಗ್ರ ಪ್ರಾರ್ಥನೆಯನ್ನು ಕಲಿಸಿದರು. ಅದರಲ್ಲಿ ನಾಲ್ಕು ಪ್ರಾರ್ಥನೆಗಳಿವೆ:
ಒಂದು: ಎಲ್ಲಾ ಒಳಿತುಗಳಿಗಿರುವ ಪ್ರಾರ್ಥನೆ. "ಓ ಅಲ್ಲಾಹ್! ನಾನು ನಿನ್ನಲ್ಲಿ ಎಲ್ಲಾ ಒಳಿತುಗಳನ್ನು ಬೇಡುತ್ತೇನೆ" ಅಂದರೆ ಒಳಿತಾಗಿರುವ ಎಲ್ಲವನ್ನೂ ಬೇಡುತ್ತೇನೆ. "ತಕ್ಷಣದ" ಅಂದರೆ ಹತ್ತಿರದಲ್ಲಿರುವ. "ತಡವಾಗಿರುವ" ಅಂದರೆ ದೂರದಲ್ಲಿರುವ. "ಅವುಗಳ ಪೈಕಿ ನಾನು ತಿಳಿದಿರುವುದನ್ನು" ಅಂದರೆ, ಅವುಗಳ ಪೈಕಿ ನೀನು ನನಗೆ ಕಲಿಸಿರುವುದನ್ನು. "ತಿಳಿಯದಿರುವುದನ್ನು" ಅಂದರೆ, ನಿನಗೆ ಮಾತ್ರ ತಿಳಿದಿರುವಂತದ್ದನ್ನು. ಸರ್ವಜ್ಞ, ಸೂಕ್ಷ್ಮಜ್ಞಾನಿ ಮತ್ತು ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ತಿಳಿದಿರುವ ಅಲ್ಲಾಹನಿಗೆ ಕಾರ್ಯವನ್ನು ವಹಿಸಿಕೊಡಬೇಕೆಂದು ಇದರಲ್ಲಿ ತಿಳಿಸಲಾಗಿದೆ. ಇದರಿಂದ ಸರ್ವಶಕ್ತನಾದ ಅಲ್ಲಾಹು ಮುಸಲ್ಮಾನನಿಗೆ ಅತಿಶ್ರೇಷ್ಠ ಮತ್ತು ಅತ್ಯುತ್ತಮವಾದುದನ್ನು ಆರಿಸುತ್ತಾನೆ. "ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ" ಅಂದರೆ ನಾನು ನಿನ್ನಲ್ಲಿ ರಕ್ಷಣೆಯನ್ನು ಬೇಡುತ್ತೇನೆ. "ತಕ್ಷಣದ ಮತ್ತು ತಡವಾಗಿರುವ ಎಲ್ಲಾ ಕೆಡುಕುಗಳಿಂದ. ಅವುಗಳ ಪೈಕಿ ನಾನು ತಿಳಿದಿರುವುದರಿಂದ ಮತ್ತು ತಿಳಿಯದಿರುವುದರಿಂದ ಕೂಡ."
ಎರಡನೇ ಪ್ರಾರ್ಥನೆ: ಈ ಪ್ರಾರ್ಥನೆಯು ಪ್ರಾರ್ಥಿಸುವಾಗ ಹದ್ದುಮೀರದಂತೆ ಮುಸಲ್ಮಾನನನ್ನು ರಕ್ಷಿಸುತ್ತದೆ. "ಓ ಅಲ್ಲಾಹ್! ನಿನ್ನ ದಾಸ ಮತ್ತು ನಿನ್ನ ಪ್ರವಾದಿ" ಅಂದರೆ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ). "ಬೇಡಿದ ಎಲ್ಲಾ ಒಳಿತುಗಳನ್ನು ನಾನು ನಿನ್ನಲ್ಲಿ ಬೇಡುತ್ತೇನೆ." "ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ" ಅಂದರೆ, ಆಶ್ರಯ ಮತ್ತು ರಕ್ಷಣೆ ಬೇಡುತ್ತೇನೆ. "ನಿನ್ನ ದಾಸ ಮತ್ತು ನಿನ್ನ ಪ್ರವಾದಿ" ಅಂದರೆ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ). "ರಕ್ಷೆ ಬೇಡಿದ ಎಲ್ಲಾ ಕೆಡುಕುಗಳಿಂದ." ಈ ಪ್ರಾರ್ಥನೆಯಲ್ಲಿರುವುದೇನೆಂದರೆ, ಈ ಪ್ರಾರ್ಥನೆಯನ್ನು ಪ್ರಾರ್ಥಿಸುವವನಿಗೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ವತಃ ತಮಗೋಸ್ಕರ ಏನೆಲ್ಲಾ ಬೇಡಿದರೋ ಅವೆಲ್ಲವನ್ನೂ ಅಲ್ಲಾಹು ನೀಡಬೇಕೆಂದು ಅವುಗಳ ಯಾವುದೇ ವಿಧವನ್ನು ಪ್ರಸ್ತಾಪಿಸದೆ ಅಲ್ಲಾಹನಲ್ಲಿ ಬೇಡಿಕೊಳ್ಳುವುದಾಗಿದೆ.
ಮೂರನೇ ಪ್ರಾರ್ಥನೆ: ಸ್ವರ್ಗ ಪ್ರವೇಶ ಮತ್ತು ನರಕ ವಿಮುಕ್ತಿಯನ್ನು ಬೇಡುವುದು. ಇದು ಪ್ರತಿಯೊಬ್ಬ ಮುಸ್ಲಿಮನ ಪರಮೋಚ್ಛ ಉದ್ದೇಶ ಮತ್ತು ಅವನ ಕರ್ಮಗಳ ಪರಮೋಚ್ಛ ಗುರಿಯಾಗಿದೆ. "ಓ ಅಲ್ಲಾಹ್! ನಾನು ನಿನ್ನಲ್ಲಿ ಸ್ವರ್ಗವನ್ನು" ಮತ್ತು ಅದರ ಮೂಲಕವಿರುವ ವಿಜಯವನ್ನು. "ಮತ್ತು ಅದಕ್ಕೆ ಹತ್ತಿರಗೊಳಿಸುವ ಮಾತುಗಳನ್ನು ಮತ್ತು ಕರ್ಮಗಳನ್ನು ಬೇಡುತ್ತೇನೆ" ಅಂದರೆ ನಿನ್ನನ್ನು ಸಂತೃಪ್ತಗೊಳಿಸುವ ಕರ್ಮಗಳನ್ನು. "ನಾನು ನಿನ್ನಲ್ಲಿ ನರಕದಿಂದ ರಕ್ಷೆ ಬೇಡುತ್ತೇನೆ" ಏಕೆಂದರೆ ನಿನ್ನ ಸಹಾನುಭೂತಿಯಿಂದಲೇ ಹೊರತು ಕೆಟ್ಟ ಕರ್ಮಗಳಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ. "ಮತ್ತು ಅದಕ್ಕೆ ಹತ್ತಿರಗೊಳಿಸುವ ಮಾತುಗಳಿಂದ ಹಾಗೂ ಕರ್ಮಗಳಿಂದ" ಅಂದರೆ ನಿನಗೆ ಕೋಪವನ್ನುಂಟು ಮಾಡುವ ಪಾಪಕೃತ್ಯಗಳಿಂದ.
ನಾಲ್ಕನೇ ಪ್ರಾರ್ಥನೆ: ಅಲ್ಲಾಹನ ವಿಧಿ ನಿರ್ಣಯದ ಬಗ್ಗೆ ಸಂತೃಪ್ತಿ ಸೂಚಿಸುವ ಪ್ರಾರ್ಥನೆ. "ನೀನು ನನ್ನ ವಿಷಯದಲ್ಲಿ ವಿಧಿಸಿದ ಎಲ್ಲಾ ವಿಧಿಗಳನ್ನು ನನಗೆ ಒಳಿತಾಗಿ ಮಾಡಬೇಕೆಂದು ಬೇಡುತ್ತೇನೆ." ಅಂದರೆ, ಅಲ್ಲಾಹು ನನಗೆ ವಿಧಿಸಿರುವ ಎಲ್ಲಾ ವಿಧಿಗಳನ್ನು ಅವನು ನನಗೆ ಒಳಿತನ್ನಾಗಿ ಮಾಡಬೇಕೆಂಬ ಪ್ರಾರ್ಥನೆ. ಇದು ಅಲ್ಲಾಹನ ವಿಧಿ-ನಿರ್ಣಯದ ಬಗ್ಗೆ ಸಂತೃಪ್ತಿ ಸೂಚಿಸುವ ಪ್ರಾರ್ಥನೆಗಳಲ್ಲಿ ಒಂದಾಗಿದೆ.