عَنْ عَلِيٍّ رَضِيَ اللَّهُ عَنْهُ قَالَ:
بَعَثَ النَّبِيُّ صَلَّى اللَّهُ عَلَيْهِ وَسَلَّمَ سَرِيَّةً فَاسْتَعْمَلَ رَجُلًا مِنَ الأَنْصَارِ، وَأَمَرَهُمْ أَنْ يُطِيعُوهُ، فَغَضِبَ، فَقَالَ: أَلَيْسَ أَمَرَكُمُ النَّبِيُّ صَلَّى اللَّهُ عَلَيْهِ وَسَلَّمَ أَنْ تُطِيعُونِي؟ قَالُوا: بَلَى، قَالَ: فَاجْمَعُوا لِي حَطَبًا، فَجَمَعُوا، فَقَالَ: أَوْقِدُوا نَارًا، فَأَوْقَدُوهَا، فَقَالَ: ادْخُلُوهَا، فَهَمُّوا، وَجَعَلَ بَعْضُهُمْ يُمْسِكُ بَعْضًا، وَيَقُولُونَ: فَرَرْنَا إِلَى النَّبِيِّ صَلَّى اللَّهُ عَلَيْهِ وَسَلَّمَ مِنَ النَّارِ، فَمَا زَالُوا حَتَّى خَمَدَتِ النَّارُ، فَسَكَنَ غَضَبُهُ، فَبَلَغَ النَّبِيَّ صَلَّى اللَّهُ عَلَيْهِ وَسَلَّمَ، فَقَالَ: «لَوْ دَخَلُوهَا مَا خَرَجُوا مِنْهَا إِلَى يَوْمِ القِيَامَةِ؛ الطَّاعَةُ فِي المَعْرُوفِ».
[صحيح] - [متفق عليه] - [صحيح البخاري: 4340]
المزيــد ...
ಅಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಸೈನ್ಯದ ತುಕಡಿಯನ್ನು ಕಳುಹಿಸಿ, ಅನ್ಸಾರ್‌ಗಳಲ್ಲಿ ಒಬ್ಬ ವ್ಯಕ್ತಿಯನ್ನು ಅದಕ್ಕೆ ನಾಯಕನನ್ನಾಗಿ ನೇಮಿಸಿದರು. ನಾಯಕನಿಗೆ ವಿಧೇಯವಾಗಿರಲು ಅವರಿಗೆ (ಸೈನಿಕರಿಗೆ) ಆದೇಶಿಸಿದರು. (ದಾರಿಯಲ್ಲಿ) ಅವನು ಕೋಪಗೊಂಡು ಕೇಳಿದನು: "ನನಗೆ ವಿಧೇಯರಾಗಿರಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಮಗೆ ಆದೇಶಿಸಿಲ್ಲವೇ?". ಅವರು ಹೇಳಿದರು: "ಖಂಡಿತವಾಗಿಯೂ (ಆದೇಶಿಸಿದ್ದಾರೆ)". ಅವನು ಹೇಳಿದನು: "ಹಾಗಾದರೆ ನನಗಾಗಿ ಸೌದೆಯನ್ನು ಸಂಗ್ರಹಿಸಿ ತನ್ನಿ". ಅವರು ಸಂಗ್ರಹಿಸಿ ತಂದರು. ಅವನು ಹೇಳಿದನು: "ಬೆಂಕಿಯನ್ನು ಹೊತ್ತಿಸಿ". ಅವರು ಅದನ್ನು ಹೊತ್ತಿಸಿದರು. ಅವನು ಹೇಳಿದನು: "ಅದರಲ್ಲಿ ಬೀಳಿರಿ". ಅವರು (ಅದನ್ನು ಮಾಡಲು) ಸಿದ್ಧರಾದರು. ಆದರೆ ಅವರಲ್ಲೊಬ್ಬರು ಇನ್ನೊಬ್ಬರನ್ನು ತಡೆದು ಹೇಳಿದರು: "ನಾವು ಬೆಂಕಿಯಿಂದ (ನರಕದಿಂದ) ಪಾರಾಗಲೆಂದೇ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಓಡಿ ಬಂದಿದ್ದೇವೆ (ಮತ್ತು ಈಗ ಇದರಲ್ಲೇಕೆ ಬೀಳಬೇಕು?)". ಬೆಂಕಿ ಆರುವವರೆಗೆ ಮತ್ತು ಅವನ ಕೋಪ ತಣ್ಣಗಾಗುವವರೆಗೆ ಅವರು ಹಾಗೆಯೇ ಇದ್ದರು. ಈ ವಿಷಯ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಲುಪಿತು. ಅವರು ಹೇಳಿದರು: "ಒಂದು ವೇಳೆ ಅವರು ಅದರಲ್ಲಿ ಬಿದ್ದಿದ್ದರೆ, ಅವರು ಪುನರುತ್ಥಾನ ದಿನದವರೆಗೆ ಅದರಿಂದ ಹೊರಬರುತ್ತಿರಲಿಲ್ಲ. ವಿಧೇಯತೆಯಿರಬೇಕಾದುದು ಒಳಿತಿನ ವಿಷಯಗಳಲ್ಲಿ ಮಾತ್ರ".
[صحيح] - [متفق عليه] - [صحيح البخاري - 4340]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಸೈನ್ಯವನ್ನು ಕಳುಹಿಸಿ, ಅನ್ಸಾರ್‌ಗಳಲ್ಲಿ ಒಬ್ಬ ವ್ಯಕ್ತಿಯನ್ನು ಅವಕ್ಕೆ ಅಮೀರನನ್ನಾಗಿ (ನಾಯಕನನ್ನಾಗಿ) ಮಾಡಿದರು. ಅವನಿಗೆ ವಿಧೇಯರಾಗಿರಲು ಅವರಿಗೆ (ಸೈನಿಕರಿಗೆ) ಆದೇಶಿಸಿದರು. ಆಗ ಅಮೀರನು ಅವರ ಮೇಲೆ ಕೋಪಗೊಂಡು ಹೇಳಿದನು: ನನಗೆ ವಿಧೇಯರಾಗಿರಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಮಗೆ ಆದೇಶಿಸಿಲ್ಲವೇ? ಅವರು ಹೇಳಿದರು: ಹೌದು. ಅವನು ಹೇಳಿದನು: ನಾನು ನಿಮಗೆ ಸೌದೆಯನ್ನು ಸಂಗ್ರಹಿಸಲು, ಬೆಂಕಿಯನ್ನು ಹೊತ್ತಿಸಲು ಮತ್ತು ನಂತರ ಅದರಲ್ಲಿ ಬೀಳಲು ಆದೇಶಿಸಿದ್ದೇನೆ. ಅವರು ಸೌದೆಯನ್ನು ಸಂಗ್ರಹಿಸಿ ಬೆಂಕಿಯನ್ನು ಹೊತ್ತಿಸಿದರು. ಅವರು ಅದರಲ್ಲಿ ಬೀಳಲು ಮುಂದಾದಾಗ, ಅವರು ಪರಸ್ಪರ ವಿಚಾರಿಸತೊಡಗಿದರು. ಅವರು ಹೇಳಿದರು: ನಾವು ಬೆಂಕಿಯಿಂದ ಪಾರಾಗಲೆಂದೇ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸಿದ್ದೇವೆ. ಈಗ ನಾವೇಕೆ ಅದರಲ್ಲಿ ಬೀಳಬೇಕು? ಅವರು ಹೀಗೆ ಮಾತನಾಡುತ್ತಿರುವಾಗಲೇ ಬೆಂಕಿಯ ಜ್ವಾಲೆ ಆರಿಹೋಯಿತು, ಮತ್ತು ಅಮೀರನ ಕೋಪವು ತಣ್ಣಗಾಯಿತು. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಿಷಯವನ್ನು ತಿಳಿಸಲಾಯಿತು. ಆಗ ಅವರು ಹೇಳಿದರು: ಒಂದು ವೇಳೆ ಅವರು ಅವನಿಗೆ ವಿಧೇಯರಾಗಿ ಅವರು ಹೊತ್ತಿಸಿದ ಬೆಂಕಿಯಲ್ಲಿ ಬಿದ್ದಿದ್ದರೆ, ಅವರು ಅದರಲ್ಲಿಯೇ ಶಿಕ್ಷಿಸಲ್ಪಡುತ್ತಿದ್ದರು ಮತ್ತು ಪ್ರಪಂಚದ ವಿನಾಶದವರೆಗೆ ಅದರಿಂದ ಹೊರಬರುತ್ತಿರಲಿಲ್ಲ. ಸೃಷ್ಟಿಕರ್ತನಿಗೆ ಅವಿಧೇಯನಾಗಿ ಸೃಷ್ಟಿಗೆ ವಿಧೇಯನಾಗುವಂತಿಲ್ಲ; ವಿಧೇಯತೆಯು ಕೇವಲ ಒಳಿತಿನ ವಿಷಯದಲ್ಲಿ ಕಡ್ಡಾಯವಾಗಿದೆ, ಪಾಪದ ವಿಷಯದಲ್ಲಲ್ಲ.