عَنْ أَبِي هُرَيْرَةَ رَضِيَ اللَّهُ عَنْهُ أَنَّ رَسُولَ اللهِ صَلَّى اللَّهُ عَلَيْهِ وَسَلَّمَ وَقَفَ عَلَى نَاسٍ جُلُوسٍ، فَقَالَ:
«أَلاَ أُخْبِرُكُمْ بِخَيْرِكُمْ مِنْ شَرِّكُمْ؟» قَالَ: فَسَكَتُوا، فَقَالَ ذَلِكَ ثَلاَثَ مَرَّاتٍ، فَقَالَ رَجُلٌ: بَلَى يَا رَسُولَ اللهِ، أَخْبِرْنَا بِخَيْرِنَا مِنْ شَرِّنَا، قَالَ: «خَيْرُكُمْ مَنْ يُرْجَى خَيْرُهُ وَيُؤْمَنُ شَرُّهُ، وَشَرُّكُمْ مَنْ لاَ يُرْجَى خَيْرُهُ وَلاَ يُؤْمَنُ شَرُّهُ».

[صحيح] - [رواه الترمذي] - [سنن الترمذي: 2263]
المزيــد ...

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಳಿತಿದ್ದ ಜನರ ಬಳಿ ಬಂದು ನಿಂತರು ಮತ್ತು ಹೇಳಿದರು:
"ನಿಮ್ಮಲ್ಲಿ ಒಳ್ಳೆಯವರು ಯಾರು ಮತ್ತು ಕೆಟ್ಟವರು ಯಾರು ಎಂದು ನಾನು ನಿಮಗೆ ತಿಳಿಸಿಕೊಡಲೇ?"ವರದಿಗಾರರು ಹೇಳುತ್ತಾರೆ: ಆಗ ಅವರು (ಜನರು) ಮೌನವಾಗಿದ್ದರು. ಪ್ರವಾದಿ ಅದನ್ನೇ ಮೂರು ಬಾರಿ ಹೇಳಿದರು. ಆಗ ಒಬ್ಬ ವ್ಯಕ್ತಿ ಹೇಳಿದರು: "ಖಂಡಿತ, ಓ ಅಲ್ಲಾಹನ ಸಂದೇಶವಾಹಕರೇ, ನಮ್ಮಲ್ಲಿ ಒಳ್ಳೆಯವರು ಯಾರು ಮತ್ತು ಕೆಟ್ಟವರು ಯಾರು ಎಂದು ನಮಗೆ ತಿಳಿಸಿಕೊಡಿ." ಅವರು (ಪ್ರವಾದಿ) ಹೇಳಿದರು: "ಯಾರಿಂದ ಒಳಿತನ್ನು ನಿರೀಕ್ಷಿಸಬಹುದೋ ಮತ್ತು ಯಾರ ಕೇಡಿನಿಂದ (ಜನರು) ಸುರಕ್ಷಿತವಾಗಿರುತ್ತಾರೋ ಅವರೇ ನಿಮ್ಮಲ್ಲಿ ಅತ್ಯಂತ ಒಳ್ಳೆಯವರು. ಯಾರಿಂದ ಒಳಿತನ್ನು ನಿರೀಕ್ಷಿಸಲು ಸಾಧ್ಯವಿಲ್ಲವೋ ಮತ್ತು ಯಾರ ಕೇಡಿನಿಂದ (ಜನರು) ಸುರಕ್ಷಿತವಾಗಿರುವುದಿಲ್ಲವೋ ಅವರೇ ನಿಮ್ಮಲ್ಲಿ ಅತ್ಯಂತ ಕೆಟ್ಟವರು."

[صحيح] - [رواه الترمذي] - [سنن الترمذي - 2263]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಡಿಗರ ಪೈಕಿ ಕುಳಿತಿದ್ದ ಜನರ ಬಳಿ ಬಂದು ನಿಂತರು ಮತ್ತು "ನಿಮ್ಮಲ್ಲಿ ಒಳ್ಳೆಯವರು ಯಾರು ಮತ್ತು ಕೆಟ್ಟವರು ಯಾರು ಎಂದು ನಾನು ನಿಮಗೆ ತಿಳಿಸಿಕೊಡಲೇ?" ಎಂದು ಪ್ರಶ್ನಿಸಿದರು. ಅವರು (ಸಂಗಡಿಗರು) ಏನನ್ನೂ ಮಾತನಾಡಲಿಲ್ಲ ಮತ್ತು ಉತ್ತರಿಸಲಿಲ್ಲ. ಒಳ್ಳೆಯವರು ಮತ್ತು ಕೆಟ್ಟವರು ಎಂದು (ತಮ್ಮನ್ನು) ಪ್ರತ್ಯೇಕಿಸುವುದರ ಭಯದಿಂದ ಅಥವಾ ತಮ್ಮ ತಪ್ಪುಗಳು ಬಹಿರಂಗವಾಗಬಹುದು ಎಂಬ ಭಯದಿಂದ ಅವರು ಮೌನವಾಗಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ಪ್ರಶ್ನೆಯನ್ನು ಅವರ ಮುಂದೆ ಮೂರು ಬಾರಿ ಪುನರಾವರ್ತಿಸಿದರು. ಆಗ ಅವರಲ್ಲಿದ್ದ ಒಬ್ಬ ವ್ಯಕ್ತಿ ಉತ್ತರಿಸಿದರು: "ಖಂಡಿತ ಓ ಅಲ್ಲಾಹನ ಸಂದೇಶವಾಹಕರೇ, ನಮ್ಮಲ್ಲಿ ಒಳ್ಳೆಯವರು ಯಾರು ಮತ್ತು ಕೆಟ್ಟವರು ಯಾರು ಎಂದು ನಮಗೆ ತಿಳಿಸಿಕೊಡಿ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ವಿವರಿಸಿದರು: ನಿಮ್ಮಲ್ಲಿ ಅತ್ಯಂತ ಒಳ್ಳೆಯವರು ಯಾರೆಂದರೆ, ಯಾರಿಂದ ಒಳಿತು, ಉಪಕಾರ ಮತ್ತು ಸದ್ಗುಣಗಳನ್ನು ನಿರೀಕ್ಷಿಸಬಹುದೋ ಮತ್ತು ಯಾರ ಕೆಡುಕಿನ ಬಗ್ಗೆ ಜನರಿಗೆ ಭಯವಿರುವುದಿಲ್ಲವೋ (ಅಂದರೆ ಅವರ ದೌರ್ಜನ್ಯ ಮತ್ತು ಅನ್ಯಾಯದಿಂದ ಸುರಕ್ಷಿತವಾಗಿರುತ್ತಾರೋ) ಅವರು. ನಿಮ್ಮಲ್ಲಿ ಅತ್ಯಂತ ಕೆಟ್ಟವರು ಯಾರೆಂದರೆ, ಯಾರಿಂದ ಒಳಿತು, ಉಪಕಾರ ಮತ್ತು ಸದ್ಗುಣಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲವೋ ಮತ್ತು ಯಾರ ಕೆಡುಕಿನಿಂದ ಜನರು ಸುರಕ್ಷಿತವಾಗಿರುವುದಿಲ್ಲವೋ (ಬದಲಾಗಿ ಅವರ ದೌರ್ಜನ್ಯ ಮತ್ತು ಅನ್ಯಾಯದ ಭಯವಿರುತ್ತದೆಯೋ) ಅವರು.

ಹದೀಸಿನ ಪ್ರಯೋಜನಗಳು

  1. ಜನರಲ್ಲಿ ಒಳ್ಳೆಯವರು ಯಾರು ಮತ್ತು ಕೆಟ್ಟವರು ಯಾರು ಎಂಬುದನ್ನು ವಿವರಿಸಲಾಗಿದೆ.
  2. ಒಬ್ಬ ವ್ಯಕ್ತಿಯಿಂದ (ಇನ್ನೊಬ್ಬರಿಗೆ ತಲುಪುವ) ಲಾಭ ಮತ್ತು ಹಾನಿಯು, (ಅವರಿಗೆ ಮಾತ್ರ ಸೀಮಿತವಾಗಿರುವುದಕ್ಕಿಂತಲೂ) ಹೆಚ್ಚು ಗಂಭೀರವಾದುದಾಗಿದೆ.
  3. ಸನ್ನಡತೆ ಮತ್ತು ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಲು ಪ್ರೇರೇಪಿಸಲಾಗಿದೆ ಹಾಗೂ ದೌರ್ಜನ್ಯ, ಕೆಡುಕು ಮತ್ತು ಅತಿಕ್ರಮಣದ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಅನುವಾದಗಳನ್ನು ತೋರಿಸಿ
ಭಾಷೆ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಇನ್ನಷ್ಟು (24)
ಇನ್ನಷ್ಟು