عَنِ ابْنِ عَبَّاسٍ رَضِيَ اللَّهُ عَنْهُما قَالَ:
إِنَّ اللهَ عَزَّ وَجَلَّ أَنْزَلَ: {وَمَنْ لَمْ يَحْكُمْ بِمَا أَنْزَلَ اللهُ فَأُولَئِكَ هُمِ الْكَافِرُونَ} [المائدة: 44] وَ {فَأُولَئِكَ هُمُ الظَّالِمُونَ} [المائدة: 45] وَ {فَأُولَئِكَ هُمُ الْفَاسِقُونَ} [المائدة: 47] ، قَالَ: قَالَ ابْنُ عَبَّاسٍ: أَنْزَلَهَا اللهُ فِي الطَّائِفَتَيْنِ مِنَ اليَهُودِ، وَكَانَتْ إِحْدَاهُمَا قَدْ قَهَرَتِ الأُخْرَى فِي الجَاهِلِيَّةِ، حَتَّى ارْتَضَوْا وَاصْطَلَحُوا عَلَى أَنَّ كُلَّ قَتِيلٍ قَتَلَتْهُ العَزِيزَةُ مِنَ الذَّلِيلَةِ فَدِيَتُهُ خَمْسُونَ وَسْقًا، وَكُلَّ قَتِيلٍ قَتَلَتْهُ الذَّلِيلَةُ مِنَ العَزِيزَةِ فَدِيَتُهُ مِائَةُ وَسْقٍ، فَكَانُوا عَلَى ذَلِكَ حَتَّى قَدِمَ النَّبِيُّ صَلَّى اللهُ عَلَيْهِ وَسَلَّمَ المَدِينَةَ، وَذَلَّتِ الطَّائِفَتَانِ كِلْتَاهُمَا لِمَقْدَمِ رَسُولِ اللهِ صَلَّى اللهُ عَلَيْهِ وَسَلَّمَ، ورَسُولُ اللهِ صَلَّى اللهُ عَلَيْهِ وَسَلَّمَ يَوْمَئِذٍ لَمْ يَظْهَرْ، وَلَمْ يُوطِئْهُمَا عَلَيْهِ، وَهُوَ فِي الصُّلْحِ، فَقَتَلَتِ الذَّلِيلَةُ مِنَ العَزِيزَةِ قَتِيلًا، فَأَرْسَلَتِ العَزِيزَةُ إِلَى الذَّلِيلَةِ: أَنِ ابْعَثُوا إِلَيْنَا بِمِائَةِ وَسْقٍ، فَقَالَتِ الذَّلِيلَةُ: وَهَلْ كَانَ هَذَا فِي حَيَّيْنِ قَطُّ دِينُهُمَا وَاحِدٌ، وَنَسَبُهُمَا وَاحِدٌ، وَبَلَدُهُمَا وَاحِدٌ، دِيَةُ بَعْضِهِمْ نِصْفُ دِيَةِ بَعْضٍ؟ إِنَّا إِنَّمَا أَعْطَيْنَاكُمْ هَذَا ضَيْمًا مِنْكُمْ لَنَا، وَفَرَقًا مِنْكُمْ، فَأَمَّا إِذْ قَدِمَ مُحَمَّدٌ فَلَا نُعْطِيكُمْ ذَلِكَ، فَكَادَتِ الحَرْبُ تَهِيجُ بَيْنَهُمَا، ثُمَّ ارْتَضَوْا عَلَى أَنْ يَجْعَلُوا رَسُولَ اللهِ صَلَّى اللهُ عَلَيْهِ وَسَلَّمَ بَيْنَهُمْ، ثُمَّ ذَكَرَتِ العَزِيزَةُ، فَقَالَتْ: وَاللهِ مَا مُحَمَّدٌ بِمُعْطِيكُمْ مِنْهُمْ ضِعْفَ مَا يُعْطِيهِمْ مِنْكُمْ، وَلَقَدْ صَدَقُوا، مَا أَعْطَوْنَا هَذَا إِلَّا ضَيْمًا مِنَّا، وَقَهْرًا لَهُمْ، فَدُسُّوا إِلَى مُحَمَّدٍ مَنْ يَخْبُرُ لَكُمْ رَأْيَهُ: إِنْ أَعْطَاكُمْ مَا تُرِيدُونَ حَكَّمْتُمُوهُ، وَإِنْ لَمْ يُعْطِكُمْ حَذِرْتُمْ فَلَمْ تُحَكِّمُوهُ، فَدَسُّوا إِلَى رَسُولِ اللهِ صَلَّى اللهُ عَلَيْهِ وَسَلَّمَ نَاسًا مِنَ المُنَافِقِينَ لِيَخْبُرُوا لَهُمْ رَأْيَ رَسُولِ اللهِ صَلَّى اللهُ عَلَيْهِ وَسَلَّمَ، فَلَمَّا جَاءَ رَسُولَ اللهِ صَلَّى اللهُ عَلَيْهِ وَسَلَّمَ أَخْبَرَ اللهُ رَسُولَهُ بِأَمْرِهِمْ كُلِّهِ وَمَا أَرَادُوا، فَأَنْزَلَ اللهُ عَزَّ وَجَلَّ {يَا أَيُّهَا الرَّسُولُ لَا يَحْزُنْكَ الَّذِينَ يُسَارِعُونَ فِي الْكُفْرِ مِنَ الذِينَ قَالُوا آمَنَّا} [المائدة: 41] إِلَى قَوْلِهِ: {وَمَنْ لَمْ يَحْكُمْ بِمَا أَنْزَلَ اللهُ فَأُولَئِكَ هُمِ الْفَاسِقُونَ} [المائدة: 47] ثُمَّ قَالَ فِيهِمَا: وَاللهِ نَزَلَتْ، وَإِيَّاهُمَا عَنَى الله عَزَّ وَجَلَّ.
[حسن] - [رواه أحمد] - [مسند أحمد: 2212]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಖಂಡಿತವಾಗಿಯೂ ಸರ್ವಶಕ್ತನಾದ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು: “ಯಾರು ಅಲ್ಲಾಹು ಅವತೀರ್ಣಗೊಳಿಸಿದ ಪ್ರಕಾರ ತೀರ್ಪು ನೀಡುವುದಿಲ್ಲವೋ, ಅವರೇ ಸತ್ಯನಿಷೇಧಿಗಳು” [ಅಲ್-ಮಾಯಿದ: 44], “ಅವರೇ ಅಕ್ರಮಿಗಳು” [ಅಲ್-ಮಾಯಿದ: 45], ಮತ್ತು “ಅವರೇ ದುಷ್ಕರ್ಮಿಗಳು” [ಅಲ್-ಮಾಯಿದ: 47]. ಇಬ್ನ್ ಅಬ್ಬಾಸ್ ಹೇಳಿದರು: ಅಲ್ಲಾಹು ಈ ವಚನಗಳನ್ನು ಯಹೂದಿಗಳ ಎರಡು ಪಂಗಡಗಳ ವಿಷಯದಲ್ಲಿ ಅವತೀರ್ಣಗೊಳಿಸಿದನು. ಜಾಹಲಿಯ್ಯಾ ಕಾಲದಲ್ಲಿ (ಅಜ್ಞಾನದ ಕಾಲದಲ್ಲಿ) ಆ ಎರಡು ಪಂಗಡಗಳಲ್ಲಿ ಒಂದು ಇನ್ನೊಂದರ ಮೇಲೆ ಪ್ರಭುತ್ವ ಸಾಧಿಸಿತ್ತು. ಎಷ್ಟರಮಟ್ಟಿಗೆಂದರೆ, ದುರ್ಬಲ ಪಂಗಡದ ವ್ಯಕ್ತಿಯನ್ನು ಪ್ರಭಲ ಪಂಗಡದವರು ಕೊಂದರೆ, ಅದರ ಪರಿಹಾರವು ಐವತ್ತು 'ವಸ್ಕ್' ಆಗಿರಬೇಕು. ಆದರೆ, ದುರ್ಬಲ ಪಂಗಡದ ವ್ಯಕ್ತಿಯನ್ನು ಪ್ರಬಲ ಪಂಗಡದವರು ಕೊಂದರೆ, ಅದರ ಪರಿಹಾರವು ನೂರು 'ವಸ್ಕ್' ಆಗಿರಬೇಕು ಎಂದು ಅವರು ಒಪ್ಪಂದ ಮಾಡಿಕೊಂಡಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಬರುವವರೆಗೂ ಅವರು ಇದೇ ಸ್ಥಿತಿಯಲ್ಲಿದ್ದರು. ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಗಮನದಿಂದ ಆ ಎರಡೂ ಪಂಗಡಗಳು ತಗ್ಗಿಬಗ್ಗಿದವು. ಆ ದಿನಗಳಲ್ಲಿ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇನ್ನೂ ಅವರ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿರಲಿಲ್ಲ ಮತ್ತು ಅವರನ್ನು ಇನ್ನೂ ತಮ್ಮ ಅಧೀನಕ್ಕೆ ತೆಗೆದುಕೊಂಡಿರಲಿಲ್ಲ. ಅದು ಶಾಂತಿ ಒಪ್ಪಂದದ ಸಮಯವಾಗಿತ್ತು. ಹೀಗಿರುವಾಗ, ದುರ್ಬಲ ಪಂಗಡದವರು ಪ್ರಬಲ ಪಂಗಡದ ಒಬ್ಬ ವ್ಯಕ್ತಿಯನ್ನು ಕೊಂದರು. ಆಗ ಪ್ರಬಲ ಪಂಗಡದವರು ದುರ್ಬಲ ಪಂಗಡದವರಿಗೆ ಸಂದೇಶ ಕಳುಹಿಸಿ, "(ಒಪ್ಪಂದದಂತೆ) ನಮಗೆ ನೂರು ವಸ್ಕ್ ಕಳುಹಿಸಿರಿ" ಎಂದು ಹೇಳಿದರು. ಆಗ ದುರ್ಬಲ ಪಂಗಡದವರು ಹೇಳಿದರು: "ಒಂದೇ ಧರ್ಮ, ಒಂದೇ ವಂಶ ಮತ್ತು ಒಂದೇ ಊರನ್ನು ಹೊಂದಿರುವ ಎರಡು ಬುಡಕಟ್ಟುಗಳ ನಡುವೆ, ಕೆಲವರಿಗೆ ನೀಡಬೇಕಾದ ರಕ್ತಪರಿಹಾರವು ಇನ್ನು ಕೆಲವರಿಗೆ ನೀಡಬೇಕಾದ ರಕ್ತಪರಿಹಾರಕ್ಕಿಂತ ಅರ್ಧದಷ್ಟಿರುವುದು ನ್ಯಾಯವೇ? ನಾವು ಹಿಂದೆ ನಿಮಗೆ ಇದನ್ನು ನೀಡುತ್ತಿದ್ದುದು, ನಮ್ಮ ಮೇಲೆ ನಿಮಗಿದ್ದ ದಬ್ಬಾಳಿಕೆ ಮತ್ತು ನಿಮ್ಮ ಭಯದಿಂದಾಗಿ ಮಾತ್ರ. ಆದರೆ ಈಗ ಮುಹಮ್ಮದ್ ರವರು ಬಂದಿರುವುದರಿಂದ, ನಾವು ನಿಮಗೆ ಅದನ್ನು ನೀಡುವುದಿಲ್ಲ." ಇದರಿಂದಾಗಿ ಅವರ ನಡುವೆ ಯುದ್ಧ ಭುಗಿಲೇಳುವ ಪರಿಸ್ಥಿತಿ ಉಂಟಾಯಿತು. ನಂತರ ಅವರು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ನಡುವೆ ನ್ಯಾಯಾಧೀಶರನ್ನಾಗಿ ಮಾಡಲು ಒಪ್ಪಿಕೊಂಡರು. ಆಗ ಪ್ರಬಲ ಪಂಗಡದವರು ಯೋಚಿಸಿ (ತಮ್ಮವರಿಗೆ) ಹೇಳಿದರು: "ಅಲ್ಲಾಹನ ಆಣೆ, ನೀವು ಅವರಿಗೆ ನೀಡುವುದಕ್ಕಿಂತ ಎರಡರಷ್ಟು ಪರಿಹಾರವನ್ನು ಅವರು ನಿಮಗೆ ನೀಡುವಂತೆ ಮುಹಮ್ಮದ್ ರವರು ಮಾಡುವುದಿಲ್ಲ. ಅವರು (ದುರ್ಬಲ ಪಂಗಡದವರು) ಹೇಳಿದ್ದು ನಿಜ; ಅವರು ನಮಗೆ ಅದನ್ನು ನೀಡುತ್ತಿದ್ದುದು ಕೇವಲ ನಮ್ಮ ದಬ್ಬಾಳಿಕೆ ಮತ್ತು ಬಲವಂತದಿಂದಾಗಿ ಮಾತ್ರ. ಆದ್ದರಿಂದ, ಮುಹಮ್ಮದ್ ರವರ ಅಭಿಪ್ರಾಯ ಏನೆಂದು ತಿಳಿದುಕೊಳ್ಳಲು, ಯಾರಿಗೂ ತಿಳಿಯದಂತೆ ರಹಸ್ಯವಾಗಿ ಅವರ ಬಳಿಗೆ ಕಳುಹಿಸಿ. ಅವರು ನೀವು ಬಯಸಿದ್ದನ್ನು (100 ವಸ್ಕ್) ನೀಡುವುದಾದರೆ ಅವರನ್ನು ನ್ಯಾಯಾಧೀಶರನ್ನಾಗಿ ಮಾಡಿ. ಒಂದು ವೇಳೆ ಅವರು ನೀವು ಬಯಸುವುದನ್ನು ನೀಡದಿದ್ದರೆ, ಎಚ್ಚರದಿಂದಿರಿ ಮತ್ತು ಅವರನ್ನು ನ್ಯಾಯಾಧೀಶರನ್ನಾಗಿ ಮಾಡಬೇಡಿ." ಹೀಗೆ ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಭಿಪ್ರಾಯವೇನೆಂದು ತಿಳಿದುಕೊಳ್ಳಲು ಕೆಲವು ಕಪಟವಿಶ್ವಾಸಿಗಳನ್ನು ರಹಸ್ಯವಾಗಿ ಕಳುಹಿಸಿದರು. ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅಲ್ಲಾಹು ತನ್ನ ಸಂದೇಶವಾಹಕರಿಗೆ ಅವರ ಸಂಪೂರ್ಣ ವಿಷಯವನ್ನು ಮತ್ತು ಅವರು ಏನೆಲ್ಲಾ ಬಯಸಿದ್ದರು ಎಂಬುದನ್ನು ತಿಳಿಸಿದನು. ಆಗ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು: “ಓ ಪ್ರವಾದಿಯವರೇ, 'ನಾವು ವಿಶ್ವಾಸವಿಟ್ಟಿದ್ದೇನೆ' ಎಂದು (ಬಾಯಿಂದ) ಹೇಳುವವರ ಪೈಕಿ ಸತ್ಯನಿಷೇಧದ ಕಡೆಗೆ ಧಾವಿಸುವವರ ಬಗ್ಗೆ ನೀವು ದುಃಖಿಸಬೇಡಿ…” [ಅಲ್-ಮಾಯಿದ: 41] ಎಂಬಲ್ಲಿಂದ “ಯಾರು ಅಲ್ಲಾಹು ಅವತೀರ್ಣಗೊಳಿಸಿದ ಪ್ರಕಾರ ತೀರ್ಪು ನೀಡುವುದಿಲ್ಲವೋ, ಅವರೇ ದುಷ್ಕರ್ಮಿಗಳು” [ಅಲ್-ಮಾಯಿದ: 47] ಎಂಬಲ್ಲಿಯವರೆಗೆ. ನಂತರ ಅವರು (ಇಬ್ನ್ ಅಬ್ಬಾಸ್) ಆ ಎರಡು ಪಂಗಡಗಳ ಬಗ್ಗೆ ಹೇಳಿದರು: ಅಲ್ಲಾಹನ ಆಣೆ, ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದ್ದು ಅವರ ಬಗ್ಗೆಯೇ ಆಗಿದೆ, ಮತ್ತು ಅಲ್ಲಾಹು ಉದ್ದೇಶಿಸಿರುವುದು ಅವರಿಬ್ಬರನ್ನೇ ಆಗಿದೆ.
[حسن] - [رواه أحمد] - [مسند أحمد - 2212]
ಮದೀನಾದ ಯಹೂದಿಗಳಲ್ಲಿ ಬನೂ ಕುರೈಝಾ ಮತ್ತು ಬನೂ ನದೀರ್ ಎಂಬ ಎರಡು ಪಂಗಡಗಳಿದ್ದವು. ಜಾಹಲಿಯ್ಯಾ ಕಾಲದಲ್ಲಿ (ಇಸ್ಲಾಮಿಗಿಂತ ಮುಂಚೆ) ಇವುಗಳಲ್ಲಿ ಒಂದು ಇನ್ನೊಂದರ ಮೇಲೆ ಪ್ರಭುತ್ವ ಮತ್ತು ವಿಜಯ ಸಾಧಿಸಿತ್ತು. ಪ್ರಬಲ ಪಂಗಡವು ದುರ್ಬಲ ಪಂಗಡದ ವ್ಯಕ್ತಿಯನ್ನು ಕೊಂದರೆ 50 ವಸ್ಕ್ ಪರಿಹಾರ ನೀಡಬೇಕು. ಆದರೆ ದುರ್ಬಲ ಪಂಗಡವು ಪ್ರಬಲ ಪಂಗಡದ ವ್ಯಕ್ತಿಯನ್ನು ಕೊಂದರೆ ದುಪ್ಪಟ್ಟು, ಅಂದರೆ 100 ವಸ್ಕ್ ಪರಿಹಾರ ನೀಡಬೇಕು ಎಂದು ಅವರು ಒಪ್ಪಂದ ಮಾಡಿಕೊಂಡಿದ್ದರು. ಒಂದು ವಸ್ಕ್ ಎಂದರೆ 60 ಸಾಅ್. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ವಲಸೆ ಬರುವವರೆಗೂ ಅವರು ಇದೇ ಸ್ಥಿತಿಯಲ್ಲಿದ್ದರು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಗಮನದಿಂದ ಆ ಎರಡೂ ಪಂಗಡಗಳು ಬಗ್ಗಿದವು. ಆ ಸಮಯದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇನ್ನೂ ಶತ್ರುಗಳ ಮೇಲೆ ಪೂರ್ಣ ವಿಜಯ ಸಾಧಿಸಿರಲಿಲ್ಲ ಮತ್ತು ಯಹೂದಿಗಳನ್ನು ತಮ್ಮ ಅಧೀನಕ್ಕೆ ಸಂಪೂರ್ಣವಾಗಿ ಒಳಪಡಿಸಿರಲಿಲ್ಲ. ಅದು ಹಿಜ್ರತ್‌ನ ಆರಂಭಿಕ ಕಾಲವಾಗಿತ್ತು ಮತ್ತು ಶಾಂತಿ ಒಪ್ಪಂದವಿತ್ತು. ಆಗ ದುರ್ಬಲ ಪಂಗಡದವರು ಪ್ರಬಲ ಪಂಗಡದ ಒಬ್ಬ ವ್ಯಕ್ತಿಯನ್ನು ಕೊಂದರು. ಆಗ ಪ್ರಬಲ ಪಂಗಡದವರು, "ಒಪ್ಪಂದದ ಪ್ರಕಾರ ನಮಗೆ 100 ವಸ್ಕ್ ಕಳುಹಿಸಿ" ಎಂದು ಸಂದೇಶ ಕಳುಹಿಸಿದರು. ಅದಕ್ಕೆ ದುರ್ಬಲ ಪಂಗಡದವರು ಹೇಳಿದರು: "ಒಂದೇ ಧರ್ಮ, ಒಂದೇ ವಂಶ ಮತ್ತು ಒಂದೇ ಊರಿನ ಎರಡು ಪಂಗಡಗಳಲ್ಲಿ, ಕೆಲವರ ರಕ್ತಪರಿಹಾರವು ಇತರರ ಅರ್ಧದಷ್ಟಿರಲು ಸಾಧ್ಯವೇ? ನಾವು ಹಿಂದೆ ನಿಮಗೆ ಇದನ್ನು ನೀಡುತ್ತಿದ್ದುದು ನಿಮ್ಮ ದಬ್ಬಾಳಿಕೆ ಮತ್ತು ಭಯದಿಂದಾಗಿ ಮಾತ್ರ. ಆದರೆ ಈಗ ಮುಹಮ್ಮದ್ ರವರು ಬಂದಿರುವುದರಿಂದ, ನಾವು ನಿಮಗೆ ಇದನ್ನು ಎಂದಿಗೂ ನೀಡುವುದಿಲ್ಲ." ಹೀಗೆ ಅವರ ನಡುವೆ ಯುದ್ಧ ಭುಗಿಲೇಳುವ ಹಂತ ತಲುಪಿತು. ನಂತರ ಅವರು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ನಡುವೆ ತೀರ್ಪು ನೀಡಲು ಒಪ್ಪಿಕೊಂಡರು. ನಂತರ ಪ್ರಬಲ ಪಂಗಡದವರು ಯೋಚಿಸಿ ಹೇಳಿದರು: "ಅಲ್ಲಾಹನ ಆಣೆ, ಮುಹಮ್ಮದ್ ರವರು ನಿಮಗೆ, ಅವರ ಕಡೆಯಿಂದ ಸಿಗುವಷ್ಟೇ ಹೊರತು (ಅದಕ್ಕಿಂತ ಹೆಚ್ಚು ಅಂದರೆ) ದುಪ್ಪಟ್ಟು ಪರಿಹಾರವನ್ನು ಅವರಿಂದ ಕೊಡಿಸುವುದಿಲ್ಲ. ಅವರು (ದುರ್ಬಲರು) ಹೇಳಿದ್ದು ನಿಜ; ಅವರು ನಮಗೆ ಅದನ್ನು ನೀಡುತ್ತಿದ್ದುದು ಕೇವಲ ನಮ್ಮ ದಬ್ಬಾಳಿಕೆ ಮತ್ತು ಬಲವಂತದಿಂದಾಗಿ ಮಾತ್ರ. ಆದ್ದರಿಂದ, ಮುಹಮ್ಮದ್ ರವರ ಅಭಿಪ್ರಾಯವೇನೆಂದು ತಿಳಿದುಕೊಂಡು ಬರಲು ಯಾರನ್ನಾದರೂ ರಹಸ್ಯವಾಗಿ ಕಳುಹಿಸಿ. ಅವರು ನಿಮಗೆ ಬೇಕಾದುದನ್ನು ನೀಡುವುದಾದರೆ ಅವರನ್ನು ನ್ಯಾಯಾಧೀಶರನ್ನಾಗಿ ಮಾಡಿ. ಒಂದು ವೇಳೆ ಅವರು ನೀವು ಬಯಸಿದ್ದನ್ನು ನೀಡದಿದ್ದರೆ ಅವರನ್ನು ಬಿಟ್ಟುಬಿಡಿ ಮತ್ತು ಅವರನ್ನು ನಿಮ್ಮ ನಡುವೆ ನ್ಯಾಯಾಧೀಶರನ್ನಾಗಿ ಮಾಡಬೇಡಿ." ಹೀಗೆ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಭಿಪ್ರಾಯ ತಿಳಿಯಲು ಕೆಲವು ಕಪಟವಿಶ್ವಾಸಿಗಳನ್ನು ರಹಸ್ಯವಾಗಿ ಕಳುಹಿಸಿದರು. ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅಲ್ಲಾಹು ದಿವ್ಯವಾಣಿಯನ್ನು ಇಳಿಸಿದನು ಮತ್ತು ಪ್ರವಾದಿಯವರಿಗೆ ಅವರ ಸಂಪೂರ್ಣ ವಿಷಯವನ್ನು ಹಾಗೂ ಅವರ ದುರುದ್ದೇಶವನ್ನು ತಿಳಿಸಿದನು. ಅಲ್ಲಾಹು ಸೂರ ಅಲ್-ಮಾಯಿದಾದಲ್ಲಿ, “ಓ ಪ್ರವಾದಿಯವರೇ, 'ನಾವು ವಿಶ್ವಾಸವಿಟ್ಟಿದ್ದೇವೆ' ಎಂದು (ಬಾಯಿಂದ) ಹೇಳುವವರ ಪೈಕಿ ಸತ್ಯನಿಷೇಧದ ಕಡೆಗೆ ಧಾವಿಸುವವರ ಬಗ್ಗೆ ನೀವು ದುಃಖಿಸಬೇಡಿ…” [ಅಲ್-ಮಾಯಿದಃ: 41] ಎನ್ನುವುದರಿಂದ ಹಿಡಿದು “ಯಾರು ಅಲ್ಲಾಹು ಅವತೀರ್ಣಗೊಳಿಸಿದ ಪ್ರಕಾರ ತೀರ್ಪು ನೀಡುವುದಿಲ್ಲವೋ, ಅವರೇ ದುಷ್ಕರ್ಮಿಗಳು” [ಅಲ್-ಮಾಯಿದ: 47] ಎಂಬಲ್ಲಿಯವರೆಗಿನ ವಚನಗಳನ್ನು ಇಳಿಸಿದನು. ನಂತರ ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಅಲ್ಲಾಹನ ಆಣೆ, ಅಲ್ಲಾಹನ ಈ ವಚನಗಳು ಅವತೀರ್ಣವಾದದ್ದು ಆ ಎರಡು ಪಂಗಡಗಳ ಬಗ್ಗೆಯೇ: “ಯಾರು ಅಲ್ಲಾಹು ಅವತೀರ್ಣಗೊಳಿಸಿದ ಪ್ರಕಾರ ತೀರ್ಪು ನೀಡುವುದಿಲ್ಲವೋ, ಅವರೇ ಸತ್ಯನಿಷೇಧಿಗಳು” [ಅಲ್-ಮಾಯಿದ: 44]. “…ಅವರೇ ಅಕ್ರಮಿಗಳು” [ಅಲ್-ಮಾಯಿದ: 45]. “…ಅವರೇ ದುಷ್ಕರ್ಮಿಗಳು” [ಅಲ್-ಮಾಯಿದ: 47]. ಅಲ್ಲಾಹು ಅವರಿಬ್ಬರನ್ನೇ ಉದ್ದೇಶಿಸಿದ್ದಾನೆ.